ಪ್ರಧಾನಿ ಮೋದಿ ಅಧಿಕಾರಾವಧಿ: ರೈತರ ಪ್ರತಿಭಟನೆಯಲ್ಲಿ ಶೇಕಡಾ 700ರಷ್ಟು ಏರಿಕೆ

ಪ್ರಧಾನಿ ಮೋದಿ ಅಧಿಕಾರಾವಧಿ: ರೈತರ ಪ್ರತಿಭಟನೆಯಲ್ಲಿ ಶೇಕಡಾ 700ರಷ್ಟು ಏರಿಕೆ

2014 ಮತ್ತು 2016 ರ ನಡುವೆ, ರೈತರು ಸರ್ಕಾರದ ವಿರುದ್ದ ಮಾಡಿದ ಪ್ರತಿಭಟನೆಗಳ ಸಂಖ್ಯೆಯು 628 ರಿಂದ 4,837 ಕ್ಕೆ ಏರಿಕೆಯಾಗಿದೆ. ಇದು ಶೇಕಡಾ 700 ರಷ್ಟು ಹೆಚ್ಚಾಗಿದೆ

ರೈತರೇ ದೇಶದ ಬೆನ್ನೆಲುಬು ಎಂದು ನಮಗೆಲ್ಲ ಗೊತ್ತು. ಇಂದು ರೈತರ ಕೃಷಿ ಉತ್ಪನ್ನಗಳ ಮಾರಾಟವು ದೇಶದಲ್ಲಿ ಜೂಜಿನಂತೆ ಅಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದೆ ಎಂದು ಸಾವಿರಾರು ರೈತರು ಅದೇ ಬೆಳೆ ಬೆಳೆಯುತ್ತಾರೆ. ಆದರೆ ಕೊಯ್ಲಿನ ವೇಳೆ ಬೆಲೆ ಪಾತಾಳಕ್ಕಿಳಿದಿರುತ್ತದೆ. ಕೆಲವೊಮ್ಮೆ ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪದ ಜತೆಗೆ ಕಾಡು ಪ್ರಾಣಿಗಳ ಉಪಟಳದ ನಡುವೆಯೂ ರೈತ ಸುರಿಸಿದ ಬೆವರಿನ ಪ್ರತಿಫಲ ಸುಗುವುದ ಕಷ್ಟವೇ ಆಗಿದೆ. ಸರ್ಕಾರವು ಕೆಲವೊಂದು ಆಹಾರ ಪದಾರ್ಥಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿದೆಯಾದರೂ ಮಾರುಕಟ್ಟೆಯ ಬೆಲೆಗಳು ಅಧಿಕವೇ ಇರುತ್ತವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈರುಳ್ಳಿಗೆ ಉತ್ತಮ ಬೆಲೆ ಇದೆ ಎಂದು ರೈತರು ಈರುಳ್ಳಿ ಬೆಳೆದರೆ ಸರ್ಕಾರವು ದೇಶದಲ್ಲಿ ಬೆಲೆಗಳನ್ನು ಹತೋಟಿಗೆ ತರಲು ದಿಢೀರನೆ ರಫ್ತು ನಿಷೇಧ ಮಾಡುತ್ತದೆ. ಇದರಿಂದ ರೈತರ ಬೆಳೆಗೆ ಬೆಲೆ ಸಿಗದೇ ಕಂಗಾಲಾಗಬೇಕಾಗುತ್ತದೆ. ಇಂದು ರಾಜ್ಯದ ಬಹುತೇಕ ಕಡೆಗಳಲ್ಲಿ ರೈತರು ರಾತ್ರಿ ವೇಳೆ ಕಾವಲು ಕಾದು ಕಾಡಾನೆಗಳಿಂದ ತಮ್ಮ ಬೆಳೆ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಾಗಂತ ರಾತ್ರಿ ಕಾವಲು ಕಾದದ್ದಕ್ಕೆ ರೈತನ ಉತ್ಪನ್ನಗಳಿಗೆ ಅಧಿಕ ಬೆಲೆ ಏನೂ ಸಿಗುವುದಿಲ್ಲ. ಇಷ್ಟೆಲ್ಲ ಕಷ್ಟ ಪಟ್ಟು ಬೆಳೆ ಬೆಳೆದರೂ ರೈತನ ಉತ್ಪನ್ನಗಳಿಗೆ ದರ ನಿಗದಿ ಮಾಡುವುದು ಮಾರುಕಟ್ಟೆಯ ದಲ್ಲಾಳಿಗಳ ಮಾಫಿಯಾ. ಕಂಪೆನಿಯೊಂದು ತನ್ನ ಉತ್ಪಾದನೆಗೆ ತಾನೆ ಬೆಲೆ ನಿಗದಿಪಡಿಸಿಕೊಂಡರೆ ರೈತನಿಗೆ ಆ ಸ್ವಾತಂತ್ರ್ಯವೇ ಇಲ್ಲ.

2014 ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದರು. ಆದರೂ ಅಧಿಕಾರಕ್ಕೆ ಬಂದ ನಂತರ, ಅವರ ಸರ್ಕಾರವು ತನ್ನ ಮೊದಲ ಅಧಿಕಾರಾವಧಿಯಲ್ಲಿ ಈ ಭರವಸೆಯ ಅತ್ಯಲ್ಯವನ್ನು ಮಾತ್ರ ಈಡೇರಿಸಿದೆ. ಆದಾಗ್ಯೂ, ಇತ್ತೀಚೆಗೆ, ಮೋದಿ ಸರ್ಕಾರವು ದೇಶದ ರೈತರ ಸಂಕಷ್ಟಗಳನ್ನು ನಿವಾರಿಸಲು ಮೂರು ಐತಿಹಾಸಿಕ ಮಸೂದೆಗಳನ್ನು ಅಂಗೀಕರಿಸಿತು. ರೈತರು ಎದುರಿಸುತ್ತಿರುವ ದಶಕಗಳ ಬಿಕ್ಕಟ್ಟು ಬಿಜೆಪಿಯ ಮತ್ತು ಅದರ ಮಿತ್ರ ಪಕ್ಷಗಳ ನಡುವಿನ ಪ್ರಮುಖ ವಿವಾದದ ಹಂತವಾಗಿ ಮಾರ್ಪಟ್ಟಿದೆ ಅಧಿಕಾರದ ಚುಕ್ಕಾಣಿ ಹಿಡಿದವರ ಹಿತಾಸಕ್ತಿಯನ್ನು ಪ್ರತಿಬಿಂಬಿಸುತ್ತಿದೆ. ಈ ಮಸೂದೆಯು ಮೋದಿ ಅವರ ಸಂಪುಟ ಸಹೋದ್ಯೋಗಿ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಲು ಸಹ ಕಾರಣವಾಗಿದೆ. ರೈತರ ಸಮಸ್ಯೆಗಳು ಈಗ ರಾಜಕೀಯ ಪಕ್ಷಗಳ ಶಾಸಕಾಂಗ ಕಾರ್ಯಸೂಚಿಯ ಭಾಗವಾಗಲು ಕಾರಣವೇನು?

ಕಾನೂನುಬಾಹಿರ ಸಭೆಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಸಂಗ್ರಹಿಸಿದ ಮಾಹಿತಿಯ ಪ್ರಕಾರ ನರೇಂದ್ರ ಮೋದಿ ಸರ್ಕಾರದ ಮೊದಲ ಎರಡು ವರ್ಷಗಳಲ್ಲಿ ರೈತರ ಒಗ್ಗೂಡುವಿಕೆ ಯಲ್ಲಿ ಅಭೂತಪೂರ್ವ ಏರಿಕೆ ಕಂಡುಬಂದಿದೆ ಎಂದು ಸೂಚಿಸುತ್ತದೆ. 2014 ಮತ್ತು 2016 ರ ನಡುವೆ, ರೈತರು ಸರ್ಕಾರದ ವಿರುದ್ದ ಮಾಡಿದ ಪ್ರತಿಭಟನೆಗಳ ಸಂಖ್ಯೆಯು 628 ರಿಂದ 4,837 ಕ್ಕೆ ಏರಿಕೆಯಾಗಿದೆ. ಇದು ಶೇಕಡಾ 700 ರಷ್ಟು ಹೆಚ್ಚಾಗಿದೆ. ಈ ಮೂರು ಮಸೂದೆಗಳು ಎಲ್ಲಾ ಸಮಯದಲ್ಲೂ ರೈತರ ಹಿತದ ಬಗೆಗಿನ ಬಿಜೆಪಿಯ ಚಿಂತನೆಯನ್ನು ಪ್ರತಿಬಿಂಬಿಸುತ್ತವೆ ಎಂದು ನಂಬುವುದು ಕಷ್ಟ.

ಹೆಚ್ಚು ಸಮಂಜಸವಾದ ವಿಷಯವೆಂದರೆ ಬಿಜೆಪಿಯು ರಾಷ್ಟ್ರಾದ್ಯಂತ ಬೆಳೆಯುತ್ತಿರುವ ರೈತರ ಆಂದೋಲನವನ್ನು ಇನ್ನು ಮುಂದೆ ನಿರ್ಲಕ್ಷಿಸಲು ಸಾಧ್ಯವಾಗುವುದಿಲ್ಲ. 2014 ಕ್ಕಿಂತ ಮೊದಲು, ರೈತರು ಹೆಚ್ಚಾಗಿ ರಾಜ್ಯ ಅಥವಾ ಸ್ಥಳೀಯ ಮಟ್ಟದಲ್ಲಿ ಸಣ್ಣ ಪ್ರತಿಭಟನೆಗಳನ್ನು ಆಯೋಜಿಸುತಿದ್ದರು. ರೈತರ ಹಿತಾಸಕ್ತಿಗಳನ್ನು ಜಾತಿ ರಾಜಕಾರಣದೊಳಗೆ ಸೀಮಿತಗೊಳಿಸಲಾಯಿತು. ಇದರಿಂದಾಗಿ ಅವರಿಗೆ ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗುವುದು ಕಷ್ಟವಾಯಿತು. ಈಗ ರೈತ ಚಳವಳಿಯು ಮೋದಿ ಸರ್ಕಾರವು ಕಡೆಗಣಿಸಲಾಗದ ರಾಷ್ಟ್ರೀಯ ಚಳುವಳಿಯಾಗಿ ಬೆಳೆದಿದೆ. 2014 ರಲ್ಲಿ ಮೋದಿಯವರ ಪ್ರಚಾರದ ಭರವಸೆಯನ್ನು ಇತ್ತೀಚಿನ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ನಾಯಕರು ರೈತರ ಸಮಸ್ಯೆಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ 2014 ರಲ್ಲಿ ಮೋದಿ ಸರ್ಕಾರದ ಮೊದಲ ಕೆಲವು ತಿಂಗಳುಗಳಲ್ಲಿ ಯಾವುದೇ ಪ್ರಮುಖ ಕೃಷಿ ನೀತಿಯನ್ನು ಘೋಷಿಸದ ಕಾರಣ, ರೈತರು ಬೀದಿಗಿಳಿದು ಪ್ರತಿಭಟಿಸಿದರು. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಒದಗಿಸುವ ಮೋದಿಯವರ ಭರವಸೆ ರೈತ ಸಂಘಟನೆಗಳು ಪ್ರತಿಭಟನೆಗೆ ಸಂಘಟಿತರಾಗುವ ಅನಿವಾರ್ಯ ಗುರಿಯನ್ನು ಹಾಕಿಕೊಂಡವು.

ರೈತರಲ್ಲಿ ಈ ಹೆಚ್ಚುತ್ತಿರುವ ಪ್ರತಿಭಟನೆಯ ಕಾವು 2017 ರಲ್ಲಿ ಪ್ರಚಾರವಾದ ಎರಡು ಘಟನೆಗಳಿಂದ ಮಾಧ್ಯಮಗಳ ಗಮನ ಸೆಳೆಯಿತು. ಆ ವರ್ಷದ ಮಾರ್ಚ್ನಲ್ಲಿ, ತಮಿಳುನಾಡಿನ ರೈತರು ನವದೆಹಲಿಯ ಜಂತರ್ ಮಂತರ್ನಲ್ಲಿ ಹಲವಾರು ವಾರಗಳವರೆಗೆ ಪ್ರತಿಭಟನೆಗಳನ್ನು ನಡೆಸಿದರು. ಈ ರೈತರು ಅಳವಡಿಸಿಕೊಂಡ ವಿಭಿನ್ನ ತಂತ್ರಗಳು ಏನೆಂದರೆ ತಲೆಬುರುಡೆಯ ಹಾರವನ್ನು ಧರಿಸಿ ಮತ್ತು ಬಾಯಿಯಲ್ಲಿ ಇಲಿಗಳನ್ನು ಹಿಡಿದಿಟ್ಟುಕೊಳ್ಳುವುದು -ಇದು ದಿನನಿತ್ಯ ರೈತರು ಎದುರಿಸುತ್ತಿರುವ ಕಷ್ಟಗಳನ್ನು ಸಂಕೇತಿಸುತ್ತದೆ, ಇದು ರಾಜಕಾರಣಿಗಳಿಗೆ ಎಚ್ಚರಿಕೆಯ ಘಂಟೆಯೂ ಆಯಿತು. ಎರಡನೆಯದಾಗಿ, ಜೂನ್ 2017 ರಲ್ಲಿ, ಮಧ್ಯಪ್ರದೇಶ ಪೊಲೀಸರು ಪ್ರತಿಭಟನೆಯ ಸಮಯದಲ್ಲಿ ಮಾಡಸರ್ ದಲ್ಲಿ ಪ್ರತಿಭಟನಾ ನಿರತ ಆರು ರೈತರನ್ನು ಗೋಲಿಬಾರ್ ಮಾಡುವ ಮೂಲಕ ಕೊಂದರು.

ಈ ಎರಡೂ ಘಟನೆಗಳು ರೈತರ ಬಗ್ಗೆ ಬಿಜೆಪಿಯ ವಿರೋಧಿ ನಡವಳಿಕೆಯನ್ನು ಉದಾಹರಿಸಲು ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡವು. ಈ ಎರಡೂ ಘಟನೆಗಳು ಸಾಂಸ್ಕೃತಿಕ ಚೌಕಟ್ಟನ್ನು ರೈತರ ಪರವಾಗಿ ಬದಲಾಯಿಸುವಲ್ಲಿ ಪ್ರಮುಖವಾದವು. ಈ ಘಟನೆಗಳು ರೈತರು ಎದುರಿಸುತ್ತಿರುವ ಭೀಕರ ಪರಿಸ್ಥಿತಿಗಳು ಮತ್ತು ಸರ್ಕಾರದ ದಬ್ಬಾಳಿಕೆಯನ್ನು ಬಹಿರಂಗಪಡಿಸಿದವು. ರೈತರು ತಮ್ಮ ಆಂದೋಲನವನ್ನು ವಿಸ್ತರಿಸಲು ಮಾಧ್ಯಮಗಳ ಗಮನ ಮತ್ತು ಬಿಜೆಪಿ ವಿರೋಧಿ ಮನೋಭಾವವನ್ನು ಬಳಸಿಕೊಂಡರು. ಪಾದ ಯಾತ್ರೆಗಳ ಮೂಲಕ ದೇಶಾದ್ಯಂತ ಗ್ರಾಮ ಮಟ್ಟದ ಕಾರ್ಯಕ್ರಮಗಳಂತಹ ತಂತ್ರಗಳನ್ನು ಬಳಸಿಕೊಂಡು ರೈತ ಸಂಘಟನೆಗಳು ಹೊಸ ಸದಸ್ಯರನ್ನು ನೇಮಿಸಿಕೊಂಡು ಬಲಿಷ್ಟಗೊಂಡವು.

ದೇಶಾದ್ಯಂತ ನೂರಾರು ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತ ಸಂಘಟನೆಗಳು ಹುಟ್ಟಿಕೊಂಡಿವೆ. ಡಿಜಿಟಲ್ ಮಾಧ್ಯಮವನ್ನು ಬಳಸಿಕೊಂಡು, ಅವರು ಮೂಲಸೌಕರ್ಯವನ್ನು ಸೃಷ್ಟಿಸಿದರು. ಒಳಗಿನವರು- ಸಂಪೂರ್ಣವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವವರು ಮತ್ತು ಹೊರಗಿನವರು - ನಗರ ಪ್ರದೇಶಗಳೊಂದಿಗೆ ಸಂಪರ್ಕ ಹೊಂದಿರುವ ನಾಯಕರ ಬೆಂಬಲವು ರೈತ ಚಳವಳಿಗೆ ದೊರೆಯಿತು. ಈ ಒಗ್ಗೂಡುವಿಕೆಯು ನಗರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಟನೆಗಳ ಸಂಘಟನೆಗೆ ಅನುಕೂಲ ಮಾಡಿಕೊಟ್ಟಿದೆ. ದೆಹಲಿ ಮತ್ತು ಇತರ ಸ್ಥಳಗಳಲ್ಲಿ ಆಯೋಜಿಸಲಾದ ಅನೇಕ ದೊಡ್ಡ-ಪ್ರಮಾಣದ ರೈತರ ಪ್ರತಿಭಟನೆಗಳು ಚಳುವಳಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಲ್ಲಿ ರೈತ ಮುಖಂಡರು ಮತ್ತು ಸಂಘಟನೆಗಳು ವಹಿಸಿರುವ ಪಾತ್ರಕ್ಕೆ ಸಾಕ್ಷಿಯಾಗಿದೆ.

2017 ರಲ್ಲಿ ನಡೆದ ಮಾಂಡ್ಸೌರ್ ಘಟನೆಯ ಕೆಲವೇ ದಿನಗಳಲ್ಲಿ, ಭಾರತದಾದ್ಯಂತ ಸುಮಾರು 70-80 ರೈತ ಸಂಘಟನೆಗಳು ರಾಷ್ಟ್ರೀಯ ಒಕ್ಕೂಟವನ್ನು ರಚಿಸಿದವು, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಎಸ್‌ಸಿ), ಇದು ಈಗ 20 ರಾಜ್ಯಗಳಿಂದ 250 ಸಂಸ್ಥೆಗಳನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದಿದೆ. ಈ ಸಂಸ್ಥೆಗಳು ಸಣ್ಣ, ಮಧ್ಯಮ ಮತ್ತು ದೊಡ್ಡ ರೈತರನ್ನು ಮತ್ತು ಕೃಷಿ ಕಾರ್ಮಿಕರನ್ನು ಪ್ರತಿನಿಧಿಸುತ್ತವೆ. ಎಐಕೆಎಸ್‌ಎಸ್‌ಸಿ ಭಾರತದಲ್ಲಿ ರೈತರ ರಾಜಕೀಯದ ಹೊಸ ಸ್ವರೂಪವನ್ನು ಪ್ರತಿನಿಧಿಸುತ್ತದೆ. ಪ್ರತಿಭಟನೆಗಳನ್ನು ಆಯೋಜಿಸುವುದರ ಜೊತೆಗೆ, ಇದು ಶಾಸನಬದ್ಧ ವಕಾಲತ್ತುಗಳನ್ನು ತಂತ್ರವಾಗಿ ಅಳವಡಿಸಿಕೊಂಡಿದೆ. 2017 ರಲ್ಲಿ ಎಐಕೆಎಸ್‌ಎಸ್‌ಸಿ ಸಂಸತ್ತಿನಲ್ಲಿ ಮಂಡಿಸಬೇಕಾದ ರೈತರಿಗೆ ಸಾಲದಿಂದ ಸ್ವಾತಂತ್ರ್ಯ, ಮತ್ತು ಅವರ ಉತ್ಪನ್ನಗಳ ನ್ಯಾಯಯುತ ಬೆಲೆ ಎಂಬ.ಎರಡು ಮಸೂದೆಗಳನ್ನು ರೂಪಿಸಿತು. ಎಐಕೆಎಸ್ಸಿಸಿ 2018 ರಲ್ಲಿ ಲೋಕಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಗಳಾಗಿ ಮಂಡಿಸುವ ಮೊದಲು ಬಿಜೆಪಿ ಹೊರತುಪಡಿಸಿ ದೇಶದ 21 ರಾಜಕೀಯ ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿತು. ಸದನದ ಮುಂದೂಡಿಕೆ ಈ ಅವಕಾಶವನ್ನು ಅಡ್ಡಿಪಡಿಸಿದರೂ, ರೈತ ಸಂಘಟನೆಗಳು ಈ ಕಾರ್ಯಸೂಚಿಯ ಸುತ್ತ ಒಟ್ಟುಗೂಡಿದವು.

ವಿರೋಧ ಪಕ್ಷಗಳ ಬೆಂಬಲದೊಂದಿಗೆ ರೈತರು ತಮ್ಮ ಕಾರ್ಯಸೂಚಿಯನ್ನು ಬೀದಿಗಳಿಂದ ಸಂಸತ್ತಿಗೆ ತಂದಿದ್ದರಿಂದ, ಮೋದಿ ಸರ್ಕಾರವು ರೈತರ ಸಮಸ್ಯೆಗೆ ಗಮನಕೊಡುವುದು ಬಿಟ್ಟು ಬೇರೆ ದಾರಿಯಿಲ್ಲ. ಬಿಜೆಪಿ ಅಂಗೀಕರಿಸಿದ ಕೃಷಿ ಮಸೂದೆಗಳು ರೈತರು ಮಂಡಿಸಿದ ಕಾರ್ಯಸೂಚಿಯನ್ನು ಮುಂದಿಟ್ಟವು. ಈ ಮಸೂದೆಗಳು ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ಸ್ಥಳೀಯ ಮಂಡಿಗಳ ಹೊರಗೆ ಮಾರಾಟ ಮಾಡಲು ಅನುಕೂಲವಾಗುತ್ತವೆ ಮತ್ತು ಗುತ್ತಿಗೆ ಕೃಷಿಯನ್ನು ಉತ್ತೇಜಿಸುತ್ತವೆ, ಇವೆರಡೂ ರೈತರ ಮೇಲಿನ ಸಾಲದ ಹೊರೆಯನ್ನು ನಿವಾರಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಮತ್ತು, ಮಸೂದೆಗಳು ಮುಂದಿನ ದಿನಗಳಲ್ಲಿ ರೈತರ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇಲ್ಲ ರೈತರಿಗೆ, ಈ ಮಸೂದೆಗಳು ಭವಿಷ್ಯದಲ್ಲಿ ಅನಿಶ್ಚಿತ ಭರವಸೆಯನ್ನು ನೀಡುತ್ತವೆ, ಈ ಮಸೂದೆಗಳಿಗೆ ರೈತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ. ಮುಂದಿನ ದಿನಗಳಲ್ಲಿ, ರೈತರ ಹಿತದೃಷ್ಟಿಯಿಂದ ನಿಗದಿಪಡಿಸಿದ ಕಾರ್ಯಸೂಚಿಗೆ ಹೊಂದಿಕೆಯಾಗದ ಯಾವುದೇ ಸುಧಾರಣೆಯು ಇದೇ ರೀತಿಯ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ.

Click here to follow us on Facebook , Twitter, YouTube, Telegram

Last updated

Pratidhvani
www.pratidhvani.com