ಜೀವನ ಗಾಯನ ಮುಗಿಸಿದ ಗಾನ ಮಾಂತ್ರಿಕ

ಎಸ್‌ಪಿಬಿ ಅವರ ಅಧ್ಭುತ ಕಲೆ ಎಂದರೆ ಆಯಾ ನಟರ ಧ್ವನಿಗೆ ಹೊಂದುವಂತೆ ಸ್ವರ ಬದಲಾಯಿಸಿಕೊಂಡು ಹಾಡುವುದು. ಶ್ರೀನಾಥ್ ಅವರ ಅಭಿನಯದ ಹಾಡಿಗೆ ಅವರ ಧ್ವನಿಗೆ ಸರಿಹೊಂದುವಂತೆ, ಅಂಬರೀಶ್ ಗೆ ಅವರ ಧ್ವನಿಗೆ, ವಿಷ್ಣು ವರ್ಧನ್‌ಗೆ ಅವರ ಧ್ವನಿಗೆ ಸೂಕ್ತವಾಗು ...
ಜೀವನ ಗಾಯನ ಮುಗಿಸಿದ ಗಾನ ಮಾಂತ್ರಿಕ

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಎಂಬ ಕನ್ನಡದ ಸುಮಧುರ ಗೀತೆಗೆ ಮನಸೋಲದವರೇ ಇಲ್ಲ. ಇಂದಿಗೂ ಕನ್ನಡ ಟಿವಿಗಳ ರಿಯಾಲಿಟಿ ಶೋಗಳು, ಆರ್ಕೆಸ್ಟ್ರಾಗಳಲ್ಲಿ ಕೇಳಿ ಬರುವ ಹಳೆಯ ಚಲನಚಿತ್ರ ಗೀತೆಗಳಲ್ಲಿ ಇದೂ ಒಂದು. ಇದು ದಿವಂಗತ ನಟ ಶಂಕರ್ ನಾಗ್ ಅವರೇ ನಾಯಕನಾಗಿ ನಟಿಸಿ ನಿರ್ದೇಶಿಸಿದ ಗೀತ ಚಿತ್ರದ ಅತ್ಯಂತ ಜನಪ್ರಿಯತೆ ಪಡೆದ ಹಾಡಾಗಿದ್ದು ಚಿತ್ರ 1981 ರಲ್ಲಿ ತೆರೆ ಕಂಡಿತ್ತು. ಈ ಹಾಡು ಹಾಡಿದ್ದು ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಮಣ್ಯಂ ಅವರು. ಈ ಹಾಡು ಶಂಕರ್ ನಾಗ್ ಅವರಿಗೂ ಎಸ್‌ಪಿಬಿ ಅವರಿಗೂ ದೊಡ್ಡ ಹೆಸರು ತಂದು ಕೊಟ್ಟಿತು. ಕನ್ನಡ ದಲ್ಲಿ ಎಸ್‌ಪಿಬಿ ಹಾಡಿರುವ ನೂರಾರು ಗೀತೆಗಳು ಇಂದಿಗೂ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಅದು ಬಂಧನ ಚಿತ್ರದ ನೂರೊಂದು ನೆನಪು ಇರಬಹುದು ಅಥವಾ ಮಹಾ ಕ್ಷತ್ರಿಯದ ಈ ಭೂಮಿ ಬಣ್ಣದ ಬುಗುರಿ ಇರಬಹುದು ಎಲ್ಲವೂ ಒಂದಕ್ಕಿಂತ ಒಂದು ಸುಮಧುರ. ಗಾನ ಪ್ರೇಮಿಗಳಿಗೆ ಮತ್ತೆ ಮತ್ತೆ ಕೇಳಬೇಕೆನ್ನುವ ಅದಮ್ಯ ತವಕ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎಸ್‌ಪಿಬಿ ಅವರ ಮಧುರ ಕಂಠಕ್ಕೆ ಮನಸೋಲದವರೇ ಇಲ್ಲ. ಇವರು ಗಾಯನ ಆರಂಬಿಸಿದಾಗ ಇವರ ವಯಸ್ಸು ಕೇವಲ 17. ಖ್ಯಾತ ಗಾಯಕಿ ಎಸ್.ಜಾನಕಿ ಅವರು ತಾವು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಬಾಲ ಸುಬ್ರಹ್ಮಣಂ ಅವರ ಸಂಗೀತದ ಗಾನ ಸುಧೆ ಕೇಳಿ ಹಾಡಲು ಅವಕಾಶ ನೀಡಿದರು. ಸಿನಿಮಾಗಳಲ್ಲಿ ಹಾಡಲು ಜಾನಕಿ ಅಮ್ಮ ಅವರೇ ಎಸ್‌ಪಿಬಿ ಅವರನ್ನು ಪ್ರೇರೇಪಿಸಿದರು.

ಎಸ್‌ಪಿಬಿ ಅವರದು ಸಂಪ್ರದಾಯಸ್ಥ ಬ್ರಾಹ್ಮಣ ಮೊದಲಿಯಾರ್ ಕುಟುಂಬ. ಇವರ ತಂದೆ ಹರಿಕಥೆ ವಿದ್ವಾಂಸರಾಗಿದ್ದರು. ಇವರು ಹಾಡಿದ ಮೊದಲ ಕನ್ನಡ ಚಿತ್ರ 1967 ರಲ್ಲಿ ತೆರೆ ಕಂಡ ನಕ್ಕರೆ ಅದೇ ಸ್ವರ್ಗ. ಆದರೆ ಆ ಹಾಡು ಪ್ರಖ್ಯಾತಿ ಪಡೆಯಲಿಲ್ಲ. ತರುವಾಯ ದೇವರ ಗುಡಿ ಚಿತ್ರದಲ್ಲಿ ಮಾಮರವೆಲ್ಲೋ ಕೋಗಿಲೆ ಎಲ್ಲೋ ಎಂಬ ಹಾಡು ಹಾಡುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಚಿರಪರಿಚಿತರಾದರು. ಈ ಹಾಡಿನ ಮೂಲಕ ಮೋಡಿ ಮಾಡಿದ ತರುವಾಯ ಎಸ್‌ಪಿಬಿಹಿಂತಿರುಗಿ ನೋಡಲೆ ಇಲ್ಲ. ಒಂದರ ಮೇಲೆ ಒಂದರಂತೆ ಸಾಲು ಸಾಲು ಅವಕಾಶ, ಖ್ಯಾತಿ, ಹಣ ಹುಡುಕಿಕೊಂಡು ಬಂದಿತು. ತೀರಾ ಚಿಕ್ಕ ವಯಸ್ಸಿಗೆ ಎಸ್ ಪಿ ಬಿ ಖ್ಯಾತ ಗಾಯಕರಾದರು.

ಕನ್ನಡದ ಮೊದಲ ರಿಯಾಲಿಟಿ ಶೋ ಈ ಟಿವಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದರು. 2015 ರ ಡಿಸೆಂಬರ್ 24 ರಂದು ಮೂಡಬಿದರೆಗೆ ಬಂದು ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸಿದ ಎಸ್‌ಪಿಬಿ ಮುಂದಿನ ಜನ್ಮ ಇದ್ದರೆ ಕರ್ನಾಟಕದಲ್ಲೇ ಹುಟ್ಟುವುದಾಗಿ ಹೇಳಿದ್ದರು. ಇವರದೊಂದು ಅಧ್ಭುತ ಕಲೆ ಎಂದರೆ ಆಯಾ ನಟರ ಧ್ವನಿಗೆ ಹೊಂದುವಂತೆ ಸ್ವರ ಬದಲಾಯಿಸಿಕೊಂಡು ಹಾಡುವುದು. ಶ್ರೀನಾಥ್ ಅವರ ಅಭಿನಯದ ಹಾಡಿಗೆ ಅವರ ಧ್ವನಿಗೆ ಸರಿಹೊಂದುವಂತೆ, ಅಂಬರೀಶ್ ಗೆ ಅವರ ಧ್ವನಿಗೆ, ವಿಷ್ಣು ವರ್ಧನ್‌ಗೆ ಅವರ ಧ್ವನಿಗೆ ಸೂಕ್ತವಾಗುವಂತೆ ಹಾಡಿರುವುದು ಕಾಣುತ್ತದೆ. ಈ ರೀತಿ ಹಾಡುಗಾರ ಬಹುಶಃ ದೇಶದಲ್ಲೆ ಬೇರೊಬ್ಬರಿಲ್ಲ.

ಕನ್ನಡದ ಮೇರು ನಟ ಡಾ ರಾಜ್ ಅಭಿನಯದ ಎಮ್ಮೆ ತಮ್ಮಣ್ಣ ಚಿತ್ರದ ಹಾಡು ಹಾಡುವ ಮೂಲಕ ಎಸ್‌ಪಿಬಿ ರಾಜ್ ಚಿತ್ರಕ್ಕೆ ಮೊದಲ ಬಾರಿ ಹಾಡಿದರು. ನಂತರ ರಾಜ್ ಚಿತ್ರಗಳಿಗೆ ಅವರೇ ಹಾಡಲು ಪ್ರಾರಂಬಿಸಿದ್ದರಿಂದಾಗಿ ಎಸ್‌ಪಿಬಿ ಅವರ ಚಿತ್ರಗಳಿಗೆ ಹಾಡಲು ಅವಕಾಶ ಆಗಲಿಲ್ಲ. ಆದರೆ ಮತ್ತೊಮ್ಮೆ ರಾಜ್ ಹಾಗೂ ಎಸ್‌ಪಿಬಿ ಮುದ್ದಿನ ಮಾವ ಚಿತ್ರದಲ್ಲಿ ಒಂದಾದರು. ಈ ಚಿತ್ರದ ವಿಶೇಷ ಅಂದರೆ ಎಸ್‌ಪಿಬಿ ಅವರೂ ಕೂಡ ಇದರಲ್ಲಿ ಮುಖ್ಯ ಪಾತ್ರ ಮಾಡಿದ್ದರು. ಅವರ ಪಾತ್ರಕ್ಕೆ ಅವರೇ ಧ್ವನಿ ನೀಡಿದರು. ಅದರಲ್ಲಿ ಒಂದು ಹಾಡಿತ್ತು. ಮಾವ ಎಸ್‌ಪಿಬಿ ಹಾಗೂ ಅಳಿಯ ಶಶಿಕುಮಾರ್ ಹಾಡಬೇಕಿತ್ತು. ಆದರೆ ಖುದ್ದು ಎಸ್‌ಪಿಬಿ ಪಾತ್ರಕ್ಕೆ ಅವರೇ ಹಾಡಿದರೆ ಚೆನ್ನಾಗಿರಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಕೊನೆಗೆ ಶಶಿಕುಮಾರ್ ಮನವೊಲಿಕೆಯಿಂದ ಎಸ್‌ಪಿಬಿ ಹಾಡಿಗೆ ಅಣ್ಣಾವ್ರೇ ಕಂಠ ನೀಡಿದ್ದರು. ಇದರಿಂದ ಎಸ್‌ಪಿಬಿ ಅವರ ಸಂತೋಷ ನೂರು ಪಟ್ಟು ಹೆಚ್ಚಾಗಿತ್ತು. ಅಂಥ ದೊಡ್ಡ ಕಲಾವಿದ, ಅಂಥ ದೊಡ್ಡ ಗಾಯಕ. ಅವರು ನನ್ನ ಹಾಡಿಗೆ ಧ್ವನಿ ನೀಡುತ್ತಾರೆಂದರೆ ಸಣ್ಣ ಮಾತಾ? ಇದು ನನ್ನ ಪೂರ್ವಜನ್ಮದ ಪುಣ್ಯ. ನಿಜಕ್ಕೂ ನಾನು ಧನ್ಯ. ಇಷ್ಟು ವರ್ಷ ಅವರ ಚಿತ್ರಗಳಿಗೆ ಹೆಚ್ಚು ಹಾಡು ಹಾಡಲಿಲ್ಲ ಎನ್ನುವ ಬೇಸರ ಇತ್ತು. ಆದರೆ ಇದೊಂದು ಸಿನಿಮಾದಿಂದ ಅದೆಲ್ಲ ಕೊಚ್ಚಿ ಹೋಯಿತು. ಇದನ್ನು ನಾನು ಇನ್ನೊಂದು ಜನ್ಮ ಎತ್ತಿ ಬಂದರೂ ಮರೆಯಲು ಸಾಧ್ಯವೇ ಇಲ್ಲ ಎಂದು ಎಷ್ಟೋ ವೇದಿಕೆಗಳಲ್ಲಿ ಭಾವುಕರಾಗಿ ಹೇಳಿದ್ದರು.

ಸಂಗೀತ ಕ್ಷೇತ್ರದಲ್ಲಿ ಜನ್ನಮನ್ನಣೆ ಗಳಿಸಿದ್ದ ಎಸ್‌ಪಿಬಿ ಅವರು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದರು. ನಾಲ್ಕು ಭಾಷೆಗಳಲ್ಲಿ ಹಾಡುಗಾರಿಕೆಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಏಕೈಕ ಹಾಡುಗಾರ ಎಂಬ ಹೆಗ್ಗಳಿಕೆ ಎಸ್‌ಪಿಬಿ ಅವರದ್ದಾಗಿದೆ. ಆಂಧ್ರ ಪ್ರದೇಶದ ನಂದಿ ಪ್ರಶಸ್ತಿಯನ್ನು ಸರಣಿಯಲ್ಲಿ 25 ಬಾರಿ ಪಡೆದಿರುವುದು, ಕೇಂದ್ರ ಸರ್ಕಾರ ಪದ್ಮ ಭೂಷಣ, ಪದ್ಮ ವಿಭೂಷಣ ನೀಡಿರುವುದು, ಹಲವು ವಿಶ್ವ ವಿದ್ಯಾನಿಲಯಗಳು ಎಂಟತ್ತು ಗೌರವ ಡಾಕ್ಟರೇಟ್ ನೀಡಿದ್ದರೂ ಎಸ್‌ಪಿಬಿ ಮಾತ್ರ ಸರಳ ಸ್ವಭಾವದ ವ್ಯಕ್ತಿಯಾದರೆ ಹೊರತು ಅದರಿಂದ ಹಮ್ಮು ಬಿಂಬು ತೋರಲಿಲ್ಲ. ಎಸ್‌ಪಿಬಿ ಅವರು ಇಂದು ಇಲ್ಲದಿದ್ದರೂ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾಗಿ ಉಳಿದಿದ್ದಾರೆ.

ಇಳಯರಾಜಾ ಅವರೊಂದಿಗೆ ಎಸ್‌ಪಿಬಿ
ಇಳಯರಾಜಾ ಅವರೊಂದಿಗೆ ಎಸ್‌ಪಿಬಿ

ಮೈಸೂರಿನ ಊಟಿ ರಸ್ತೆಯಲ್ಲಿರುವ ಶ್ರೀ ಸಚ್ಚಿದಾನಂದ ಆಶ್ರಮಕ್ಕೆ ಬಂದ ವೇಳೆ ಡಾ.ಬಾಲಸುಬ್ರಹ್ಮಣ್ಯಂ ಅವರು ಗಿಣಿಗಳೊಡನೆ ಚಿಕ್ಕ ಮಗುವಿನಂತೆ ಬೆರೆತ್ತಿದ್ದರು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರೊಡನೆ ಪಕ್ಷಿವನದಲ್ಲಿ ಸುತ್ತು ಹಾಕಿ ವಿಶಿಷ್ಟ ಅನುಭವ ಪಡೆದಿದ್ದರು. ಎಸ್‌ಪಿಬಿ ಅವರ ಗಾನ ಸುಧೆ ಇಲ್ಲದಿದ್ದರೆ ಮೈಸೂರು ದಸರಾ ಅಪೂರ್ಣ ಎಂಬಂತಿತ್ತು. ಎಸ್‌ಪಿಬಿ‌ ಅವರ ಹಾಡುಗಳ ಕಾರ್ಯಕ್ರಮವಿದೆ ಅಂದ್ರೆ ಸಹಸ್ರಾರು ಜನರು ಸೇರಿದ್ದರು. ಈ ಮೂಲಕ ಎಸ್‌ಪಿಬಿ ಅವರಿಗೂ ಮೈಸೂರಿಗೂ ಅವಿನಾಭಾವ ನಂಟಿತ್ತು.

ಗಾನಗಾರುಡಿಗನ ನಿಧನಕ್ಕೆ ದೇಶದ ಗಣ್ಯಾತಿ ಗಣ್ಯರು ಸಂತಾಪ ಸೂಚಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆಕಸ್ಮಿಕ ನಿಧನದಿಂದಾಗಿ ನಮ್ಮ ಸಾಂಸ್ಕೃತಿಕ ಲೋಕ ತುಂಬಾ ಬಡವಾಗಿದೆ. ಭಾರತದಾದ್ಯಂತ ಪ್ರತಿ ಮನೆಯಲ್ಲಿಯೂ ಅವರ ಹೆಸರು, ಸುಮಧುರ ಧ್ವನಿ ಹಾಗೂ ಸಂಗೀತ ದಶಕಗಳಿಂದ ಪ್ರೇಕ್ಷರನ್ನು ಮೋಡಿ ಮಾಡಿತ್ತು. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ನನ್ನ ಸಂದೇಶವಿದೆ. ಓಂ ಶಾಂತಿ ಎಂದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಜಯಲಲಿತಾ ಅವರಿಂದ ನಂದಿ ಪ್ರಶಸ್ತಿ ಸ್ವೀಕರಿಸುತ್ತಿರುವ ಎಸ್‌ಪಿಬಿ
ಜಯಲಲಿತಾ ಅವರಿಂದ ನಂದಿ ಪ್ರಶಸ್ತಿ ಸ್ವೀಕರಿಸುತ್ತಿರುವ ಎಸ್‌ಪಿಬಿ

ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಸಹ ಟ್ವೀಟ್ ಮಾಡಿದ್ದು, ಸಂಗೀತ ದಂತಕಥೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅತ್ಯಂತ ಸುಮಧುರ ಧ್ವನಿಯನ್ನು ಕಳೆದುಕೊಂಡಿದ್ದೇವೆ. ಸಹಸ್ರ ಅಭಿಮಾನಿಗಳು ಅವರನ್ನು ‘ಹಾಡುವ ಚಂದ್ರ’ ಎಂದೇ ಕರೆಯುತ್ತಿದ್ದರು. ಪದ್ಮ ಭೂಷಣ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಲೆಜೆಂಡರಿ ಸಂಗೀತಗಾರ ಹಾಗೂ ಹಿನ್ನೆಲೆ ಗಾಯಕ ಪದ್ಮ ಭೂಷಣ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಾವು ತುಂಬಾ ನೋವುಂಟು ಮಾಡಿದೆ. ಸುಮಧುರ ಧ್ವನಿ, ಸಾಟಿಯಿಲ್ಲದ ಸಂಗೀತ ಸಂಯೋಜನೆಗಳ ಮೂಲಕ ಅವರು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತಾರೆ. ಅವರ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ. ಹೀಗೆ ಹಲವು ಗಣ್ಯರು ಎಸ್‌ಪಿಬಿ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಅವರ ಸಂಗೀತ, ಅವರೊಟ್ಟಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ.

ಈಗ ಆಸ್ಪತ್ರೆಗೆ ದಾಖಲಾಗಿರುವ ವೇಳೆ ತಮಿಳುನಾಡು ಸರ್ಕಾರ ಚಿಕಿತ್ಸಾ ವೆಚ್ಚ ನೀಡಲು ಮುಂದೆ ಬಂದರೂ ಆ ಸೌಲಭ್ಯ ಪಡೆಯದೆ ಅವರ ಖರ್ಚಿನಲ್ಲೆ ಚಿಕಿತ್ಸೆ ಪಡೆದು ಅಮರರಾದರು. ಮೂಡಬಿದರೆಯಲ್ಲಿ ನೀವೇ ಹೇಳಿದಂತೆ ʼಕರ್ನಾಟಕದಲ್ಲಿ ಮತ್ತೆ ಹುಟ್ಟಿ ಬನ್ನಿ ಸರ್ʼ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com