ವೆಂಟಿಲೇಟರ್‌ ತಯಾರಿಕೆಯ ಅನುಭವವೇ ಇಲ್ಲದ ಕಂಪೆನಿಗೆ 373 ಕೋಟಿಗಳ ಟೆಂಡರ್‌ ನೀಡಿದ ಕೇಂದ್ರ

ಪ್ರಸಕ್ತ ಸಮಯದಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಯಾವುದೇ ವೆಂಟಿಲೇಟರ್‌ಗಳನ್ನು ಈ ಕಂಪೆನಿ ತಯಾರಿಸದ ಕಾರಣ, ಇತರ ಕಂಪೆನಿಗಳು ತಮ್ಮ ಟೆಂಡರ್‌ನಲ್ಲಿ ದಾಖಲಿಸಿದ್ದ ಮೊತ್ತವನ್ನು ಅವಲಂಬಿಸಿ ತಮ್ಮ ಟೆಂಡರ್‌ ನೀಡಿದ್ದಾರೆ
ವೆಂಟಿಲೇಟರ್‌ ತಯಾರಿಕೆಯ ಅನುಭವವೇ ಇಲ್ಲದ ಕಂಪೆನಿಗೆ 373 ಕೋಟಿಗಳ ಟೆಂಡರ್‌ ನೀಡಿದ ಕೇಂದ್ರ

ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಒಂದೊಂದೇ ಯೋಜನೆಗಳು ಹಳ್ಳ ಹಿಡಿಯುತ್ತಿವೆ. PM CARES Fund ಮೇಕ್‌ ಇನ್‌ ಇಂಡಿಯಾ ಮತ್ತು ಆತ್ಮ ನಿರ್ಭರ್‌ ಹೆಸರಿನಲ್ಲಿ, ಭಾರತದಲ್ಲೇ ವೆಂಟಿಲೇಟರ್‌ ತಯಾರಿಕೆಗೆ ಮುಂದಾಗಿದ್ದ ಕೇಂದ್ರ ಸರ್ಕಾರ ತನ್ನದೇ ಎಡವಟ್ಟುಗಳಿಂದ ಕೈಸುಟ್ಟುಕೊಳ್ಳುತ್ತಿದೆ. ಈ ಹಿಂದೆಯೂ ವೆಂಟಿಲೇಟರ್‌ ಖರೀದಿಸಲು ಹಾಗೂ ತಯಾರಿಸಲು ನೀಡಿದ ಆದೇಶಗಳು ಸರ್ಕಾರಕ್ಕೇ ತಿರುಗುಬಾಣವಾಗಿವೆ. ಈಗಲೂ ಇಂತಹುದೇ ಒಂದು ಕಾರಣಕ್ಕಾಗಿ ಕೇಂದ್ರ ಸುದ್ದಿಯಲ್ಲಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಏಪ್ರಿಲ್‌ ತಿಂಗಳಲ್ಲಿ ಟ್ರಿವಿಟ್ರೋನ್‌ ಹೆಲ್ತ್‌ಕೇರ್‌ ಎಂಬ ಸಂಸ್ಥೆಗೆ ಸುಮಾರು ರೂ. 373 ಕೋಟಿ ಮೊತ್ತದ ವೆಂಟಿಲೇಟರ್‌ಗಳಿಗೆ ಕೇಂದ್ರ ಬೇಡಿಕೆಯಿಟ್ಟಿತ್ತು. ಈ ಸಂಸ್ಥೆಗೆ ಸುಮಾರು 23 ವರ್ಷಗಳ ಅನುಭವ ಆರೋಗ್ಯ ಕ್ಷೇತ್ರದಲ್ಲಿ ಇದ್ದರೂ, ಸದ್ಯಕ್ಕೆ, ಉಪಯೋಗದಲ್ಲಿ ಇರುವಂತಹ ಯಾವುದೇ ಪರಿಕರಗಳನ್ನು ಈ ಕಂಪೆನಿ ಹೊಂದದೇ ಇದ್ದರೂ, ಅಷ್ಟು ದೊಡ್ಡ ಮೊತ್ತದ ಆರ್ಡರ್‌ಅನ್ನು ಹೇಗೆ ನೀಡಲಾಯಿತು ಎಂಬ ಪ್ರಶ್ನೆ ಈಗ ಮೂಡಿದೆ.

ಆರ್‌ಟಿಐ ಕಾರ್ಯಕರ್ತ ವೆಂಕಟೇಶ್‌ ನಾಯಕ್‌ ಅವರ RTIಗೆ ನೀಡಿರುವ ಉತ್ತರದಲ್ಲಿ ಟ್ರಿವಿಟ್ರೋನ್‌ ಹೆಲ್ತ್‌ಕೇರ್‌ನ ʼಅಡ್ವಾನ್ಸ್‌ಡ್‌ʼ ವೆಂಟಿಲೇಟರ್‌ ಒಂದಕ್ಕೆ ರೂ. 8,56,800ರಂತೆ 3000 ವೆಂಟಿಲೇಟರ್‌ಗಳ ಹಾಗೂ ಸಾಧಾರಣ ವೆಂಟಿಲೇಟರ್‌ ಒಂದಕ್ಕೆ ರೂ. 1,66,376ರಂತೆ 7000 ವೆಂಟಿಲೇಟರ್‌ಗಳಿಗೆ ಬೇಡಿಕೆ ಇಡಲಾಗಿದೆ. ಇವುಗಳಿಗೆ ಪಿಎಂ ಕೇರ್ಸ್‌ ನಿಧಿಯ ಹಣವನ್ನು ಬಳಕೆ ಮಾಡಲಾಗಿದೆ.

ಪ್ರಸಕ್ತ ಸಮಯದಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಯಾವುದೇ ವೆಂಟಿಲೇಟರ್‌ಗಳನ್ನು ಈ ಕಂಪೆನಿ ತಯಾರಿಸದ ಕಾರಣ, ಇತರ ಕಂಪೆನಿಗಳು ತಮ್ಮ ಟೆಂಡರ್‌ನಲ್ಲಿ ದಾಖಲಿಸಿದ್ದ ಮೊತ್ತವನ್ನು ಅವಲಂಬಿಸಿ ತಮ್ಮ ಟೆಂಡರ್‌ ನೀಡಿದ್ದಾರೆ. ಬೇಸಿಕ್‌ ಮಾಡೆಲ್‌ನ ವೆಂಟಿಲೇಟರ್‌ ಒಂದರ ಮೊತ್ತವು AgVa ಎಂಬ ಕಂಪೆನಿ ನೀಡಿದ್ದ ಟೆಂಡರ್‌ನೊಂದಿಗೆ ಹೋಲಿಕೆಯಾಗುತ್ತಿದೆ. ಅಡ್ವಾನ್ಸ್‌ಡ್‌ ಮಾಡೆಲ್‌ನ ಒಂದು ವೆಂಟಿಲೇಟರ್‌ನ ಮೊತ್ತವು ಇತರರ ಮೊತ್ತಕ್ಕಿಂತ ಕೇವಲ ರೂ. 5,600ರಷ್ಟು ಮಾತ್ರ ಕಡಿಮೆಯಿದೆ.

ಇದಾವುದನ್ನೂ ಪರೀಕ್ಷಿಸಲು ಹೋಗದ ಸರ್ಕಾರ ಕಣ್ಣು ಮುಚ್ಚಿ ಯಾವುದೇ ಅನುಭವವಿಲ್ಲದ ಕಂಪೆನಿಗೆ ಟೆಂಡರ್‌ ನೀಡಿ ಕೈತೊಳೆದುಕೊಂಡಿದೆ. ಇದರಲ್ಲೂ, ಟ್ರಿವಿಟ್ರೋನ್‌ ಹೆಲ್ತ್‌ಕೇರ್‌ಗೆ ನೇರವಾಗಿ ಟೆಂಡರ್‌ ನೀಡದೇ, ಆಂಧ್ರಪ್ರದೇಶ ಮೂಲದ AMTZಗೆ ಟೆಂಡರ್‌ ನೀಡಲಾಗಿತ್ತು. 13,500 ವೆಂಟಿಲೇಟರ್‌ಗಳನ್ನು ತಯಾರಿಸಲು ಟೆಂಡರ್‌ ಪಡೆದಿದ್ದ AMTZ, ಅದರಲ್ಲಿ 10,000 ವೆಂಟಿಲೇಟರ್‌ಗಳನ್ನು ಟ್ರಿವಿಟ್ರೋನ್‌ ಹೆಲ್ತ್‌ಕೇರ್‌ಗೆ ತಯಾರಿಸಲು ಬೇಡಿಕೆಯಿಟ್ಟಿತ್ತು.

ಈವರೆಗೆ ವೆಂಟಿಲೇಟರ್‌ ತಯಾರಿಸದೇ ಇರುವಂತಹ ಹಾಗೂ ಅವುಗಳನ್ನು ತಯಾರಿಸಲು ಬೇಕಾದ ಉಪಕರಣಗಳೇ ಇಲ್ಲದಂತಹ ಕಂಪೆನಿಯೊಂದಕ್ಕೆ ಇಷ್ಟು ದೊಡ್ಡ ಮಟ್ಟದ ಟೆಂಡರ್‌ ಕೈಸೇರಿದ್ದು, ಪಿಎಂ ಕೇರ್ಸ್‌ ನಿಧಿಯ ಪಾರದರ್ಶಕತೆಯ ಬಗ್ಗೆ ಇರುವಂತಹ ಪ್ರಶ್ನೆಗಳಲ್ಲಿ ಒಂದಾಗಿ ಕಾಣುತ್ತದೆ. ವೆಂಟಿಲೇಟರ್‌ಗಳ ಬೇಡಿಕೆ ಹೆಚ್ಚಾದಾಗ ಒಂದರ ಮೇಲೊಂದರಂತೆ ಕೇಂದ್ರ ಸರ್ಕಾರ ಮಾಡಿದಂತಹ ಎಡವಟ್ಟುಗಳು ದೇಶದ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ರೋಗಗ್ರಸ್ಥವಾಗಿಸುತ್ತಿರುವುದರಲ್ಲಿ ಅನುಮಾನವಿಲ್ಲ.


ಕೃಪೆ: huffingtonpost

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com