ವಿವಾದಿತ ಮೂರು ಕೃಷಿ ಮಸೂದೆ: ರಾಜ್ಯಸಭೆಯ ಬಲಾಬಲದ ಲೆಕ್ಕಾಚಾರವೇನು?
ಪ್ರಧಾನಿ ಮೋದಿಯವರ ಶುಕ್ರವಾರದ ಅತಿ ವಿಶ್ವಾಸದ ಸಮರ್ಥನೆ ಮತ್ತು ಸಂಸತ್ತಿನ ಅನುಮೋದನೆ ಪಡೆದೇ ಪಡೆಯುತ್ತೇವೆ, ಕಾಯ್ದೆಯಾಗಿ ಜಾರಿಗೊಳಿಸಿ ದೇಶದ ರೈತರ ಬದುಕಿಗೆ ಹೊಸ ತಿರುವು ನೀಡುತ್ತೇವೆ ಎಂಬ ವಿಶ್ವಾಸದ ಹಿಂದೆ ಇರುವುದು ಕೂಡ ಇದೇ ಲೆಕ್ಕಾಚಾರ ಎನ್ ...
ವಿವಾದಿತ ಮೂರು ಕೃಷಿ ಮಸೂದೆ: ರಾಜ್ಯಸಭೆಯ ಬಲಾಬಲದ ಲೆಕ್ಕಾಚಾರವೇನು?

ಆಡಳಿತರೂಢ ಎನ್‌ಡಿಎ ಮೈತ್ರಿಕೂಟದಲ್ಲಿ ಮಹತ್ವದ ಒಡಕಿಗೂ, ಪ್ರತಿಪಕ್ಷ ಪಾಳೆಯದಲ್ಲಿ ಒಂದು ಮಟ್ಟದ ಒಗ್ಗಟ್ಟಿಗೂ ಕಾರಣವಾಗಿರುವ ಮೂರು ಕೃಷಿ ಸಂಬಂಧಿತ ಮಸೂದೆಗಳು ಭಾನುವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದ್ದು, ಮೇಲ್ಮನೆಯ ಪಕ್ಷಗಳ ಬಲಾಬಲದ ಹಿನ್ನೆಲೆಯಲ್ಲಿ ಇದೀಗ ಕುತೂಹಲ ಕೆರಳಿಸಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ವಾಣಿಜ್ಯ(ಉತ್ತೇಜನ ಮತ್ತು ನೆರವು) ಮಸೂದೆ, ಬೆಲೆ ಖಾತರಿ ಮತ್ತು ಕೃಷಿ ಸೇವಾ ಒಪ್ಪಂದ ಮಸೂದೆ(ಸಶಕ್ತೀಕರಣ ಮತ್ತು ರಕ್ಷಣೆ) ಮತ್ತು ಅಗತ್ಯಸೇವೆಗಳ (ತಿದ್ದುಪಡಿ) ಮಸೂದೆಗಳಿಗೆ ಈಗಾಗಲೇ ಲೋಕಸಭೆ ಅನುಮೋದನೆ ನೀಡಿದ್ದು, ಕೃಷಿ, ಕೃಷಿ ಉತ್ಪನ್ನ ಮಾರಾಟ ಮತ್ತು ರೈತ ಸಮುದಾಯಕ್ಕೆ ಸಂಬಂಧಿಸಿದ ಮಸೂದೆಗಳನ್ನು ಕಾಂಗ್ರೆಸ್ ಸೇರಿದಂತೆ ಬಹುತೇಕ ಪ್ರತಿಪಕ್ಷಗಳು ವಿರೋಧಿಸುತ್ತಿವೆ. ಜೊತೆಗೆ ಬಿಜೆಪಿಯ ಬಹುಕಾಲದ ಮಿತ್ರಪಕ್ಷ ಶಿರೋಮಣಿ ಅಕಾಲಿದಳ(ಎಸ್ ಎಡಿ) ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದು, ಮೋದಿಯವರ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಆ ಪಕ್ಷದ ಏಕೈಕ ಸಚಿವೆ ಕೂಡ ಗುರುವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಲ್ಲದೆ, ಪ್ರಮುಖವಾಗಿ ಪಂಜಾಬ್, ಹರ್ಯಾಣ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ಈ ಮಸೂದೆಗಳ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ನಿರಂತರ ಹೋರಾಟ ನಡೆಸುತ್ತಿದ್ಧಾರೆ. ಕೃಷಿ ವಲಯಕ್ಕೆ ಬೃಹತ್ ಉದ್ಯಮಿಗಳು, ಕಾರ್ಪೊರೇಟ್ ಕುಳಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಈ ಮಸೂದೆಗಳು, ರೈತರನ್ನು ಬೀದಿಪಾಲು ಮಾಡಲಿವೆ. ಬೆಂಬಲ ಬೆಲೆಯಂತಹ ವ್ಯವಸ್ಥೆಯನ್ನು ನಾಶ ಮಾಡಲಿದ್ದು, ಎಪಿಎಂಸಿಯಂತಹ ರೈತ ಉತ್ಪನ್ನಗಳ ಸುರಕ್ಷಾ ವ್ಯವಸ್ಥೆಯನ್ನು ಕೂಡ ನಾಶ ಮಾಡಲಿವೆ. ಹಾಗಾಗಿ ಇದು ರೈತರ ಪಾಲಿನ ಮರಣಶಾಸನ ಎಂದು ರೈತ ಸಂಘಟನೆಗಳು ವಿರೋಧಿಸುತ್ತಿವೆ. ಪ್ರತಿಪಕ್ಷಗಳು ಕೂಡ ಇದೇ ಕಾರಣವನ್ನು ಮುಂದೊಡ್ಡಿ ಪ್ರಬಲ ವಿರೋಧ ದಾಖಲಿಸಿವೆ. ಆದರೆ, ಲೋಕಸಭೆಯಲ್ಲಿ ಭಾರೀ ಬಹುಮತ ಹೊಂದಿರುವ ಬಿಜೆಪಿ, ಅಲ್ಲಿ ಈ ಮೂರೂ ವಿವಾದಿತ ಮಸೂದೆಗಳನ್ನು ಅನಾಯಾಸವಾಗಿ ಅಂಗೀಕರಿಸಿದೆ.

ಇದೀಗ ಈ ಮಸೂದೆಗಳು ಭಾನುವಾರ, ಬಿಜೆಪಿ ಮತ್ತು ಅದರ ಎನ್ ಡಿಎ ಮೈತ್ರಿಕೂಟ ನಿಚ್ಚಳ ಬಹುಮತ ಹೊಂದಿಲ್ಲದೇ ಇರುವ ರಾಜ್ಯಸಭೆಯಲ್ಲಿ ಅನುಮೋದನೆಗೆ ಮಂಡನೆಯಾಗಲಿವೆ. ಆ ಹಿನ್ನೆಲೆಯಲ್ಲಿ ಸ್ಥಾನಬಲದ ಲೆಕ್ಕಾಚಾರಗಳ ಗರಿಗೆದರಿದ್ದು, ಬಿಜೆಪಿ ಈ ಹಿಂದಿನ ಹಲವು ಮಸೂದೆಗಳ ವಿಷಯದಲ್ಲಿ ಮಾಡಿದಂತೆಯೇ, ಈ ವಿಷಯದಲ್ಲಿಯೂ ಎನ್ ಡಿಎ ಮೈತ್ರಿಕೂಟದ ಹೊರಗಿದ್ದರೂ ತನಗೆ ವಿಷಯಾಧಾರಿತ ಬೆಂಬಲ ನೀಡುತ್ತಿರುವ ಪ್ರಾದೇಶಿಕ ಪಕ್ಷಗಳು ಮತ್ತು ಕೆಲವು ಸಣ್ಣಪುಟ್ಟ ರಾಷ್ಟ್ರೀಯ ಪಕ್ಷಗಳ ಬೆಂಬಲ ಪಡೆಯಲಿದೆ. ಆ ನಿಟ್ಟಿನಲ್ಲಿ ಈಗಾಗಲೇ ಪಕ್ಷದ ನಾಯಕರು, ವಿವಿಧ ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಸದ್ಯ 243 ಸದಸ್ಯ ಬಲದ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಬೇಕಾದ ಸರಳ ಬಹುಮತಕ್ಕೆ ಅಗತ್ಯ 122 ಮತಗಳನ್ನು ಪಡೆಯಲಿದೆ. ಈಗಾಗಲೇ 130 ಮಂದಿ ಸಂಸದರು ಮಸೂದೆಯ ಪರ ಮತ ಹಾಕುವುದು ಬಹುತೇಕ ಖಚಿತವಾಗಿದೆ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.

ಈ ನಡುವೆ, ಪ್ರಧಾನಿ ಮೋದಿಯವರು ಶುಕ್ರವಾರ ಮಸೂದೆಗಳನ್ನು ಸಮರ್ಥಿಸಿಕೊಂಡಿದ್ದು, ಈ ಮೂರು ಮಸೂದೆಗಳು ದೇಶದ ಬಡ ಮತ್ತು ಮಧ್ಯಮ ವರ್ಗದ ರೈತರ ಬದುಕು ಹಸನು ಮಾಡಲಿವೆ. ರೈತರ ಹಿತ ಕಾಯುವ ನಿಟ್ಟಿನಲ್ಲಿ ರಕ್ಷಾ ಕವಚವಾಗಿ ಕೆಲಸ ಮಾಡಲಿದ್ದು, ರೈತರ ಆದಾಯ ದುಪ್ಪಟ್ಟು ಮಾಡುವ ತಮ್ಮ ಕನಸನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಈ ಮಸೂದೆಗಳನ್ನು ಅಂಗೀಕರಿಸುತ್ತೇವೆ ಎಂದಿದ್ಧಾರೆ. ಜೊತೆಗೆ ರೈತರ ಹಿತ ಪರಿಗಣಿಸದೆ, ಕೇವಲ ರಾಜಕೀಯ ಕಾರಣಕ್ಕಾಗಿ ಪ್ರತಿಪಕ್ಷಗಳು ಸುಳ್ಳು ಮಾಹಿತಿಗಳನ್ನು ನೀಡಿ ರೈತ ಸಮುದಾಯವನ್ನು ದಾರಿತಪ್ಪಿಸುತ್ತಿವೆ ಎಂದೂ ಹೇಳಿದ್ದಾರೆ. ಹಾಗಾಗಿ ಮೋದಿಯವರ ಮಾತುಗಳು ಕೂಡ ಹಲವು ಸಂಸದರನ್ನು ಮಸೂದೆಯ ಪರ ಸೆಳೆಯಲಿವೆ ಎಂಬುದು ಬಿಜೆಪಿ ಸರ್ಕಾರದ ಲೆಕ್ಕಾಚಾರ.

ಸದ್ಯದ ಲೆಕ್ಕಾಚಾರಗಳ ಪ್ರಕಾರ, ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮಸೂದೆ ಪರ ಕನಿಷ್ಟ 105 ಸಂಸದರ(ಬಿಜೆಪಿಯ 86 ಮತ್ತು ಎನ್ ಡಿಎ) ಬೆಂಬಲ ಪಡೆಯಲಿದ್ದು, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ 100 ಮಂದಿ ಸಂಸದರು ಮಸೂದೆಯ ವಿರುದ್ದ ಮತ ಚಲಾಯಿಸುವ ನಿರೀಕ್ಷೆ ಇದೆ. ಮಸೂದೆ ವಿರುದ್ಧ ಮತ ಚಲಾಯಿಸಲು ವಿಪ್ ಜಾರಿಮಾಡಿರುವ ಅಕಾಲಿದಳದ ಮೂವರು ಸಂಸದರನ್ನು ಹೊರತುಪಡಿಸಿಯೂ ಎನ್ ಡಿಎಗೆ ಮೇಲುಗೈ ಸಾಧಿಸುವ ವಿಶ್ವಾಸವಿದೆ. ಜೊತೆಗೆ ಈ ಹಿಂದಿನ ಬಹುತೇಕ ಎಲ್ಲಾ ಮಸೂದೆಗಳಲ್ಲಿ ರಾಜ್ಯಸಭೆಯಲ್ಲಿ ಸರ್ಕಾರದ ಪರ ಮತಹಾಕಿರುವ ಬಿಜೆಡಿ(ಒಂಭತ್ತು ಮಂದಿ), ಟಿಆರ್ ಎಸ್(ಏಳು ಮಂದಿ) ಮತ್ತು ವೈಎಸ್ ಆರ್ ಕಾಂಗ್ರೆಸ್(ಆರು ಮಂದಿ) ಪಕ್ಷಗಳ ಸಂಸದರು ಕೂಡ ಈ ಮಸೂದೆಗಳ ಪರ ಮತ ಚಲಾಯಿಸುವ ಸಾಧ್ಯತೆ ಇದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿರುವ ಬಿಜೆಪಿಯ ಒಂದು ಕಾಲದ ಪರಮಾಪ್ತ ಮಿತ್ರ ಶಿವಸೇನಾ(ಮೂವರು ಸಂಸದರು) ಕೂಡ ಮಸೂದೆಯ ಪರ ಮತಹಾಕುವುದಾಗಿ ಈಗಾಗಲೇ ಆ ಪಕ್ಷ ಘೋಷಿಸಿದೆ. ಜೊತೆಗೆ ಮಹಾರಾಷ್ಟ್ರ ಸರ್ಕಾರದ ಮತ್ತೊಂದು ಮಿತ್ರಪಕ್ಷ ಎನ್ ಸಿಪಿ(ನಾಲ್ವರು ಸಂಸದರು)ಯ ಬೆಂಬಲವನ್ನೂ ಕೂಡ ಬಿಜೆಪಿ ನಿರೀಕ್ಷಿಸಿದ್ದು, ಈಗಾಗಲೇ ಆ ನಿಟ್ಟಿನಲ್ಲಿ ಮಾತುಕತೆ ನಡೆಸಿದೆ ಎನ್ನಲಾಗಿದೆ.

ಮತ್ತೊಂದು ಕಡೆ, ರಾಜ್ಯಸಭೆಯ ಪ್ರತಿಪಕ್ಷಗಳ ಪಾಳೆಯದಲ್ಲಿ ಕಾಂಗ್ರೆಸ್ 40 ಸಂಸದರನ್ನು ಹೊಂದಿದ್ದರೆ, ತೃಣಮೂಲ ಕಾಂಗ್ರೆಸ್ 13 ಸದಸ್ಯರನ್ನು ಹೊಂದಿದೆ.ಇನ್ನು ಬಿಎಸ್ ಪಿಯ ನಾಲ್ವರು, ಸಮಾಜವಾದಿ ಪಕ್ಷದ ಎಂಟು ಮಂದಿ ಮತ್ತು ಎಎಪಿಯ ಮೂವರು ಸಂಸದರು ಹಾಗೂ ಇನ್ನಿತರ ಚಿಕ್ಕಪುಟ್ಟ ಪಕ್ಷಗಳ ಕೆಲವು ಸಂಸದರು ಮಾತ್ರ ಇದ್ದಾರೆ. ಹಾಗಾಗಿ ಏನೇ ಎಂದರೂ, ಸದ್ಯದ ಸ್ಥಿತಿಯಲ್ಲಿ ಪ್ರತಿಪಕ್ಷಗಳ ಬಲಾಬಲ ನೂರರ ಸಮೀಪಕ್ಕೂ ಹೋಗುವುದು ಅನುಮಾನಾಸ್ಪದ. ಹಾಗಾಗಿ ಅಕಾಲಿದಳದ ಅಕಾಲಿಕ ಬಂಡಾಯದ ರೀತಿಯಲ್ಲಿ ಎನ್ ಡಿಎ ಮಿತ್ರಪಕ್ಷಗಳಲ್ಲೇ ಕೆಲವರು ದಿಢೀರ್ ಬದಲಾವಣೆಯಾಗದ ಹೊರತು, ಮಸೂದೆಯನ್ನು ತಡೆಯುವ ಪ್ರತಿಪಕ್ಷಗಳ ಯತ್ನ ಸಫಲವಾಗಲಾರದು.

ಈ ನಡುವೆ; ಈಗಾಗಲೇ ಹತ್ತು ಮಂದಿ ರಾಜ್ಯಸಭಾ ಸದಸ್ಯರು ಕೋವಿಡ್-19 ಸೋಂಕಿತರಾಗಿದ್ದು, ಕಲಾಪದಿಂದ ದೂರ ಉಳಿದಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಸೇರಿದಂತೆ ಇನ್ನೂ 15 ಸಂಸದರು ಬೇರೆಬೇರೆ ಕಾರಣಗಳಿಂದಾಗಿ ಭಾನುವಾರ ಕಲಾಪದಿಂದ ದೂರ ಉಳಿಯುವ ಅನಿವಾರ್ಯತೆ ಇದೆ ಎಂದಿದ್ದಾರೆ. ಹಾಗಾಗಿ ಸದನದ ಸಂಖ್ಯಾಬಲ ಗಣನೀಯವಾಗಿ ಕುಸಿಯಲಿದೆ. ಇದು ಸರ್ಕಾರದ ಪಾಲಿಗೆ ಅನುಕೂಲಕರವಾಗಲಿದ್ದು, ಬಹುತೇಕ ಲೋಕಸಭೆಯಂತೆಯೇ ರಾಜ್ಯಸಭೆಯಲ್ಲಿ ಮೂರೂ ಮಸೂದೆಗಳು ಅನಾಯಾಸವಾಗಿ ಅಂಗೀಕಾರವಾಗುವ ಸಾಧ್ಯತೆ ಇದೆ.

ಪ್ರಧಾನಿ ಮೋದಿಯವರ ಶುಕ್ರವಾರದ ಅತಿ ವಿಶ್ವಾಸದ ಸಮರ್ಥನೆ ಮತ್ತು ಸಂಸತ್ತಿನ ಅನುಮೋದನೆ ಪಡೆದೇ ಪಡೆಯುತ್ತೇವೆ, ಕಾಯ್ದೆಯಾಗಿ ಜಾರಿಗೊಳಿಸಿ ದೇಶದ ರೈತರ ಬದುಕಿಗೆ ಹೊಸ ತಿರುವು ನೀಡುತ್ತೇವೆ ಎಂಬ ವಿಶ್ವಾಸದ ಹಿಂದೆ ಇರುವುದು ಕೂಡ ಇದೇ ಲೆಕ್ಕಾಚಾರ ಎನ್ನಲಾಗುತ್ತಿದೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com