ವಿವಾದಿತ ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಶಿರೋಮಣಿ ಅಕಾಲಿದಳ ಸೇರಿದಂತೆ ಇತರ ಪಕ್ಷಗಳ ನಾಯಕರು ಈ ಮಸೂದೆಗಳಿಗೆ ಸಹಿ ಹಾಕದಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಂಡಿದ್ದರು.
ವಿವಾದಿತ ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ದೇಶಾದ್ಯಂತ ರೈತರು ಪ್ರತಿಭಟಿಸುತ್ತಿದ್ದರೂ, ವಿವಾದಿತ ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ ಬಿದ್ದಿದೆ. ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು ಭಾನುವಾರ ಮೂರು ತಿದ್ದುಪಡಿ ಮಸೂದೆಗಳಿಗೆ ಸಹಿ ಹಾಕಿ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದ್ದಾರೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆ, ಕಾಂಟ್ರಾಕ್ಟ್‌ ಫಾರ್ಮಿಂಗ್‌ ಮಸೂದೆ ಮತ್ತು ಬೃಹತ್‌ ಕಂಪೆನಿಗಳಿಗೆ ಆಹಾರ ಸರಕುಗಳನ್ನು ದಾಸ್ತಾನು ಮಾಡಲು ಅವಕಾಶ ನೀಡುವ ಮಸೂದೆಗಳು ಇಂದಿನಿಂದ ಕಾಯ್ದೆಗಳಾಗಿ ಮಾರ್ಪಾಡಾಗಿವೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳು ನಡೆಸಿದ ಕೋಲಾಹಲದ ನಡುವೆಯೂ ಈ ಮಸೂದೆಗಳನ್ನು ಜಾರಿಗೊಳಿಸಲಾಗಿತ್ತು.

ಈ ಕಾಯ್ದೆಗಳನ್ನು ವಿರೋಧಿಸಿ, ಮೊದಲು ಶಿರೋಮಣೆ ಅಕಾಲಿದಳದ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಅವರು ಕ್ಯಾಬಿನೆಟ್‌ ಸ್ಥಾನವನ್ನು ತ್ಯಜಿಸಿದ್ದರು, ನಂತರ ಅಕಾಲಿದಳವು ಎನ್‌ಡಿಎ ಯೊಂದಿಗಿನ ತನ್ನ ಮೈತ್ರಿಯನ್ನು ಕಡಿದುಕೊಂಡಿತ್ತು. ಇಷ್ಟು ಮಾತ್ರವಲ್ಲದೇ, ಪಂಜಾಬ್‌ನಲ್ಲಿ ಕಳೆದ ಶುಕ್ರವಾರ ಸಂಪೂರ್ಣ ಬಂಧ್‌ ಆಚರಿಸಲಾಗಿತ್ತು.

ಶಿರೋಮಣಿ ಅಕಾಲಿದಳದ ನಾಯಕರು ರಾಷ್ಟ್ರಪತಿ ಕೋವಿಂದ್‌ ಅವರನ್ನು ಭೇಟಿಯಾಗಿ ಈ ಮಸೂದೆಗಳಿಗೆ ಅಂಕಿತ ಹಾಕದಂತೆ ಕೋರಿಕೊಂಡಿದ್ದರು. ಇದರೊಂದಿಗೆ, ಛತ್ತೀಘಢದ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಕೂಡಾ ಮಸೂದೆಗಳಿಗೆ ಸಮ್ಮತಿ ನೀಡದಂತೆ ಕೋವಿಂದ್‌ ಅವರನ್ನು ಕೇಳಿಕೊಂಡಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com