ಕೃಷಿ ಮಸೂದೆ ಪ್ರತಿಭಟಿಸಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಸಂಸದೆ ಬಂಧನ
ನಾವು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲು ಬಂದಿದ್ದೆವು, ನಮ್ಮನ್ನು ಬಲವಂತವಾಗಿ ತಡೆಹಿಡಿದಿದ್ದಾರೆ - ಸುಖ್ಬೀರ್‌ ಬಾದಲ್‌
ಕೃಷಿ ಮಸೂದೆ ಪ್ರತಿಭಟಿಸಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಸಂಸದೆ ಬಂಧನ

ಕೇಂದ್ರ ಸರ್ಕಾರ ಪರಿಚಯಿಸಿದ ನೂತನ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ವ್ಕ್ತಪಡಿಸಿ ಎನ್‌ಡಿಎ ಮೈತ್ರಿಕೂಟದ ಸಚಿವ ಸಂಪುಟದಿಂದ ರಾಜಿನಾಮೆ ಸಲ್ಲಿಸಿ ಹೊರ ನಡೆದ ಹರಸಿಮ್ರತ್‌ ಕೌರ್‌ ಬಾದಲ್‌ ಅವರನ್ನು ಛಂಢೀಗಡದಲ್ಲಿ ಬಂಧಿಸಲಾಗಿದೆ.

ಕೃಷಿ ಮಸೂದೆ ವಿರೋಧಿಸಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ಶಿರೋಮಣಿ ಅಕಾಲಿ ದಳ ಕೃಷಿ ಮಸೂದೆ ವಿರೋಧಿಸಿ ಪಂಜಾಬ್‌ ನಾದ್ಯಂತ ಹೋರಾಟ ನಡೆಸುತ್ತಿದೆ. ತೀವ್ರ ಸ್ವರೂಪ ಪಡೆಯುತ್ತಿರುವ ರೈತ ಹೋರಾಟಗಳನ್ನು ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಹರಸಿಮ್ರತ್‌ ಕೌರ್‌, ಅವರ ಪತಿ- ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ- ಸುಖ್ಬೀರ್‌ ಬಾದಲ್‌ ಸೇರಿದಂತೆ ಹಲವು ಶಿರೋಮಣಿ ಅಕಾಳಿ ದಳದ ನಾಯಕರನ್ನು ಪೊಲೀಸರು ಬಂಧಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಾಯಕರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಿದ್ದರೂ, ಪ್ರತಿಭಟನೆಯ ತೀವೃತೆ ಕಡಿಮೆಯಾಗಲಿಲ್ಲ. ಬದಲಾಗಿ 30 ಕ್ಕೂ ಹೆಚ್ಚು ಕಡೆ ರೈಲು ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆಂದು ದಿ ವೈರ್‌ ವರದಿ ಮಾಡಿದೆ.

ಅಕಲ್‌ ತಖ್ತ್‌ ನಿಂದ ಸುಖ್ಬೀರ್‌ ಬಾದಲ್‌ ʼಕಿಸಾನ್ʼ ಮೆರವಣಿಗೆಯನ್ನು ಮುನ್ನಡೆಸಿದರೆ, ತಕ್ಥ್‌ ದಮ್ದಮ ಸಾಹಿಬ್‌ ನಿಂದ ಹರ್ಸಿಮ್ರತ್‌ ಕೌರ್‌ ಬಾದಲ್‌ ಹಾಗೂ ಪಕ್ಷದ ಹಿರಿಯ ನಾಯಕರಾದ ಪ್ರೇಮ್‌ ಸಿಂಗ್‌ ಚಂದುಮಜ್ರಾ ಮತ್ತು ಗಲ್ಜೀತ್‌ ಸಿಂಗ್‌ ಕೇಶ್‌ಘರ್‌ ಸಾಹಿಬಿಂದ ಮೆರವಣಿಗೆಯನ್ನು ಮುನ್ನಡೆಸಿದ್ದರು. ರಾಜ್ಯಪಾಲ ವಿಪಿ ಸಿಂಗ್‌ ನಿವಾಸದೆದುರು ಸೇರುವ ಕಿಸಾನ್‌ ಮೆರವಣಿಗೆಯನ್ನು ತಡೆದ ಪೊಲೀಸರು ದಾರಿ ಮಧ್ಯೆಯೇ ಪ್ರತಿಭಟನೆಕಾರರನ್ನು ತಡೆದಿದ್ದಾರೆ ಎಂದು ವೈರ್‌ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಜಲಫಿರಂಗಿಯನ್ನು ಬಳಸಿದ ಪೊಲೀಸರು, ಪ್ರತಿಭಟನಾಕಾರರನ್ನು ಚದುರಿಸಲು ಲಾಠಿಯನ್ನೂ ಬಳಸಿದ್ದಾರೆ. ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಪಕ್ಷದ ನಾಯಕರನ್ನು ಬಂಧಿಸಿದ್ದಾರೆ. ಮಾತ್ರವಲ್ಲದೆ, ಪಂಜಾಬ್‌ ಹಾಗೂ ಹರ್ಯಾಣದ ಜಂಟಿ ರಾಜಧಾನಿಯಲ್ಲಿ ಸೆಕ್ಷನ್‌ 144 ಅನ್ನೂ ವಿಧಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚಂಢೀಗಢ್‌ ಹಿರಿಯ ಎಸ್‌ಪಿ ಕುಲದೀಪ್‌ ಚಾಹಲ್‌, ಅಕಾಲಿದಳದ ನಾಯಕರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕೆಲಕಾಲ ಬಂಧನದಲ್ಲಿಟ್ಟಿದ್ದೆವು, ಬಳಿಕ ಬಿಡುಗಡೆಗೊಳಿಸಲಾಗಿದೆ ಎಂದಿದ್ದಾರೆ.

ನಾವು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲು ಬಂದಿದ್ದೆವು, ನಮ್ಮನ್ನು ಬಲವಂತವಾಗಿ ತಡೆಹಿಡಿದಿದ್ದಾರೆ. ಹಾಗೂ ನಮ್ಮ ಮೇಲೆ ಲಾಠಿ ಚಾರ್ಜ್‌ ಮಾಡಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ರೈತರ ದನಿಯಡಗಿಸಲು ಅವರು ಯತ್ನಿಸುತ್ತಿದ್ದಾರೆ. ಇದು ಅನ್ಯಾಯ ಎಂದು ಸುಖ್ಬೀರ್‌ ಬಾದಲ್‌ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com