CBI ತನಿಖೆ ನಡುವೆಯೇ ಹತ್ರಾಸ್ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಆದಿತ್ಯನಾಥ್, ಮತ್ತವರ ಪೊಲೀಸರು

ಯೋಗಿ ಆದಿತ್ಯನಾಥ್ 'ಹತ್ರಾಸ್ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಸಂಚು ಅಡಗಿದೆ' ಎಂದು ಹೇಳಿದ್ದಾರೆ. ಇದು ಸ್ಪಷ್ಟವಾಗಿ 'ದಿಕ್ಕು ತಪ್ಪಿಸುವ ಕೆಲಸ'.
CBI ತನಿಖೆ ನಡುವೆಯೇ ಹತ್ರಾಸ್ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಆದಿತ್ಯನಾಥ್, ಮತ್ತವರ ಪೊಲೀಸರು

ಹತ್ರಾಸ್‌ ಘಟನೆಯಿಂದ ಉತ್ತರ ಪ್ರದೇಶ ಮತ್ತು ರಾಷ್ಟ್ರೀಯ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಅದಕ್ಕಿಂತ ಹೆಚ್ಚಾಗಿ ಈ ಘಟನೆಯ ವಿರುದ್ಧ ಹೋರಾಡಿದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಗ್ಗೆ ಅಪಾರವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಈಗ ಹೊಸ ಹೊಸ ವರಸೆಗಳು ಶುರುವಾಗಿವೆ. ಸ್ವತಃ ಉತ್ತರ‌ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕರಣಕ್ಕೆ ಹೊಸ ಆಯಾಮ ಕೊಡಲು ಮುನ್ನುಡಿ ಬರೆದಿದ್ದಾರೆ. ಉತ್ತರ ಪ್ರದೇಶದ ಪೊಲೀಸರು ಮತ್ತು ಬಿಜೆಪಿಯ ಐಟಿ ಸೆಲ್ ಪಕ್ಕವಾದ್ಯಗಳು ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ.

Summary

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೊದಲನೆಯದಾಗಿ ಯೋಗಿ ಆದಿತ್ಯನಾಥ್ ಸ್ವತಃ ಹತ್ರಾಸ್ ಅತ್ಯಾಚಾರ, ಸಾವು ಮತ್ತು ಅಂತ್ಯಕ್ರಿಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ. ಸಿಬಿಐ ತನಿಖೆಯನ್ನೂ ಆರಂಭಿಸಿದೆ. ಸುಪ್ರೀಂ ಕೋರ್ಟಿನಲ್ಲೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮೇಲಾಗಿ ಸಿಬಿಐ ತನಿಖೆ ಮೇಲೆ ನಿಗಾ ಇಡುವಂತೆ ಉತ್ತರ ಪ್ರದೇಶ ಸರ್ಕಾರವೇ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ. ಪ್ರಕರಣ ತನಿಖೆ ಮತ್ತು ವಿಚಾರಣೆ ಹಂತದಲ್ಲಿರುವಾಗ 'ಪ್ರಭಾವ ಬೀರುವಂತ ಯಾವುದೇ ಮಾತನಾಡಬಾರದು' ಅಥವಾ 'ದಿಕ್ಕು ತಪ್ಪಿಸುವಂಹ ಕೆಲಸಕ್ಕೆ ಕೈಹಾಕಬಾರದು' ಎಂಬ ನಿಯಮ ಇದೆ‌. ಅದನ್ನು 'ಸಬ್ ಜ್ಯೂಡಿಸ್' ಎನ್ನುತ್ತಾರೆ. ಆದರೆ ದೇಶದ ಅತಿ ದೊಡ್ಡ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಈ ಚಿಕ್ಕ ಪರಿವೆ ಅಥವಾ ಕನಿಷ್ಠ ಜ್ಞಾನ ಇದ್ದಂತಿಲ್ಲ. ಅಥವಾ ಮಾಹಿತಿ ಇದ್ದರೂ ದುರುದ್ದೇಶಪೂರ್ವಕವಾಗಿ ಮಾತನ್ನಾಡಿದ್ದಾರೆ.

ಯೋಗಿ ಆದಿತ್ಯನಾಥ್ 'ಹತ್ರಾಸ್ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಸಂಚು ಅಡಗಿದೆ' ಎಂದು ಹೇಳಿದ್ದಾರೆ. ಇದು ಸ್ಪಷ್ಟವಾಗಿ 'ದಿಕ್ಕು ತಪ್ಪಿಸುವ ಕೆಲಸ'. ಇದರ ಹೊರತಾಗಿ ಈಗಾಗಲೇ ಪಕ್ಕವಾದ್ಯ ಎಂದು ವ್ಯಾಖ್ಯಾನಿಸಲ್ಪಟ್ಟಿರುವ ಉತ್ತರ ಪ್ರದೇಶ ಪೊಲೀಸರು 'ಮತ್ತೆನೋ ಆಗಿಹೋಗಿದೆ' ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಉದಾಹರಣೆಗೆ ಅವರು ಹತ್ರಾಸ್ ನಲ್ಲಿ ನಡೆದ 19 ವರ್ಷದ ದಲಿತ ಯುವತಿಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರದ ಆರೋಪದ ಹಿನ್ನಲೆಯಲ್ಲಿ ಉತ್ತರ ಪ್ರದೇಶದಾದ್ಯಂತ 21 ಎಫ್ ಐಆರ್ ಗಳನ್ನು ದಾಖಲಿಸಿಕೊಂಡಿದ್ದಾರೆ.

ಈ ಎಫ್ ಐ ಆರ್ ಗಳು ಅತ್ಯಾಚಾರ ಮಾಡಿ ಸಾವಿಗೂ ಕಾರಣರಾದವರ ವಿರುದ್ಧ ಅಲ್ಲ, ಅಥವಾ ಆ ಯುವತಿ ಸತ್ತ ಬಳಿಕ ಎಲ್ಲಾ ಧಾರ್ಮಿಕ ಸಂಪ್ರದಾಯಗಳನ್ನು ಹಾಗೂ ಕಾನೂನುಗಳನ್ನು ಕಸದ ಬುಟ್ಟಿಗೆ ಎಸೆದು ಅನುಮಾನಸ್ಪದವಾಗಿ ಹಾಗೂ ಅಮಾನವೀಯವಾಗಿ ಅಂತ್ಯ ಸಂಸ್ಕಾರ ಮಾಡಿದವರ ವಿರುದ್ಧವೂ ಅಲ್ಲ. ಬದಲಿಗೆ ಘಟನೆಯನ್ನು ಖಂಡಿಸಿದವರ ವಿರುದ್ಧ, ಉತ್ತರ ಪ್ರದೇಶದ ಸರ್ಕಾರ ಮತ್ತು ಪೊಲೀಸರು ಮುಚ್ಚಿಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸಿದವರ ವಿರುದ್ಧ, ಮುಖ್ಯ ವಾಹಿನಿ ಮಾಧ್ಯಮಗಳ ವಿರುದ್ಧ, ನೊಂದ ಕುಟುಂಬದ ಜೊತೆ ನಿಂತ ಕಾಂಗ್ರೆಸ್ ನಾಯಕರ ವಿರುದ್ಧ, ಸ್ಥಳೀಯವಾಗಿ ಪ್ರಬಲವಾಗಿರುವ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕ ದಳದ ಕಾರ್ಯಕರ್ತರ ವಿರುದ್ಧ.

ಉತ್ತರ ಪ್ರದೇಶ ಪೊಲೀಸರು ಈ ಅತ್ಯಾಚಾರ, ಕೊಲೆ, ಅಂತ್ಯಕ್ರಿಯೆಗಳನ್ನೇ ಮುಂದಿಟ್ಟುಕೊಂಡು ಆಳುವವರ ವಿರುದ್ಧ ಮಾತನಾಡಿದವರ ಮೇಲೆ, ಪ್ರತಿಭಟಿಸಿದವರ ಮೇಲೆ, ದನಿ ಎತ್ತಿದವರ ಮೇಲೆ ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ದ್ವೇಷವನ್ನು ಉತ್ತೇಜಿಸಿದರು ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದಲಿತ ಯುವತಿ ಮೇಲೆ ಯೋಗಿ ಆದಿತ್ಯನಾಥ್ ಜಾತಿಗೆ ಸೇರಿದವರೇ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಬಂದಿರುವುದರಿಂದ 'ಪ್ರತಿಪಾಳೆಯದವರ' ಮೇಲೆ ಅದೇ 'ಜಾತಿ ಅಸ್ತ್ರವನ್ನು' ಪ್ರಯೋಗಿಸಲಾಗುತ್ತದೆ. 'ಈ ಮೂಲಕ ಕೋಮು ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ' ಎಂದು ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.

CBI ತನಿಖೆ ನಡುವೆಯೇ ಹತ್ರಾಸ್ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಆದಿತ್ಯನಾಥ್, ಮತ್ತವರ ಪೊಲೀಸರು
ಅತ್ಯಾಚಾರ ನಡೆದಿಲ್ಲ ಎನ್ನುವ ಮೂಲಕ ಉತ್ತರ ಪ್ರದೇಶ ಪೊಲೀಸರು ಸಾಧಿಸಹೊರಟಿರುವುದೇನು ?

ಯೋಗಿ ಆದಿತ್ಯನಾಥ್ ಅವರೇ 'ಹತ್ರಾಸ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಸಂಚು ಅಡಗಿದೆ' ಎಂದು ಬಿಟ್ಟಿರುವುದರಿಂದ ಅದಕ್ಕೆ ಅನುಗುಣವಾಗಿ ಯೂಪಿ ಪೊಲೀಸರು ಸೆಕ್ಷನ್ 109, ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 124 ಎ (ದೇಶದ್ರೋಹ) ), ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆಕ್ಷನ್ 153 ಬಿ (ಪ್ರಚೋದನೆಗಳು, ಪ್ರತಿಪಾದನೆಗಳು ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ), ಐಪಿಸಿಯ 420 (ಮೋಸ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆ) ಗಡಿಗಳಲ್ಲಿ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

"ನಾವು ರಾಜ್ಯದಲ್ಲಿ 21 ಎಫ್ಐಆರ್ ಗಳನ್ನು ನೋಂದಾಯಿಸಿಕೊಂಡಿದ್ದೇವೆ. ಅದರಲ್ಲಿ 6 ಪ್ರಕರಣಗಳು ಹಾಥ್ರಾಸ್ ಜಿಲ್ಲೆಯಲ್ಲಿವೆ. ಈ ಎಫ್‌ಐಆರ್‌ಗಳಲ್ಲಿ ಅಪರಿಚಿತ ವ್ಯಕ್ತಿಗಳು ಆರೋಪಿಗಳಾಗಿದ್ದಾರೆ. ಹತ್ರಾಸ್‌ನಲ್ಲಿನ ಎಫ್‌ಐಆರ್‌ಗಳಲ್ಲಿ ಗ್ರಾಮಕ್ಕೆ ಪ್ರವೇಶಿಸಲು ಯತ್ನಿಸುತ್ತಿರುವಾಗ ಪೊಲೀಸರೊಂದಿಗೆ ಜಗಳವಾಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ಒಬ್ಬರ‌ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಕೆಲವು ಕಾಂಗ್ರೆಸ್ ಸದಸ್ಯರ ವಿರುದ್ಧ ವಿಡಿಯೋ ಪ್ರಸಾರ ಮಾಡಿದ್ದಕ್ಕಾಗಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ. ರಸ್ತೆ ನಿರ್ಬಂಧಿಸಿದ್ದಕ್ಕಾಗಿ ಭೀಮ್ ಸೇನೆಯ ಸದಸ್ಯರ ವಿರುದ್ಧ ಸಾಸ್ನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಇದೆ. ಹತ್ರಾಸ್ ಗೇಟ್ ಪೊಲೀಸ್ ಠಾಣೆಯಲ್ಲಿ ಮಾಜಿ ಶಾಸಕರೊಬ್ಬರು ಸಾರ್ವಜನಿಕ ಸಭೆ ಆಯೋಜಿಸಿದ್ದ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ”ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕರು (ಎಡಿಜಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

CBI ತನಿಖೆ ನಡುವೆಯೇ ಹತ್ರಾಸ್ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಆದಿತ್ಯನಾಥ್, ಮತ್ತವರ ಪೊಲೀಸರು
ಹಥ್ರಾಸ್ ಪ್ರಕರಣ ಯೋಗಿ ವಿರುದ್ಧದ ಅಂತರಾಷ್ಟ್ರೀಯ ಸಂಚು - UP ಪೊಲೀಸ್

ದಲಿತ ಯುವತಿಯ ಮೇಲಿನ ಅತ್ಯಾಚಾರ, ಆಕೆಯ ಸಾವು ಹಾಗೂ ಅಂತ್ಯಕ್ರಿಯೆ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ತರಾತುರಿಯಲ್ಲಿ ಅನುಮಾನಸ್ಪದವಾಗಿ ಅಂತ್ಯಕ್ರಿಯೆ ಮಾಡಿದ್ದನ್ನು ಉತ್ತರ ಪ್ರದೇಶ ಪೊಲೀಸರು ಸುಪ್ರೀಂ ಕೋರ್ಟಿನಲ್ಲಿ ಸಮರ್ಥಿಸಿಕೊಂಡಿದ್ದಾರೆ‌. 'ವಿಶೇಷ ಮತ್ತು ತುರ್ತು ಸಂದರ್ಭದಲ್ಲಿ ಈ ರೀತಿ ಅಂತ್ಯಕ್ರಿಯೆ ಮಾಡಬಹುದು' ಎಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಸಿಬಿಐ ತನಿಖೆ ಯಾವಾಗ ಮುಗಿಯುತ್ತದೆಯೋ? ದಲಿತ ಯುವತಿಯ ಅತ್ಯಾಚಾರ, ಸಾವಿಗೆ ನ್ಯಾಯ ಸಿಗುತ್ತೋ ಇಲ್ಲವೋ? ಅತ್ಯಾಚಾರ ಮಾಡಿ ಸಾವಿಗೂ ಕಾರಣರಾದವರಿಗೆ ಶಿಕ್ಷೆ ಆಗುತ್ತೋ ಇಲ್ಲವೋ? ಪೋಷಕರನ್ನು ಬೆದರಿಸಿ ದಲಿತ ಯುವತಿಯ ಅಂತ್ಯಸಂಸ್ಕಾರ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೋ ಇಲ್ಲವೋ? ಆದರೆ ಅಷ್ಟರೊಳಗೆ ಉತ್ತರ ಪ್ರದೇಶ ಪೊಲೀಸರು ಈ ಪ್ರಕರಣವನ್ನು 'ದಿಕ್ಕು ತಪ್ಪಿಸುವ' ಸಾಧ್ಯತೆಗಳಿವೆ ಎಂಬ ಅನುಮಾನಗಳು ಕಂಡುಬರುತ್ತಿವೆ.‌ ಅದಕ್ಕೆ ಯೋಗಿ ಆದಿತ್ಯನಾಥ್ ಅವರೇ ಮುನ್ನುಡಿ ಬರೆದಂತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com