ಚೀನೀ ವಸ್ತುಗಳ ಬಹಿಷ್ಕಾರದ ನಡುವೆಯೂ ಚೀನಾ ಆಮದು ಪ್ರಮಾಣದಲ್ಲಿ 5% ಹೆಚ್ಚಳ

ಭಾರತದ ಒಟ್ಟು ಆಮದುಗಳಲ್ಲಿ ಚೀನಾದ ಪಾಲು 2020-21ರ ಏಪ್ರಿಲ್ ನಿಂದ ಜುಲೈ ಅವಧಿಯಲ್ಲಿ ಶೇಕಡಾ 19 ಕ್ಕೆ ಏರಿದೆ, ಇದು ಹಿಂದಿನ ವರ್ಷದ ಅವಧಿಯಲ್ಲಿ ಶೇ 14 ರಷ್ಟಿತ್ತು.
ಚೀನೀ ವಸ್ತುಗಳ ಬಹಿಷ್ಕಾರದ ನಡುವೆಯೂ ಚೀನಾ ಆಮದು ಪ್ರಮಾಣದಲ್ಲಿ 5% ಹೆಚ್ಚಳ

ಭಾರತದ ಬಹಳಷ್ಟು ಉದ್ದಿಮೆಗಳು ತಮ್ಮ ಉತ್ಪನ್ನಗಳನ್ನು ತಯಾರು ಮಾಡಲು ಚೀನಾದಿಂದ ಅಮದಾಗುವ ಕಚ್ಚಾ ವಸ್ತು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನೆ ಈಗಲೂ ನಂಬಿಕೊಂಡಿವೆ. ಡೋಕ್ಲಾಮ್ ನಲ್ಲಿ ಗಡಿ ಬಿಕ್ಕಟ್ಟು ಉಲ್ಪಣಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಚೀನಾದ 200 ಕ್ಕೂ ಅಧಿಕ ಮೊಬೈಲ್‌ ಆಪ್ ಗಳನ್ನು ನಿಷೇಧಿಸಿದೆ. ಈ ಆಪ್ ಗಳ ನಿಷೇಧ ಇನ್ನೂ ಮುಂದುವರಿದಿದೆ. ಅಷ್ಟೇ ಅಲ್ಲ ಚೀನಾದಿಂದ ಆಮದಾಗುವ ಉತ್ಪನ್ನಗಳನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದೆ. ಅತ್ಮನಿರ್ಭರ ಭಾರತ ಯೋಜನೆಯ ಮೂಲಕ ಸಣ್ಣ ಕೈಗಾರಿಕೆಗಳಿಗೆ ಉತ್ಪಾದನಾ ಘಟಕಗಳಿಗೆ ಉತ್ತೇಜನ ನೀಡಿ ಎಲ್ಲ ಬಿಡಿ ಭಾಗಗಳನ್ನು ಇಲ್ಲಿಯೇ ತಯಾರಿಸಲು ಉದ್ಯಮಿಗಳಿಗೆ ಕರೆ ನೀಡಿದ್ದು ಸ್ವದೇಶೀ ಬಳಸುವಂತೆ ಸಂಕಷ್ಟು ಪ್ರಚಾರವನ್ನೂ ನೀಡುತ್ತಿದೆ. ಇದೆಲ್ಲದರ ನಡುವೆ ಚೀನ ಮತ್ತು ಭಾರತ ನಡುವಿನ ವ್ಯಾಪಾರ ಸಂಬಂದ ಅವ್ಯಾಹತವಾಗಿ ಮುಂದುವರಿಯುತ್ತಲೇ ಇದೆ. ಅಂದ ಹಾಗೆ ಕಳೆದ ಏಪ್ರಿಲ್ - ಜೂಲೈ ಅವಧಿಯ ತ್ರೈಮಾಸಿಕದಲ್ಲಿ ಚೀನಾದಿಂದ ಭಾರತಕ್ಕೆ ಆಮದಾದ ವಹಿವಾಟಿನ ಪ್ರಮಾಣ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 5 ರಷ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತದ ಒಟ್ಟು ಆಮದುಗಳಲ್ಲಿ ಚೀನಾದ ಪಾಲು 2020-21ರ ಏಪ್ರಿಲ್ ನಿಂದ ಜುಲೈ ಅವಧಿಯಲ್ಲಿ ಶೇಕಡಾ 19 ಕ್ಕೆ ಏರಿದೆ, ಇದು ಹಿಂದಿನ ವರ್ಷದ ಅವಧಿಯಲ್ಲಿ ಶೇ 14 ರಷ್ಟಿತ್ತು. ಕೇಂದ್ರ ವಾಣಿಜ್ಯ ಸಚಿವಾಲಯದ ವ್ಯಾಪಾರ ದತ್ತಾಂಶವು ಜುಲೈನಲ್ಲಿ ಕೂಡ ಆಮದು ಪ್ರಮಾಣ ಹೆಚ್ಚಾಗುವ ಟ್ರೆಂಡ್ ಮುಂದುವರಿದಿರುವುದನ್ನು ತೋರಿಸುತ್ತಿದೆ. ಭಾರತದ ಆಮದುಗಳಲ್ಲಿ ಚೀನಾದ ಪಾಲು ಶೇಕಡಾ 20 ರಷ್ಟಿದ್ದು, ಕಳೆದ ವರ್ಷದ ಇದೇ ತಿಂಗಳಲ್ಲಿ ಇದು ಶೇಕಡಾ 15 ಆಗಿತ್ತು. ಎರಡು ತಿಂಗಳ ಲಾಕ್‌ಡೌನ್ ನಂತರ, ಆರ್ಥಿಕ ಚಟುವಟಿಕೆಗಳು ಜುಲೈನಲ್ಲಿ ಮತ್ತೆ ಪುಟಿದೇಳುವ ಮೂಲಕ ಆಮದಿನ ಬೇಡಿಕೆಯನ್ನು ಹೆಚ್ಚಾಗಿದೆ. ಒಟ್ಟಾರೆಯಾಗಿ, ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಏಪ್ರಿಲ್-ಜುಲೈ ಅವಧಿಯಲ್ಲಿ ಭಾರತದ ಒಟ್ಟು ಆಮದು ಶೇಕಡಾ 48 ರಷ್ಟು ಕುಸಿದಿದೆ, ಆದರೆ ಚೀನಾದಿಂದ ಆಮದಿನ ಕುಸಿತವು ಶೇಕಡಾ 29 ರಷ್ಟು ಮಾತ್ರ ಆಗಿದೆ. ಏಪ್ರಿಲ್-ಜುಲೈ ಅವಧಿಯಲ್ಲಿ ಚೀನಾಕ್ಕೆ ಭಾರತದ ರಫ್ತು ಕೂಡ ಶೇಕಡಾ 31 ರಷ್ಟು ಏರಿಕೆಯಾಗಿದ್ದು, ಒಟ್ಟು ಮೌಲ್ಯ 7.3 ಬಿಲಿಯನ್ ಡಾಲರ್ ಆಗಿದೆ. ದೇಶದ ಒಟ್ಟಾರೆ ರಫ್ತುನಲ್ಲಿ ಚೀನಾದ ಪಾಲು ಶೇಕಡಾ 4.5 ರಿಂದ 9.7 ಕ್ಕೆ ಏರಿದೆ. ಈ ಎಲ್ಲಾ ಅಂಕಿ ಅಂಶಗಳನ್ನು ಹಿಂದಿನ ವರ್ಷದ ಅವಧಿಗೆ ಹೋಲಿಸಿ ತಯಾರಿಸಲಾಗಿದೆ. ಆರ್ಥಿಕ ತಜ್ಞರ ಪ್ರಕಾರ ಔಷಧಗಳು ಮತ್ತು ವಿದ್ಯುತ್ ಉಪಕರಣಗಳಿಗೆ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಚೀನಾವನ್ನು ಅವಲಂಬಿಸಿರುವುದು ಈಗಿನಂತೆಯೇ ಮುಂದುವರಿಯಲಿದೆ. ಆದರೆ ಮಕ್ಕಳ ಆಟಿಕೆಗಳು ಮತ್ತು ಪ್ಲಾಸ್ಟಿಕ್ಗಳಂತಹ ಅನಿವಾರ್ಯವಲ್ಲದ ವಸ್ತುಗಳ ಆಮದನ್ನು ಕಡಿತಗೊಳಿಸಲು ಭಾರತಕ್ಕೆ ಖಂಡಿತ ಸಾಧ್ಯವಾಗುತ್ತದೆ.

ವಾಸ್ತವ ನಿಯಂತ್ರಣ ರೇಖೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯು 20 ಭಾರತೀಯ ಸೈನಿಕರ ಹತ್ಯೆಗೆ ಕಾರಣವಾಗಿತ್ತು. ಕೂಡಲೇ ದೇಶದಲ್ಲಿ ಚೀನಾದ ಎಲ್ಲ ವಸ್ತುಗಳನ್ನೂ ಬಹಿಷ್ಕರಿಸುವಂತೆ ಅಭಿಯಾನವೇ ಆರಂಭಗೊಂಡಿತು. ಸ್ವತಃ ಸರ್ಕಾರದ ಮಂತ್ರಿಗಳೇ ಸ್ವದೇಶಿ ಬಳಕೆಗೆ ಕರೆ ನೀಡಿದರು. ಸ್ವದೇಶಿ ಜಾಗರಣ್ ಮಂಚ್ ಮತ್ತು ಕನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಸಂಸ್ಥೆಯು ಕೂಡ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಸಕ್ರಿಯವಾಗೇ ಸ್ಪಂದಿಸಿದವು. ಆದಾಗ್ಯೂ, ವ್ಯಾಪಾರ ತಜ್ಞರ ಪ್ರಕಾರ ಜುಲೈನಲ್ಲಿ ಆಮದಿನಲ್ಲಿ ಏರಿಕೆ ಆಗಿರುವುದಕ್ಕೆ ಭಾರತದ ಸಂಸ್ಥೆಗಳು ತಿಂಗಳುಗಳಷ್ಟು ಹಿಂದೆಯೇ ಚೀನಾಕ್ಕೆ ನೀಡಿರುವ ಆರ್ಡರ್ ಕಾರಣವಾಗಿದೆ ಮತ್ತು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನ ದೇಶದಲ್ಲಿ ಆರಂಭಗೊಳ್ಳುವುದಕ್ಕೂ ಮೊದಲೇ ಆಮದು ಆರ್ಡರ್ ನೀಡಲಾಗಿದೆ ಎಂದಿದ್ದಾರೆ.

ಸಾವಯವ ರಾಸಾಯನಿಕಗಳು, ವಿದ್ಯುತ್ ಯಂತ್ರೋಪಕರಣಗಳು ಮತ್ತು ಉಪಕರಣಗಳು ಮತ್ತು ಸೌಂಡ್ ರೆಕಾರ್ಡರ್‌ಗಳು, ವೈದ್ಯಕೀಯ ಉಪಕರಣಗಳು ಮತ್ತು ಔಷಧೀಯ ಉತ್ಪನ್ನಗಳಂತಹ ಸರಕುಗಳ ಆಮದು ಜುಲೈನಲ್ಲಿ ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತೋರಿಸುತ್ತಿವೆ. ವಿದ್ಯುತ್ ಮತ್ತು ವೈದ್ಯಕೀಯ ಸಲಕರಣೆಗಳಂತಹ ವಸ್ತುಗಳು ದೀರ್ಘಾವಧಿಯ ಖರೀದಿಯಾಗಿದ್ದು, ತಕ್ಷಣವೇ ಬದಲಿಯನ್ನು ಕಂಡುಹಿಡಿಯುವುದು ಕಷ್ಟ. ಕಂಪೆನಿಗಳು ಇತರ ಖರೀದಿಯ ಮೂಲಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಕಂಡುಕೊಳ್ಳದ ಹೊರತು ನಾವು ಚೀನಾದಿಂದ ಆಮದು ಕುಸಿಯುವುದಿಲ್ಲ ಎಂದು ವ್ಯಾಪಾರ ವಿಷಯಗಳಲ್ಲಿ ಪರಿಣತಿ ಹೊಂದಿರುವ ಎಪಿಜೆ-ಎಸ್ಎಲ್‌ಜಿ ಕಾನೂನು ಕಚೇರಿಗಳ ಪ್ರಧಾನ ಸಲಹೆಗಾರ ವಿಶ್ವನಾಥ್ ಹೇಳುತ್ತಾರೆ. ಒಟ್ಟಾರೆಯಾಗಿ ಚೀನಾದಿಂದ ಆಮದು ಮುಂದುವರಿಯುತ್ತದೆ. ಆದರೆ ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಹೆಚ್ಚಿನ ಉಪಕರಣಗಳನ್ನು ಉತ್ಪಾದಿಸಲು ದೇಶೀಯ ಉದ್ಯಮವನ್ನು ಪ್ರೋತ್ಸಾಹಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಇದು ದೀರ್ಘಾವಧಿಯ ಯೋಜನೆಯಾಗಿದೆ. ಮುಂದಿನ ಒಂದು ವರ್ಷದ ನಂತರವೇ ನಾವು ಬದಲಾವಣೆಗಳನ್ನು ನೋಡಲಾರಂಭಿಸುತ್ತೇವೆ ಎಂದು ವಿಶ್ವನಾಥ್ ಹೇಳಿದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥ ಶಾಸ್ತ್ರ ಪ್ರಾಧ್ಯಾಪಕ ಬಿಸ್ವಾಜಿತ್ ಧಾರ್ ಅವರ ಪ್ರಕಾರ, ಇದೀಗ ವಿಶ್ವದಲ್ಲಿ ಬೆಳವಣಿಗೆ ದಾಖಲಿಸುತ್ತಿರುವ ಏಕೈಕ ಪ್ರಮುಖ ಆರ್ಥಿಕತೆ ಚೀನಾ ಮಾತ್ರ ಆಗಿದೆ. ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಚೀನಾದ ಆರ್ಥಿಕತೆಯು ಶೇಕಡಾ 3.2 ಕ್ಕೆ ಏರಿಕೆಯಾಗಿದೆ, ಆದರೆ ಇದೇ ಅವಧಿಯಲ್ಲಿ ಅಮೇರಿಕ, ಇಂಗ್ಲೆಂಡ್, ಜರ್ಮನಿ ಮತ್ತು ಫ್ರಾನ್ಸ್ ನ ಜಿಡಿಪಿ ಕ್ರಮವಾಗಿ ಶೇ 9.1, 20.1, 10.1 ಮತ್ತು 18.9 ರಷ್ಟು ಕುಸಿತಗೊಂಡಿವೆ. ಕಳೆದ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಅತ್ಯಂತ ಕೆಟ್ಟ ಹೊಡೆತಕ್ಕೆ ಒಳಗಾಗಿದೆ. ವ್ಯಾಪಾರದಲ್ಲಿ ಚೀನಾವನ್ನು ಹೊರಗಿಡುವುದು ಬಹಳ ಕಷ್ಟ. ಚೀನಾದ ಮೇಲೆ ಭಾರತದ ಅವಲಂಬನೆ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಅನಿವಾರ್ಯ ಅಗಿದೆ. ಉದಾಹರಣೆಗೆ, ಭಾರತೀಯ ಔಷಧೀಯ ವಲಯಕ್ಕೆ ಅಗತ್ಯವಿರುವ ಎಪಿಐಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ, ಎಂದು ಧಾರ್ ಹೇಳಿದರು, ಆಟಿಕೆಗಳು ಮತ್ತು ಪ್ಲಾಸ್ಟಿಕ್ ವಸ್ತುಗಳಂತಹ ಅನಿವಾರ್ಯವಲ್ಲದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಸುಲಭವಾಗಬಹುದು.

"ಭಾರತವು ಚೀನಾದಿಂದ ವ್ಯಾಪಾರ ಸಂಬಂಧ ಕಡಿತಗೊಳ್ಳಲು ಎರಡು ಕ್ರಮಗಳನ್ನು ಕೈಗೊಳ್ಳಬೇಕಿದೆ. ಆಮದನ್ನು ಕಡಿತಗೊಳಿಸಲು ಭಾರತ ತನ್ನ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ. ಇದು ತಕ್ಷಣವೇ ಆಗುವುದಿಲ್ಲ. ಇತರ ದೇಶಗಳಲ್ಲಿ ಪರ್ಯಾಯ ಪೂರೈಕೆದಾರರನ್ನು ಹುಡುಕುವುದು ಇನ್ನೊಂದು ಆಯ್ಕೆಯಾಗಿದೆ. ಚೀನೀ ಉತ್ಪನ್ನಗಳು ಅಗ್ಗವಾಗುವುದರಿಂದ ಅದು ಮತ್ತೆ ಕಷ್ಟವಾಗಬಹುದು. ಭಾರತೀಯ ಗ್ರಾಹಕರು ಕಡಿಮೆ ಬೆಲೆಯ ಉತ್ಪನ್ನಗಳನ್ನು ಬಯಸುತ್ತಾರೆ” ಎಂದು ಅವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com