ಕೃಷಿ ಮಸೂದೆ ವಿರೋಧಿ ರೈತರ ಆಕ್ರೋಶದ ಹಿಂದಿನ ಸಂದೇಶಗಳೇನು?

ಬಹುರಾಷ್ಟ್ರೀಯ ಶಕ್ತಿಗಳು ಮತ್ತು ದೇಶದ ಆಡಳಿತದ ಚುಕ್ಕಾಣಿ ಹಿಡಿದ ವ್ಯಕ್ತಿಗಳ ಪ್ರಭಾವ ಮತ್ತು ಶಕ್ತಿಯ ಎದುರು ಬಡ ರೈತನ ಬದುಕು ಉಳಿಯಬೇಕಾದರೆ ಸಂಘಟನೆ ಬಲ ಆತನ ರಟ್ಟೆ ಮತ್ತು ದನಿಗೆ ಶಕ್ತಿ ಕೊಡಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಕೂಡ ...
ಕೃಷಿ ಮಸೂದೆ ವಿರೋಧಿ ರೈತರ ಆಕ್ರೋಶದ ಹಿಂದಿನ ಸಂದೇಶಗಳೇನು?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಸಂಬಂಧಿತ ವಿವಿಧ ಮಸೂದೆಗಳನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ರೈತ ಹೋರಾಟದ ಭಾಗವಾಗಿ ಸೋಮವಾರ ಕರ್ನಾಟಕ ಬಂದ್ ಕರೋನಾ ಆತಂಕದ ನಡುವೆಯೂ ದೊಡ್ಡ ಮಟ್ಟದ ಯಶಸ್ಸು ಕಂಡಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಯಿತು. ಬಹುತೇಕ ನಗರ- ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರ- ವಹಿವಾಟು, ಸಾರಿಗೆ ಸಂಚಾರ ಸ್ಥಗಿತವಾಗಿತ್ತು. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಂದ್ ಯಶಸ್ವಿಯಾಗಿದ್ದರೂ, ಸಾಕಷ್ಟು ಕಡೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಬಂದ್ ನಡೆಯದೇ ಹೋದರೂ ಭಾರೀ ಪ್ರತಿಭಟನೆಗಳು ನಡೆದಿವೆ ಎಂದು ವರದಿಗಳು ಹೇಳಿವೆ. ಆದರೆ, ಒಟ್ಟಾರೆ, ಇತ್ತೀಚಿನ ವರ್ಷಗಳಲ್ಲಿ ವಿರಳ ಯಶಸ್ವಿ ಬಂದ್ ಇದಾಗಿತ್ತು ಎಂಬುದನ್ನು ಬಹುತೇಕ ಎಲ್ಲಾ ಮಾಧ್ಯಮಗಳು ಹೇಳಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದೇ ವೇಳೆ ಕಳೆದ ಶುಕ್ರವಾರದ ಭಾರತ್ ಬಂದ್ ಅಂಗವಾಗಿ ಭಾರೀ ಬಂದ್ ಮತ್ತು ರೈತ ಸಂಘಟನೆಗಳ ಪ್ರತಿಭಟನೆಯನ್ನು ಕಂಡಿದ್ದ ಉತ್ತರ ಭಾರತದ ಪಂಜಾಬ್, ಹರ್ಯಾಣ, ದೆಹಲಿ ಹಾಗೂ ದಕ್ಷಿಣ ಭಾರತದ ತೆಲಂಗಾಣ, ಕೇರಳ ಮಂತಾದ ಕಡೆಯೂ ಸೋಮವಾರ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿದೆ.

ಕರ್ನಾಟಕದ ಮಟ್ಟಿಗಂತೂ ರಾಜಧಾನಿ ಬೆಂಗಳೂರು ಬಹುತೇಕ ಸ್ತಬ್ಧವಾಗುವ ಮಟ್ಟಿಗೆ ರೈತ-ಕಾರ್ಮಿಕರ ದನಿ ಮೊಳಗಿದೆ. ಗಮನಿಸಬೇಕಾದ ಸಂಗತಿಯೆಂದರೆ; ಈ ಬಾರಿಯ ರೈತ ಹೋರಾಟದ ಮುಂಚೂಣಿಯಲ್ಲಿದ್ದು, ಹೋರಾಟಕ್ಕೆ ದನಿಯಾದವರು ಹೆಚ್ಚಿನ ಪಾಲು ಯುವ ಹೋರಾಟಗಾರರು ಎಂಬುದು. ದಶಕಗಳ ಕಾಲ ರೈತ ಮತ್ತು ಕಾರ್ಮಿಕ ಹೋರಾಟಗಳ ನೇತೃತ್ವ ವಹಿಸಿದ್ದ ಹಿರಿಯ ಹೋರಾಟಗಾರರು ಭಾಗವಹಿಸಿದ್ದರೂ, ಪ್ರಮುಖವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಮತ್ತು ಕಾರ್ಮಿಕ ಸಂಬಂಧಿತ ಮಸೂದೆ- ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದ ದನಿ ಎತ್ತಿದ್ದು ಯುವ ಮುಂದಾಳುಗಳು. ಅದು ಬೀದಿ ಹೋರಾಟವಿರಬಹುದು, ಮಾಧ್ಯಮಗಳ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹೋರಾಟದ ದನಿಯಾಗಿ ಹುರಿದುಂಬಿಸಿದ ವಿಷಯವಿರಬಹುದು; ಎರಡೂ ಕಡೆ ಹೆಚ್ಚು ಉತ್ಸಾಹ ಮತ್ತು ಖಚಿತ ನಿಲುವಿನೊಂದಿಗೆ ಕಾಣಿಸಿಕೊಂಡದ್ದು ಈ ಯುವ ಮುಖಗಳು.

ಕೃಷಿ ಮಸೂದೆ ವಿರೋಧಿ ರೈತರ ಆಕ್ರೋಶದ ಹಿಂದಿನ ಸಂದೇಶಗಳೇನು?
ನೂತನ ಕೃಷಿ ಮಸೂದೆ ವಿರೋಧಿಸಿ ರೈತ-ದಲಿತ-ಕಾರ್ಮಿಕ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಇತ್ತೀಚಿನ ವರ್ಷಗಳಲ್ಲಿ ರೈತರ ಸಮಸ್ಯೆ ಮುಂದಿಟ್ಟುಕೊಂಡು ನಡೆದ ದೊಡ್ಡ ಮಟ್ಟದ ಹೋರಾಟ ಇದು ಎಂಬುದು ನಿಜವಾದರೂ, ಮಸೂದೆಗಳ ವಿಷಯದಲ್ಲಿ ಹೋರಾಟ ಸಂಘಟಿಸಿ ಪ್ರತಿರೋಧ ವ್ಯಕ್ತಪಡಿಸುವ ವಿಷಯದಲ್ಲಿ ತೀರಾ ವಿಳಂಬ ಮಾಡಿದರು. ಸಂಸತ್ತಿನ ಉಭಯ ಸದನಗಳಲ್ಲಿ ಮೂರು ಕೃಷಿ ಮಸೂದೆಗಳು ಅಂಗೀಕಾರವಾಗಿ, ಅವುಗಳಿಗೆ ರಾಷ್ಟ್ರಪತಿಗಳ ಅಂಕಿತವೂ ಬಿದ್ದಾಗಿದೆ. ಈವರೆಗೆ ಕಾಯುವ ಬದಲು ಮಸೂದೆಗಳು ಸಂಸತ್ತಿನಲ್ಲಿ ಮಂಡನೆಯಾಗಲಿವೆ ಎಂಬುದು ತಿಳಿಯುತ್ತಿದ್ದಂತೆ ದೊಡ್ಡ ಮಟ್ಟದ ಪ್ರತಿರೋಧ ತೋರಬೇಕಿತ್ತು. ಆಗ ಅದು ಸಕಾಲಿಕವೂ ಮತ್ತು ಹೆಚ್ಚು ಪರಿಣಾಮಕಾರಿಯೂ ಆಗಿರುತ್ತಿತ್ತು ಎಂಬ ಅಭಿಪ್ರಾಯಗಳೂ ಇವೆ.

ಆದಾಗ್ಯೂ ಪ್ರಮುಖವಾಗಿ ಎರಡು ವಿಷಯಗಳಲ್ಲಿ ಈ ಕರ್ನಾಟಕ ಬಂದ್ ರಾಜ್ಯ ರೈತ ಹೋರಾಟಕ್ಕೆ ಹೊಸ ಹುರುಪು ತಂದಿದೆ. ಮೊದಲನೆಯದು; ಹೋರಾಟದ ತೀವ್ರತೆಗೆ ಮಣಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಬಂದ್ ಮುಗಿಯುವ ಮುನ್ನವೇ ರಾಜ್ಯ ಸರ್ಕಾರ ಜಾರಿಗೆ ಪ್ರಯತ್ನಿಸುತ್ತಿರುವ ವಿವಾದಿತ ಮಸೂದೆಗಳಾದ ಭೂ ಸುಧಾರಣಾ ಮಸೂದೆ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳಿಗೆ ರೈತರ ಒತ್ತಾಸೆಯಂತೆ ಕೆಲವು ತಿದ್ದುಪಡಿಗಳನ್ನು ಮಾಡಲು ಸಿದ್ಧ ಎಂದಿದ್ದಾರೆ. ಎರಡನೆಯದು ಕೆಲವೇ ಮಂದಿ ನಾಯಕರ ಗುಂಪುಗಾರಿಕೆ ಮತ್ತು ಹಳೆಯ ತಲೆಗಳ ಹೋರಾಟವಾಗಿದ್ದ ರೈತ ಹೋರಾಟಕ್ಕೆ ಹೊಸ ಬಿಸಿರಕ್ತದ ಹರಿವು ಹುರುಪು ತಂದಿದೆ.

ಹಾಗೆ ನೋಡಿದರೆ; ರಾಜ್ಯದಲ್ಲಿ 90ರ ದಶಕದ ಹೊತ್ತಿಗೇ ರಾಜ್ಯ ರೈತ ಸಂಘದ ಬಣ ರಾಜಕಾರಣ, ಗುಂಪುಗಾರಿಕೆ ತಲೆ ಎತ್ತಿತ್ತು. ಪ್ರೊ ಎಂ ಡಿ ನಂಜುಂಡಸ್ವಾಮಿ ಮತ್ತು ಪುಟ್ಟಣ್ಣಯ್ಯ ನಡುವಿನ ಸೈದ್ಧಾಂತಿಕ ಭಿನ್ನಮತದೊಂದಿಗೆ ಆರಂಭವಾದ ರೈತ ಸಂಘದ ಬಲಹೀನತೆಯ ಪರ್ವ ನಂತರ ಎರಡನೇ ಹಂತದ ನಾಯಕರ ಹೊತ್ತಿಗೆ ಸ್ಪಷ್ಟವಾಗಿ ಗುಂಪು, ಬಣಗಳಾಗಿ ಅಧಿಕೃತವಾಗಿಯೇ ಒಡೆದು ಹತ್ತು ಹಲವು ಹೋಳಾಗಿತ್ತು. ಆ ನಡುವೆ, ಪ್ರೊಫೆಸರ್ ಕಾಲದಿಂದಲೂ ರೈತ ಸಂಘ ಎಂಬುದು ಸಮಗ್ರ ಕರ್ನಾಟಕದ ಎಲ್ಲಾ ರೈತರ ಸಂಘಟನೆಯಾಗಿ ವಿಕಾಸ ಹೊಂದುವ ಬದಲು, ಸೀಮಿತ ಪ್ರದೇಶ ಮತ್ತು ಸೀಮಿತ ಬೆಳೆಗಾರರ ಸಂಘವಾಗಿ ಕುಗ್ಗುತ್ತಲೇ ಸಾಗಿತು. ಇತ್ತೀಚೆಗಂತೂ ಅದು ಕಬ್ಬು ಬೆಳೆಗಾರರ ಸಂಘ, ತೆಂಗು ಬೆಳೆಗಾರರ ಸಂಘವಾಗಿದೆಯೇ ವಿನಃ ಸಮಗ್ರ ರೈತರ ಆಶೋತ್ತರಗಳ, ಬೇಡಿಕೆಗಳ ಪ್ರತಿನಿಧಿಯಾಗಿ ಉಳಿದಿಲ್ಲ ಎಂಬುದು ಕಟುವಾದರೂ, ಒಪ್ಪಲೇಬೇಕಾದ ಸತ್ಯ.

ಹಾಗೇ ರೈತ ಸಂಘ ಮತ್ತು ಸಂಘಟನೆ ರಾಜ್ಯದ ಎರಡು ಪ್ರಭಾವಿ ಜಾತಿಗಳ ಆಡುಂಬೊಲವಾಗಿತ್ತು ಮತ್ತು ಈಗಲೂ ಆ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ಕೂಡ ರೈತ ಚಳವಳಿಯ ಮಿತಿಗಳಲ್ಲಿ ಒಂದು ಎಂಬುದು ನಿರ್ವಿವಾದ. ಹೀಗೆ ಪ್ರದೇಶ, ಬೆಳೆ ಮತ್ತು ಜಾತಿಯ ಮಿತಿಗಳ ಜೊತೆಗೆ ಚಳವಳಿಯ ನೇತೃತ್ವ ವಹಿಸಿದ ಎರಡನೇ ತಲೆಮಾರಿನ ನಾಯಕರ ರಾಜೀ ಮತ್ತು ವಸೂಲಿಬಾಜಿ ವ್ಯವಹಾರಗಳು ಕೂಡ ಕಳೆದ ಒಂದೂವರೆ ದಶಕದಿಂದ ಸಂಘಟನೆಗೆ ದೊಡ್ಡ ಮಟ್ಟದ ಹಿನ್ನಡೆ ತಂದಿದ್ದವು.

ಇಂತಹ ಹಲವು ಕಾರಣಗಳಿಂದಾಗಿ ತನ್ನದೇ ರೈತ ಸಮುದಾಯದ ನಡುವೆಯೇ ಜನಪ್ರಿಯತೆ ಕಳೆದುಕೊಂಡಿದ್ದ ರೈತ ಸಂಘಟನೆಗಳಿಗೆ ಇದೀಗ ಈ ಸಾಲು ಸಾಲು ಕೃಷಿ ವಿರೋಧಿ, ರೈತ ವಿರೋಧಿ ಮಸೂದೆಗಳು ಸಂಘಟನೆಯ ಹೊಸ ಅವಕಾಶದ ಬಾಗಿಲು ತೆರೆದಿವೆ. ಕೃಷಿ ಖಾಸಗೀಕರಣ, ಕಾರ್ಪೊರೇಟೀಕರಣ, ಕೃಷಿಕರಿಗೆ ಸರ್ಕಾರದ ಕಡೆಯಿಂದ ಈವರೆಗೆ ಇದ್ದ ಕನಿಷ್ಟ ಬೆಂಬಲ ಬೆಲೆ, ವಿವಿಧ ಸಬ್ಸಿಡಿ, ಎಪಿಎಂಸಿ ವ್ಯವಸ್ಥೆ ಸೇರಿದಂತೆ ಹಲವು ನೆರವು ಮತ್ತು ಸುರಕ್ಷತೆಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹೊಸ ಕಾಯ್ದೆ- ಮಸೂದೆಗಳು ಸಹಜವಾಗೇ ಕೃಷಿಕರಲ್ಲಿ ಆತಂಕ ಮೂಡಿಸಿವೆ.

ಕೃಷಿ ಮಸೂದೆ ವಿರೋಧಿ ರೈತರ ಆಕ್ರೋಶದ ಹಿಂದಿನ ಸಂದೇಶಗಳೇನು?
ಹೊಸ ಕೃಷಿ ಸುಧಾರಣೆಗಳ ಹಿಂದೆ ಇರುವ ಅಸಲೀ ಅಜೆಂಡಾ ಯಾವುದು?

ಜೊತೆಗೆ ಕೃಷಿಯಿಂದ ವಿಮುಖರಾಗಿದ್ದ ಯುವ ಸಮುದಾಯ ಕರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮರಳಿ ಕೃಷಿಯತ್ತ ಮುಖಮಾಡಿದೆ. ಶಿಕ್ಷಿತ ಮತ್ತು ಹೊರ ಜಗತ್ತಿನ ವ್ಯವಹಾರಿಕ ಅರಿವಿನ ಈ ಯುವ ಸಮೂಹ ಸಂಘಟನೆಗೆ ದೊಡ್ಡ ಬಲವಾಗಬಲ್ಲದು. ಹಾಗಾಗಿ ರೈತ ಸಂಘಟನೆಯನ್ನು ಸಮಗ್ರ ರೈತರ ಹೋರಾಟವಾಗಿ ಬೆಳೆಸುವ ಸಾಂದರ್ಭಿಕ ಅನಿವಾರ್ಯತೆಯೂ ಈಗಿದೆ ಮತ್ತು ಅದಕ್ಕೆ ಪೂರಕ ವಾತಾವರಣ ಕೂಡ ರೈತ ಸಮೂಹದಲ್ಲಿ ಮೂಡಿದೆ.

ಆ ಹಿನ್ನೆಲೆಯಲ್ಲಿ ಸೋಮವಾರದ ಬಂದ್ ಒಂದು ರೀತಿಯ ದಿಕ್ಸೂಚಿಯಾಗಿದ್ದು, ಹೋರಾಟದ ಹೊಸ ಸಾಧ್ಯತೆಗಳನ್ನು ತೋರಿದೆ. ಹೋರಾಟಕ್ಕೆ ಹೊಸ ತಲೆಮಾರಿನ ಅನಿವಾರ್ಯತೆಯ ಬಗ್ಗೆ ಹೇಳಿದೆ. ಆದರೆ, ಸಂಪೂರ್ಣ ಕೃಷಿ ಮತ್ತು ರೈತ ಸಮುದಾಯವನ್ನೇ ಗುರಿಯಾಗಿಟ್ಟುಕೊಂಡು ಸರ್ಕಾರಗಳು ಹಿಂದೆಂದೂ ಕಂಡಿರದ ಪ್ರಮಾಣದಲ್ಲಿ ಉದ್ಯಮ ಹಿತಾಸಕ್ತಿಯ ಕಾಯ್ದೆ- ಕಾನೂನುಗಳನ್ನು ಜಾರಿಗೆ ತರುತ್ತಿರುವ ಹೊತ್ತಿನಲ್ಲಿ; ದೇಶದ ಅನ್ನದಾತರು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಹಿನ್ನೆಲೆಯಲ್ಲಿ ಹಿಂದಿಗಿಂತ ಪ್ರಬಲ ಹೋರಾಟದ ಜರೂರು ಈಗಿದೆ. ದೇಶದ ಇತಿಹಾಸದಲ್ಲೇ ಹಿಂದೆಂದೂ ಇರದ ಮಟ್ಟಿನ ಪ್ರಭುತ್ವ ಮತ್ತು ಉಳ್ಳವರ ಅಪವಿತ್ರ ಮೈತ್ರಿ ಈಗ ದೇಶದ ಭೂಮಿ ಮತ್ತು ಕೃಷಿಯ ಮೇಲೆ ದಾಳಿ ಇಡುತ್ತಿದೆ. ಕೃಷಿ ಭೂಮಿ ಮತ್ತು ಕೃಷಿ ಎರಡನ್ನೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದಿಂದ ಕಿತ್ತುಕೊಳ್ಳುವ ಹುನ್ನಾರಗಳಿಗೆ ಸರ್ಕಾರಗಳೇ ಕಾಯ್ದೆ-ಕಾನೂನು ರೂಪಿಸಿ ಬೆಂಬಲವಾಗಿ ನಿಂತಿವೆ. ಇದು ರೈತರ ಪಾಲಿನ ಸಾವು-ಬದುಕಿನ ಹೋರಾಟದ ಘಟ್ಟ.

ಕೃಷಿ ಮಸೂದೆ ವಿರೋಧಿ ರೈತರ ಆಕ್ರೋಶದ ಹಿಂದಿನ ಸಂದೇಶಗಳೇನು?
ಕೃಷಿ ಮಸೂದೆಗೆ ಮೋದಿ ಧಾವಂತ ಮತ್ತು ಕೃಷಿ ಹೂಡಿಕೆಗೆ ಅಂಬಾನಿ ಆತುರ!

ಹಾಗಾಗಿ ಈಗ ವಿದ್ಯಾರ್ಥಿ ಮತ್ತು ಯುವ ಸಮೂಹದ ಬಲ ರೈತ ಸಂಘಟನೆಗೆ ಬೇಕಾಗಿದೆ. ಆ ಮೂಲಕ ಮಾತ್ರವೇ ರೈತರ ಕೂಗು ಗಟ್ಟಿ ದನಿಯಾಗಿ ಮೊಳಗಬಹುದು ಎಂಬುದನ್ನು ಈ ಹೋರಾಟ ತೋರಿಸಿಕೊಟ್ಟಿದೆ. ಆದರೆ, ಯುವ ಹೋರಾಟಗಾರರು ಕೇವಲ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಕ್ಯಾಮರಾಗಳು ಮತ್ತು ನಗರಕೇಂದ್ರಿತ ಹೋರಾಟಗಳಿಗೆ ಸೀಮಿತವಾಗದೆ, ಹಳ್ಳಿಗಾಡಿನ ಹೊಲಗಳ ನಡುವೆ ಹೋರಾಟವನ್ನು ಸಂಘಟಿಸಬೇಕಿದೆ. ಆ ದಿಸೆಯಲ್ಲಿ ಎಡವಿದ ಪರಿಣಾಮವೇ ಸರ್ಕಾರಗಳು ತಿಂಗಳುಗಳ ಹಿಂದೆಯೇ ಸುಗ್ರೀವಾಜ್ಞೆಗಳ ಮೂಲಕ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದರೂ, ತೀರಾ ತಡವಾಗಿ ರೈತರು ಬೀದಿಗಿಳಿದರು. ಮಸೂದೆ ರಾಷ್ಟ್ರಪತಿಗಳ ಅಂಕಿತ ಪಡೆದು ಕಾಯ್ದೆಯಾಗಿ ಜಾರಿಗೆ ಬರುವವರೆಗೆ ಉತ್ತರ ಭಾರತದ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ದೊಡ್ಡ ಮಟ್ಟದ ಪ್ರತಿರೋಧ ಕೇಳಿಬರಲೇಲೇ ಇಲ್ಲ. ಮಸೂದೆ ಮತ್ತು ಸುಗ್ರೀವಾಜ್ಞೆಗಳನ್ನು ಸರಿಯಾಗಿ ಅರಿತು, ಸಕಾಲದಲ್ಲಿ ಅದನ್ನು ರೈತ ಸಮುದಾಯದ ನಡುವೆ ಚರ್ಚಿಸುವ, ಅರಿವು ಮೂಡಿಸುವ ಮೂಲಕ ಹೋರಾಟದ ಬೀಜ ಬಿತ್ತುವ ದಿಸೆಯಲ್ಲಿ ಆದ ಲೋಪ ಈ ವಿಳಂಬಕ್ಕೆ ಕಾರಣ.

ಹಾಗಾಗಿ ಹಳ್ಳಿಗಳಲ್ಲಿ ದೊಡ್ಡ ಮಟ್ಟದಲ್ಲಿ ಸಂಘಟನೆಯನ್ನು ವಿಸ್ತರಿಸಲು ಹೊಸ ತಲೆಮಾರು ಹೆಚ್ಚಿನ ಗಮನ ಕೊಡಬೇಕಿದೆ. ಬಹುರಾಷ್ಟ್ರೀಯ ಶಕ್ತಿಗಳು ಮತ್ತು ದೇಶದ ಆಡಳಿತದ ಚುಕ್ಕಾಣಿ ಹಿಡಿದ ವ್ಯಕ್ತಿಗಳ ಪ್ರಭಾವ ಮತ್ತು ಶಕ್ತಿಯ ಎದುರು ಬಡ ರೈತನ ಬದುಕು ಉಳಿಯಬೇಕಾದರೆ ಸಂಘಟನೆ ಬಲ ಆತನ ರಟ್ಟೆ ಮತ್ತು ದನಿಗೆ ಶಕ್ತಿ ಕೊಡಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಕೂಡ ಈ ಬಂದ್ ಯಶಸ್ಸು ದಿಕ್ಸೂಚಿಯಾಗಿದೆ. ಆದರೆ, ಆ ಸಂದೇಶ ಮತ್ತು ಸೂಕ್ಷ್ಮವನ್ನು ಯುವ ಹೋರಾಟಗಾರರು ಗ್ರಹಿಸುವರೆ ಎಂಬುದನ್ನು ಕಾದುನೋಡಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com