ಕರೋನಾ ಸಂಕಷ್ಟ: ಜನರ ಜೀವಕ್ಕೇ ಸಂಚಕಾರವಾಗುತ್ತಿವೆ ಸರ್ಕಾರದ ಸುಳ್ಳುಗಳು!

ಒಂದು ಕಡೆ ಮೋದಿಯವರ ಸ್ವತಃ ತಮ್ಮ ಕರೋನಾ ನಿರ್ವಹಣೆ ಜಗತ್ತಿಗೇ ಮಾದರಿ ಎಂದು ದೇಶದ ಜನರಿಗೆ ಸ್ವಯಂ ಪ್ರಸಂಶೆಯ ವರದಿ ಒಪ್ಪಿಸುತ್ತಿರುವ ಹೊತ್ತಿಗೇ, ವೈದ್ಯಕೀಯ ನಿಯತಕಾಲಿಕ ‘ದ ಲ್ಯಾನ್ಸೆಟ್’, ವೈಜ್ಞಾನಿಕ ಸತ್ಯಗಳನ್ನು ಮರೆಮಾಚಿ, ಸುಳ್ಳನ್ನು ಮೆರೆಸ ...
ಕರೋನಾ ಸಂಕಷ್ಟ: ಜನರ ಜೀವಕ್ಕೇ ಸಂಚಕಾರವಾಗುತ್ತಿವೆ ಸರ್ಕಾರದ ಸುಳ್ಳುಗಳು!

ಕೋವಿಡ್-19 ರುದ್ರನರ್ತನದಲ್ಲಿ ಭಾರತ ವಿಶ್ವಗುರುವಾಗಲು ಇನ್ನೇನು ಕೆಲವೇ ಮೆಟ್ಟಿಲು ಬಾಕಿ. ಮೇ ತಿಂಗಳಾಂತ್ಯದ ಹೊತ್ತಿಗೆ ಜಗತ್ತಿನ ಮುಂಚೂಣಿ ಕೋವಿಡ್ ರಾಷ್ಟ್ರಗಳ ಪಟ್ಟಿಯಲ್ಲಿ 1.58 ಲಕ್ಷ ಪ್ರಕರಣಗಳೊಂದಿಗೆ ಹಲವು ಪಟ್ಟು ಹಿಂದಿದ್ದ ಭಾರತ, ಇದೀಗ ಎರಡನೇ ಸ್ಥಾನದಲ್ಲಿದ್ದು, ಇದೇ ವೇಗದಲ್ಲಿ ಹೊಸ ಪ್ರಕರಣಗಳು ಹೆಚ್ಚುತ್ತಾ ಹೋದರೆ, ಇನ್ನು ಕೆಲವೇ ದಿನಗಳಲ್ಲಿ ಜಾಗತಿಕವಾಗಿ ನಂಬರ್ ಒನ್ ಸ್ಥಾನಕ್ಕೇರಲಿದೆ.

ಈ ನಡುವೆ ಪ್ರಧಾನಿ ಮೋದಿಯವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿ, ಕೋವಿಡ್ ವ್ಯಾಕ್ಸಿನ್ ಉತ್ಪಾದನೆ ಮತ್ತು ಸರಬರಾಜು ವಿಷಯದಲ್ಲಿ ಭಾರತ ಇಡೀ ಜಗತ್ತಿಗೇ ನೆರವಿನ ಹಸ್ತ ಚಾಚಲಿದೆ ಎಂದು ಹೇಳಿದ್ದಾರೆ. ವಿಪರ್ಯಾಸವೆಂದರೆ, ಅತ್ತ ಪ್ರಧಾನಿಯವರು ವಿಶ್ವ ಸಮುದಾಯಕ್ಕೆ ಈ ಭಾರೀ ಭರವಸೆ ಕೊಡುತ್ತಿರುವ ಹೊತ್ತಿಗೇ, ಇತ್ತ ಮುಂಚೂಣಿ ವೈದ್ಯಕೀಯ ನಿಯತಕಾಲಿಕ ‘ದ ಲ್ಯಾನ್ಸೆಟ್’, “ಮೋದಿಯವರ ಸರ್ಕಾರದ ಸುಳ್ಳುಗಳು ಕೋವಿಡ್ ನಂತಹ ಭೀಕರ ಜಾಗತಿಕ ಮಹಾಮಾರಿಯ ವಿಷಯದಲ್ಲಿಯೂ ಮುಂದುವರಿದಿವೆ. ಸುಳ್ಳು ಅಂಕಿಅಂಶಗಳು, ಸುಳ್ಳು ಭರವಸೆಗಳನ್ನು ನೀಡುವ ಮೂಲಕ ದೇಶದ ನಾಯಕರು ಕೋವಿಡ್ ಪರಿಸ್ಥಿತಿಯ ಕುರಿತ ಅವಾಸ್ತವಿಕ ಕಟ್ಟುಕತೆಗಳನ್ನು ಅಧಿಕೃತ ಮಾಹಿತಿ ಎಂದು ಬಿಂಬಿಸುತ್ತಿರುವುದು ಏಕ ಕಾಲಕ್ಕೆ ಅಪಾರ ಪ್ರಮಾಣದ ದೇಶದ ಜನಸಮೂಹವನ್ನೂ ಮತ್ತು ವೈದ್ಯಕೀಯ ಸಿಬ್ಬಂದಿಯನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ” ಎಂದು ಕನ್ನಡಿ ಹಿಡಿದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಶುಕ್ರವಾರದ ಸಂಚಿಕೆಯ ಸಂಪಾದಕೀಯದಲ್ಲಿ ಪತ್ರಿಕೆ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಎಲ್ಲವೂ ಸರಿಯಿದೆ, ತಮ್ಮ ಅಡಳಿತ ಕರೋನಾ ನಿಯಂತ್ರಣದ ವಿಷಯದಲ್ಲಿ ದೇಶಕ್ಕಷ್ಟೇ ಅಲ್ಲದೆ; ಇಡೀ ಜಗತ್ತಿಗೇ ಮಾದರಿಯಾಗಿದೆ ಎಂದು ಸ್ವ ಪ್ರಸಂಶೆಯ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ವರಸೆಯನ್ನೇ ಮುಂದುರಿಸಿರುವ ಬಿಜೆಪಿ ಸರ್ಕಾರದ ವರಸೆಯ ಅಪಾಯಗಳನ್ನು ವಿವರಿಸಿದೆ. ಜೊತೆಗೆ ದೇಶದ ಮುಂಚೂಣಿ ವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಸದ್ಯ ಕೋವಿಡ್ ನಿರ್ವಹಣೆಯ ವಿಷಯದಲ್ಲಿ ಸರ್ಕಾರಕ್ಕೆ ಸಲಹೆ-ಸೂಚನೆ ನೀಡುತ್ತಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ವೈಜ್ಞಾನಿಕ ಸತ್ಯಕ್ಕೆ ಬದಲಾಗಿ ಸರ್ಕಾರ ಮತ್ತು ಆಳುವ ಮಂದಿಯ ಅನುಕೂಲಕ್ಕೆ ತಕ್ಕಂತೆ ಕೋವಿಡ್ ಕುರಿತ ಸಂಗತಿಗಳನ್ನು ತಿರುಚುವ ಕೆಲಸ ಮಾಡುತ್ತಿರುವುದು ದೇಶದ ಕರೋನಾ ಸಂಕಷ್ಟವನ್ನು ಇನ್ನಷ್ಟು ಅಪಾಯಕಾರಿಯನ್ನಾಗಿ ಮಾಡಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.

ಕೋವಿಡ್ ಸತ್ಯಾಂಶಗಳನ್ನು ಒಪ್ಪಿಕೊಳ್ಳದೇ ಹೋದರೆ, ಅದರ ವಾಸ್ತವಾಂಶಗಳನ್ನು ಜನರ ಮುಂದಿಡದೇ ಹೋದರೆ, ಕೇವಲ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ತಮ್ಮ ಅವಿವೇಕಿತನವನ್ನೇ ಚಾಣಾಕ್ಷತನ ಎಂದು ಬೆನ್ನು ತಪ್ಪರಿಸಿಕೊಳ್ಳುತ್ತಿದ್ದರೆ, ಅದರಿಂದಾಗಿ ದೇಶದ ನಾಯಕರ ವರ್ಚಸ್ಸು ಕಳಚಿಬೀಳುತ್ತಿರುವುದನ್ನು ಒಂದಷ್ಟು ದಿನ ಮುಂಡೂಡಬಹುದು. ಆಡಳಿತದ ಹೊಣೆಗೇಡಿತನದ ವಿರುದ್ಧದ ಜನಾಕ್ರೋಶವನ್ನು ಮತ್ತಷ್ಟು ದಿನ ಅದುಮಿಡಬಹುದು. ಆದರೆ, ಅಂತಿಮವಾಗಿ ಅಂತಹ ಜನವಿರೋಧಿ ನಡೆಗಳು, ಹುನ್ನಾರಗಳು ಜನರ ಜೀವಕ್ಕೆ ಕಂಟಕವಾಗಲಿವೆ. ದೇಶದ ಆರ್ಥಿಕತೆ, ಶಿಕ್ಷಣ, ಉದ್ಯಮ ಸೇರಿದಂತೆ ಎಲ್ಲಾ ವಲಯಗಳನ್ನು ಇನ್ನಷ್ಟು ದಿವಾಳಿ ಎಬ್ಬಿಸಲಿದೆ. ಅಂತಿಮವಾಗಿ ಈಗಾಗಲೇ ಹಿಮ್ಮುಖವಾಗಿ ಚಲಿಸುತ್ತಿರುವ ದೇಶದ ಪ್ರಗತಿ, ಆ ದಿಕ್ಕಿನಲ್ಲಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಈ ಮೊದಲೂ ಹಲವರು ಎಚ್ಚರಿಸಿದ್ದರು. ಮೋದಿಯವರ ಸರ್ಕಾರ ಕೋವಿಡ್ ಸಾವುಗಳ ವಿಷಯದಲ್ಲಿ ಮಾಹಿತಿಯನ್ನು ಮುಚ್ಚಿಡುತ್ತಿದೆ ಎಂಬುದನ್ನು ಜುಲೈ ಹೊತ್ತಿಗೇ ದೇಶದ ರಾಷ್ಟ್ರೀಯ ಪತ್ರಿಕೆಗಳು ಮಾಹಿತಿ ಸಹಿತ ವಿವರಿಸಿದ್ದವು.

ಇದೀಗ ಒಂದು ಕಡೆ ಮೋದಿಯವರ ಸ್ವತಃ ತಮ್ಮ ಕರೋನಾ ನಿರ್ವಹಣೆ ಜಗತ್ತಿಗೇ ಮಾದರಿ ಎಂದು ದೇಶದ ಜನರಿಗೆ ಸ್ವಯಂ ಪ್ರಸಂಶೆಯ ವರದಿ ಒಪ್ಪಿಸುತ್ತಿರುವ ಹೊತ್ತಿಗೇ, ಲ್ಯಾನ್ಸೆಟ್ ವೈಜ್ಞಾನಿಕ ಸತ್ಯಗಳನ್ನು ಮರೆಮಾಚಿ, ಸುಳ್ಳನ್ನು ಮೆರೆಸುವ ಆತ್ಮವಂಚಕ ನಡೆಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ.

“ಕರೋನಾದ ಕುರಿತು ಸುಳ್ಳು ಸಾಧನೆಗಳನ್ನು ಹರಡುವುದು ಅಥವಾ ಅದರ ಕುರಿತ ನಕಾರಾತ್ಮಕ ವಾಸ್ತವಾಂಶಗಳನ್ನು ಒಪ್ಪಿಕೊಳ್ಳದೇ ಹೋದರೆ, ನಕಾರಾತ್ಮಕ ಅಂಶಗಳನ್ನು ಯಥಾವತ್ತು ವರದಿ ಮಾಡುವಲ್ಲಿ ವಿಫಲರಾದರೆ ಅದು ಜನಸಮುದಾಯದಲ್ಲಿ ಗೊಂದಲಕ್ಕೆ, ಉಡಾಫೆಗೆ ಕಾರಣವಾಗುತ್ತದೆ ಮತ್ತು ಅಂತಿಮವಾಗಿ ದೇಶದ ಆರೋಗ್ಯ ಸೇವೆಯ ವೃತ್ತಿಪರರು ಮತ್ತು ಇಡೀ ವ್ಯವಸ್ಥೆಯ ಮೇಲೆ ತಡೆದುಕೊಳ್ಳಲಾರದ ಒತ್ತಡಕ್ಕೆ ಕಾರಣವಾಗುತ್ತದೆ. ಜನರನ್ನು ಮುಂಜಾಗ್ರತೆ ವಹಿಸದೇ ಉದಾಸೀನ ಮಾಡುವುದಕ್ಕೆ, ಆರೋಗ್ಯ ಕುರಿತ ಮುನ್ನೆಚ್ಚರಿಕೆ ಸಂದೇಶಗಳನ್ನು ನಿರ್ಲಕ್ಷಿಸಲು ಕಾರಣವಾಗಿ, ಇಡೀ ಆರೋಗ್ಯ ವ್ಯವಸ್ಥೆ ಕುಸಿಯಲು ಇಂತಹ ಸುಳ್ಳು ಮತ್ತು ಅವಾಸ್ತವಿಕ ಅಂಶಗಳೇ ಕಾರಣವಾಗುತ್ತವೆ” ಎಂದು ಲ್ಯಾನ್ಸೆಟ್ ಸಂಪಾದಕೀಯ ಹೇಳಿದೆ.

“ದೇಶದಲ್ಲಿ ಔಷಧ, ಸಂಶೋಧನೆ, ಉತ್ಪಾದನೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಲ್ಲದರಲ್ಲೂ ಕೋವಿಡ್ ಸಂಕಷ್ಟದ ಹೊತ್ತಲ್ಲಿ ಸಾಕಷ್ಟು ಸುರಕ್ಷಿತವಾಗಿ ದೇಶವನ್ನು ಪಾರು ಮಾಡುವ ಮಟ್ಟಿನ ಪರಿಣತಿ ಮತ್ತು ಸಂಪನ್ಮೂಲ ಇದೆ. ಆದರೆ, ಈ ಎಲ್ಲದರ ಪ್ರಯೋಜನ ಜನಸಾಮಾನ್ಯರಿಗೆ ತಲುಪಿ ಅವರ ಜೀವ ರಕ್ಷಿಸಲು ದೇಶದ ನಾಯಕರು ವೈಜ್ಞಾನಿಕವಾಗಿ ಸಾಬೀತಾದ ಸಂಗತಿಗಳು, ತಜ್ಞರ ಸಲಹೆ, ಶೈಕ್ಷಣಿಕ ಸ್ವಾಯತ್ತತೆಯನ್ನು ಗೌರವಿಸಬೇಕು ಮತ್ತು ಸುಳ್ಳು ಭರವಸೆಗಳನ್ನು ಕೊಟ್ಟು ಜನರನ್ನು ದಿಕ್ಕುತಪ್ಪಿಸುವುದನ್ನು ಬಿಡಬೇಕು” ಎಂದು ಖಡಾಖಂಡಿತವಾಗಿ ಹೇಳಲಾಗಿದೆ.

ದೇಶದಲ್ಲಿ ಕರೋನಾ ವ್ಯಾಪಕವಾಗಿ ಹರಡುವ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಹೇರಿದ ಕ್ರಮ ಸಕಾಲಿಕ ಎಂದೂ ಹೇಳಿರುವ ಪತ್ರಿಕೆ, ಆದರೆ, “ವರದಿಗಳ ಪ್ರಕಾರ, ದೇಶವ್ಯಾಪಿ ಲಾಕ್ ಡೌನ್ ಘೋಷಣೆಗೆ ಮುನ್ನ ಪ್ರಧಾನಿ ಮೋದಿಯವರು ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತನಾಡಿ ಕರೋನಾ ಸಂಬಂಧಿದ ಯಾವುದೇ ನಕಾರಾತ್ಮಕ ಸುದ್ದಿಗಳನ್ನು ಹರಡದಂತೆ ಸೂಚಿಸಿದ್ದರು. ಯಾವುದೇ ಬಗೆಯ ನಕಾರಾತ್ಮಕ, ನಿರಾಶಾದಾಯಕ ಸುದ್ದಿ ಮತ್ತು ವದಂತಿಗಳನ್ನು ವರದಿ ಮಾಡದಂತೆ ಹೇಳಿದ್ದರು ಎನ್ನಲಾಗಿದೆ.

ಅದೇ ರೀತಿಯಲ್ಲಿ ದೇಶದ ವೈಜ್ಞಾನಿಕ ಸಂಸ್ಥೆಗಳ ಮೇಲೆಯೂ ಸರ್ಕಾರದಿಂದ ಇಂತಹದ್ದೇ ಒತ್ತಡ ಇತ್ತು. ಕರೋನಾ ಸಂಕಷ್ಟದ ನಡುವೆ ಆ ಕುರಿತ ಕೇವಲ ಭರವಸೆದಾಯಕ, ಸಕಾರಾತ್ಮಕ ಸಂಗತಿಗಳನ್ನು ಮಾತ್ರ ಬಹಿರಂಗಪಡಿಸುವಂತೆ ಒತ್ತಡವಿತ್ತು. ಅಂತಹ ಒತ್ತಡ ಐಸಿಎಂಆರ್ ಕಡೆಯಿಂದಲೇ ಬರುತ್ತಿತ್ತು. ಅದು ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ಬಳಕೆಯ ವಿಷಯವಾಗಿರಬಹುದು, ಆಗಸ್ಟ್ 15ಕ್ಕೆ ಮುನ್ನ ಕೋವಿಡ್ ವ್ಯಾಕ್ಸಿನ್ ತಯಾರಿಸಬೇಕು ಎಂಬ ಕಾಲಮಿತಿ ನೀಡಿದ ವಿಷಯವಿರಬಹುದು ಮತ್ತು ಇತ್ತೀಚೆಗೆ ಸೀರೋ ಸಮೀಕ್ಷೆ ಕುರಿತ ಹಾಟ್ ಸ್ಪಾಟ್ ನಗರಗಳ ವಿವರ ಬಹಿರಂಗಪಡಿಸದಂತೆ ಸಂಶೋಧಕರಿಗೆ ಎಚ್ಚರಿಕೆ ನೀಡಿದ ವಿಷಯವಿರಬಹುದು, ಎಲ್ಲಾ ಸಂದರ್ಭದಲ್ಲಿಯೂ ಐಸಿಎಂಆರ್ ಮತ್ತು ಅದರ ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರು, ‘ಕೇವಲ ತನಗೆ ಪೂರಕ ಸಂಗತಿಗಳು ಮಾತ್ರ ಬೆಳಕಿಗೆ ಬರಬೇಕು’ ಎಂಬ ಸರ್ಕಾರದ ಆಣತಿಯಂತೆಯೇ ನಡೆದುಕೊಂಡಿದ್ದಾರೆ ಎಂದೂ ಹೇಳಲಾಗಿದೆ.

ಅಷ್ಟೇ ಅಲ್ಲದೆ, ಕೋವಿಡ್ 19 ಪ್ರಕರಣಗಳು ಮತ್ತು ಸಾವಿನ ಕುರಿತ ಅಂಕಿಅಂಶಗಳ ವಿಷಯದಲ್ಲಿ ಕೂಡ ಸರ್ಕಾರ ಪಾರದರ್ಶಕತೆ ಉಳಿಸಿಕೊಂಡಿಲ್ಲ ಎಂದಿರುವ ಲ್ಯಾನ್ಸೆಟ್, ಕೋವಿಡ್ ಸಾವಿನ ಪ್ರಮಾಣ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಕಡಿಮೆ. ಅದೇ ತಮ್ಮ ಸರ್ಕಾರದ ಕ್ರಮಗಳ ಸಾಧನೆ ಎನ್ನುವ ಪ್ರಧಾನಿ ಮತ್ತು ಆರೋಗ್ಯ ಸಚಿವರ ವಾದಕ್ಕೆ ಸವಾಲು ಹಾಕಿದೆ. ಸೋಂಕಿತರ ಮರಣ ಪ್ರಮಾಣವೂ ಸೇರಿದಂತೆ ಇಡೀ ಕೋವಿಡ್ ಅಂಕಿಅಂಶಗಳು ಪಾರದರ್ಶಕವಾಗಿಲ್ಲ. ಪ್ರಾಮಾಣಿಕವಾಗಿಲ್ಲ. ಸಾವಿನ ದರದ ಕುರಿತ ಸರ್ಕಾರದ ಮಾಹಿತಿಯನ್ನು ಇತ್ತೀಚಿನ ಜಾಗತಿಕ ವರದಿ ಕೂಡ ಪ್ರಶ್ನಿಸಿದೆ. ಕೇಂದ್ರ ಸರ್ಕಾರ ಸೋಂಕಿತರ ಮರಣ ಪ್ರಮಾಣ ಶೇ.1.8ರಷ್ಟು ಮಾತ್ರ. ಇದು ಇತರ ಸೋಂಕಿತ ದೇಶಗಳ ಮರಣ ಪ್ರಮಾಣಕ್ಕೆ ಹೋಲಿಸಿದರೆ ತೀರಾ ಕಡಿಮೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಸರ್ಕಾರದ ಈ ಲೆಕ್ಕಾಚಾರದ ಅಂಕಿಅಂಶಗಳು ಎಷ್ಟು ಪ್ರಾಮಾಣಿಕ ಮತ್ತು ವಾಸ್ತವ ಎಂಬ ಬಗ್ಗೆಯೇ ಅನುಮಾನಗಳಿವೆ” ಎಂದೂ ಹೇಳಿದೆ.

ಕರೋನಾದ ಆರಂಭದ ದಿನಗಳಲ್ಲಿ ಬಿಗಿ ಲಾಕ್ ಡೌನ್ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಂಡರೂ ಆ ಬಳಿಕ ಸೋಂಕು ಅನಿರೀಕ್ಷಿತ ವೇಗದಲ್ಲ ಹರಡುತ್ತಿದೆ ಮತ್ತು ಸಾವಿನ ಪ್ರಮಾಣ ಕೂಡ ಆತಂಕಕಾರಿ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂಬ ಹಲವು ತಜ್ಞರ ಅಭಿಪ್ರಾಯಕ್ಕೆ ಪೂರಕವಾಗಿ ಲ್ಯಾನ್ಸೆಟ್ ಕೂಡ, “ಬಿಗಿ ಲಾಕ್ ಡೌನ್ ಮೂಲಕ ಆರಂಭದಲ್ಲಿ ಕರೋನಾಕ್ಕೆ ಕಡಿವಾಣ ಹಾಕಿದ್ದರೂ ಈಗ ಸೋಂಕು ವ್ಯಾಪಕವಾಗಿದೆ. ಇದೀಗ ಅತಿವೇಗದಲ್ಲಿ ಸೋಂಕು ಹರಡುತ್ತಿದ್ದು, ಅದರ ಹರುಡುವಿಕೆಯ ಇಳಿಮುಖ ಇನ್ನೂ ಆರಂಭವಾಗಿಲ್ಲ,ಈಗಲೂ ಅತಿವೇಗದ ಏರುಗತಿಯಲ್ಲೇ ಸೋಂಕು ಹರಡುತ್ತಿದೆ. ಹಾಗಾಗಿ ಇಡೀ ಜಗತ್ತಿನಲ್ಲೇ ಭಾರತ ಅತಿ ವೇಗದ ಕರೋನಾ ಹರಡುವಿಕೆಗೆ ಸಾಕ್ಷಿಯಾಗಿದೆ. ಈ ನಡುವೆ ಒಂದು ಕಡೆ ಸೋಂಕು ವೇಗ ಮತ್ತು ವ್ಯಾಪಕತೆ; ಮತ್ತೊಂದು ಕಡೆ ಸೋಂಕಿನ ಕುರಿತ ಕಟುವಾಸ್ತವವನ್ನು ಮುಚ್ಚಿಟ್ಟು ಸುಳ್ಳು ಭರವಸೆಯ ಸಂಗತಿಗಳನ್ನು ಪ್ರಚುರಪಡಿಸುವ ವ್ಯವಸ್ಥೆಯಿಂದಾಗಿ ರೋಗದ ಮಾರಣಾಂತಿಕ ಅಪಾಯ ವಿಪರೀತ ಪ್ರಮಾಣದಲ್ಲಿ ಹೆಚ್ಚಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ” ಎಂದು ಹೇಳಿದೆ.

“ಕನಿಷ್ಟ ಈಗಲಾದರೂ ಸರ್ಕಾರ ಸೋಂಕಿನ ಕುರಿತ ವಾಸ್ತವಾಂಶಗಳನ್ನು ಯಾವುದೇ ಮುಚ್ಚುಮರೆ ಇಲ್ಲದೆ, ಪ್ರಾಮಾಣಿಕವಾಗಿ ಜನತೆಯ ಮುಂದಿಡುವುದು ದೇಶದ ಜನರಿಗೂ, ಸರ್ಕಾರಕ್ಕೂ ಕ್ಷೇಮ. ನಿಜವಾಗಿಯೂ ಕರೋನಾಕ್ಕೆ ಕಡಿವಾಣ ಹಾಕಿ ಅಪಾರದ ಪ್ರಮಾಣದ ದೇಶದ ಜನರನ್ನು ಸಾವಿನ ದವಡೆಯಿಂದ ಪಾರು ಮಾಡಲು ಅದೊಂದೇ ಈಗಿರುವ ದಾರಿ” ಎಂದು ಲ್ಯಾನ್ಸೆಟ್ ತೀರಾ ಸ್ಪಷ್ಟವಾಗಿ ಹೇಳಿದೆ.

ಆದರೆ, ಕರೋನಾ ಎಂಬ ಜಾಗತಿಕ ಮಹಾಮಾರಿ ಚೀನಾದ ವುಹಾನ್ ಪ್ರಾಂತದಲ್ಲಿ ದಿಢೀರ್ ಸಾವುನೋವಿಗೆ ಕಾರಣವಾದ ದಿನದಿಂದಲೇ ಜಗತ್ತಿನ ಇತರ ಹಲವು ದೇಶಗಳಂತೆ ವಾಸ್ತವಾಂಶಗಳು ಮತ್ತು ವೈಜ್ಞಾನಿಕ ಸಂಗತಿಗಳ ಮೇಲೆ ಅದರ ವಿರುದ್ಧ ಹೋರಾಟ ಕಟ್ಟುವ ಬದಲು, ಸಗಣಿ, ಗಂಜಲ, ತಟ್ಟೆಲೋಟ, ಶಂಖ-ಜಾಗಟೆ, ಮೊಂಬತ್ತಿ- ಪಂಜುಗಳಂತಹ ಅಸ್ತ್ರಗಳ ಮೇಲೆಯೇ ಹೆಚ್ಚು ನೆಚ್ಚಿಕೊಂಡಿರುವವರು ಇಂತಹ ಕಾಳಜಿಗೆ ಕಿವಿಗೊಡುವರೆ? ದೇಶದ ಜನರ ಮತ್ತು ಆ ಮೂಲಕ ಅಂತಿಮವಾಗಿ ದೇಶದ ಹಿತಕ್ಕಿಂತ ತಮ್ಮ ವ್ಯಕ್ತಿಗತ ವರ್ಚಸ್ಸು, ಪಕ್ಷದ ಹಿರಿಮೆಗೇ ಆದ್ಯತೆ ನೀಡುತ್ತಿರುವ ಮೋದಿಯವರ ಆಡಳಿತ, ಇಂತಹ ಕಿವಿಮಾತುಗಳಿಗೆ ಸೊಪ್ಪುಹಾಕುವುದೇ?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com