ಭಾರತದ ಕೋವಿಡ್‌ ಅಂಕಿ ಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪ್ರಧಾನಿ ಮೋದಿ ‌ಆಪ್ತ ಸ್ನೇಹಿತ ಟ್ರಂಪ್

ʼನಮಸ್ತೆ ಟ್ರಂಪ್‌ʼ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯನ್ನು ತಮ್ಮ ವಿಶೇಷ ಸ್ನೇಹಿತ ಎಂದು ಕರೆದಿದ್ದ ಟ್ರಂಪ್‌ ವಾಪಾಸ್‌ ಅಮೇರಿಕಾಕ್ಕೆ ಹೋದ ತಕ್ಷಣವೇ ತಮ್ಮ ಅಸಲೀಯತ್ತನ್ನು ತೋರಿಸಿದ್ದಾರೆ.
ಭಾರತದ ಕೋವಿಡ್‌ ಅಂಕಿ ಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪ್ರಧಾನಿ ಮೋದಿ ‌ಆಪ್ತ ಸ್ನೇಹಿತ ಟ್ರಂಪ್

“ಭಾರತ ಕರೋನಾ ಸೋಂಕಿನಿಂದ ಸತ್ತವರ ಸಂಖ್ಯೆಯ ಕುರಿತು ತಪ್ಪು ಮಾಹಿತಿ ನೀಡುತ್ತಿದೆ,” ಹೀಗೆಂದು ಹೇಳಿದವರು ಕಾಂಗ್ರೆಸ್‌ ಅಥವಾ ಇತರ ವಿರೋಧ ಪಕ್ಷದ ನಾಯಕರಲ್ಲ. ಬದಲಾಗಿ, ಪ್ರಧಾನಿ ಮೋದಿಯವರ ಆಪ್ತ ಮಿತ್ರರಾಗಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು.

ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಪ್ರತಿಸ್ಪರ್ಧಿ ಜೋ ಬಿಡೆನ್‌ ಅವರ ಆರೋಪಗಳಿಗೆ ಉತ್ತರ ನೀಡುವ ಭರದಲ್ಲಿ ಭಾರತವನ್ನು ಟೀಕಿಸಿದ್ದಾರೆ. ಕರೋನಾ ಸಂಕಷ್ಟವನ್ನು ಅಮೇರಿಕಾ ನಿರ್ವಹಿಸಿದ ರೀತಿಯನ್ನು ಹಾಡಿ ಹೊಗಳಿರುವ ಟ್ರಂಪ್‌, ಅಂಕಿ ಸಂಖ್ಯೆಗಳ ಕುರಿತು ಮಾತನಾಡಿದರೆ ಚೀನಾ, ಭಾರತ ಹಾಗೂ ರಷ್ಯಾದಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎನ್ನುವ ಸತ್ಯ ಮಾಹಿತಿ ಯಾರಿಗೂ ತಿಳಿದಿಲ್ಲ, ಎಂದು ಹೇಳಿದ್ದಾರೆ. “ಈ ಮೂರು ರಾಷ್ಟ್ರಗಳು ನಿಜವಾದ ಸಂಖ್ಯೆಗಳನ್ನು ನೀಡುವುದೇ ಇಲ್ಲ,” ಎಂದು ವಿವಾದ ಸೃಷ್ಟಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇನ್ನು ಹವಾಮಾನ ಬದಲಾವಣೆಯ ಕುರಿತು ಮಾತನಾಡುವಾಗಲೂ ಭಾರತವನ್ನು ಟೀಕಿಸಿದ್ದ ಡೊನಾಲ್ಡ್‌ ಟ್ರಂಪ್‌, ಭಾರತ ವಾತಾವರಣಕ್ಕೆ ನಿಜವಾದ ಮಾಲಿನ್ಯವನ್ನು ಬಿಡುಗಡೆ ಮಾಡುತ್ತಿದೆ ಎಂದು ಹೇಳಿದ್ದರು. ಪ್ಯಾರಿಸ್‌ ಒಪ್ಪಂದವನ್ನು ಮುರಿದ ನಂತರ ಟೀಕೆಗೊಳಗಾಗಿದ್ದ ಡೊನಾಲ್ಡ್‌ ಟ್ರಂಪ್‌ ತಮ್ಮ ʼಇಮೇಜ್‌ʼ ಉಳಿಸಿಕೊಳ್ಳುವ ಸಲುವಾಗಿ ಭಾರತದ ಮೇಲೆ ಗೂಬೆ ಕೂರಿಸಿದ್ದರು.

ಟ್ರಂಪ್‌ ಭಾರತವನ್ನು ಗುರಿಯಾಗಿಸುತ್ತಿರುವುದು ಇದು ಮೊದಲನೇ ಬಾರಿಯಲ್ಲ. ಇದೇ ವರ್ಷ ಜುಲೈನಲ್ಲಿಯೂ ಭಾರತ ತನ್ನ ವಾತಾವರಣದ ಕುರಿತು ಸರಿಯಾದ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. “ಕೇವಲ ಅಮೇರಿಕಾ ಮಾತ್ರ ವಾತಾವರಣದ ಕಾಳಜಿ ವಹಿಸಬೇಕು ಎಂದು ಹೇಳುತ್ತಾರೆ. ಭಾರತ, ರಷ್ಯಾ ಮತ್ತು ಚೀನಾ ಕೂಡಾ ತಮ್ಮ ದೇಶದ ವಾತಾವರಣದ ಕುರಿತು ಕಾಳಜಿ ವಹಿಸುತ್ತಿಲ್ಲ. ಆದರೆ, ನಾವು ನಿಜವಾದ ಕಾಳಜಿ ತೆಗೆದುಕೊಳ್ಳುತ್ತೇವೆ. ನಾನು ಅಧ್ಯಕ್ಷನಾಗಿರುವ ವರೆಗೂ ಅಮೇರಿಕಾ ಮೊದಲ ಸ್ಥಾನದಲ್ಲಿರುವಂತೆ ಮಾಡುತ್ತೇನೆ,” ಎಂದು ಹೇಳಿದ್ದರು.

ಪ್ರಧಾನಿ ಮೋದಿಯವರ ಆಪ್ತ ಸ್ನೇಹಿತನೇ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಪ್ರಧಾನಿಯ ಪಾಲಿಗೆ ಮುಖಭಂಗದ ವಿಚಾರವಾಗಿದೆ. ಪ್ರತಿ ಬಾರಿ ಭೇಟಿಯಾದಾಗಲು ಪ್ರೀತಿಯ ಆಲಿಂಗನ ನೀಡುತ್ತಿದ್ದ ಟ್ರಂಪ್‌ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಭಾರಿ ಮುಜುಗರ ತರುವಂತಹ ವಿಚಾರವಾಗಿದೆ. ʼನಮಸ್ತೆ ಟ್ರಂಪ್‌ʼ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯನ್ನು ತಮ್ಮ ವಿಶೇಷ ಸ್ನೇಹಿತ ಎಂದು ಕರೆದಿದ್ದ ಟ್ರಂಪ್‌ ವಾಪಾಸ್‌ ಅಮೇರಿಕಾಕ್ಕೆ ಹೋದ ತಕ್ಷಣವೇ ತಮ್ಮ ಅಸಲೀಯತ್ತನ್ನು ತೋರಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com