ಹೊಸ ಕೃಷಿ ಸುಧಾರಣೆಗಳ ಹಿಂದೆ ಇರುವ ಅಸಲೀ ಅಜೆಂಡಾ ಯಾವುದು?

ಯಾರ ಹಿತಕ್ಕೆ ತಾವು ಇದನ್ನು ಮಾಡುತ್ತಿದ್ದೇವೆ ಎಂದು ಮೋದಿಯವರು ಹೇಳುತ್ತಿದ್ಧಾರೋ, ಅದೇ ಜನರ ಮೇಲೆ ಪೊಲೀಸ್ ಬಲ ಪ್ರಯೋಗಿಸಿ, ಅವರನ್ನು ಜೈಲಿಗಟ್ಟಿ ಹಠಕ್ಕೆ ಬಿದ್ದು ಕಾನೂನು ಜಾರಿಗೆ ಪ್ರಯತ್ನಿಸುತ್ತಿರುವುದು ಏನನ್ನು ಹೇಳುತ್ತಿದೆ?
ಹೊಸ ಕೃಷಿ ಸುಧಾರಣೆಗಳ ಹಿಂದೆ ಇರುವ ಅಸಲೀ ಅಜೆಂಡಾ ಯಾವುದು?

ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಮೂಸೂದೆಗಳಿಗೆ ರಾಷ್ಟ್ರಪತಿ ಸಹಿ ಮಾಡುವ ಮೂಲಕ, ದೇಶವ್ಯಾಪಿ ಕೃಷಿಕರ ಹೋರಾಟ ಮತ್ತು ವಿರೋಧಕ್ಕೆ ತಾನು ಸೊಪ್ಪು ಹಾಕುವುದಿಲ್ಲ ಎಂಬ ಕೇಂದ್ರ ಬಿಜೆಪಿ ಸರ್ಕಾರದ ಧೋರಣೆ ಜಗಜ್ಜಾಹೀರಾಗಿದೆ. ಅದೇ ಹೊತ್ತಿಗೆ ಮತ್ತೊಂದು ಕಡೆ, ರಾಜ್ಯ ಬಿಜೆಪಿ ಸರ್ಕಾರ ಸದನದಲ್ಲಿ ಅಂಗೀಕಾರ ಪಡೆಯಲಾಗದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ಭೂ ಸುಧಾರಣೆ ಮಸೂದೆಗಳನ್ನು ಮರು ಸುಗ್ರೀವಾಜ್ಞೆ ಮೂಲಕ ಮತ್ತೆ ಜೀವಂತವಿಡಲು ಪ್ರಯತ್ನಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಂದರೆ; ಮೂಲಭೂತವಾಗಿ ಯಾರ ಹಿತಕ್ಕಾಗಿ ಈ ಮಸೂದೆ-ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಬಿಜೆಪಿ ಹೇಳುತ್ತಿದೆಯೋ, ಅದೇ ರೈತ ಸಮುದಾಯವೇ ಅದರ ಸುಧಾರಣೆಗಳ ವಿರುದ್ಧ, ಸುಧಾರಣೆಯ ಉದ್ದೇಶದ ಮಸೂದೆ- ಕಾಯ್ದೆಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಆದರೂ, ಹಠಕ್ಕೆ ಬಿದ್ದು, ತೀರಾ ಧಾವಂತದಲ್ಲಿ, ಇನ್ನಿಲ್ಲದ ಅವಸರದಲ್ಲಿ ಅವುಗಳನ್ನು ಜಾರಿಗೆ ತರುತ್ತಿರುವುದರ ಹಿಂದೆ ನಿಜಕ್ಕೂ ಯಾರ ಹಿತಾಸಕ್ತಿ ಅಡಗಿದೆ? ಎಂಬ ಅನುಮಾನಗಳಿಗೆ ಬಿಜೆಪಿಯ ಇಂತಹ ಸರ್ವಾಧಿಕಾರಿ ನಡೆಗಳೇ ಇಂಬು ನೀಡುತ್ತಿವೆ.

ನಿಜಕ್ಕೂ ಪ್ರಧಾನಿ ಮೋದಿಯವರು ಹೇಳುವಂತೆ ಅವರಿಗೆ ಮತ್ತು ಅವರ ಸರ್ಕಾರಕ್ಕೆ ದೇಶದ ರೈತರ ಏಳಿಗೆಯೇ ಆದ್ಯತೆಯಾಗಿದ್ದರೆ, ಈ ಕಾಯ್ದೆಗಳನ್ನು ತರಲು ಅಸಲೀ ಉದ್ದೇಶವಾಗಿದ್ದರೆ; ಅಂತಹ ಅವರ ಪ್ರಯತ್ನಗಳನ್ನು ಪ್ರಶ್ನಿಸುತ್ತಿರುವ, ಅನುಮಾನದಿಂದ ನೋಡುತ್ತಿರುವ ರೈತರ ಆತಂಕಗಳೇನು ಎಂಬುದನ್ನು ಆಲಿಸಬೇಕಿತ್ತು ಅಲ್ಲವಾ? ಅವರ ಪ್ರಶ್ನೆಗಳಿಗೆ, ಅನುಮಾನಗಳಿಗೆ ಉತ್ತರಕೊಡುವ ಮೂಲಕ ಆ ಆತಂಕ ದೂರ ಮಾಡುವ ಪ್ರಯತ್ನ ನಡೆಸಬೇಕಿತ್ತು ಅಲ್ಲವಾ? ಯಾವುದೋ ನಟಿಯ ಮನೆಯ ಕೈತೋಟದ ಬಗ್ಗೆ, ಇನ್ನಾವುದೋ ನಟಿಯ ಬಾಣಂತನದ ಬಗ್ಗೆ ಎಲ್ಲಾ ಮಾತನಾಡುವ, ನುಗ್ಗೆಕಾಯಿ ಪರೋಟದ ಬಗ್ಗೆ ಗಂಟೆಗಟ್ಟಲೆ ಅಡುಗೆ ತರಗತಿಗಳನ್ನು ಮಾಡುವ ಪ್ರಧಾನಿಗೆ, ದೇಶದ ಶೇ.70ರಷ್ಟು ಜನರ ಬದುಕಿನ ಪ್ರಶ್ನೆಯಾದ ಈ ಕಾಯ್ದೆಗಳ ಸಂಪೂರ್ಣ ವಿವರಗಳ ಬಗ್ಗೆ ಅದೇ ರೈತ ಸಮುದಾಯದೊಂದಿಗೆ ಮುಕ್ತ ಸಂವಾದ ನಡೆಸಲು ಪುರುಸೊತ್ತಿಲ್ಲ ಏಕೆ? ಎಂಬುದು ರೈತರ ಪ್ರಶ್ನೆ.

ಜೊತೆಗೆ, ಸಂಸತ್ತಿನ ಒಳಗೆ ತಮಗೆ ಅಗತ್ಯ ಬೆಂಬಲವಿಲ್ಲದ ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸುವಾಗ ಸರ್ಕಾರ, ಮಸೂದೆಯ ಮೇಲಿನ ಚರ್ಚೆಯನ್ನು ನಿಭಾಯಸಿದ ರೀತಿ, ಧ್ವನಿಮತಕ್ಕೆ ಹಾಕಿದಾಗ ಮೈಕುಗಳನ್ನು ಆಫ್ ಮಾಡಿ, ರಾಜ್ಯಸಭಾ ಟಿವಿಯನ್ನು ಕೂಡ ಪ್ರಸಾರ ಸ್ಥಗಿತಗೊಳಿಸಿ ಮಸೂದೆ ಅಂಗೀಕಾರವಾಗಿದೆ ಎಂದು ಬಿಂಬಿಸಿದೆ. ವಾಸ್ತವವಾಗಿ ಸಿಸಿಟಿವಿ ದೃಶ್ಯಾವಳಿಗಳು ಆ ಹೊತ್ತಿನ ಕಲಾಪದಲ್ಲಿ ಸರ್ಕಾರ ಮತ್ತು ಸಭಾಧ್ಯಕ್ಷರು ನಡೆದುಕೊಂಡು ರೀತಿಯ ಬಗ್ಗೆ ಅನುಮಾನಗಳಿಗೆ ಪುಷ್ಟಿ ನೀಡಿವೆ. ಅಲ್ಲದೆ, ಸಂಸತ್ತಿನ ಹೊರಗೆ ಕೂಡ ಪ್ರತಿಭಟನಾನಿರತರ ವಿರುದ್ಧ ಪೊಲೀಸ್ ಬಲಪ್ರಯೋಗದಂತಹ ನಡೆ ಕೂಡ ಸರ್ಕಾರ ಈ ವಿಷಯದಲ್ಲಿ ಎಷ್ಟು ಪಾರದರ್ಶಕವಾಗಿದೆ ಮತ್ತು ಎಷ್ಟು ಉದ್ಧಟತನ ಹೊಂದಿದೆ ಎಂಬುದನ್ನು ಜಗಜ್ಜಾಹೀರು ಮಾಡಿವೆ.

ಕೇಂದ್ರದ ಮೋದಿ ಸರ್ಕಾರದ ಆಣತಿಯಂತೆ ಕಾರ್ಪೊರೇಟ್ ಕಂಪನಿಗಳು ಮತ್ತು ಬಂಡವಾಳಶಾಹಿಗಳಿಗೆ ಮನಸೋ ಇಚ್ಛೆ ಕೃಷಿ ಭೂಮಿ ಖರೀದಿಗೆ ಅವಕಾಶ ನೀಡುವ ಭೂ ಸುಧಾರಣೆ ಮಸೂದೆ ಮತ್ತು ಕೇಂದ್ರ ಸರ್ಕಾರದ ಹೊಸ ಎಪಿಎಂಸಿ ಮಸೂದೆಗೆ ಪೂರಕವಾಗಿ ಇಡೀ ಎಪಿಎಂಸಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಎಪಿಎಂಸಿ ತಿದ್ದುಪಡಿ ಮಸೂದೆಗಳನ್ನು ಉಭಯ ಸದನಗಳಲ್ಲಿ ಅಂಗೀಕರಿಸಲು ಇನ್ನಿಲ್ಲದ ಯತ್ನ ನಡೆಸಿ ಸೋತಿದೆ. ತನ್ನ ಸ್ಥಾನ ಬಲದ ಕಾರಣಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದ ರೈತ ನಾಯಕ ಯಡಿಯೂರಪ್ಪ ಅವರ ಸರ್ಕಾರ, ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷಗಳ ತಂತ್ರಗಾರಿಕೆಯ ಕಾರಣದಿಂದ ಸೋಲು ಕಂಡಿದೆ. ಹಾಗಾಗಿ ಸದನದ ಅನುಮೋದನೆ ಪಡೆಯಲಾಗದು ಎಂದು ಅರಿತ ಸರ್ಕಾರ, ಮತ್ತೆ ಸುಗ್ರೀವಾಜ್ಞೆ ಜಾರಿ ಮೂಲಕ ಆ ಎರಡೂ ಕೃಷಿ ವಿರೋಧಿ ಮಸೂದೆಗಳನ್ನು ಜೀವಂತವಿಡಲು ಮುಂದಾಗಿದೆ.

ಸಂಸತ್ ಮತ್ತು ವಿಧಾನಸೌಧದಂತಹ ಸಂವಿಧಾನಿಕ ಚೌಕಟ್ಟಿನ ಒಳಗೇ ಹೀಗೆ ಕದ್ದುಮುಚ್ಚಿ, ಜನರ ಕಣ್ಣಿಗೆ ಮಣ್ಣೆರಚಿ, ರಂಗೋಲಿ ಕೆಳಗೆ ತೂರಿ ಶತಾಯಗತಾಯ ಈ ಕಾಯ್ದೆ-ಮಸೂದೆಗಳ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಮೋದಿಯವರ ಸರ್ಕಾರ ಇನ್ನಿಲ್ಲದ ವಾಮಮಾರ್ಗಗಳನ್ನು ತುಳಿದಿದೆ. ಇನ್ನು ಹೊರಗೆ, ಬೀದಿಗಳಲ್ಲಿ ಇವುಗಳನ್ನು ಸಮರ್ಥಿಸಿಕೊಳ್ಳಲು, ಪ್ರಜಾಪ್ರಭುತ್ವದ ಮಾದರಿಯಾದ ಚರ್ಚೆ, ಸಂವಾದ, ಸಮಾಲೋಚನೆಗಳ ಬದಲಾಗಿ, ಪ್ರಶ್ನಿಸುವವರ, ಪ್ರತಿಭಟಿಸುವವರ ವಿರುದ್ಧ ಪೊಲೀಸ್ ಬಲ ಪ್ರಯೋಗ, ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬೆದರಿಕೆಯಂತಹ ಸರ್ವಾಧಿಕಾರಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇದು ಕೂಡ ಸರ್ಕಾರದ ಆದ್ಯತೆ ಮತ್ತು ಹಿತಾಸಕ್ತಿ ಯಾರ ಪರ ಎಂಬುದನ್ನು ಸಾರಿ ಹೇಳುತ್ತಿದೆ.

ಹಾಗೆ ನೋಡಿದರೆ, ಕೃಷಿ ಎಂಬುದು ಕೇಂದ್ರ ಸರ್ಕಾರದ ನೀತಿ-ನಿಲುವುಗಳ ವ್ಯಾಪ್ತಿಗೆ ನೇರವಾಗಿ ಒಳಪಡದ ರಾಜ್ಯವಾರು ಪಟ್ಟಿಯಲ್ಲಿರುವ ವಿಷಯ. ಆದಾಗ್ಯೂ ರಾಜ್ಯಗಳ ಸಹಮತ ಪಡೆಯದೆ, ಸಮಾಲೋಚನೆ ನಡೆಸದೆ ಮೋದಿ ಸರ್ಕಾರ ಏಕಪಕ್ಷೀಯವಾಗಿ ಈ ಮಸೂದೆಗಳನ್ನು ರೂಪಿಸಿದೆ. ಅಷ್ಟೇ ಅಲ್ಲ; ಕರೋನಾ ಲಾಕ್ ಡೌನ್ ನಡುವೆ, ಇಡೀ ದೇಶ ಭೌತಿಕವಾಗಿ ಮತ್ತು ಮಾನಸಿಕವಾಗಿ ಒಂದು ರೀತಿಯ ದಿಗ್ಭಂಧನಕ್ಕೆ ಒಳಗಾದ ಹೊತ್ತಿನಲ್ಲಿಯೇ ದೇಶದ ರೈತ ಸಮುದಾಯವನ್ನು ಹೆಡೆಮುರಿ ಕಟ್ಟುವ ಈ ಕಾನೂನುಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರಲಾಗಿತ್ತು. ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾ ದೇವಿಯವರಿಗೆ ಮೇ ಮೊದಲ ವಾರವೇ ಪತ್ರ ಬರೆದಿದ್ದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಎಪಿಎಂಸಿ ಹೊರತುಪಡಿಸಿ ರೈತರು ತಮ್ಮ ಕೃಷಿ ಉತ್ಪನ್ನ ವಹಿವಾಟು ನಡೆಸಲು ಕಾನೂನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿ ಎಂದು ಆದೇಶಿಸಿದ್ದರು. ಆ ಪತ್ರ ಈಗ ವೈರಲ್ ಆಗಿದ್ದು, ಕರೋನಾ ಲಾಕ್ ಡೌನ್ ನಡುವೆ ಕೃಷಿಕರಿಗೆ ನೆರವಾಗುವ ನೆಪದಲ್ಲಿ ಕೃಷಿಕರ ಬದುಕಿನ ಮೇಲೆ ಚಪ್ಪಡಿ ಎಳೆಯುವ ಕಾನೂನನ್ನು ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರಗಳನ್ನು ತನ್ನ ಅಡಿಯಾಳುಗಳಂತೆ ನಡೆಸಿಕೊಳ್ಳುತ್ತಿರುವ ಮೋದಿಯವರ ಸರ್ಕಾರದ ಒಕ್ಕೂಟ ವ್ಯವಸ್ಥೆ ವಿರೋಧಿ ಧೋರಣೆಗೂ ಈ ಪತ್ರ ನಿದರ್ಶನ ಎಂಬ ಚರ್ಚೆ ಆರಂಭವಾಗಿದೆ.

ಮೋದಿಯವರು ಇದು ರೈತರ ಆದಾಯ ದುಪ್ಪಟ್ಟು ಮಾಡುತ್ತದೆ ಮತ್ತು ಸದ್ಯ ಜಾರಿಯಲ್ಲಿರುವ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ ರದ್ಧಾಗುವುದಿಲ್ಲ ಎಂದು ಮಸೂದೆಗಳ ಪರ ಸಮರ್ಥನೆ ನೀಡಿದ್ದಾರೆ. ಉಳಿದಂತೆ ಗುತ್ತಿಗೆ ಕೃಷಿ ಕರಾರು- ಕಾನೂನುಗಳು, ಎಪಿಎಂಸಿ ವ್ಯವಸ್ಥೆಯ ಮೇಲೆ ಆಗುವ ದೂರಗಾಮಿ ಪರಿಣಾಮಗಳು, ಅಗತ್ಯವಸ್ತು ಕಾಯ್ದೆಗೆ ತಿದ್ದುಪಡಿ ತಂದು ಬಹುತೇಕ ಕೃಷಿ ಉತ್ಪನ್ನಗಳನ್ನು ಅದರ ಹೊರಗೆ ಇಟ್ಟಿರುವುದರಿಂದ ಕೃಷಿ ಉತ್ಪನ್ನಗಳ ಖರೀದಿ, ಸಾಗಣೆ, ದಾಸ್ತಾನು ಮತ್ತು ಮಾರುಕಟ್ಟೆ ವಿಷಯದಲ್ಲಿ ಈ ಹಿಂದಿನ ಎಲ್ಲಾ ನಿರ್ಬಂಧ ಮತ್ತು ಕಣ್ಗಾವಲು ವ್ಯವಸ್ಥೆ ರದ್ಧಾಗುತ್ತದೆ. ಅದರಿಂದಾಗಿ ಕೃಷಿ ಉತ್ಪನ್ನಗಳ ಬೆಲೆ ನಿಯಂತ್ರಣ ಸಂಪೂರ್ಣ ವ್ಯಾಪಾರಿ- ಉದ್ಯಮಿಗಳ ಕೈವಶವಾಗುತ್ತದೆ. ಹಾಗಾಗಿ ಫಸಲು ಮಾರಾಟಕ್ಕೆ ಬಂದಾಗ ಅದರ ಬೆಲೆ ತಗ್ಗಿಸಿ, ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ನಂತರ ಬೆಲೆ ಏರಿಸಿ ಲಾಭ ಮಾಡಿಕೊಳ್ಳುವುದರಿಂದಾಗಿ ಅತ್ತ ಕೃಷಿಕರಿಗೂ, ಇತ್ತ ಗ್ರಾಹಕರಿಗೂ ಆಗುವ ಅನ್ಯಾಯ ಬಗ್ಗೆಯಾಗಲೀ ಮೋದಿಯವರು ತುಟಿಬಿಚ್ಚಿಲ್ಲ!

ಹಾಗಾಗಿ, ಈ ಮೂರೂ ಕಾಯ್ದೆಗಳು ಮತ್ತು ರಾಜ್ಯ ಸರ್ಕಾರದ ಎರಡು ಮಸೂದೆಗಳು ಕೇವಲ ರೈತರು, ಎಪಿಎಂಸಿ ವ್ಯವಸ್ಥೆಯಂತಹ ತತಕ್ಷಣದ ಗುರಿಗಳನ್ನಷ್ಟೇ ಹೊಂದಿಲ್ಲ; ಬದಲಾಗಿ ಇವು ದೇಶವನ್ನು ಶತಮಾನಗಳ ಹಿಂದಿನ ಸನಾತನ ವ್ಯವಸ್ಥೆಗೆ ವಾಪಸು ಮರಳಿಸುವ ಬಿಜೆಪಿ ಮತ್ತು ಸಂಘಪರಿವಾರದ ಬೃಹತ್ ರಾಜಕೀಯ ಕಾರ್ಯಸೂಚಿಯ ಭಾಗ. ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆಯಂತಹ ಆ ಅಜೆಂಡಾದ ಪರಿಕಲ್ಪನೆಯಂತೆಯೇ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಶತಮಾನಗಳ ಹಿಂದಿನ ಜಮೀನ್ಧಾರಿ, ಊಳಿಗಮಾನ್ಯ ಪದ್ಧತಿಗೆ ವಾಪಸು ಕೊಂಡೊಯ್ಯುವ ಹುನ್ನಾರದ ಭಾಗವಾಗಿ ಈ ಸುಧಾರಣೆ ಹೆಸರಿನ ಪ್ರತಿಗಾಮಿ ನಡೆಗಳನ್ನು ಅನುಸರಿಸಲಾಗುತ್ತಿದೆ.

ಸಾಮಾಜಿಕ ವ್ಯವಸ್ಥೆಯ ಸುಧಾರಣೆಯ ಭಾಗವಾಗಿ ಜಾರಿಗೆ ಬಂದ ವಿವಿಧ ಭೂ ಸುಧಾರಣಾ ಕ್ರಮಗಳಿಂದಾಗಿ ದೇಶದಲ್ಲಿ ಕೇವಲ ಉಳ್ಳವರ, ಜಮೀನ್ದಾರರ ಜೀತದಾಳುಗಳಾಗಿ, ಕೂಲಿಗಳಾಗಿ, ಗೇಣಿದಾರರಾಗಿ ಇದ್ದ ನಿಜವಾದ ಭೂಮಿಯ ದುಡಿಮೆಗಾರರು, ಕೃಷಿಕರು ಮತ್ತು ಉಳುವವರಿಗೆ ಹಂತಹಂತವಾಗಿ ಭೂಮಿ ಒಡೆತನ ಸಿಕ್ಕಿತ್ತು. ಆ ಭೂ ಒಡೆತನ ದುರ್ಬಲ ಮತ್ತು ದಮನಿತರ ರಟ್ಟೆಗೆ ಕೇವಲ ಆರ್ಥಿಕ ಬಲವನ್ನಷ್ಟೇ ಅಲ್ಲದೆ; ಅವರ ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನವನ್ನೂ ಬದಲಾಯಿಸಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆ ಅಂತಹ ಬದಲಾವಣೆಗೆ ದೊಡ್ಡ ಮಟ್ಟದ ಕಸುವು ತುಂಬಿತ್ತು. ಆದರೆ, ಈ ಬದಲಾವಣೆಯಿಂದಾಗಿ ಒಂದು ಕಡೆ ಶತಮಾನಗಳ ಕಾಲ ತುಂಡು ಭೂಮಿಯ ಹಕ್ಕಿಲ್ಲದೆ ಕೇವಲ ಬೆವರು ಸುರಿಸಿ ದುಡಿಯುತ್ತಿದ್ದ ಜನಗಳಿಗೆ ಉಳುವವನೇ ಹೊಲದೊಡೆಯ ಎಂಬ ಸ್ವಾಭಿಮಾನದ ಬದುಕು ಕೊಟ್ಟಿದ್ದರೆ, ಆವರೆಗೆ ಹನಿ ಬೆವರು ಸುರಿಸದೆ, ಮತ್ತೊಬ್ಬರ ಬೆವರ ಫಲ ಉಂಡೇ ಬದುಕುತ್ತಿದ್ದ ಜಮೀನ್ದಾರರ ಭೂ ಒಡೆತನ ಕೈತಪ್ಪುವಂತೆ ಮಾಡಿತ್ತು.

ಭೂ ಒಡೆತನ ಕೈತಪ್ಪುವ ಮೂಲಕ ಇಡೀ ಸಾಮಾಜಿಕ ವ್ಯವಸ್ಥೆಯ ಮೇಲಿನ ಅವರ ಹಿಡಿತವೂ ಕೈತಪ್ಪಿತ್ತು. ಸಾಮಾಜಿಕ ಶ್ರೇಣೀಕರಣದ ತಮ್ಮ ಹಿತ ಕಾಯುವ ವ್ಯವಸ್ಥೆ ಕೂಡ ಬದಲಾಗಿತ್ತು. ಹಾಗಾಗಿ ಸಹಜವಾಗೇ ತಮ್ಮ ಕೈತಪ್ಪಿಹೋದ ವ್ಯವಸ್ಥೆಯನ್ನು, ತಮ್ಮ ಅಡಿಯಾಳುಗಳಾಗಿದ್ದ ಜನಸಮುದಾಯಗಳನ್ನು ವಾಪಸು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದ ಆ ಮೇಲ್ವರ್ಗ ಮತ್ತು ಮೇಲ್ಜಾತಿ ಹಿತಾಸಕ್ತಿಗಳಿಗೆ ಈಗ ಸನಾತನ ಧರ್ಮದ ರಕ್ಷಕನಾದ ಸರ್ಕಾರದ ಅವಧಿಯಲ್ಲಿ ಆ ಅವಕಾಶ ಒದಗಿ ಬಂದಿದೆ. ಅಂತಹ ಸನಾತನ ವ್ಯವಸ್ಥೆಯನ್ನು ಮರುಸ್ಥಾಪಿಸುವ ಒಂದು ಪ್ರಬಲ ಅಸ್ತ್ರವಾಗಿ, ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಂದ ಅವರ ಕೃಷಿ ಮತ್ತು ಕೃಷಿ ಭೂಮಿಯನ್ನು ಹಂತಹಂತವಾಗಿ ಕಿತ್ತುಕೊಂಡು ಮತ್ತೆ ಹಳೆಯ ಜಮೀನ್ದಾರಿ ವ್ಯವಸ್ಥೆಯನ್ನು ಮರುಸ್ಥಾಪಿಸುವ ಒಂದು ಪ್ರಮುಖ ಹೆಜ್ಜೆಯೇ ಈ ಹೊಸ ಕಾಯ್ದೆ-ಮಸೂದೆಗಳು ಎಂಬ ವಿಶ್ಲೇಷಣೆ ಕೂಡ ಇದೆ.

ಮೋದಿವವರ ಬಿಜೆಪಿ ಸರ್ಕಾರ ಮತ್ತು ಸಂಘಪರಿವಾರದ ಗುಪ್ತ ಕಾರ್ಯಸೂಚಿಗಳ ಪರಿಚಯವಿರುವ ಯಾರೂ ಇಂತಹ ವಿಶ್ಲೇಷಣೆಯನ್ನು ತಳ್ಳಿಹಾಕಲಾಗದು. ಹಾಗೂ ಯಾರ ಹಿತಕ್ಕೆ ತಾವು ಇದನ್ನು ಮಾಡುತ್ತಿದ್ದೇವೆ ಎಂದು ಮೋದಿಯವರು ಹೇಳುತ್ತಿದ್ಧಾರೋ, ಅದೇ ಜನರ ಮೇಲೆ ಪೊಲೀಸ್ ಬಲ ಪ್ರಯೋಗಿಸಿ, ಅವರನ್ನು ಜೈಲಿಗಟ್ಟಿ ಹಠಕ್ಕೆ ಬಿದ್ದು ಕಾನೂನು ಜಾರಿಗೆ ಪ್ರಯತ್ನಿಸುತ್ತಿರುವುದು ಕೂಡ ಇದನ್ನೇ ಹೇಳುತ್ತಿದೆ ಅಲ್ಲವೆ? ಸರ್ಕಾರ ಹೇಳುತ್ತಿರುವುದು ಒಂದು; ಮತ್ತು ಅದರ ನಡೆಯ ಅಂತಿಮ ಗುರಿ ಮತ್ತೊಂದು ಎಂಬುದನ್ನೇ ಅಲ್ಲವೇ ಈ ವಿಷಯದಲ್ಲಿ ಅದರ ಎಲ್ಲಾ ವರಸೆಗಳು ಸಾರಿ ಹೇಳುತ್ತಿರುವುದು?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com