ಎಂಟು ಸಂಸದರ ಅಮಾನತು: ಸಂಸತ್ ಆವರಣದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ
ಪ್ರತಿಪಕ್ಷಗಳ ವಿರೋಧದ ನಡುವೆಯೂ, ಕೃಷಿಯಲ್ಲಿ ಅತಿದೊಡ್ಡ ಸುಧಾರಣೆ ಎಂದು ಸರ್ಕಾರ ಕರೆಯುವ ಎರಡು ಪ್ರಮುಖ ಕೃಷಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಭಾನುವಾರ ಅಂಗೀಕರಿಸಲಾಗಿತ್ತು.
ಎಂಟು ಸಂಸದರ ಅಮಾನತು: ಸಂಸತ್ ಆವರಣದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ

ಎಂಟು ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಿರುವ ಬಗ್ಗೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ ಮತ್ತು ಈ ಕ್ರಮವನ್ನು ವಿರೋಧಿಸಿ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿವೆ.

ಸಂಸತ್ತಿನ ಮೇಲ್ಮನೆಯಲ್ಲಿ ಕೃಷಿ ಮಸೂದೆಗಳನ್ನು ಅಂಗೀಕರಿಸುವ ಸಮಯದಲ್ಲಿ "ಅಶಿಸ್ತಿನ ವರ್ತನೆ" ತೋರಿದ ಆರೋಪದ ಮೇಲೆ.ಕಾಂಗ್ರೆಸ್, ಸಿಪಿಐ (ಎಂ), ತೃಣಮೂಲ ಕಾಂಗ್ರೆಸ್ ಮತ್ತು ಎಎಪಿ ಯ ಎಂಟು ಸದಸ್ಯರನ್ನು ಮುಂಗಾರು ಅಧಿವೇಶನದಿಂದ ಅಮಾನತುಗೊಳಿಸಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

"ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಹೋರಾಡಿದ 8 ಸಂಸದರನ್ನು ಅಮಾನತುಗೊಳಿಸುವುದು ದುರದೃಷ್ಟಕರ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಗೌರವಿಸದ ಈ ನಿರಂಕುಶಾಧಿಕಾರಿ ಸರ್ಕಾರದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸಂಸತ್ತಿನಲ್ಲಿ ಹಾಗೂ ಬೀದಿ ಬೀದಿಗಳಲ್ಲಿ ಈ ಫ್ಯಾಸಿಸ್ಟ್‌ ಸರ್ಕಾರದ ವಿರುದ್ಧ ನಾವು ಹೋಡುತ್ತೇವೆ, ಇವರಿಗೆ ನಾವು ಎಂದೂ ತಲೆಬಾಗುವುದಿಲ್ಲ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ನಲ್ಲಿ ಹೇಳಿದ್ದಾರೆ.

'ಪ್ರಜಾಪ್ರಭುತ್ವದ ಕೊಲೆ', 'ಸಂಸತ್ತಿನ ಸಾವು' ಮತ್ತು 'ನಾಚಿಕೆಗೇಡುʼ ಮುಂತಾದ ಪ್ಲೆಕಾರ್ಡ್‌ ಹಿಡಿದು ಕಾಂಗ್ರೆಸ್, ಸಿಪಿಐ (ಎಂ), ಶಿವಸೇನೆ, ಜೆಡಿಎಸ್, ಟಿಎಂಸಿ, ಸಿಪಿಐ ಮತ್ತು ಸಮಾಜವಾದಿ ಪಕ್ಷಗಳಂತಹ ವಿರೋಧ ಪಕ್ಷಗಳು ಸಂಸತ್ತಿನ ಆವರಣದಲ್ಲಿ ಪ್ರತಿಭಟಿಸಿದವು.

"ಅಮಾನತುಗೊಳಿಸುವಿಕೆಯು ನಮ್ಮನ್ನು ಮೌನಗೊಳಿಸುವುದಿಲ್ಲ. ನಾವು ರೈತರ ಹೋರಾಟದಲ್ಲಿ ಅವರೊಂದಿಗೆ ನಿಲ್ಲುತ್ತೇವೆ. ಉಪಾಧ್ಯಕ್ಷರು ನಿನ್ನೆ ಸಂಸತ್ತಿನ ಕಾರ್ಯವಿಧಾನಗಳನ್ನು ತಡೆದಿದ್ದಾರೆ. ಸಂಸದರ ಅಮಾನತು ಬಿಜೆಪಿಯ ಹೇಡಿತನದ ಮುಖವನ್ನು ಬಹಿರಂಗಪಡಿಸಿದೆ. ಪ್ರಜಾಪ್ರಭುತ್ವ ವಿರೋಧಿ ಕ್ರಮಗಳ ಮೂಲಕ ತಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವನ್ನು ಜನರು ನೋಡುತ್ತಿದ್ದಾರೆ” ಎಂದು ಅಮಾನತುಗೊಂಡವರಲ್ಲಿ ಒಬ್ಬರಾದ ಸಿಪಿಐ (ಎಂ) ಸಂಸದ ಎಲರಾಮಂ ಕರೀಮ್ ಹೇಳಿದ್ದಾರೆ.

"ದೇಶದ ರೈತರೇ ಎಚ್ಚರಗೊಳ್ಳಿ, ಬಿಜೆಪಿ ಸರ್ಕಾರ ನಿಮ್ಮ ಜೀವನವನ್ನು ಅದಾನಿ-ಅಂಬಾನಿಗೆ ಅಡಮಾನ ಇಟ್ಟಿದೆ, ಎಚ್ಚರಗೊಂಡು ಈ ಕರಾಳ ಕಾನೂನನ್ನು ವಿರೋಧಿಸಿ. ನಾವು ಸಂಸತ್ತಿನಲ್ಲಿ ಆಂದೋಲನದಲ್ಲಿದ್ದೇವೆ, ನೀವು ಹೊರಗೆ ಆಂದೋಲನ ನಡೆಸಬೇಕು. ರೈತರ ವಿರುದ್ಧ ಬಿಜೆಪಿ ಸರ್ಕಾರ ಕರಾಳ ಕಾನೂನು ಜಾರಿಗೆ ತಂದಿದೆ. ಮಸೂದೆಯನ್ನು ವಿರೋಧಿಸಿದ್ದಕ್ಕಾಗಿ ನಮ್ಮನ್ನು ವಜಾಗೊಳಿಸಲಾಯಿತು "ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

"ಅದಕ್ಕಾಗಿಯೇ ನಾವು ಧರಣಿ ಕುಳಿತಿದ್ದೇವೆ ಮತ್ತು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಮೂಲಕ ಈ ಕರಾಳ ಕಾನೂನನ್ನು ಏಕೆ ಅಂಗೀಕರಿಸಲಾಗಿದೆ ಎಂದು ಬಿಜೆಪಿ ಸರ್ಕಾರ ವಿವರಿಸುವವರೆಗೂ ಕುಳಿತುಕೊಳ್ಳುತ್ತೇವೆ" ಎಂದು ಅವರು ಹೇಳಿದ್ದಾರೆ.

ಎನ್‌ಡಿಎ ಮೈತ್ರಿಕೂಟದಲ್ಲಿರದ ಹಲವಾರು ಪಕ್ಷಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಕೇಂದ್ರ ಸರ್ಕಾರದ ಪ್ರಸ್ತಾವಿತ ಶಾಸನಗಳಿಗೆ ತಮ್ಮ ಒಪ್ಪಿಗೆಯನ್ನು ನೀಡದಂತೆ ಒತ್ತಾಯಿಸಿದೆ.

ಮೂಲಗಳ ಪ್ರಕಾರ, ಕಾಂಗ್ರೆಸ್, ಎಡ ಪಕ್ಷಗಳು, ಎನ್‌ಸಿಪಿ, ಡಿಎಂಕೆ, ಎಸ್‌ಪಿ, ತೃಣಮೂಲ ಕಾಂಗ್ರೆಸ್ ಮತ್ತು ಆರ್‌ಜೆಡಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ರಾಷ್ಟ್ರಪತಿಗಳಿಗೆ ಮನವಿ ಪತ್ರದಲ್ಲಿ ಈ ವಿಷಯದಲ್ಲಿ ತಮ್ಮ ಹಸ್ತಕ್ಷೇಪವನ್ನು ಕೋರಿದ್ದಾರೆ ಮತ್ತು ಮಸೂದೆಗಳಿಗೆ ಸಹಿ ಮಾಡದಂತೆ ಕೇಳಿಕೊಂಡಿದ್ದಾರೆ.

ಪ್ರತಿಪಕ್ಷಗಳ ವಿರೋಧದ ನಡುವೆಯೂ, ಕೃಷಿಯಲ್ಲಿ ಅತಿದೊಡ್ಡ ಸುಧಾರಣೆ ಎಂದು ಸರ್ಕಾರ ಕರೆಯುವ ಎರಡು ಪ್ರಮುಖ ಕೃಷಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಭಾನುವಾರ ಅಂಗೀಕರಿಸಲಾಗಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com