ಆಶಾ ಕಾರ್ಯಕರ್ತೆಯರಿಗೆ ಸುರಕ್ಷತಾ ಉಪಕರಣಗಳೇ ಇಲ್ಲ; ಸಮೀಕ್ಷೆಯಿಂದ ಬಹಿರಂಗ!
ರಾಷ್ಟ್ರೀಯ

ಆಶಾ ಕಾರ್ಯಕರ್ತೆಯರಿಗೆ ಸುರಕ್ಷತಾ ಉಪಕರಣಗಳೇ ಇಲ್ಲ; ಸಮೀಕ್ಷೆಯಿಂದ ಬಹಿರಂಗ!

ಸಮೀಕ್ಷೆಯಲ್ಲಿ ಶೇಕಡಾ 76 ರಷ್ಟು ಆಶಾ ಕಾರ್ಯಕರ್ತರು ಮಾತ್ರ ಪಿಪಿಇ ಬಳಕೆ ಮತ್ತು ಸೋಂಕು ನಿಯಂತ್ರಣದ ಬಗ್ಗೆ ತರಬೇತಿ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಕೋವರ್ ಕೊಲ್ಲಿ ಇಂದ್ರೇಶ್

ಇಂದು ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕರೋನಾ ವಿರುದ್ದ ಹೋರಾಟಕ್ಕೆ ವಿಶ್ವದ ಎಲ್ಲ ದೇಶಗಳೂ ಒಂದಾಗಿವೆ. ಕರೋನಾ ಎಂಬ ಖಾಯಿಲೆಯು ಬರೀ ರೋಗಿಗಳನ್ನಷ್ಟೆ ಭಾಧಿಸುವುದಿಲ್ಲ ಇದು ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೂ ಅಂಟುತ್ತದೆ. ಇದೇ ಕಾರಣದಿಂದ ದೇಶದಲ್ಲಿ 350 ಕ್ಕೂ ಹೆಚ್ಚು ವೈದ್ಯರು ಮತ್ತು ಸಿಬ್ಬಂದಿಗಳೂ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಕೋವಿಡ್ 19 ವಿರುದ್ದ ಹೋರಾಟದಲ್ಲಿ ಇಂದು ಮುಂಚೂಣಿಯಲ್ಲಿರುವ ಸಿಬ್ಬಂದಿಗಳೆಂದರೆ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪೋಲೀಸ್ ಸಿಬ್ಬಂದಿಗಳು ಮತ್ತು ಆರೋಗ್ಯ ಸಿಬ್ಬಂದಿಗಳಾಗಿದ್ದಾರೆ. ಈ ರೋಗದ ವಿರುದ್ದ ಹೋರಾಡಲು ಸೂಕ್ತ ವೈಯಕ್ತಿಕ ಸುರಕ್ಷತಾ ಉಪಕರಣಗಳು ಅತ್ಯವಶ್ಯ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ ಕರೋನಾ ವಾರಿಯರ್ಸ್ ಎಂದು ಗೌರವಿಸಲ್ಪಡುವ ಆಶಾ ಕಾರ್ಯಕರ್ತೆಯರಿಗೆ ಉಪಕರಣಗಳ ಕೊರತೆ ಇರುವ ಆಘಾತಕಾರಿ ಮಾಹಿತಿಯೊಂದು ಬಹಿರಂಗಗೊಂಡಿದೆ. ದೇಶದಲ್ಲಿ ಮಾರ್ಚ್ ತಿಂಗಳಿನಿಂದಲೇ ಲಾಕ್ ಡೌನ್ ಆರಂಭಗೊಂಡಿದ್ದು ಕರೋನಾ ವಾರಿಯರ್ಸ್ ಗಳಿಗೆ ಸುಸಜ್ಜಿತ ಸುರಕ್ಷತಾ ಉಪಕರಣಗಳನ್ನು ನೀಡುತ್ತಿರುವುದಾಗಿ ಸರ್ಕಾರವೇ ಮಾಹಿತಿ ನೀಡಿತ್ತು. ಇದೀಗ ನಾಲ್ಕು ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯೊಂದು ಬಹಿರಂಗಪಡಿಸಿರುವ ಮಾಹಿತಿಯಲ್ಲಿ ಶೇಕಡಾ 25 ರಷ್ಟು ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಇಲ್ಲ. ಶೇಕಡಾ 38 ರಷ್ಟು ಆಶಾ ಕಾರ್ಯಕರ್ತೆಯರಿಗೆ ಕೈ ಗವುಸು ಸರಬರಾಜು ಮಾಡಿಲ್ಲ. ಉತ್ತರ ಪ್ರದೇಶ, ಒಡಿಶಾ, ಬಿಹಾರ ಮತ್ತು ಛತ್ತೀಸ್ಗಢ ಈ ನಾಲ್ಕು ರಾಜ್ಯಗಳಲ್ಲಿನ ಆಶಾ ಕಾರ್ಯಕರ್ತೆಯರ ಕೆಲಸದ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಆಕ್ಸ್ಫ್ಯಾಮ್ ಇಂಡಿಯಾ ಮತ್ತು ಅದರ ಪಾಲುದಾರ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಗಾಗಿ ಒಟ್ಟು 306 ಆಶಾ ಕಾರ್ಮಿಕರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ.

ಸಮೀಕ್ಷೆಯ ಪ್ರಕಾರ, ಕೇವಲ 23 ಶೇಕಡಾ ಕಾರ್ಯಕರ್ತೆಯರು ಹಜ್ಮತ್ ಅಥವಾ ಬಾಡಿ ಸೂಟ್ ಪಡೆದಿದ್ದಾರೆ. ಆಶಾ ಕಾರ್ಯಕರ್ತೆಯರು ಬೇರು ಮಟ್ಟದಲ್ಲಿ ಕೆಲಸ ಮಾಡುತಿದ್ದು ಪ್ರತಿದಿನ ಹಲವಾರು ಜನರನ್ನು ಭೇಟಿಯಾಗುತ್ತಿದ್ದಾರೆ, ಅವರಲ್ಲಿ ಹಲವರು ಕೋವಿಡ್ ಸೋಂಕಿಗೆ ಒಳಗಾಗಬಹುದು. ಇದು ರೋಗಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪ್ರತಿಯೊಬ್ಬ ಆಶಾ ಕಾರ್ಯಕರ್ತೆಗೂ ಸಮರ್ಪಕ ಮತ್ತು ಗುಣಮಟ್ಟದ ಪಿಪಿಇ (ವೈಯಕ್ತಿಕ ರಕ್ಷಣಾ ಸಾಧನ) ಒದಗಿಸುವುದು ಕಡ್ಡಾಯವಾಗಿದೆ. ಆದರೆ ಪಿಪಿಇಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಅವರಿಗೆ ತರಬೇತಿ ನೀಡದೆ, ಕೇವಲ ಸರಬರಾಜು ಮಾಡುವುದು ನಿಷ್ಪ್ರಯೋಜಕವಾಗಿದೆ.

ಸಮೀಕ್ಷೆಯಲ್ಲಿ ಶೇಕಡಾ 76 ರಷ್ಟು ಜನರು ಮಾತ್ರ ಪಿಪಿಇ ಬಳಕೆ ಮತ್ತು ಸೋಂಕು ನಿಯಂತ್ರಣದ ಬಗ್ಗೆ ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದೆ. ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸಿದ ಸೇವೆ ಗಣನೀಯವಾದುದು. ಇವರು ತಮ್ಮ ನಿತ್ಯದ ಕರ್ತವ್ಯದ ಜತೆಗೆ ಕೋವಿಡ್ ತಡೆಗಟ್ಟುವ ಹೆಚ್ಚುವರಿ ಕಾರ್ಯದಲ್ಲೂ ತೊಡಗಬೇಕಾಗಿತ್ತು.

ಇವರಿಗೆ ಕಬ್ಬಿಣದ ಮಾತ್ರೆಗಳನ್ನು ವಿತರಿಸುವುದು, ಶಿಶುಗಳು ಮತ್ತು ಗರ್ಭಿಣಿಯರ ರೋಗನಿರೋಧಕ ವೇಳಾಪಟ್ಟಿಯನ್ನು ಪರಿಶೀಲಿಸುವುದು, ಕ್ಷಯರೋಗ (ಟಿಬಿ) ರೋಗಿಗಳ ಮೇಲೆ ಆವರ್ತಕ ತಪಾಸಣೆ ಕೈಗೊಳ್ಳುವುದು ಮುಂತಾದ ಪ್ರಮುಖ ಜವಾಬ್ದಾರಿಗಳನ್ನು ವಹಿಸಲಾಗಿತ್ತು. ಇದರ ಜತೆಗೆ ಕೋವಿಡ್ ರೋಗಿಗಳನ್ನು ಗುರುತಿಸುವುದು, ಕೋವಿಡ್ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವುದು, ಹೊರಗಿನಿಂದ ಬರುವ ವಲಸೆ ಕಾರ್ಮಿಕರು ಕ್ಯಾರೆಂಟೈನ್ ಪ್ರೋಟೋಕಾಲ್ ಅನ್ನು ಅನುಸರಿಸುತ್ತಿದ್ದಾರೆಯೇ ಎಂದು ಸೂಕ್ಷ್ಮ ನಿಗಾ ಇಡಬೇಕಿತ್ತು.

ಲಾಕ್‌ಡೌನ್‌ ಮತ್ತು ಚಲನೆಯ ಇತರ ನಿರ್ಬಂಧಗಳ ಹೊರತಾಗಿಯೂ, ಆಶಾ ಕಾರ್ಯಕರ್ತೆಯರು ತಮ್ಮ ಕರ್ತವ್ಯವನ್ನು ಸಂಪೂರ್ಣ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಕೋವಿಡ್ ಪ್ರಸರಣವನ್ನು ತಡೆಗಟ್ಟಲು ಅವರು ದೀರ್ಘ ಕಾಲ ಕೆಲಸ ಮಾಡುತ್ತಿದ್ದಾರೆ ಮತ್ತು ಇತರ ಆರೋಗ್ಯ ಸೇವೆಗಳ ಕರ್ತವ್ಯವೂ ಕೂಡ ಲೋಪವಾಗದಂತೆ ನೋಡಿಕೊಂಡಿದ್ದಾರೆ. ಈ ಆಶಾ ಕಾರ್ಯಕರ್ತೆಯರಲ್ಲಿ ಸುಮಾರು 29 ಪ್ರತಿಶತದಷ್ಟು ಜನರು 8 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರು ಎಂದು ಸಮೀಕ್ಷೆಯು ಬಹಿರಂಗಪಡಿಸಿದರೆ, 42 ಪ್ರತಿಶತದಷ್ಟು ಜನರು ಪ್ರತಿದಿನ 6-8 ಗಂಟೆಗಳಷ್ಟು ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದೆ.

ಆಶಾ ಕಾರ್ಯಕರ್ತೆಯರು ಸ್ವಯಂಸೇವಕರಾಗಿದ್ದು, ಅವರು ತಮ್ಮ ಕೆಲಸಕ್ಕೆ ಗೌರವ ಧನ ಮತ್ತು ಪ್ರೋತ್ಸಾಹವನ್ನು ಪಡೆಯುತ್ತಾರೆ. ಆದಾಗ್ಯೂ, ಶೇಕಡಾ 64 ರಷ್ಟು ಜನರು ತಾವು ಕೈಗೊಂಡ ಕೋವಿಡ್ ಸಂಬಂಧಿತ ಜವಾಬ್ದಾರಿಗಳಿಗೆ ಯಾವುದೇ ಪ್ರೋತ್ಸಾಹ ಧನ ದೊರೆತಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಶೇಕಡಾ 43 ರಷ್ಟು ಆಶಾ ಕಾರ್ಯಕರ್ತೆಯರು ಮಾತ್ರ ತಮ್ಮ ಮಾಸಿಕ ಗೌರವಧನವನ್ನು ನಿಯಮಿತವಾಗಿ ಪಡೆಯುತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ಕೋವಿಡ್ ಕಾಲದಲ್ಲಿ ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸುವ ವಿಮಾ ಯೋಜನೆಯನ್ನು ನರೇಂದ್ರ ಮೋದಿ ಸರ್ಕಾರ ಘೋಷಿಸಿದೆ. ಈ ಯೋಜನೆಯು ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ - ನೈರ್ಮಲ್ಯ ಸಿಬ್ಬಂದಿ, ಮತ್ತು ದಾದಿಯರು, ಆಶಾ ಕಾರ್ಯಕರ್ತೆಯರು ಮತ್ತು ವೈದ್ಯರಿಗೆ ಪ್ರತಿ ವ್ಯಕ್ತಿಗೆ 50 ಲಕ್ಷ ರೂಪಾಯಿಗಳ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. ಆಧರೆ, ಶೇಕಡಾ 38 ರಷ್ಟು ಆಶಾ ಕಾರ್ಯಕರ್ತೆಯರಿಗೆ ಮಾತ್ರ ಈ ಯೋಜನೆಯ ಬಗ್ಗೆ ತಿಳಿದಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹಿಂಸಾಚಾರ ಮತ್ತು ಆರೋಗ್ಯ ಸಿಬ್ಬಂದಿಗಳ ವಿರುದ್ಧದ ತಾರತಮ್ಯವು ಅನೇಕ ಪಟ್ಟು ಹೆಚ್ಚಾಗಿದ್ದು, ಕೋವಿಡ್ ವಾರಿಯರ್ ಗಳು ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ.. ಶೇಕಡಾ 33 ರಷ್ಟು ಕಾರ್ಯಕರ್ತೆಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಕೆಲವು ರೀತಿಯ ತಾರತಮ್ಯ ಅಥವಾ ಹಿಂಸಾಚಾರಕ್ಕೆ ಒಳಗಾಗಿದ್ದರು ಎಂದು ಸಮೀಕ್ಷೆಯು ಹೇಳಿದೆ. ಆರೋಗ್ಯ ಕಾರ್ಯಕರ್ತರು ತಮ್ಮ ಸುರಕ್ಷತೆಗೆ ಅಪಾಯವಿರುವಾಗ ತಮ್ಮ ಜವಾಬ್ದಾರಿಗಳನ್ನು ಪೂರೈಸುವುದು ಕಷ್ಟ. ಆರೋಗ್ಯ ವೃತ್ತಿಪರರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳು ಮೋದಿ ಸರ್ಕಾರವು ಅವರ ಸುರಕ್ಷತೆಗಾಗಿ ಸುಗ್ರೀವಾಜ್ಞೆಯನ್ನು ಜಾರಿಗೆ ತರುವ ಅವಶ್ಯಕತೆ ಇದೆ., ಕೋವಿಡ್ ನಂತರದ ಯುಗದಲ್ಲೂ ನೂತನ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಅತ್ಯಗತ್ಯ ಎಂದು ಸಮೀಕ್ಷೆ ಹೇಳಿದೆ.

ಆಶಾ ಕಾರ್ಮಿಕರ ಪರಿಸ್ಥಿತಿಯು ಮಹಿಳೆಯರ ಶೋಷಣೆಗೆ ಮತ್ತೊಂದು ಉದಾಹರಣೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಪುರುಷ ಪ್ರಾಬಲ್ಯದ ಆರೋಗ್ಯ ಕ್ಷೇತ್ರದಲ್ಲಿ, ಅವರು ಕನಿಷ್ಠ ವೇತನವನ್ನು ಒದಗಿಸದೆ ಸರ್ಕಾರ ಕೆಲಸ ಮಾಡಿಸುತ್ತಿದೆ. ಇತರ ದುಡಿಯುವ ಮಹಿಳೆಯರಂತೆ, ಅವರೂ ಸಹ, ಮನೆಕೆಲಸಗಳನ್ನು ಮಾಡಿಕೊಳ್ಳಬೇಕಾಗಿದ್ದು ವೇತನವಿಲ್ಲದ ಕಾರ್ಯಕರ್ತೆಯ ಎರಡೂ ಕೆಲಸಗಳನ್ನು ಮಾಡಬೇಕಾಗಿದೆ.. ಆಶಾ ಕಾರ್ಯಕರ್ತೆಯರಿಗೆ ಪೂರ್ಣಾವಧೀ ವೇತನವನ್ನು ನೀಡಬೇಕಿದೆಯೇ ಹೊರತು ಕನಿಷ್ಠ ವೇತನವನ್ನಲ್ಲ, ಹಲವಾರು ರಾಜ್ಯ ಸರ್ಕಾರಗಳು ರಾಷ್ಟ್ರವ್ಯಾಪಿ ಪ್ರತಿಭಟನೆಯ ನಂತರ ಉತ್ತಮ ಗೌರವ ಧನ, ಪ್ರೋತ್ಸಾಹ ಮತ್ತು ಪಿಪಿಇ ಕಿಟ್ಗಳ ನ್ನು ಒದಗಿಸುವಲ್ಲಿ ಇನ್ನೂ ಕಾರ್ಯೋನ್ಮುಖವಾಗಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

ವಿಶ್ವ ರೋಗಿಗಳ ಸುರಕ್ಷತಾ ದಿನದಂದು, ಆಶಾ ಕಾರ್ಯಕರ್ತೆಯರು ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಸರ್ಕಾರ ಗುರುತಿಸಬೇಕು.ಅವರ ದೀರ್ಘಕಾಲೀನ ಕೆಲಸದ ಸ್ಥಿತಿ ಮತ್ತು ವೇತನ ಸಂಬಂಧಿತ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ. ಭಾರತದ ಆರೋಗ್ಯ ವ್ಯವಸ್ಥೆಯನ್ನು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಲಪಡಿಸಲು ಅವರನ್ನು ಪೂರ್ಣಾವಧಿ ವೇತನ ನೀಡುವ ಬಗ್ಗೆ ಚಿಂತಿಸಬೇಕಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com