ಕರೋನಾ ಅಪಾಯ: ದಿಢೀರ್ ಸಾವು ತಡೆಯಲು ಇನ್ನಾದರೂ ಸಿಗುವುದೇ ಗಮನ?

ಜನರ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ಅವಿವೇಕಿತನವನ್ನು ಪ್ರಶ್ನಿಸಬೇಕಾದ ಪ್ರತಿಪಕ್ಷಗಳು ಬಹುತೇಕ ಅನಸ್ತೇಷಿಯಾ ನೀಡಿದ ರೋಗಿಗಳಂತಾಗಿವೆ. ಮಾಧ್ಯಮಗಳು ಜಾಹೀರಾತು ಮತ್ತು ಇತರೆ ಆದಾಯ ಮೂಲಗಳಿಗೆ ಜೋತುಬಿದ್ದು, ಸರ್ಕಾರ ಪ್ರತಿದಿನ ನೀಡುವ ಕೋವಿಡ್ ಬು ...
ಕರೋನಾ ಅಪಾಯ: ದಿಢೀರ್ ಸಾವು ತಡೆಯಲು ಇನ್ನಾದರೂ ಸಿಗುವುದೇ ಗಮನ?

ದೇಶದ ಅಧಿಕೃತ ಕರೋನಾ ಪ್ರಕರಣಗಳ ಸಂಖ್ಯೆ ಅರ್ಧ ಕೋಟಿ ದಾಟಿದೆ. ಜಾಗತಿಕ ಮಹಾಮಾರಿಗೆ ಅಧಿಕೃತವಾಗಿ ಬಲಿಯಾದವರ ಸಂಖ್ಯೆ ಕೂಡ ಒಂದು ಲಕ್ಷದ ಗಡಿಗೆ ಸಮೀಪಿಸಿದೆ(87 ಸಾವಿರ). ಇನ್ನು ಪರೀಕ್ಷೆಗೊಳಗಾಗದ ಸೋಂಕಿತರ ಸಂಖ್ಯೆ ಈ ಅಧಿಕೃತ ಮಾಹಿತಿಯ ಹತ್ತಾರು ಪಟ್ಟು ಹೆಚ್ಚಿರಬಹುದು ಎನ್ನಲಾಗುತ್ತಿದ್ದರೆ, ಮೃತರ ಸಂಖ್ಯೆ ಕೂಡ ವಾಸ್ತವವಾಗಿ ಹಲವು ಪಟ್ಟು ಹೆಚ್ಚಿರಬಹುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರಮುಖವಾಗಿ ಇತ್ತೀಚಿನ ಒಂದೆರಡು ತಿಂಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಿದ್ದು, ರೋಗ ಪತ್ತೆ ಪರೀಕ್ಷೆ, ಚಿಕಿತ್ಸೆಗೆ ಒಳಗಾಗಿಯೂ ಉಸಿರಾಟದ ತೊಂದರೆ, ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಸಾವುಕಾಣುವ ಪ್ರಕರಣಗಳು ಹೆಚ್ಚುತ್ತಿವೆ. ಜೊತೆಗೆ, ಪರೀಕ್ಷೆಗೆ ಒಳಗಾಗದೆ, ಕೋವಿಡ್ ಪ್ರಕರಣವೆಂದು ಗುರುತಿಸಲ್ಪಡದೆಯೂ ಬಹಳಷ್ಟು ಮಂದಿ ದಿಢೀರ್ ಹೃದಯಾಘಾತ ಮತ್ತು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಸಾವು ಕಾಣುವ ಪ್ರಕರಣಗಳು ತೀರಾ ಆಘಾತಕಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ. ಆ ಪೈಕಿ ಬಹುತೇಕ ಮಂದಿ ಆರೋಗ್ಯವಾಗಿ, ಎಂದಿನಂತೆ ಚಟುವಟಿಕೆಯಿಂದಿರುವಾಗಲೇ ದಿಢೀರನೇ ಉಸಿರಾಟದ ತೊಂದರೆ ಕಾಣಿಸಿಕೊಂಡು ಕೆಲವೇ ತಾಸುಗಳಲ್ಲಿ ಸಕಾಲಿಕ ಚಿಕಿತ್ಸೆ ಸಿಗದೆ ಸಾವು ಕಂಡದ್ದೂ ಇದೆ. ಮತ್ತೆ ಕೆಲವರಿಗೆ ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ಹೃದಯಾಘಾತವಾಗಿ ಒಂದೇ ಏಟಿಗೆ ಜೀವ ಹೋದ ಘಟನೆಗಳೂ ನಡೆದಿವೆ. ಇಂತಹ ಪ್ರಕರಣಗಳು ಬಹುತೇಕ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲೇ ಕಳೆದ ಒಂದೆರಡು ತಿಂಗಳಲ್ಲಿ ದೊಡ್ಡಮಟ್ಟದಲ್ಲಿ ಸಂಭವಿಸಿವೆ ಎಂದು ವೈದ್ಯಕೀಯ ತಜ್ಞರೇ ಹೇಳುತ್ತಾರೆ.

ಈ ನಡುವೆ; ರಾಜ್ಯಾದ್ಯಂತ ಖಾಸಗೀ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಲಭ್ಯತೆ ತೀರಾ ಕೊರೆತೆಯುಂಟಾಗಿದೆ ಎಂಬುದನ್ನು ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಹೇಳಿದ್ದಾರೆ. ರಾಜ್ಯದಲ್ಲಿ ಕೃತಕ ಆಮ್ಲಜನಕ ಬೇಡಿಕೆ ಇತ್ತೀಚಿನ ದಿನಗಳಲ್ಲಿ ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ. ಮತ್ತೊಂದು ಕಡೆ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಸಾಕಷ್ಟು ತೊಂದರೆಗಳಾಗುತ್ತಿವೆ. ಹಾಗಾಗಿ ಆಸ್ಪತ್ರೆಗಳಿಗೆ ಬೇಡಿಕೆಗೆ ತಕ್ಕಂತೆ ಆಮ್ಲಜನಕ ಸರಬರಾಜು ಸಾಧ್ಯವಾಗುತ್ತಿಲ್ಲ ಎಂದು ಆಮ್ಲಜನಕ ತಯಾರಕ ಸಂಸ್ಥೆಗಳು ಹೇಳಿವೆ. ಹಾಗಾಗಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ರೋಗಿಗಳು ಅಲ್ಲಿಗೆ ತಲುಪಿದ ಬಳಿಕ ಸಕಾಲದಲ್ಲಿ ಆಮ್ಲಜನಕ ದೊರೆಯದೆ ಸಾವನ್ನಪ್ಪುವ ಘಟನೆಗಳೇ ಹೆಚ್ಚು.

ಆದರೆ, ವಿಚಿತ್ರವೆಂದರೆ; ರಾಜ್ಯಾದ್ಯಂತ ಗಣನೀಯ ಪ್ರಮಾಣದಲ್ಲಿ ಕೋವಿಡ್ ಸಾವುಗಳು ಹೆಚ್ಚಿದ್ದರೂ, ಸರ್ಕಾರ ಬಿಡುಗಡೆ ಮಾಡುವ ಅಧಿಕೃತ ಕೋವಿಡ್ ಮಾಹಿತಿಯಲ್ಲಿ ಮಾತ್ರ ಸಾವಿನ ಪ್ರಮಾಣ ತೀರಾ ಕಡಿಮೆ ಎಂದೇ ಬಿಂಬಿಸಲಾಗುತ್ತಿದೆ. 7800ಕ್ಕೂ ಹೆಚ್ಚು ಜೀವಹಾನಿ ಮೂಲಕ ಸಾವಿನ ಪ್ರಮಾಣದಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದರೂ, ರಾಜ್ಯದಲ್ಲಿ ವಾಸ್ತವವಾಗಿ ಸಂಭವಿಸುತ್ತಿರುವ ಕೋವಿಡ್ ಸಾವುಗಳಿಗೆ ಹೋಲಿಸಿದರೆ ಇದು ತೀರಾ ನಗಣ್ಯ ಪ್ರಮಾಣ ಎಂಬುದು ವೈದ್ಯಕೀಯ ರಂಗದಲ್ಲೇ ಕೇಳಿಬರುತ್ತಿರುವ ಮಾತು. ಈ ನಡುವೆ, ಕೋವಿಡ್ ಪ್ರಕರಣಗಳ ಕುರಿತು ನಿತ್ಯ ವರದಿ ಮಾಡುವ ನಮ್ಮ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಕೂಡ ಸರ್ಕಾರದ ತಾಳಕ್ಕೆ ತಕ್ಕಂತೆ ಎಷ್ಟು ನಾಜೂಕಾಗಿ ನಡೆಯುತ್ತಿವೆ ಎಂದರೆ; ಅವುಗಳು ಬಹುತೇಕ ಸಂದರ್ಭದಲ್ಲಿ ಸಾವಿನ ಕುರಿತ ಅಂಕಿಅಂಶಗಳನ್ನು ಸಾಧ್ಯವಾದಷ್ಟೂ ಮರೆಮಾಚಿ, ಕೇವಲ ರೋಗದಿಂದ ಗುಣಮುಖರಾಗಿ ಬಿಡುಗಡೆಯಾದವರ ಕುರಿತ ಸರ್ಕಾರದ ಅಧಿಕೃತ ಮಾಹಿತಿಯನ್ನೇ ದೊಡ್ಡದಾಗಿ ಪ್ರಚಾರ ಮಾಡುತ್ತಿವೆ. ವಾಸ್ತವಾಂಶಗಳನ್ನು ಮರೆಮಾಚಿ ಜನರ ಕಣ್ಣಿಗೆ ಮಣ್ಣೆರಚುವ ಸರ್ಕಾರದ ಉದ್ದೇಶಕ್ಕೆ ತಕ್ಕಂತೆ ವರದಿ ಮಾಡುವ ವರಸೆ ಇದು.

ಈ ನಡುವೆ, ಕೋವಿಡ್ ವಿರುದ್ಧ ಸಮರದ ಮೊದಲ ಹಂತವನ್ನೇ ಈಗಲೂ ನೆಚ್ಚಿಕೊಂಡಿರುವ ಸರ್ಕಾರ, ಈಗಲೂ ಸೋಂಕಿತರ ಪತ್ತೆ, ಪರೀಕ್ಷೆಯಂತಹ ಕ್ರಮಗಳಿಗೇ ಜೋತುಬಿದ್ದಿದ್ದು, ಕೋಟ್ಯಂತರ ರೂಪಾಯಿ ಅದಕ್ಕಾಗಿ ವೆಚ್ಚ ಮಾಡುತ್ತಿದೆ. ಆದರೆ, ವಾಸ್ತವವಾಗಿ ಸೋಂಕು ಸಮುದಾಯದ ಮಟ್ಟದಲ್ಲಿ ಹರಡದೇ ಇರುವ ಮುನ್ನ, ರೋಗ ಜನಸಮುದಾಯಕ್ಕೆ ಹರಡದೇ ಇರಲಿ ಎಂದು ಸೋಂಕು ತಡೆಯ ಕ್ರಮವಾಗಿ ವ್ಯಾಪಕ ಪರೀಕ್ಷೆಗಳು ಮತ್ತು ಸೋಂಕಿತರ ಪತ್ತೆ ಮಾಡಬೇಕಾದುದು ಸೋಂಕಿನ ಆರಂಭದ ಹಂತದಲ್ಲಿ ಅಗತ್ಯವಿತ್ತು. ಆಗ ಮಾಡಬೇಕಾದ ಪ್ರಮಾಣದಲ್ಲಿ ಆ ಕಾರ್ಯ ಮಾಡದೆ, ಚಪ್ಪಾಳೆ ಹೊಡೆದು, ಶಂಖಜಾಗಟೆ ಬಾರಿಸಿ, ದೀಪ ಹಚ್ಚಿ ವೈರಸ್ ಓಡಿಸುವ ಯತ್ನ ಮಾಡಿದ ಸರ್ಕಾರ, ಈಗ ಎಲ್ಲವೂ ಕೈಮೀರಿ ಹೋಗಿ ಸೋಂಕು ಸಮುದಾಯದ ಮಟ್ಟದಲ್ಲಿ ವ್ಯಾಪಕವಾಗಿ ಹರಡಿರುವಾಗ, ಕೂಡ ಸಂದರ್ಭಕ್ಕೆ ತಕ್ಕಂತೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವ ಬದಲು, ವೈಜ್ಞಾನಿಕವಾಗಿ ರೋಗದ ವಿರುದ್ಧ ಸಮರ ನಡೆಸುವ ಬದಲು, ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳುವ ಕೆಲಸವನ್ನೇ ಮುಂದುವರಿಸಿದೆ.

ದೇಶದ ಪ್ರತಿ ಐದು ಮಂದಿಯಲ್ಲಿ ನಾಲ್ವರಲ್ಲಿ ಸೋಂಕು ಇದೆ. ಆದರೆ, ಪರೀಕ್ಷೆ ಮಾಡದೇ ಇರುವ ಕಾರಣಕ್ಕೆ ಆ ಲೆಕ್ಕಾಚಾರಗಳು ಸಿಗುತ್ತಿಲ್ಲ ಎಂದು ವೈದ್ಯಕೀಯ ಮತ್ತು ಸೋಂಕು ತಜ್ಞರೇ ಹೇಳುತ್ತಿದ್ದಾರೆ. ಹಾಗಿರುವಾಗ ಈ ಹಂತದಲ್ಲಿ ಸೋಂಕು ಮತ್ತು ಸೋಂಕಿತರ ಪತ್ತೆಗಿಂತ, ಸೋಂಕು ಲಕ್ಷಣಗಳೊಂದಿಗೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವವರ ಜೀವ ರಕ್ಷಣೆ ಆದ್ಯತೆಯಾಗಬೇಕು. ಅಂದರೆ; ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಹಾಸಿಗೆ, ಆಮ್ಲಜನಕದ ವ್ಯವಸ್ಥೆ ಮಾಡುವ ಮೂಲಕ ಜನರ ಜೀವ ರಕ್ಷಣೆ ಮಾಡಬೇಕಾದುದು ತುರ್ತು. ಸಮಾಜದಲ್ಲಿ ಬಹುತೇಕರಿಗೆ ಸೋಂಕು ಹರಡಿದೆ. ಆ ಪೈಕಿ ಕೆಲವರಲ್ಲಿ ಮಾತ್ರ ಸೋಂಕು ಲಕ್ಷಣಗಳು ಕಾಣಿಸಿಕೊಂಡಿವೆ. ಇನ್ನುಳಿದವರಲ್ಲಿ ಲಕ್ಷಣರಹಿತ ಸೋಂಕು ಇದೆ. ಆದರೆ, ಯಾವುದೇ ಪರಿಸ್ಥಿತಿಯಲ್ಲಿ ಈ ಎರಡೂ ವರ್ಗದವರಲ್ಲಿ ದಿಢೀರ್ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು ಮತ್ತು ತುರ್ತು ಆಮ್ಲಜನಕ ಮತ್ತು ಚಿಕಿತ್ಸೆಯ ಅಗತ್ಯ ಬೀಳಬಹುದು. ಹಾಗಾಗಿ, ಈ ಹಂತದಲ್ಲಿ ತೀರಾ ಜರೂರಾಗಿ ಬೇಕಾಗಿರುವುದು ಇಂತಹ ದಿಢೀರ್ ಅಪಾಯಕ್ಕೆ ಈಡಾಗುವ ರೋಗಿಗಳ ಜೀವ ರಕ್ಷಣೆಗೆ ಬೇಕಾದ ತುರ್ತು ಮತ್ತು ತತಕ್ಷಣದ ವ್ಯವಸ್ಥೆಗಳನ್ನು ಖಾತರಿಪಡಿಸುವುದು.

ಆ ನಿಟ್ಟಿನಲ್ಲಿ ಸಾಧ್ಯವಾದಷ್ಟು ಕಡಿಮೆ ಅವಧಿಯಲ್ಲಿ ಅವರಿಗೆ ತುರ್ತು ಜೀವರಕ್ಷಕ ಸೇವೆ ಒದಗುವಂತೆ ಕನಿಷ್ಟ ನಗರ ಮತ್ತು ಪಟ್ಟಣ ಪ್ರದೇಶದಲ್ಲಾದರೂ ವಾರ್ಡುವಾರು ಆಂಬ್ಯುಲೆನ್ಸ್, ಆಮ್ಲಜನಕ ಸಹಿತ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಬೇಕಾಗಿದೆ. ದಿನದ 24 ತಾಸೂ ಅಲ್ಲಿ ವೈದ್ಯಕೀಯ ತುರ್ತು ಸೇವೆ ಲಭ್ಯವಾಗುವಂತೆ ಖಾತರಿ ಪಡಿಸಬೇಕಾಗಿದೆ. ಸಾಧ್ಯವಾದಲ್ಲಿ ರೋಗಲಕ್ಷಣಸಹಿತ ಸೋಂಕಿತರಿರುವ ಮನೆಗಳಿಗೆ ಕನಿಷ್ಟ ಮಿನಿ ಆಮ್ಲಜನಕ ಸಿಲಿಂಡರ್ ಸರಬರಾಜು, ತುರ್ತು ಸಂದರ್ಭದಲ್ಲಿ ಬಳಕೆಗೆ ಆಕ್ಸಿಮೀಟರ್ನಂತಹ ಜೀವರಕ್ಷಕ ಸಲಕರಣೆ- ಸೌಲಭ್ಯ ಒದಗಿಸಬೇಕಾಗಿದೆ. ರೋಗದ ಈ ಹಂತದಲ್ಲಿ ಆದ್ಯತೆಯಾಗಬೇಕಿರುವುದು ಈ ಕ್ರಮ.

ಆದರೆ, ರಾಜ್ಯ ಸರ್ಕಾರ ಆಸ್ಪತ್ರೆಗಳ ಆಮ್ಲಜನಕ, ಹಾಸಿಗೆ, ವೈದ್ಯರು ಮತ್ತು ಇತರೆ ಸಿಬ್ಬಂದಿಯ ಸುರಕ್ಷಾ ಕಿಟ್ ಹಾಗೂ ಅವರಿಗೆ ಅಗತ್ಯ ಹಣಕಾಸಿನ ಬೆಂಬಲ ನೀಡಲು ಹಣಕಾಸು ಬಿಕ್ಕಟ್ಟಿನ ನೆಪ ಹೇಳುತ್ತಿದೆ. ದುರಂತವೆಂದರೆ; ಜನರ ಜೀವ ಉಳಿಸುವ ವಿಷಯದಲ್ಲಿ ಹಣಕಾಸಿನ ಮುಗ್ಗಟ್ಟಿನ ಮಾತನಾಡಿ ಕೈಚೆಲ್ಲುತ್ತಿರುವ ಸರ್ಕಾರ, ವಿಮಾನನಿಲ್ದಾಣ, ರಿಂಗ್ ರೋಡು, ಪ್ರವಾಸಿ ತಾಣ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಯೋಜನೆ, ಕೊಡಚಾದ್ರಿಗೆ ಕೇಬಲ್ ಕಾರ್ ಮುಂತಾದ ಐಷಾರಾಮಿ ಮತ್ತು ತುರ್ತು ಅಗತ್ಯವಲ್ಲದ ಯೋಜನೆಗಳಿಗೆ ಸಾವಿರಾರು ಕೋಟಿ ಬಿಡುಗಡೆ ಮಾಡುತ್ತಲೇ ಇದೆ!

ಇದೀಗ ಕೋವಿಡ್ ಲಾಕ್ ಡೌನ್ ನಷ್ಟದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಆಗಿರುವ ತೀವ್ರ ಆದಾಯ ಕೊರತೆಯನ್ನು ನೀಗಿಸಿಕೊಳ್ಳಲು ಆರ್ ಬಿಐ ನೆರವಿನ ಮೂಲಕ ಬರೋಬ್ಬರಿ 33 ಸಾವಿರ ಕೋಟಿ ರೂ ಸಾಲ ಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಹಾಗೆ ಪಡೆಯುವ ಆ ಬೃಹತ್ ಮೊತ್ತ ಕೂಡ ಕೆಲವೇ ಮಂದಿಯ ಐಷಾರಾಮಿ ಬದುಕಿಗೆ ಬೆಂಬಲವಾಗಿ ಬೃಹತ್ ಯೋಜನೆಗಳಿಗೆ ಹರಿದುಹೋಗುವುದೇ ಅಥವಾ ಜೀವಕಂಟಕ ಮಹಾಮಾರಿಯ ದವಡೆಯಿಂದ ಎಲ್ಲರ ಜೀವ ಪಾರುಮಾಡುವ ನಿಟ್ಟಿನಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಳಕ್ಕೆ, ಕನಿಷ್ಟ ಆಮ್ಲಜನಕದಂತಹ ತೀರಾ ಅಗತ್ಯ ಸೌಲಭ್ಯ ಖಾತರಿಪಡಿಸಲು ಬಳಕೆಯಾಗುತ್ತದೆಯೇ ಎಂಬುದನ್ನ ಕಾದುನೋಡಬೇಕಿದೆ.

ಜನರ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ಅವಿವೇಕಿತನವನ್ನು ಪ್ರಶ್ನಿಸಬೇಕಾದ ಪ್ರತಿಪಕ್ಷಗಳು ಬಹುತೇಕ ಅನಸ್ತೇಷಿಯಾ ನೀಡಿದ ರೋಗಿಗಳಂತಾಗಿವೆ. ಮಾಧ್ಯಮಗಳು ಜಾಹೀರಾತು ಮತ್ತು ಇತರೆ ಆದಾಯ ಮೂಲಗಳಿಗೆ ಜೋತುಬಿದ್ದು, ಸರ್ಕಾರ ಪ್ರತಿದಿನ ನೀಡುವ ಕೋವಿಡ್ ಬುಲೆಟಿನ ಮಾಹಿತಿ ಪ್ರಕಟಿಸಿ ಕೈತೊಳೆದುಕೊಳ್ಳುತ್ತಿವೆ. ಬಹುಶಃ ಈ ಹಿನ್ನೆಲೆಯಲ್ಲೇ ಜನರ ಜೀವ, ಘನತೆ, ಹಕ್ಕು ರಕ್ಷಣೆಯಂತಹ ವಿಷಯದಲ್ಲಿ ಇನ್ನು ತಮ್ಮ ಸರ್ಕಾರಗಳ ಹೊಣೆಗಾರಿಕೆ ಇಲ್ಲ; ಜನ ತಮ್ಮ ಮಾನ-ಪ್ರಾಣವನ್ನು ತಾವೇ ರಕ್ಷಿಸಿಕೊಳ್ಳಬೇಕು ಎಂಬರ್ಥದಲ್ಲೇ ಆತ್ಮನಿರ್ಭರ ಎಂಬ ಹೊಸ ಪರಿಕಲ್ಪನೆ ಜಾರಿಗೆ ಬಂದಂತಿದೆ. ಆದರೆ, ಜನರಿಗೆ ಆ ಮಾತುಗಳು ಮರ್ಮ ಅರ್ಥವಾಗಲು ಇನ್ನೂ ಸಮಯಾವಕಾಶ ಬೇಕಾಗಬಹುದು!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com