ಮದುವೆಗೆ 50, ಸಿನಿಮಾ, ಕ್ಲಬ್ಬಿಗೆ ಸಾವಿರ ಮಂದಿ! ಸರ್ಕಾರದ ಎಡವಟ್ಟು ನಿಯಮ!
ಒಂದು ಕಡೆ ಸರ್ಕಾರದ ಒಂದು ಇಲಾಖೆ ಕಠಿಣ ನಿಯಮ ಹೇರುವುದು, ಮತ್ತೊಂದು ಕಡೆ ಮತ್ತೊಂದು ಇಲಾಖೆ ಆ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು, ಸ್ವತಃ ಸರ್ಕಾರದ ಸಚಿವರು, ಶಾಸಕರು ಮತ್ತು ಅಧಿಕಾರಿಗಳೇ ಅಂತಹ ನಿಯಮಗಳನ್ನು ಗಾಳಿಗೆ ತೂರಿ ಸಭೆ- ಸಮಾರ ...
ಮದುವೆಗೆ 50, ಸಿನಿಮಾ, ಕ್ಲಬ್ಬಿಗೆ ಸಾವಿರ ಮಂದಿ! ಸರ್ಕಾರದ ಎಡವಟ್ಟು ನಿಯಮ!

ನಾಲ್ಕು ಹಂತಗಳ ಅನ್ ಲಾಕ್ ಡೌನ್ ಬಳಿಕ ದೇಶ ಈಗ ಐದನೇ ಹಂತದ ಅನ್ ಲಾಕ್ ಡೌನ್ ಗೆ ಕಾಲಿಟ್ಟಿದೆ. ಈ ಸಂಬಂಧ ಪಾಲಿಸಬೇಕಾದ ನಿಯಮಾವಳಿಗಳ ಕುರಿತ ಮಾರ್ಗದರ್ಶಿ ಸೂತ್ರಗಳ ಪಟ್ಟಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಿಂದಲೂ ಬಿಡುಗಡೆಯಾಗಿವೆ.

ಆ ಪೈಕಿ ಪ್ರಮುಖ ಅಂಶಗಳೆಂದರೆ; ಸಿನಿಮಾ ಮತ್ತು ಈಜುಕೊಳಗಳಿಗೆ ಅನುಮತಿ, ಕ್ಲಬ್, ಮಾಲ್ ಗಳ ಪುನರಾರಂಭಕ್ಕೂ ಹಸಿರು ನಿಶಾನೆ ತೋರಲಾಗಿದೆ. ಜೊತೆಗೆ ಶಾಲಾ-ಕಾಲೇಜುಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಆಯಾ ರಾಜ್ಯಗಳ ಸೋಂಕಿನ ಪರಿಸ್ಥಿತಿಯ ಮೇಲೆ ನಿರ್ಧಾರ ಕೈಗೊಳ್ಳಲು ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ. ಈ ನಡುವೆ, ರಾಜ್ಯ ಸರ್ಕಾರ ಕೂಡ ಹೊಸ ಸೂಚನೆಗಳನ್ನು ಹೊರಡಿಸಿದ್ದು, ವಿಶೇಷವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರದ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮಾವಳಿ ಜಾರಿಗೆ ತಂದಿದೆ. ಮಾಸ್ಕ್ ಧರಿಸದವರಿಗೆ ನಗರ ಪ್ರದೇಶದಲ್ಲಿ ಬರೋಬ್ಬರಿ ಸಾವಿರ ರೂ. ದಂಡ ಮತ್ತು ಗ್ರಾಮೀಣ ಪ್ರದೇಶದಲ್ಲಿ ಐದು ನೂರು ರೂ. ದಂಡ ವಿಧಿಸಲು ಆದೇಶಿಸಲಾಗಿದೆ. ಹಾಗೇ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕನಿಷ್ಟ ಆರು ಅಡಿ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದರೊಂದಿಗೆ, ರಾಜ್ಯಾದ್ಯಂತ ಮದುವೆ ಮತ್ತು ಸಭೆ ಸಮಾರಂಭಗಳಲ್ಲಿ ಐವತ್ತು ಜನರಿಗಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ. ಒಂದು ವೇಳೆ ಆ ನಿಯಮ ಮೀರಿದರೆ ಸಮಾರಂಭದ ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿಯೂ ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರೇ ಘೋಷಿಸಿದ್ದಾರೆ.

ಇನ್ನು ಶಾಲಾ ಕಾಲೇಜು ಆರಂಭಿಸುವ ಕುರಿತು ಹಲವು ಗೊಂದಲದ ಹೇಳಿಕೆಗಳು ರಾಜ್ಯ ಸರ್ಕಾರದ ಸಚಿವರುಗಳಿಂದಲೇ ವ್ಯಕ್ತವಾಗುತ್ತಿವೆ. ಶಿಕ್ಷಣ ಸಚಿವರು ಒಂದು ಹೇಳಿಕೆ ನೀಡಿದರೆ, ಇತರೆ ಸಚಿವರು ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ. ಅಕ್ಟೋಬರ್ 15ರಿಂದ ಶಾಲಾಕಾಲೇಜು ಆರಂಭಿಸುವುದಾಗಿ ಪ್ರಾಥಮಿಕ ಶಿಕ್ಷಣ ಸಚಿವರು ಹೇಳಿರುವುದಾಗಿ ಈ ಮೊದಲು ವರದಿಯಾಗಿತ್ತು. ಆದರೆ, ಇದೀಗ ಮತ್ತೆ ಆ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, ಅಕ್ಟೋಬರ್ 10ರ ನಂತರವಷ್ಟೇ ಆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಧಾವಂತದಲ್ಲಿ ಶಾಲಾ ಕಾಲೇಜು ಆರಂಭಿಸುವ ಇರಾದೆ ಸರ್ಕಾರಕ್ಕೆ ಇಲ್ಲ. ಈಗಾಗಲೇ ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಎಲ್ಲರ ಅಭಿಪ್ರಾಯ ಪಡೆದು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಂತರವಷ್ಟೇ ತರಗತಿಗಳನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಆದರೆ, ರಾಜ್ಯ ಸರ್ಕಾರ ಬರೋಬ್ಬರಿ ಆರು ತಿಂಗಳ ಅವಧಿಯ ಲಾಕ್ ಡೌನ್, ಅನ್ ಲಾಕ್ ಡೌನ್, ಕರೋನಾ ಸೋಂಕಿನ ಸಂಕಷ್ಟದ ಹೊರತಾಗಿಯೂ ಈ ಬಿಕ್ಕಟ್ಟಿನ ಸಂದರ್ಭವನ್ನು ನಿಭಾಯಿಸುವ ಬಗ್ಗೆ ಏನನ್ನೂ ಕಲಿತಿಲ್ಲ ಎಂಬುದಕ್ಕೆ ಈ ಬಗೆಯ ವಿರೋಧಭಾಸದ, ಗೊಂದಲದ ಹೇಳಿಕೆಗಳೇ ನಿದರ್ಶನ.

ಒಂದು ಕಡೆ ಮಾಲ್, ಸಿನಿಮಾ ಮಂದಿರ, ಕ್ಲಬ್ ಗಳಿಗೆ ಅವಕಾಶ ನೀಡುವ ಸರ್ಕಾರ, ಮತ್ತೊಂದು ಕಡೆ ಮದುವೆ, ಸಭೆ- ಸಮಾರಂಭಗಳಿಗೆ ಕೇವಲ 50 ಮಂದಿಯ ಮಿತಿ ಹೇರುತ್ತಿರುವುದು ಹಾಸ್ಯಾಸ್ಪದ. ರಾಜ್ಯದಲ್ಲಿ ಈಗ ಮಲ್ಟಿಪ್ಲೆಕ್ಸ್ ಗಳೂ ಸೇರಿದಂತೆ ಇರುವ ಯಾವುದೇ ಸಿನಿಮಾ ಮಂದಿರಗಳಲ್ಲಿ ಅವುಗಳ ಕನಿಷ್ಟ ಆಸನ ಸಂಖ್ಯೆ 200ಕ್ಕಿಂತ ಹೆಚ್ಚಿರುತ್ತದೆ. ಸಾವಿರ ಸಂಖ್ಯೆ ದಾಟುವ ಬೃಹತ್ ಹಳೆಯ ಸಿನಿಮಾ ಮಂದಿರಗಳೂ ಇವೆ. ಮಲ್ಟಿಪೆಕ್ಸ್ ಗಳಲ್ಲಿ ಥಿಯೇಟರ್ ಲೆಕ್ಕದಲ್ಲಿ ಪ್ರತ್ಯೇಕವಾಗಿದ್ದರೂ ಒಂದು ಕಡೆ ಇರುವ ಎಲ್ಲಾ ನಾಲ್ಕೈದು ಥಿಯೇಟರಿನ ಸಾವಿರಾರು ಮಂದಿ ಪ್ರವೇಶ ಮತ್ತು ಓಡಾಟದ ಪ್ಯಾಸೇಜುಗಳು ಒಂದೇ ಆಗಿರುತ್ತವೆ. ಜೊತೆಗೆ, ಒಟ್ಟು ಆಸನ ಸಾಮರ್ಥ್ಯದ ಅರ್ಧದಷ್ಟು ಮಂದಿಗೆ ಮಾತ್ರ ಪ್ರವೇಶ ಎಂದರೂ ಒಂದು ಬಿಟ್ಟು ಮತ್ತೊಂದು ಆಸನದಲ್ಲಿ ಕೂರಲೇಬೇಕಾಗುತ್ತದೆ. ಅಂದರೆ ಅಲ್ಲಿ ಹೆಚ್ಚೆಂದರೆ ಎರಡು ಅಡಿ ಅಂತರ ಕಾಯ್ದುಕೊಳ್ಳಬಹದು ಮಾತ್ರ! ಹಾಗಿರುವಾಗ ಅಲ್ಲಿ ಐವತ್ತು ಜನರ ನಿಯಮ ಪಾಲನೆ ಹೇಗೆ ಮತ್ತು ಕನಿಷ್ಟ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ?

ಸಿನಿಮಾ, ಕ್ಲಬ್ ಗಳಿಗೆ ಇಲ್ಲದ ಜನರ ಮಿತಿ ಮತ್ತು ಸಾಮಾಜಿಕ ಅಂತರದ ನಿಯಮವನ್ನು ಇತರರಿಗೆ ಮಾತ್ರ ಜಾರಿ ಮಾಡುತ್ತೇವೆ. ಉಲ್ಲಂಘನೆಯಾದರೆ ಸಾವಿರಾರು ರೂಪಾಯಿ ದಂಡ ಹಾಕುತ್ತೇವೆ ಎಂಬುದು ಎಷ್ಟು ನ್ಯಾಯ ಎಂಬುದು ಈಗ ರಾಜ್ಯದಲ್ಲಿ ಚರ್ಚೆಯ ಸಂಗತಿಯಾಗಿದೆ. ಸಚಿವ ಸುಧಾಕರ್ ಅವರ ಈ ತುಘಲಕ್ ನೀತಿ ಹೊರಬೀಳುತ್ತಿದ್ದಂತೆ ರಾಜ್ಯದ ಮೂಲೆಮೂಲೆಯಲ್ಲಿ ಪೊಲೀಸರು ಮತ್ತು ಸ್ಥಳೀಯ ಸಂಸ್ಧಗಳು ರಸೀದಿ ಪುಸ್ತಕ ಹಿಡಿದು(ಅದರಲ್ಲಿ ಎಷ್ಟು ಅಸಲಿಯೋ, ಎಷ್ಟು ನಕಲಿಯೋ!) ಸಂತೆ, ಅಂಗಡಿಮುಂಗಟ್ಟು, ಪೇಟೆ ಬೀದಿಗಳಿಗೆ ನುಗ್ಗಿದ್ದಾರೆ. ಕಂಡಕಂಡವರ ಮೇಲೆ; ಅದರಲ್ಲೂ ಹಳ್ಳಿಗರ ಮೇಲೆ ದಂಡಾಸ್ತ್ರ ಝಳಪಿಸುತ್ತಿದ್ದಾರೆ.

ಅದರಲ್ಲೂ ಮುಖ್ಯವಾಗಿ ಮಾಸ್ಕ್ ವಿಷಯದಲ್ಲಿ ಸ್ಪಷ್ಟ ನಿಯಮಾವಳಿಗಳೇ ಇಲ್ಲದಾಗಿದ್ದು, ಹಳ್ಳಿಗರು ಕರವಸ್ತ್ರ ಅಥವಾ ಮಹಿಳೆಯರು ಸೆರಗು ಮುಚ್ಚಿಕೊಂಡಿದ್ದರೂ ಅಂತಹದನ್ನು ಕೂಡ ಮಾಸ್ಕ್ ಧರಿಸಿಲ್ಲ ಎಂದೇ ಪರಿಗಣಿಸಿ ದಂಡ ವಿಧಿಸಿದ ಘಟನೆಗಳೂ ವರದಿಯಾಗಿವೆ. ಜೊತೆಗೆ ವಿಶೇಷವಾದಿ ಕಾರು ಮತ್ತಿತರ ಖಾಸಗೀ ವಾಹನಗಳಲ್ಲಿ ಪ್ರಮಾಣಿಸುವ ಮನೆಮಂದಿ, ಚಾಲಕರಿಗೆ ಕೂಡ ತಡೆದು ಮಾಸ್ಕ ಧರಿಸಿಲ್ಲ ಎಂದು ಪೊಲೀಸರು ದಂಡ ವಿಧಿಸುತ್ತಿರುವುದು ಕೂಡ ಮುಂದುವರಿದಿದೆ.

ಅದೇ ರೀತಿ ಒಂದು ಕಡೆ ಸಾರ್ವಜನಿಕ ಸಾರಿಗೆ ವಲಯದಲ್ಲಿ ಬಹುತೇಕ ಬಸ್ಸುಗಳಲ್ಲಿ ಅವುಗಳ ಪೂರ್ಣ ಆಸನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ರೈಲು ಮತ್ತು ಮೆಟ್ರೋಗಳಲ್ಲಿ ಕೂಡ ಬಹುತೇಕ ಸರ್ಕಾರದ ಸಾಮಾಜಿಕ ಅಂತರದ ನಿಯಮ ಪಾಲನೆಯಾಗುತ್ತಿಲ್ಲ.

ಜನಾರೋಗ್ಯ ಕಾಯುವ ನಿಟ್ಟಿನಲ್ಲಿ ನಿಯಮಗಳು ಮತ್ತು ಸುರಕ್ಷಾ ಕ್ರಮಗಳು ಬೇಕು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಸರ್ಕಾರವೊಂದು ಕಠಿಣ ನಿಯಮಗಳನ್ನು ಹೊರಡಿಸುವಾಗ ಆ ನಿಯಮಗಳು ಎಲ್ಲೆಡೆ ಮತ್ತು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು ಮತ್ತು ಕಟ್ಟುನಿಟ್ಟಾಗಿ ಜಾರಿಗೂ ಬರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪಾಲಿಸುವ ಸಾಧ್ಯವಿರುವ ಮತ್ತು ಜನತೆಗೂ ಹೊರೆಯಾಗದ ರೀತಿಯಲ್ಲಿ ನಿಯಮ ರೂಪಿಸಬೇಕಲ್ಲವೆ?

ಒಂದು ಕಡೆ ಸರ್ಕಾರದ ಒಂದು ಇಲಾಖೆ ಕಠಿಣ ನಿಯಮ ಹೇರುವುದು, ಮತ್ತೊಂದು ಕಡೆ ಮತ್ತೊಂದು ಇಲಾಖೆ ಆ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು, ಸ್ವತಃ ಸರ್ಕಾರದ ಸಚಿವರು, ಶಾಸಕರು ಮತ್ತು ಅಧಿಕಾರಿಗಳೇ ಅಂತಹ ನಿಯಮಗಳನ್ನು ಗಾಳಿಗೆ ತೂರಿ ಸಭೆ- ಸಮಾರಂಭಗಳನ್ನು ನಡೆಸುವುದು, ಜಾಥಾ- ರ್ಯಾಲಿಗಳನ್ನು ಆಯೋಜಿಸುವುದು ಮಾಡಿದರೆ, ಅದನ್ನು ಹಾಸ್ಯಾಸ್ಪದ ಎನ್ನದೇ ಬೇರೇನು ಹೇಳುವುದು?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com