ಕೃಷಿ ಮಸೂದೆಗೆ ಮೋದಿ ಧಾವಂತ ಮತ್ತು ಕೃಷಿ ಹೂಡಿಕೆಗೆ ಅಂಬಾನಿ ಆತುರ!

ಒಂದು ಕಡೆ ಸಂಸತ್ತಿನ ಒಳಗೆ ಸರ್ಕಾರದ ಸರ್ವಾಧಿಕಾರಿ, ಯಾರ ಕೂಗು, ಆಗ್ರಹಕ್ಕೂ ಬಗ್ಗದ, ಜಗ್ಗದ ಆತುರ; ಮತ್ತೊಂದು ತುದಿಯಲ್ಲಿ ಸಾವಿರಾರು ಕೋಟಿ ಹೂಡಿಕೆಯೊಂದಿಗೆ ಕೃಷಿ ವಲಯಕ್ಕೆ ಲಗ್ಗೆ ಇಡಲು ತುದಿಗಾಲಲ್ಲಿ ನಿಂತಿರುವ ಪ್ರಧಾನಿಯ ಮೋದಿ ಅವರ ಆಪ್ತ ಉದ ...
ಕೃಷಿ ಮಸೂದೆಗೆ ಮೋದಿ ಧಾವಂತ ಮತ್ತು ಕೃಷಿ ಹೂಡಿಕೆಗೆ ಅಂಬಾನಿ ಆತುರ!

ಒಂದು ಕಡೆ ಯಾವ ಕಾಯ್ದೆ-ಕಾನೂನುಗಳಿಂದ ಯಾರಿಗೆ ಲಾಭ, ಅನುಕೂಲ ಎಂದು ಸರ್ಕಾರ ಹೇಳುತ್ತಿದ್ದೆಯೋ ಆ ಜನರೇ, ಆ ಜನರ ಸಂಘಟನೆಗಳೇ ನಿರಂತರ ಹೋರಾಟ, ಪ್ರತಿಭಟನೆಗಳು ಮೂಲಕ ಸರ್ಕಾರದ ಹೊಸ ಮಸೂದೆ-ಕಾಯ್ದೆಗಳನ್ನು ಸಾರಾಸಗಟಾಗಿ ವಿರೋಧಿಸುತ್ತಿದ್ದಾರೆ. ಮತ್ತೊಂದು ಕಡೆ ಜಾರಿಗೆ ತರಲು ಹೊರಟಿರುವ ಆ ಕಾಯ್ದೆ-ಕಾನೂನುಗಳಿಂದ ಯಾರಿಗೆ ಲಾಭವಿಲ್ಲ, ಅನುಕೂಲವಿಲ್ಲ ಎನ್ನಲಾಗುತ್ತಿದೆಯೋ ಆ ಮಂದಿ ಹೊಸಹೊಸ ಉದ್ಯಮ ಯೋಜನೆಗಳ ಮೂಲಕ ಆ ಮಸೂದೆ-ಕಾಯ್ದೆಗಳ ಲಾಭ ಬಾಚಲು ಸಜ್ಜಾಗುತ್ತಿದ್ದಾರೆ!

ಇದು ಸದ್ಯ ದೇಶಾದ್ಯಂತ ರೈತ ಸಮುದಾಯ ಮತ್ತು ಸಂಘಟನೆಗಳ ಭಾರೀ ಪ್ರತಿಭಟನೆಗೆ ಕಾರಣವಾಗಿರುವ ನರೇಂದ್ರ ಮೋದಿಯವರ ಸರ್ಕಾರದ ವಿವಾದಿತ ಮೂರು ಕೃಷಿ ಮಸೂದೆಗಳ ವಿಪರ್ಯಾಸ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತಿ ಪಕ್ಷಗಳ ಭಾರೀ ವಿರೋಧ ಮತ್ತು ಮಸೂದೆ ಅಂಗೀಕಾರ ತಡೆಯುವ ಯತ್ನಗಳ ಹೊರತಾಗಿಯೂ ತನ್ನದೇ ಎಂದಿನ ವಾಮಮಾರ್ಗಗಳ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ವಾಣಿಜ್ಯ(ಉತ್ತೇಜನ ಮತ್ತು ನೆರವು) ಮಸೂದೆ, ಬೆಲೆ ಖಾತರಿ ಮತ್ತು ಕೃಷಿ ಸೇವಾ ಒಪ್ಪಂದ (ಸಶಕ್ತೀಕರಣ ಮತ್ತು ರಕ್ಷಣೆ) ಮಸೂದೆ ಮತ್ತು ಅಗತ್ಯಸೇವೆಗಳ (ತಿದ್ದುಪಡಿ) ಮಸೂದೆಗಳಿಗೆ ಸಂಸತ್ ಉಭಯ ಸದನಗಳ ಒಪ್ಪಿಗೆ ಪಡೆಯುವಲ್ಲಿ ಸಫಲವಾಗಿರುವ ಬಿಜೆಪಿ ಸರ್ಕಾರ, ಇದೀಗ ರಾಷ್ಟ್ರಪತಿಗಳ ಅಂಕಿತಕ್ಕೆ ಕಳಿಸಿದೆ. ನಿರೀಕ್ಷೆಯಂತೆ ರಾಷ್ಟ್ರಪತಿಗಳು ಆಳುವ ಪಕ್ಷದ ಮಸೂದೆಗಳನ್ನು ಜನಪರತೆ ಮತ್ತು ಜನಹಿತವನ್ನು ಎತ್ತಿಹಿಡಿದು ವಾಪಸು ಕಳಿಸುವ ಛಾತಿ ತೋರಿಸಲಾರರು. ಹಾಗಾಗಿ ಕಾಯ್ದೆಯಾಗಿ ಜಾರಿಗೆ ಬರುವುದು ಬಹುತೇಕ ಖಚಿತ.

ಸಂಸತ್ತಿನ ಒಳಗೆ ಈ ಮೂರೂ ಕೃಷಿ ಮಸೂದೆಗಳ ಕುರಿತ ಬೆಳವಣಿಗೆಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ಪ್ರತಿಪಕ್ಷಗಳು ಮತ್ತು ವಿವಿದ ರೈತ ಸಂಘಟನೆಗಳು ದೇಶಾದ್ಯಂತ ಈ ಮಸೂದೆಗಳನ್ನು ವಿರೋಧಿಸಿ ಬೀದಿ ಹೋರಾಟ ನಡೆಸುತ್ತಿವೆ. ಸ್ವತಃ ಬಿಜೆಪಿಯ ಸಂಘಪರಿವಾದ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ಕೂಡ ಈ ಮೂರೂ ಮಸೂದೆಗಳನ್ನು ಸ್ಪಷ್ಟವಾಗಿ ವಿರೋಧಿಸಿದೆ.

ಆದಾಗ್ಯೂ ಸರ್ಕಾರ ಮತ್ತು ಪ್ರಧಾನಿ ಮೋದಿ ಈ ಮಸೂದೆಗಳು ದೇಶದ ರೈತರ ಪಾಲಿನ ಗೇಮ್ ಚೇಂಜರ್ ಗಳು ಎಂದೇ ಹೇಳುತ್ತಿದ್ದಾರೆ. ಎಂಎಸ್ ಪಿ(ಕನಿಷ್ಟ ಬೆಂಬಲ ಬೆಲೆ) ಗೆ ಈ ಮಸೂದೆಗಳಿಂದ ಯಾವುದೇ ಧಕ್ಕೆ ಇಲ್ಲ; ಆ ವ್ಯವಸ್ಥೆ ಮುಂದುವರಿಯುತ್ತದೆ ಎಂದಿದ್ದಾರೆ. ಆದರೆ, ಎಪಿಎಂಸಿ ರಹಿತ ಕೃಷಿ ವಲಯದಲ್ಲಿ ಬೃಹತ್ ಉದ್ಯಮಿಗಳ ಏಕಸ್ವಾಮ್ಯದ ಬಗ್ಗೆ, ಅದರಿಂದಾಗಿ ಭವಿಷ್ಯದಲ್ಲಿ ಕೃಷಿಕರು ಕಾರ್ಪೊರೇಟ್ ಕಂಪನಿಗಳ ಅಡಿಯಾಳಾಗುವ ಬಗ್ಗೆ ಕೇಳಲಾಗುತ್ತಿರುವ ಪ್ರಶ್ನೆಗಳಿಗೆ ಪ್ರಧಾನಿಯಾಗಲೀ, ಅವರ ಸರ್ಕಾರವಾಗಲೀ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ!

ಅದೇ ಹೊತ್ತಿಗೆ ಮತ್ತೊಂದು ಕಡೆ ಯಾವ ಬೃಹತ್ ಕಂಪನಿಗಳು ಕೃಷಿ ಉತ್ಪನ್ನ ಖರೀದಿ ಮತ್ತು ಬೆಳೆ ನಿರ್ಧಾರದ ವಿಷಯದಲ್ಲಿ ರೈತರ ಮೇಲೆ ಸವಾರಿ ಮಾಡಲಿವೆ. ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಲೆ ಮತ್ತು ಗುಣಮಟ್ಟ ಖಾತರಿ ವಿಷಯದಲ್ಲಿ ಸರ್ಕಾರದ ಮಧ್ಯಪ್ರವೇಶ ಎಂಬ ಊರುಗೋಲನ್ನು ಕಿತ್ತುಕೊಳ್ಳಲಿವೆ ಎಂಬ ಆತಂಕ ವ್ಯಕ್ತಪಡಿಸಲಾಗುತ್ತಿದೆಯೋ, ಅದೇ ಕಾರ್ಪೊರೇಟ್ ಕಂಪನಿಗಳು ಈಗಾಗಲೇ ಕೃಷಿ ವಲಯದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮತ್ತು ವ್ಯವಹಾರಕ್ಕೆ ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಳ್ಳತೊಡಗಿವೆ. ಆ ಮೂಲಕ ರೈತರ ಮತ್ತು ರೈತರ ಪರ ರಾಜಕೀಯ ಪಕ್ಷಗಳ ಆತಂಕ ನಿಜ ಎಂಬುದನ್ನು ಸಾಬೀತುಮಾಡುತ್ತಿವೆ.

ಮುಖ್ಯವಾಗಿ ದೇಶದ ಕೃಷಿ ವಲಯದಲ್ಲಿ ಬೃಹತ್ ಉದ್ಯಮಿಗಳು, ಬಂಡವಾಳಶಾಹಿ ಕಾರ್ಪೊರೇಟ್ ಶಕ್ತಿಗಳು ಹೂಡಿಕೆ ಮಾಡಲು, ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಮೂಲಕ ಅತ್ತ ಕೃಷಿಕರನ್ನೂ, ಇತ್ತ ಆಹಾರೋತ್ಪನ್ನ ಗ್ರಾಹಕರನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಳ್ಳಲು ಮತ್ತು ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಬೆಂಬಲ ಬೆಲೆ, ಬೀಜ-ಗೊಬ್ಬರ ಸಬ್ಸಿಡಿ, ಬೆಳೆ ಪರಿಹಾರ ಮುಂತಾದ ಕೃಷಿ ಸಂಬಂಧಿತ ವಿವಿಧ ಸರ್ಕಾರಿ ಬೆಂಬಲ ವ್ಯವಸ್ಥೆಯನ್ನು ಹಂತಹಂತವಾಗಿ ತೆಗೆದುಹಾಕಲು ಮತ್ತು ಅಗತ್ಯ ವಸ್ತು ಬೆಲೆ ನಿಯಂತ್ರಣ, ಕಾಳ ಸಂತೆಗೆ ಕಡಿವಾಣ ಮುಂತಾದ ಗ್ರಾಹಕ ಹಿತ ಕಾಯುವ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳಲು ಈ ಕಾಯ್ದೆಗಳು ಕಾನೂನು ಬಲ ಕೊಡುತ್ತದೆ ಎಂಬುದು ಮಸೂದೆಗಳ ಬಗ್ಗೆ ಕೇಳಿಬರುತ್ತಿರುವ ಆತಂಕ.

ಆ ಆತಂಕ ನಿಜ ಮಾಡುವಂತೆ, ಈಗಾಗಲೇ ಪ್ರಧಾನಿ ಮೋದಿಯವರ ಪರಮಾಪ್ತ ಇಬ್ಬರು ಕಾರ್ಪೊರೇಟ್ ಉದ್ಯಮಪತಿಗಳ ಪೈಕಿ ಒಬ್ಬರಾದ ಮುಖೇಶ್ ಅಂಬಾನಿ ಅವರ ಜಿಯೋ ಮಾರ್ಟ್ ಮತ್ತು ರಿಲೆಯನ್ಸ್ ಫ್ರೆಶ್ ಹೊಸ ತಯಾರಿಯೊಂದಿಗೆ ದೇಶದ ಕೃಷಿ ಉತ್ಪನ್ನ ಖರೀದಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಲು ಸಜ್ಜಾಗಿವೆ. ರೈತರ ಹೊಲದಲ್ಲಿ ಯಾವ ಬೆಳೆಯನ್ನು ಯಾವ ಹಂಗಾಮಿನಲ್ಲಿ ಬಿತ್ತನೆ ಮಾಡಬೇಕು, ಯಾವ ಹಂಗಾಮಿನಲ್ಲಿ ಹರತೆ ಹೊಡೆಯಬೇಕು, ಕಳೆ ಯಾವಾಗ ಕೀಳಬೇಕು, ಕಟಾವು ಮಾಡಿ ಚೀಲಕ್ಕೆ ತುಂಬುದು ಯಾವಾಗ, ಮಳೆ ಮುನ್ಸೂಚನೆ, ಬಿರುಗಾಳಿ, ಚಂಟಮಾರುತ ಮುನ್ಸೂಚನೆ ಸೇರಿದಂತೆ ಹೊಲ ಹಸನು ಮತ್ತು ಬೆಳೆ ನಿರ್ವಹಣೆಯ ಮಾಹಿತಿಯನ್ನು ಪ್ರತಿ ರೈತರಿಗೆ ಪ್ರತ್ಯೇಕವಾಗಿ ಮಾಹಿತಿ ನೀಡುವ ವ್ಯವಸ್ಥೆಯನ್ನು ರಿಲೆಯನ್ಸ್ ಜಿಯೋ-ಕೃಷಿ ಆ್ಯಪ್ ಮೂಲಕ ಮಾಡಲು ಸಜ್ಜಾಗಿದೆ.

ಅಷ್ಟೇ ಅಲ್ಲ; ರೈತನ ಹೊಲದಿಂದ ನೇರವಾಗಿ ಕೃಷಿ ಉತ್ಪನ್ನ ಖರೀದಿಸಿ, ಅದನ್ನು ತನ್ನದೇ ರಿಲೆಯನ್ಸ್ ಫ್ರೆಶ್ ಮತ್ತು ಜಿಯೋಮಾರ್ಟ್ ಹಾಗೂ ಇತರೆ ಮನೆಮನೆಗೆ ದಿನಸಿ ಸರಬರಾಜು ಆನ್ಲೈನ್ ವಹಿವಾಟು ವ್ಯವಸ್ಥೆಗಳಾದ ಸ್ವಿಗ್ಗಿ, ಫ್ಲಿಪ್ ಕಾರ್ಟ್, ಡಂಜೊಗಳ ಮೂಲಕ ಮನೆಮನೆಗೆ ವಿಲೇ ಮಾಡುವ ನಿಟ್ಟಿನಲ್ಲಿಯೂ ಈಗಾಗಲೇ ಸಂಬಂಧಿತ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿಯೇ ಅಧಿಕೃತವಾಗಿ ಹೇಳಿದೆ ಎಂದು ‘ಬ್ಯುಸಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆಯ ವರದಿ ಹೇಳಿದೆ. ಜೊತೆಗೆ ವಾಟ್ಸಪ್ ಮೂಲಕ ರೈತರಿಗೆ ವೈಯಕ್ತಿಕವಾಗಿ ಮಾಹಿತಿ ರವಾನೆಯೊಂದಿಗೆ, ಈಗಾಗಲೇ ಆರ್ ಬಿಐ ಅನುಮತಿ ಎದುರು ನೋಡುತ್ತಿರುವ ‘ವಾಟ್ಸಪ್ ಆನ್ ಲೈನ್ ಹಣ ವರ್ಗಾವಣೆ’ ವ್ಯವಸ್ಥೆಯ ಮೂಲಕ ರೈತರೊಂದಿಗೆ ಹಣಕಾಸು ವಹಿವಾಟು ನಡೆಸಲು ಕೂಡ ರಿಲೆಯನ್ಸ್ ತಯಾರಾಗಿದೆ.

ಜಿಯೋ ಕೃಷಿ ಆ್ಯಪ್ ಈಗಾಗಲೇ ಲಾಂಚ್ ಆಗಿದ್ದು, ಸದ್ಯ ಪ್ರಾಯೋಗಿಕ ಬೇಟಾ ಮೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ದೇಶದ ತರಕಾರಿ ಮತ್ತು ಹಣ್ಣು ಮಾರುಕಟ್ಟೆಗೆ ಅಗತ್ಯವಿರುವ ಶೇ.50ರಷ್ಟು ಸರಕನ್ನು ನೇರವಾಗಿ ರೈತರಿಂದ ಖರೀದಿಸಿ ಕೇವಲ 12 ತಾಸಲ್ಲಿ ರೈತನ ಹೊಲದಿಂದ ಬಳಕೆದಾರನ ಡೈನಿಂಗ್ ಟೇಬಲ್ಲಿಗೆ ತಲುಪಿಸುವ ಮಟ್ಟಿಗೆ ತನ್ನ ಯೋಜನೆ ಸಿದ್ಧತೆ ಮಾಡಿಕೊಂಡಿದೆ ಎಂದು ರಿಲೆಯನ್ಸ್ ಹೇಳಿರುವುದಾಗಿ ಪತ್ರಿಕೆ ಉಲ್ಲೇಖಿಸಿದೆ. ಕಂಪನಿ ಸದ್ಯ ಮಾಡಿಕೊಂಡಿರುವ ಸಿದ್ಧತೆಯ ಹಿನ್ನೆಲೆಯಲ್ಲಿ ನೋಡಿದರೆ, ಈವರೆಗೆ ಅಗ್ರಿಟೆಕ್ ವಲಯದಲ್ಲಿ ಇಲ್ಲದೇ ಇರುವ ರಿಲೆಯನ್ಸ್, ತನ್ನ ಪಾದಾರ್ಪಣೆಯೊಂದಿಗೆ ದೊಡ್ಡ ಬದಲಾವಣೆಗೆ ಕಾರಣವಾಗಲಿದ್ದು, ಈವರೆಗೆ ಈ ವಲಯದಲ್ಲಿ ಇರುವ ಇತರ ಕಂಪನಿಗಳೆಲ್ಲವುಗಳ ಒಟ್ಟು ಮಾರುಕಟ್ಟೆ ಪಾಲು ರಿಲೆಯನ್ಸ್ ಗೆ ಹೋಲಿಸಿದರೆ ಕೇವಲ ಶೇ.10ರಷ್ಟು ಮಾತ್ರ ಎನ್ನಲಾಗಿದೆ. ಅಂದರೆ, ಹಾಲಿ ಕೃಷಿ ಮಾರುಕಟ್ಟೆ ಮತ್ತು ತಾಂತ್ರಿಕತೆ ವಲಯದಲ್ಲಿ ಇರುವ ಒಟ್ಟೂ ಖಾಸಗೀ ಹೂಡಿಕೆಯ 90 ಪಟ್ಟು ಅಧಿಕ ಹೂಡಿಕೆಯೊಂದಿಗೆ ರಿಲೆಯನ್ಸ್ ಈ ರಂಗಕ್ಕೆ ಪ್ರವೇಶಪಡೆಯುತ್ತಿದೆ!

ತೀರಾ ಲಾಕ್ ಡೌನ್ ಅವಧಿಯಲ್ಲಿ; ಸಂಬಂಧಪಟ್ಟ ರೈತರೊಂದಿಗಾಗಲೀ, ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗಾಗಲೀ, ರೈತರ ಪರ ರಾಜಕೀಯ ಮುಖಂಡರೊಂದಿಗಾಗಲೀ ಯಾವುದೇ ಸಮಾಲೋಚನೆ ನಡೆಸದೆ, ಅವರ ಆಕ್ಷೇಪ, ಆತಂಕಗಳಿಗೆ ಕಿವಿಯೊಡ್ಡದೆ ಏಕಪಕ್ಷೀಯವಾಗಿ ಜಿದ್ದಿಗೆ ಬಿದ್ದು ಈ ಮೂರು ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದದ್ದು ಮತ್ತು ಆ ಬಳಿಕ ಈಗ ಪ್ರಬಲ ಪ್ರತಿರೋಧದ ನಡುವೆಯೂ ಪ್ರತಿಭಟಸಿದ ಸಂಸದರನ್ನು ಉಚ್ಛಾಟಿಸಿ ಮಸೂದೆಗೆ ವಾಮಮಾರ್ಗದಲ್ಲಿ ಅನುಮೋದನೆ ಪಡೆದಿರುವುದರ ಹಿಂದೆ ಇರುವ ಒತ್ತಾಸೆ ಮತ್ತು ಒತ್ತಡ ಯಾವುದು ಎಂಬುದು ಅರ್ಥವಾಗುವುದು ಕಷ್ಟವೇನಲ್ಲ. ಒಂದು ಕಡೆ ಸಂಸತ್ತಿನ ಒಳಗೆ ಸರ್ಕಾರದ ಸರ್ವಾಧಿಕಾರಿ, ಯಾರ ಕೂಗು, ಆಗ್ರಹಕ್ಕೂ ಬಗ್ಗದ, ಜಗ್ಗದ ಆತುರ; ಮತ್ತೊಂದು ತುದಿಯಲ್ಲಿ ಸಾವಿರಾರು ಕೋಟಿ ಹೂಡಿಕೆಯೊಂದಿಗೆ ಕೃಷಿ ವಲಯಕ್ಕೆ ಲಗ್ಗೆ ಇಡಲು ತುದಿಗಾಲಲ್ಲಿ ನಿಂತಿರುವ ಪ್ರಧಾನಿಯ ಮೋದಿ ಅವರ ಆಪ್ತ ಉದ್ಯಮಿ! ಈ ಎರಡು ತುದಿಗಳನ್ನು ಬೆಸೆದರೆ, ಎರಡು ಬಿಂದುಗಳನ್ನು ಕೂಡಿಸಿದರೆ, ಚಿತ್ರಣ ನಿಚ್ಛಳ!

ಸ್ವತಃ ಕಾನೂನು ತಿದ್ದುವ, ಅಥವಾ ವಾಪಸು ಮಾಡುವ ಅಧಿಕಾರವಿಲ್ಲದ ಜನಸಾಮಾನ್ಯರು ಮತ್ತು ರೈತರಿಗೆ ತಮ್ಮ ಹಿತಕ್ಕೆ ವಿರುದ್ಧವಾದ ಕಾಯ್ದೆ-ಕಾನೂನುಗಳನ್ನು, ತಾವೇ ಆರಿಸಿ ಕಳಿಸಿದ ಸರ್ಕಾರಗಳು ಜಾರಿಗೆ ತರಲು ಹೊರಟಾಗ, ಮನವಿ, ಕೋರಿಕೆ, ಮನವರಿಕೆಗಳಿಗೆ ಕಿವಿಗೊಡದ, ಸೊಪ್ಪುಹಾಕದ ಸರ್ವಾಧಿಕಾರಿ ಮನಸ್ಥಿತಿಯ ಸರ್ಕಾರಗಳು ಇದ್ದಾಗ, ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ. ಮತ್ತು ಅದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಜನರಿಗೆ ನೀಡಿರುವ ಹಕ್ಕು. ಆದರೆ, ಅಧಿಕಾರದ ಚುಕ್ಕಾಣಿ ಹಿಡಿದವರು ಮತ್ತು ಇಡೀ ದೇಶವನ್ನು ತಮ್ಮ ಲಾಭದ ಸರಕು ಎಂದು ನಂಬಿದವರ ನಡುವಿನ ನಂಟು ಎಷ್ಟು ಸ್ಪಷ್ಟವಾಗಿದೆ ಎಂದರೆ, ಅಂತಹ ಪ್ರತಿಭಟನೆಯ, ಪ್ರತಿರೋಧದ, ಪ್ರಶ್ನಿಸುವ ಸಂವಿಧಾನಿಕ ಹಕ್ಕನ್ನು ಅಪರಾಧವೆಂದು ಬಿಂಬಿಸಲಾಗುತ್ತಿದೆ.

ಪ್ರಜಾಸತ್ತಾತ್ಮಕ, ಶಾಂತಿಯುತ ಹೋರಾಟ, ಚಳವಳಿಯನ್ನು ಭಯೋತ್ಪಾದಕ ಕೃತ್ಯ ಎನ್ನಲಾಗುತ್ತಿದೆ, ಅನ್ನ ಕೊಡುವ ರೈತನನ್ನು ಭಯೋತ್ಪಾದಕ ಎನ್ನಲಾಗುತ್ತಿದೆ. ಅಧಿಕಾರಸ್ಥರ ಆಸ್ಥಾನ ಶುಕಗಳು ಇಂತಹ ಆಣಿಮುತ್ತುಗಳನ್ನು ಉರುಳಿಸುತ್ತಿವೆ. ಕಂಗನಾ ರನಾವತ್ ಎಂಬ ನಟಿ ಪ್ರತಿಭಟನೆನಿರತ ರೈತರನ್ನು ಭಯೋತ್ಪಾದಕರು ಎಂದು ಕರೆದಿರುವುದು ಕೂಡ ಇಂತಹ ವ್ಯವಸ್ಥಿತ ತಂತ್ರಗಾರಿಕೆಯ, ಕಾರ್ಪೊರೇಟ್ ಹಿತಾಸಕ್ತಿ ಮತ್ತು ಅಧಿಕಾರ ವ್ಯವಸ್ಥೆಯ ಪ್ರಜ್ಞಾಪೂರ್ವಕ ಹುನ್ನಾರದ ಭಾಗವೇ! ಪ್ರಜಾಸತ್ತಾತ್ಮಕ ಹೋರಾಟ, ಪ್ರತಿರೋಧಗಳ ಅಪರಾಧೀಕರಣದ ಈ ಪ್ರಯತ್ನಗಳು ಹಿತಾಸಕ್ತಿ ರಕ್ಷಣೆಯ ಮತ್ತು ಜನದನಿ ಉಡುಗಿಸುವ ಒಂದು ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಈಗ ಕಂಗನಾ ಆ ಅಸ್ತ್ರ ಝಳಪಿಸಿದ್ದಾಳೆ ಅಷ್ಟೇ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com