ಕಾರ್ಮಿಕ ಸಾವಿನ ಮಾಹಿತಿ ಬಳಿಕ ಈಗ ಸೀರೋ ಸರ್ವೆ ಡೇಟಾ ಮುಚ್ಚಿಟ್ಟ ಚೌಕಿದಾರ್ ಸರ್ಕಾರ!

ವಲಸೆ ಕಾರ್ಮಿಕರ ಸಾವು ನೋವಿನ ಕುರಿತ ಮಾಹಿತಿಯೇ ಇಲ್ಲ, ಸೋಂಕು ತಗುಲಿ ಎಷ್ಟು ಮಂದಿ ಕರೋನಾ ವಾರಿಯರ್ಸ್ ವೈದ್ಯರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಕೂಡ ತನ್ನ ಬಳಿ ಇಲ್ಲ ಎಂದು ಸಂಸತ್ತಿನಲ್ಲಿ ಅಧಿಕೃತವಾಗಿ ಹೇಳಿ, ‘ಇದು ಎನ್ ಡಿಎ ಸರ್ಕಾರವಲ್ಲ; ನೋ ...
ಕಾರ್ಮಿಕ ಸಾವಿನ ಮಾಹಿತಿ ಬಳಿಕ ಈಗ ಸೀರೋ ಸರ್ವೆ ಡೇಟಾ ಮುಚ್ಚಿಟ್ಟ ಚೌಕಿದಾರ್ ಸರ್ಕಾರ!

ಕರೋನಾ ಲಾಕ್ ಡೌನ್ ಅವಧಿಯ ವಲಸೆ ಕಾರ್ಮಿಕರ ಸಾವು, ಕರೋನಾ ವಾರಿಯರ್ಸ್ ವೈದ್ಯರ ಸಾವು, ಪಿಎಂ ಕೇರ್ಸ್ ಹಣದ ಲೆಕ್ಕ, ದೇಶದ ನಿರುದ್ಯೋಗ ಸೇರಿದಂತೆ ಯಾವುದೇ ಮಾಹಿತಿ ತನ್ನ ಬಳಿ ಇಲ್ಲ ಎಂದು ಹೇಳುವ ಮೂಲಕ ತಾನು ಮಾಹಿತಿಹೀನ ಆಡಳಿತ ಎಂಬುದನ್ನು ಸಾಬೀತು ಮಾಡುತ್ತಿರುವ ಪ್ರಧಾನಿ ಮೋದಿಯವರ ಸರ್ಕಾರದ, ಹೆಗ್ಗಳಿಕೆಗೆ ಮತ್ತೊಂದು ಸೇರ್ಪಡೆಯಾಗಿದ್ದು, ದೇಶದಲ್ಲಿ ಕರೋನಾ ಪ್ರಕರಣಗಳ ವ್ಯಾಪಕತೆ ಕುರಿತ ಸೀರೋ ಸರ್ವೆಯ ಮಾಹಿತಿಯನ್ನು ಕೂಡ ಬಹಿರಂಗಪಡಿಸದಂತೆ ಮುಚ್ಚಿಟ್ಟಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತನ್ನ ಇಂತಹ ಹೊಣೆಗೇಡಿತನದ ಬಗ್ಗೆ, ಜನವಿರೋಧಿ ನೀತಿ-ನಿಲುವುಗಳ ಬಗ್ಗೆ ಪ್ರಶ್ನೆ ಮಾಡುವ, ಪ್ರತಿಭಟಿಸುವ, ಕಾನೂನು ಹೋರಾಟ ಮಾಡುವವರ ವಿರುದ್ಧದ ಇನಿಲ್ಲದ ಮಾಹಿತಿಗಳನ್ನು ಕೆದಕಿ ಲಕ್ಷಾಂತರ ಪುಟಗಳ ಮಾಹಿತಿ ಕಲೆಹಾಕಿದ್ದೇವೆ ಎನ್ನುವ ಮೋದಿಯವರ ಸರ್ಕಾರ, ನಿಜವಾಗಿಯೂ ದೇಶದ ಜನರ ಹಿತಕ್ಕಾಗಿ ಕಲೆಹಾಕಬೇಕಾದ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿ ಒದಗಿಸಬೇಕಾದ ನಿರ್ಣಾಯಕ ಮಾಹಿತಿಯ ವಿಷಯದಲ್ಲಿ ಮಾತ್ರ ‘ನೋ ಡೇಟಾ ಅವೇಲಬಲ್’ ಎಂಬ ಸಿದ್ಧ ಉತ್ತರ ನೀಡುವ ಚಾಳಿ ಬೆಳೆಸಿಕೊಂಡಿದೆ. ಆ ಕಾರಣಕ್ಕೇ ಇತ್ತೀಚಿಗೆ ವಲಸೆ ಕಾರ್ಮಿಕರ ಸಾವು ನೋವಿನ ಕುರಿತ ಮಾಹಿತಿಯೇ ಇಲ್ಲ, ಸೋಂಕು ತಗುಲಿ ಎಷ್ಟು ಮಂದಿ ಕರೋನಾ ವಾರಿಯರ್ಸ್ ವೈದ್ಯರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಕೂಡ ತನ್ನ ಬಳಿ ಇಲ್ಲ ಎಂದು ಸಂಸತ್ತಿನಲ್ಲಿ ಅಧಿಕೃತವಾಗಿ ಹೇಳಿ, ‘ಇದು ಎನ್ ಡಿಎ ಸರ್ಕಾರವಲ್ಲ; ನೋ ಡೇಟಾ ಅವೇಲಬಲ್’ ಸರ್ಕಾರ ಎಂಬ ಟ್ರೋಲ್ ಗೂ ಒಳಗಾಗಿತ್ತು.

ಇದೀಗ ಅಂತಹ ಹೊಣಗೇಡಿತನದ ಮತ್ತು ದೇಶದ ಜನರಿಂದ ಮಹತ್ವದ ಮಾಹಿತಿಗಳನ್ನು ಮುಚ್ಚಿಡುವ ಮೂಲಕ ತನ್ನ ಹೀನಾಯ ವೈಫಲ್ಯಗಳನ್ನು ಮರೆಮಾಚುವ ಮತ್ತೊಂದು ಪ್ರಯತ್ನ ಈ ಸೀರೋ ಸರ್ವೆ ಮಾಹಿತಿ ಮುಚ್ಚಿಟ್ಟಿರುವುದು.

ಕಳೆದ ಮೇನಲ್ಲಿ ದೇಶದ ಜನಸಂಖ್ಯೆಯಲ್ಲಿ ಎಷ್ಟು ಪ್ರಮಾಣದಲ್ಲಿ ಕೋವಿಡ್-19 ಹರಡಿದೆ ಎಂಬುದನ್ನು ಅಂದಾಜಿಸಲು ತಜ್ಞರು ರಾಷ್ಟ್ರೀಯ ಸೀರೋ ಪ್ರಿವೆಲೆನ್ಸ್ ಸರ್ವೆ ನಡೆಸಿದ್ದರು. ಆ ಹೊತ್ತಿಗೆ ಸೋಂಕು ತೀವ್ರ ಪ್ರಮಾಣದಲ್ಲಿದ್ದ ದೇಶದ 10 ನಗರ ಪ್ರದೇಶದ ಹಾಟ್ ಸ್ಪಾಟ್ ಗಳಲ್ಲಿ ಈ ಸಮೀಕ್ಷೆ ನಡೆದಿತ್ತು. ಆ ಅಧ್ಯಯನದ ಮೂಲಕ ಆಗಲೇ ದೇಶದಲ್ಲಿ ಆಘಾತಕಾರಿ ಪ್ರಮಾಣದಲ್ಲಿ ಸೋಂಕು ಹರಡಿರುವುದು ಪತ್ತೆಯಾಗಿತ್ತು ಮತ್ತು ಮೋದಿಯವರ ಸರ್ಕಾರದ ಅವೈಜ್ಞಾನಿಕ ಮತ್ತು ಅಂಧಾನುಕರಣೆಯ ಲಾಕ್ ಡೌನ್ ದೇಶದಲ್ಲಿ ಸೋಂಕು ಹರಡುವುದನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದನ್ನು ಆ ಅಧ್ಯಯನದ ಫಲಿತಾಂಶ ಸೂಚಿಸಿತ್ತು. ಆದರೆ, ಆ ಸತ್ಯ ಹೊರಗೆ ಬಂದರೆ, ತನಗೆ ಮತ್ತೊಂದು ಭಾರೀ ಮುಖಭಂಗ ಕಾದಿದೆ ಎಂಬುದನ್ನು ಅರಿತ ಮೋದಿ ಸರ್ಕಾರ, ಆ ಸಮೀಕ್ಷೆಯ ವರದಿಯಲ್ಲಿ ಅಧ್ಯದಯನ ನಡೆದ ಹತ್ತು ನಗರಗಳ ಮಾಹಿತಿಯನ್ನು(ದತ್ತಾಂಶ ವಿವರ) ಪ್ರಕಟಿಸದಂತೆ ಸರ್ಕಾರಿ ಸೌಮ್ಯದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮೂಲಕ ನಿರ್ಬಂಧ ಹೇರಿದೆ!

ಸೀರೋಸರ್ವೆ ನಡೆಸಿದ ಸಂಶೋಧಕರು ‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್’ ನಿಯತಕಾಲಿಕದಲ್ಲಿ ತನ್ನ ಸಂಶೋಧನಾ ವರದಿಯನ್ನು ಪ್ರಕಟಿಸಿದ್ದು, ಆ ವರದಿಯಲ್ಲಿರುವ ಹತ್ತು ನಗರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತೆಗೆದುಹಾಕಿ, ಇಲ್ಲವೇ ವರದಿಯನ್ನೇ ಪ್ರಕಟಿಸಬೇಡಿ ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್ ತಾಕೀತು ಮಾಡಿದ್ದರು. ಮೇ 11ರಿಂದ ಜೂನ್ 4ರವರೆಗೆ ಸಂಗ್ರಹಿಸಿದ ಆ ಮಾಹಿತಿಯನ್ನು ಪ್ರಕಟಮಾಡಲು ಐಸಿಎಂಆರ್ ಅಗತ್ಯ ಅನುಮತಿ ಪಡೆದಿಲ್ಲ ಎಂದು ಅವರು ಸಂಶೋಧಕರಿಗೆ ಹೇಳಿದ್ದಾಗಿ ‘ದ ಟೆಲಿಗ್ರಾಫ್’ ವರದಿ ಮಾಡಿದೆ.

ಅಲ್ಲದೆ, ದೇಶದ ವೈದ್ಯಕೀಯ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಕಣ್ಗಾವಲು ಸಂಸ್ಥೆಯಾಗಿ ಐಸಿಎಂಆರ್, ದೇಶದ ವೈದ್ಯರಿಗೆ ನೈತಿಕ ಮಾರ್ಗಸೂಚಿಯನ್ನು ರೂಪಿಸುತ್ತದೆ. ಅಂತಹ ನೈತಿಕತೆಯನ್ನು ಪಾಲಿಸುವಂತೆ ತಾಕೀತು ಮಾಡುತ್ತದೆ. ಅದನ್ನು ಮೀರಿದಲ್ಲಿ ಶಿಕ್ಷೆ ವಿಧಿಸುವ ಅಧಿಕಾರವನ್ನೂ ಹೊಂದಿದೆ. ಆದರೆ, ಈಗ ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಂತಹ ನೈತಿಕ ಕಣ್ಗಾವಲು ಸಂಸ್ಥೆಯೇ ಸತ್ಯವನ್ನು ಮುಚ್ಚಿಡುವಂತೆ, ಸುಳ್ಳನ್ನು ಬಿತ್ತರಿಸುವಂತೆ ಸಂಶೋಧಕರ ಮೇಲೆ ನೇರ ಧಮಕಿ ಹಾಕಿರುವುದು ನಾಚಿಕೆಗೇಡಿನ ಬೆಳವಣಿಗೆ. ಇದು ಅದೇ ಸಂಸ್ಥೆಯ ನೈತಿಕ ನಿಯಮಗಳಿಗೇ ತದ್ವಿರುದ್ಧವಾದ ನಡೆ ಎಂಬ ಟೀಕೆ ವ್ಯಕ್ತವಾಗಿದೆ.

ಏಕೆಂದರೆ; ಐಸಿಎಂಆರ್ ನ 2019ರ ‘ಸಂಶೋಧನಾ ಬದ್ಧತೆ ಮತ್ತು ಪ್ರಕಾಶನ ನೈತಿಕತೆ ನೀತಿ’ಯ ಪ್ರಕಾರ, “ಯಾವುದೇ ಸಂಶೋಧನೆ ಪೂರ್ಣಗೊಂಡಬಳಿಕ ಅದರ ಫಲಿತಾಂಶ ಏನೇ ಆಗಿದ್ದರೂ ಅದನ್ನು ಕಡ್ಡಾಯವಾಗಿ ಪ್ರಕಟಿಸಲೇಬೇಕು ಮತ್ತು ಸಾರ್ವಜನಿಕರಿಗೆ ಲಭ್ಯವಿರುವಂತೆ ಮಾಹಿತಿ ಬಹಿರಂಗಪಡಿಸಬೇಕು. ಅದಕ್ಕಾಗಿ ಕ್ಲಿನಿಕಲ್ ಟ್ರೈಯಲ್ಸ್ ಇಂಡಿಯಾ ಅಥವಾ ಸಂಸ್ಥೆಯ ವೆಬ್ ಸೈಟ್ ಅಥವಾ ಇನ್ನಾವುದೇ ಲಭ್ಯ ವೇದಿಕೆಗಳನ್ನು ಬಳಸಿಕೊಳ್ಳಬಹುದು” ಎಂಬ ನಿಯಮವಿದೆ. ಇದೀಗ ಈ ನಿಯಮ ಮಾಡಿ ದೇಶದ ವೈದ್ಯಕೀಯ ಸಂಶೋಧಕರ ಮೇಲೆ ದಂಡ ಝಳಪಿಸುವ ಸಂಸ್ಥೆಯೇ, ಆ ನಿಯಮವನ್ನು ಮುರಿದಿದೆ ಮತ್ತು ಅದಕ್ಕೆ ತದ್ವಿರುದ್ಧವಾಗಿ ಸಂಶೋಧನೆಯ ಫಲಿತಾಂಶ ಮತ್ತು ವಿವರಗಳನ್ನು ಸಾರ್ವಜನಿಕಗೊಳಿಸದಂತೆ ಸ್ವತಃ ಅಡ್ಡಗಾಲು ಹಾಕಿದೆ.

ದೇಶದ 21 ರಾಜ್ಯಗಳ ಒಟ್ಟು 71 ಜಿಲ್ಲೆಗಳಲ್ಲಿ ತಲಾ 400 ಮಂದಿಯಂತೆ ಮತ್ತು 10 ಪ್ರಮುಖ ಹಾಟ್ ಸ್ಪಾಟ್ ನಗರಗಳಲ್ಲಿ ತಲಾ 500 ಮಂದಿಯಂತೆ ಆಯ್ದುಕೊಂಡು ಸಮೀಕ್ಷೆ ನಡೆಸಿದ್ದ ಸಂಶೋಧಕರು, ಮೇ ಅಂತ್ಯದ ಹೊತ್ತಿಗೆ ದೇಶದ ಜನಸಂಖ್ಯೆಯ ಸರಾಸರಿ ಎಷ್ಟು ಮಂದಿ ಕೋವಿಡ್ ಸೋಂಕಿಗೆ ಈಡಾಗಿದ್ದಾರೆ ಎಂದು ಅಂದಾಜಿಸಿದ್ದರು. ಅಹಮದಾಬಾದ್, ಭೋಪಾಲ್, ಕೋಲ್ಕತ್ತಾ, ದೆಹಲಿ, ಹೈದರಾಬಾದ್, ಇಂದೋರ್, ಜೈಪುರ, ಮುಂಬೈ, ಪುಣೆ ಮತ್ತು ಸೂರತ್ ನಗರಗಳು ಆ ಹೊತ್ತಿಗೆ ಕರೋನಾ ಸೋಂಕಿನ ಹಾಟ್ ಸ್ಪಾಟ್ ನಗರಗಳಾಗಿದ್ದವು. ಆ ಹಿನ್ನೆಲೆಯಲ್ಲಿ ಆ ನಗರಗಳನ್ನೇ ಸಮೀಕ್ಷೆಗೆ ಆಯ್ಕೆಮಾಡಿಕೊಳ್ಳಲಾಗಿತ್ತು. ಆದರೆ, ಸಂಶೋಧನೆಯ ವರದಿ ಪ್ರಕಟಿಸುವ ಹೊತ್ತಿಗೆ, ಐಸಿಎಂಆರ್ ಆ ನಗರಗಳ ಮಾಹಿತಿಯನ್ನು ಸಾರ್ವಜನಿಕಗೊಳಿಸದಂತೆ ತಡೆಯೊಡ್ಡಿದೆ. ವಾಸ್ತವವಾಗಿ ಐಸಿಎಂಆರ್ ನ ಈ ನಿಲುವಿನ ಹಿಂದೆ ಯಾರಿದ್ದಾರೆ? ಕೇಂದ್ರ ಸರ್ಕಾರ ಮತ್ತು ಪ್ರಭಾವಿ ಸ್ಥಾನದಲ್ಲಿರುವ ನಾಯಕರು ಈ ಮಾಹಿತಿ ಬಹಿರಂಗಗೊಳ್ಳದಂತೆ ಐಸಿಎಂಆರ್ ಮೂಲಕ ಪ್ರಯತ್ನಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಈಗ ಎದ್ದಿವೆ.

ಜೊತೆಗೆ ಈ ಮೊದಲು, ಕಳೆದ ಜೂನ್ 12ರಂದು ಈ ಸೀರೋ ಸರ್ವೆಯ ಪ್ರಾಥಮಿಕ ಮಾಹಿತಿಯನ್ನು ಸ್ವತಃ ಪ್ರಕಟಿಸಿದ್ದ ಐಸಿಎಂಆರ್ ಮುಖ್ಯಸ್ಥ ಭಾರ್ಗವ, ದೇಶದ 83 ಜಿಲ್ಲೆಗಳ ಸುಮಾರು 28 ಸಾವಿರ ಮಂದಿಯ ಮಾದರಿ ಸಂಗ್ರಹಿಸಿ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದಾರೆ ಎಂದಿದ್ದರು. ಆದರೆ, ಇದೀಗ ಪ್ರಕಟಿತ ಸಂಶೋಧನಾ ವರದಿಯಲ್ಲಿ ಸಂಶೋಧನೆ ನಡೆದದ್ದು ಕೇವಲ 71 ಜಿಲ್ಲೆಗಳಲ್ಲಿ ಎಂದಿದೆ. ಹಾಗಾದರೆ, ನಿಜಕ್ಕೂ ಸಂಶೋಧನೆ ನಡೆದಿದ್ದು ಎಷ್ಟು ಜಿಲ್ಲೆಗಳಲ್ಲಿ ಎಂಬ ಅನುಮಾನವೂ ಮೂಡಿದೆ. ಜೊತೆಗೆ ಒಂದು ವೇಳೆ ಕೆಲವು ಜಿಲ್ಲೆಗಳನ್ನು ಅಂತಿಮ ಫಲಿತಾಂಶ ನಿರ್ಧಾರದ ವೇಳೆ ಕೈಬಿಟ್ಟಿದ್ದರೆ, ಹಾಗೆ ಕೈಬಿಟ್ಟ ಆ ಜಿಲ್ಲೆಗಳು ಯಾವುವು ಮತ್ತು ಯಾಕೆ ಅವುಗಳನ್ನೇ ಕೈಬಿಡಲಾಗಿದೆ ಎಂಬ ವಿವರ ಹೊರಬರಬೇಕಿದೆ.

ಆದರೆ, ನೇರವಾಗಿ ಐಸಿಎಂಆರ್ ಮತ್ತು ಪರೋಕ್ಷವಾಗಿ ಚೌಕಿದಾರ್ ಮೋದಿಯವರ ಸರ್ಕಾರ ಹೀಗೆ ಜನರಿಗೆ ತಿಳಿಯಲೇಬೇಕಾದ ಮಾಹಿತಿಗೂ ಕಾವಲು ಕಾಯುತ್ತಿರುವುದರ ಹಿಂದೆ ಇರುವ ಕಾರಣ ಒಂದೇ. ಸಮೀಕ್ಷೆ ನಡೆದ ಹಾಟ್ ಸ್ಪಾಟ್ ನಗರಗಳಲ್ಲಿ ಆ ಹೊತ್ತಿಗೆ ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ಅಂದಾಜಿಸಿದ್ದಕ್ಕಿಂತ ಹತ್ತಾರು ಪಟ್ಟು ಹೆಚ್ಚು ಸೋಂಕು ವ್ಯಾಪಿಸಿರುವುದು ಸರ್ಕಾರವನ್ನು ದಿಗಿಲುಗೊಳಿಸಿದೆ. ಕರೋನಾ ನಿಯಂತ್ರಿಸಿದ್ದೇವೆ, ತಾವೇ ಮಾದರಿಯಾಗಿದ್ದೇವೆ. ಸಕಾಲಿಕ ಮತ್ತು ಪರಿಣಾಮಕಾರಿ ಲಾಕ್ ಡೌನ್ ಮೂಲಕ ಕರೋನಾದ ವಿರುದ್ಧ ಯಶಸ್ಸು ಕಂಡಿದ್ದೇವೆ ಎಂದು ಈಗಲೂ; ದೇಶದ ಸೋಂಕಿತರ ಸಂಖ್ಯೆ ಅರ್ಧ ಕೋಟಿ ದಾಟಿರುವಾಗಲೂ ಬಡಾಯಿ ಕೊಚ್ಚುತ್ತಿರುವ ಸರ್ಕಾರಕ್ಕೆ ಈ ಮಾಹಿತಿ ದೊಡ್ಡ ಮುಖಭಂಗ ತರಲಿದೆ ಎಂಬ ಭಯ ಅದಕ್ಕೆ ಕಾರಣ. ಸದ್ಯ ಸಂಶೋಧಕರು ನೀಡಿದ ಮಾಹಿತಿಯ ಪ್ರಕಾರ, ಸಮೀಕ್ಷೆ ನಡೆದ ಮುಂಬೈನಲ್ಲಿ, ಅಂದಾಜು ಜೂನ್ 29ರ ಹೊತ್ತಿಗೆ ಕೊಳಗೇರಿಗಳಲ್ಲಿ ಶೇ.57ರಷ್ಟು ಮಂದಿಗೆ ಮತ್ತು ಇತರೆ ಮೂರು ವಾರ್ಡುಗಳಲ್ಲಿ ಶೇ.16ರಷ್ಟು ಸೋಂಕು ಇರುವುದು ಆಯ್ದ ವ್ಯಕ್ತಿಗಳ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಹಾಗೇ ದೆಹಲಿಯಲ್ಲಿ ಜೂನ್ 27ರಿಂದ ಜುಲೈ 10ರ ಅವಧಿಯಲ್ಲಿ ಶೇ.23.48 ಮಂದಿಯಲ್ಲಿ ಸೋಂಕು ಇರುವುದು ಮತ್ತು ಪುಣೆಯಲ್ಲಿ ಜುಲೈ 20ರಿಂದ ಆಗಸ್ಟ್ 5ರ ಅವಧಿಯಲ್ಲಿ ಶೇ.60.8 ಮಂದಿಯಲ್ಲಿ, ಮತ್ತು ಅಹಮದಾಬಾದ್ ನಲ್ಲಿ ಆಗಸ್ಟ್ 15ರಿಂದ 19ರ ಅವಧಿಯಲ್ಲಿ ಶೇ.23.24 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂಬುದನ್ನು ಉಲ್ಲೇಖಿಸಲಾಗಿದೆ!

ಸಹಜವಾಗೇ ಈ ಮಟ್ಟದ ಸೋಂಕಿತರ ಪ್ರಮಾಣ, ದೇಶದಲ್ಲಿ ಶೇ.60ರಷ್ಟು ಮಂದಿಗೆ ಸೋಂಕು ಹರಡಿದೆ ಎಂಬ ಸೋಂಕ್ರಾಮಿಕ ತಜ್ಞರು ಮತ್ತು ವಿವಿಧ ವೈದ್ಯಕೀಯ ತಜ್ಞರ ಬೇರೆ ಬೇರೆ ಸಂದರ್ಭದ ಹೇಳಿಕೆಗಳನ್ನು ಖಾತರಿ ಪಡಿಸಿವೆ. ಇದು ಖಂಡಿತವಾಗಿಯೂ ಸರ್ಕಾರದ ದೊಡ್ಡ ವೈಫಲ್ಯಕ್ಕೆ ಆಧಾರಸಹಿತ ಮಾಹಿತಿಯಾಗಲಿದ್ದು, ದೊಡ್ಡ ಮಟ್ಟದಲ್ಲಿ ಮುಖಭಂಗ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿಯೇ ಮೋದಿಯವರ ಸರ್ಕಾರ ಈ ಸತ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಹಾಗಾಗಿಯೇ ಸಂಶೋಧನೆಯ ಸಂಪೂರ್ಣ ವಿವರಗಳನ್ನು ಪ್ರಕಟಿಸದಂತೆ ಸಂಶೋಧಕರಿಗೆ ಪರೋಕ್ಷ ಧಮಕಿ ಹಾಕಲಾಗಿದೆ ಎನ್ನಲಾಗುತ್ತಿದೆ.

ಈ ನಡುವೆ ಈ ವಿಷಯಕ್ಕೆ ಸಂಬಂಧಿಸಿದಂತೆ ಟೆಲಿಗ್ರಾಫ್ ವರದಿ ಪ್ರಕಟವಾದ ಬಳಿಕ ಸ್ಪಷ್ಟನೆ ನೀಡಿರುವ ಐಸಿಎಂಆರ್, ಈ ಸಂಶೋಧನೆಯ ದತ್ತಾಂಶವನ್ನು ತಾನು ಇನ್ನೂ ಪರಿಶೀಲಿಸುತ್ತಿದ್ದು, ಪರಿಶೀಲನೆಯ ಬಳಿಕ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಲಾಗುವುದು ಎಂದು ತಿಪ್ಪೆಸಾರಿಸುವ ಯತ್ನ ಮಾಡಿದೆ. ಆದರೆ, ತನ್ನದೇ ವೈದ್ಯಕೀಯ ಸಂಶೋಧನಾ ನಿಯತಕಾಲಿಕದಲ್ಲಿ ವರದಿ ಈಗಾಗಲೇ ಪ್ರಕಟವಾಗಿರುವಾಗ, ಅಲ್ಲಿ ಹಾಟ್ ಸ್ಪಾಟ್ ನಗರಗಳಿಗೆ ಸಂಬಂಧಿಸಿದ ಅಂಕಿಅಂಶ ಪ್ರಕಟವಾಗದಂತೆ ತಾನೇ ಅಡ್ಡಗಾಲು ಹಾಕಿರುವಾಗ ಪರಿಶೀಲಿಸಲು ಏನು ಉಳಿದಿದೆ ಎಂಬುದು ತಮಾಷೆಯ ಸಂಗತಿಯಾಗಿದೆ.

ಒಟ್ಟಾರೆ, ತನ್ನ ವೈಫಲ್ಯ, ಹಗರಣ, ಅವಿವೇಕಿತನಗಳನ್ನು ಮರೆಮಾಚಲು ಮೋದಿಯವರ ಸರ್ಕಾರ ನಡೆಸುತ್ತಿರುವ ಇಂತಹ ಸರ್ಕಸ್ಸುಗಳು ಕೇವಲ ಮೋದಿಯವರ ವೈಯಕ್ತಿಕ ವರ್ಚಸ್ಸು, ಅವರ ಬಿಜೆಪಿ ಪಕ್ಷದ ವಿಶ್ವಾಸಾರ್ಹತೆ ಮತ್ತು ಸರ್ಕಾರದ ಮೇಲಿನ ನಂಬಿಕೆಯನ್ನು ಮಾತ್ರ ಕರಗಿಸುವುದಿಲ್ಲ; ಬದಲಾಗಿ ದೇಶದ ದೂರಗಾಮಿ ಭವಿಷ್ಯದ ದೃಷ್ಟಿಯಿಂದ ಕಟ್ಟಿಬೆಳೆಸಿದ ಐಸಿಎಂಆರ್ ನಂತಹ ಮುಂಚೂಣಿ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನೂ ಮಣ್ಣುಪಾಲು ಮಾಡುತ್ತದೆ ಎಂಬುದು ದುರಂತ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com