ಅಪಘಾತ ಪ್ರಕರಣ ಪರಿಹಾರ ನಿಗದಿಗೆ ಮಾನವೀಯ ಮಾನದಂಡ: ಸುಪ್ರೀಂ ತಾಕೀತು

ಆತ/ಆಕೆಯ ಜೀವಮಾನದ ಗಳಿಕೆಯ ಸಾಧ್ಯತೆ, ವರಮಾನ, ವೃತ್ತಿ ಅಥವಾ ಗಳಿಕೆಯಲ್ಲಿ ಬೆಳೆಯಬಹುದಾಗಿದ್ದ ಸಾಧ್ಯತೆಗಳ ಜೊತೆಗೆ ಆತ/ ಆಕೆಗೆ ಈ ವೈಕಲ್ಯದಿಂದ ಆಗಿರುವ ಮಾನಸಿಕ ಹಾನಿ, ಮಿತಿಯಾದ ಬದುಕಿನಿಂದ ಆದ ಹಾನಿಯನ್ನೂ ಪರಿಗಣನೆಗೆ ತೆಗೆದುಕೊಂಡು ಪರಿಹಾರ ನಿ ...
ಅಪಘಾತ ಪ್ರಕರಣ ಪರಿಹಾರ ನಿಗದಿಗೆ ಮಾನವೀಯ ಮಾನದಂಡ: ಸುಪ್ರೀಂ ತಾಕೀತು

ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ಗುರುವಾರ ಮಹತ್ವದ ಆದೇಶ ನೀಡಿದ್ದು, ಅಪಘಾತಕ್ಕೊಳಗಾಗಿ ದೈಹಿಕ ಮತ್ತು ಮಾನಸಿಕ ಹಾನಿಗೆ ಈಡಾದ ವ್ಯಕ್ತಿಗೆ ಪರಿಹಾರ ನಿಗದಿ ಮಾಡುವಾಗ ಆತ/ಆಕೆ ಉಳಿದ ಜೀವಮಾನವಿಡೀ ಅನುಭವಿಸುವ ಯಾತನೆ, ಅನನುಕೂಲತೆ, ದುಡಿಮೆಯ ನಷ್ಟ ಮುಂತಾದ ಮಾನವೀಯ ಸಂಗತಿಗಳೇ ಮಾನದಂಡವಾಗಬೇಕು ಎಂದು ಹೇಳಿದೆ.

ಪಪ್ಪು ಡಿಯೊ ಯಾದವ್ ವರ್ಸಸ್ ನರೇಶ್ ಕುಮಾರ್ ಮತ್ತು ಇತರರಿಗೆ ಸಂಬಂಧಿಸಿದ ಅಪಘಾತ ಪ್ರಕರಣದ ಕುರಿತು ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ಹಿರಿಯ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಕೃಷ್ಣ ಮುರಾರಿ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಪಘಾತ ಪ್ರಕರಣಗಳಲ್ಲಿ ಆಗುವ ಗಂಭೀರ ಗಾಯಗಳು, ಶಾಶ್ವತ ದೈಹಿಕ ಅಂಗವೈಕಲ್ಯ ಮತ್ತು ಸಾವು ಕೇವಲ ದೈಹಿಕ ನಷ್ಟ ಮತ್ತು ನ್ಯೂನತೆಗಳನ್ನಷ್ಟೇ ಉಂಟುಮಾಡುವುದಿಲ್ಲ. ಬದಲಾಗಿ ಜೀವಮಾನವಿಡೀ ಅಪಘಾತಕ್ಕೀಡಾದ ವ್ಯಕ್ತಿ ಮತ್ತು ಅವರ ಅವಲಂಬಿತರ ಬದುಕಿನ ಮೇಲೆ ಮಾನಸಿಕ ಮತ್ತು ಭಾವನಾತ್ಮಕ ಗಾಯಗಳನ್ನೂ ಮೂಡಿಸುತ್ತದೆ. ದೈಹಿಕ ನೋವು ಮತ್ತು ನಷ್ಟಕ್ಕಿಂತ ಇದು ಬಹಳ ಯಾತನಾದಾಯಕ. ಹಾಗಾಗಿ ಅಪಘಾತ ಪ್ರಕರಣಗಳಲ್ಲಿ ಪರಿಹಾರ ನಿಗದಿ ಮಾಡುವಾಗ, ವ್ಯಕ್ತಿಯ ಆ ಸಂದರ್ಭದ ದುಡಿಮೆ, ವರಮಾನ, ದೈಹಿಕ ಸ್ಥಿತಿಗತಿಯನ್ನಷ್ಟೇ ನೋಡಿ ನಷ್ಟವನ್ನು ಅಂದಾಜಿಸುವ ಬದಲು, ಆತನ ಭವಿಷ್ಯದ ದುಡಿಮೆ, ಭವಿಷ್ಯದ ಏಳಿಗೆಯ ಸಾಧ್ಯತೆ ಮತ್ತು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಆತ ಮತ್ತು ಆತನ ಅವಲಂಬಿತರಿಗೆ ಆಗುವ ಹಾನಿಯನ್ನೂ, ಆಘಾತವನ್ನೂ ಗಣಗೆಗೆ ತೆಗೆದುಕೊಳ್ಳಬೇಕು. ಆ ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ಪರಿಹಾರದ ಮೊತ್ತ ನಿಗದಿ ಮಾಡಬೇಕು ಎಂದು ಅಧೀನ ನ್ಯಾಯಾಲಯಗಳು ಮತ್ತು ಸ್ವತಃ ಸುಪ್ರೀಂಕೋರ್ಟಿನ ನ್ಯಾಯಾಧೀಶರಿಗೆ ಪೀಠ ಸೂಚಿಸಿದೆ.

“ಗಂಭೀರ ಅಪಘಾತದಲ್ಲಿ ದೈಹಿಕ ವೈಕಲ್ಯಕ್ಕೆ ಒಳಗಾಗಿ ಅರೆಜೀವವಾಗಿ ಬದುಕುವ ಸಂದರ್ಭದಲ್ಲಿ ತಾನು ಆವರೆಗೆ ಜೀವಿಸಿದ್ದ ಜಗತ್ತಿಗಿಂತ ಸಂಪೂರ್ಣ ಭಿನ್ನ ಜಗತ್ತಿನಲ್ಲಿ ಆತ/ಆಕೆ ಜೀವಿಸಬೇಕಾಗುತ್ತದೆ. ಒಂದು ರೀತಿಯಲ್ಲಿ ಜಗತ್ತಿನ ಕಣ್ಣಿನಲ್ಲಿ ಅಪ್ರಯೋಜಕರಾಗಿ, ಮತ್ತೊಬ್ಬರ ಮೇಲೆಯೇ ಅವಲಂಬಿತರಾಗಿ, ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಆಯ್ಕೆಗಳೇ ಇಲ್ಲದೆ ಬದುಕು ಸವೆಸಬೇಕಾಗುತ್ತದೆ. ಇಂತಹ ಯಾತನಾದಾಯಕ ಮತ್ತು ಆಘಾತಕಾರಿ ಪರಿಸ್ಥಿತಿ ಆಕೆ/ ಆತನ ವ್ಯಕ್ತಿತ್ವ ಮತ್ತು ಬದುಕಿನ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಧೀಶರು, ಇಂತಹ ಪ್ರಕರಣಗಳಲ್ಲಿ ಅತ್ಯಂತ ಮಾನವೀಯ ನೆಲೆಯಲ್ಲಿ, ವಿವೇಚನೆಯಿಂದ ತೀರ್ಪು ನೀಡಬೇಕಾಗುತ್ತದೆ” ಎಂದು ತೀರ್ಪು ಓದಿದ ನ್ಯಾ. ಭಟ್ ಹೇಳಿದರು.

ಅಂತಹ ಗಂಭೀರ ಗಾಯ ಮತ್ತು ನ್ಯೂನತೆಗಳು ವ್ಯಕ್ತಿಯ ಘನತೆಯ ಮೇಲೆಯೂ(ಸಂವಿಧಾನದ 21ನೇ ವಿಧಿಯ ಪ್ರಕಾರ, ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗ) ಗಾಢ ಪರಿಣಾಮ ಬೀರಲಿವೆ. ಆ ಮೂಲಕ ಆತ/ ಆಕೆ ಆವರೆಗೆ ಬದುಕಿದ ರೀತಿಯಲ್ಲಿ ಮುಂದೆ ಬದುಕನ್ನು ಇಡಿಯಾಗಿ ಜೀವಿಸಲಾಗದ ಮಿತಿಗಳನ್ನು ಹೇರುತ್ತವೆ. ಸದೃಢ ಬದುಕಿನಿಂದ ವ್ಯಕ್ತಿ ದಿಢೀರನೇ ಸೀಮಿತ, ಊನ ಬದುಕಿಗೆ ಅನಿವಾರ್ಯವಾಗಿ ಸಿಲುಕುತ್ತಾನೆ. ಇಂತಹ ಪರಿಸ್ಥಿತಿಯನ್ನು ಅದರ ಎಲ್ಲ ಮಗ್ಗುಲುಗಳಲ್ಲಿ ವಿವೇಚಿಸದೆ, ಕೇವಲ ನಾಮಕಾವಸ್ಥೆಯ, ತೀರಾ ಜಿಪುಣ ಲೆಕ್ಕಾಚಾರದ ತೀರ್ಮಾನಗಳನ್ನು ಕೈಗೊಂಡು, ಕನಿಷ್ಟ ಪರಿಹಾರ ನಿರ್ಧರಿಸಿದರೆ, ಅದಾಗಲೇ ಹಾನಿಗೀಡಾಗಿರುವ ಸಂತ್ರಸ್ತರ ಬದುಕಿನ ಮೇಲೆ ಮತ್ತೊಂದು ಬರೆ ಎಳೆದಂತಾಗುತ್ತದೆ. ಹಾಗಾಗಿ ಆತ/ಆಕೆಯ ಜೀವಮಾನದ ಗಳಿಕೆಯ ಸಾಧ್ಯತೆ, ವರಮಾನ, ವೃತ್ತಿ ಅಥವಾ ಗಳಿಕೆಯಲ್ಲಿ ಬೆಳೆಯಬಹುದಾಗಿದ್ದ ಸಾಧ್ಯತೆಗಳ ಜೊತೆಗೆ ಆತ/ ಆಕೆಗೆ ಈ ವೈಕಲ್ಯದಿಂದ ಆಗಿರುವ ಮಾನಸಿಕ ಹಾನಿ, ಮಿತಿಯಾದ ಬದುಕಿನಿಂದ ಆದ ಹಾನಿಯನ್ನೂ ಪರಿಗಣನೆಗೆ ತೆಗೆದುಕೊಂಡು ಪರಿಹಾರ ನಿಗದಿ ಮಾಡಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.

2012ರಲ್ಲಿ ಹಾಪುರದಲ್ಲಿ ನಡೆದ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಪಪ್ಪು ಡಿಯೋ ಯಾದವ್, ಘಟನೆಯಲ್ಲಿ ತನ್ನ ಬಲಗೈ ಕಳೆದುಕೊಂಡಿದ್ದ. 20 ವರ್ಷ ವಯೋಮಾನದ ಪಪ್ಪು ಆಗ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಬಲಗೈ ಸಂಪೂರ್ಣ ಕಳೆದುಕೊಂಡ ಹಿನ್ನೆಲೆಯಲ್ಲಿ ಆತ ಶೇ.89ರಷ್ಟು ಅಂಗವೈಕಲ್ಯಕ್ಕೇ ಈಡಾಗಿದ್ದ ಮತ್ತು ಆ ಹಿನ್ನೆಲೆಯಲ್ಲಿ ಸುಮಾರು 50 ಲಕ್ಷ ರೂ. ಪರಿಹಾರ ಮತ್ತು ಅದಕ್ಕೆ 12 ಶೇ. ಬಡ್ಡಿಯನ್ನೂ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ. ಮೋಟಾರುವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ, ಪ್ರಕರಣದ ವಿಚಾರಣೆ ನಡೆಸಿ ಆತನಿಗೆ 14,25,400 ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು. ಆದರೆ, ಆತನ ದೈಹಿಕ ನ್ಯೂನತೆ ಅಳೆಯುವಾಗ, ಕೇವಲ ಒಂದು ಕೈ ಕಳೆದುಕೊಂಡಿರುವುದರಿಂದ ಶೇ.45ರಷ್ಟು ಅಂಗವೈಕಲ್ಯ ಎಂದು ಹೇಳಿತ್ತು. ಆ ಬಳಿಕ ಪಪ್ಪು, ದೆಹಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಆತನ ಭವಿಷ್ಯದ ಗಳಿಕೆ ಅಂದಾಜನ್ನು ಶೇ.50ಷ್ಟು ಹೆಚ್ಚಳ ಮಾಡಿ, ಒಟ್ಟು ಪರಿಹಾರವನ್ನು 14,36,600 ಎಂದು ಪುನರ್ ನಿಗದಿ ಮಾಡಿತ್ತು. ಆದರೆ, ಪಪ್ಪು ಹೈಕೋರ್ಟ್ ಆದೇಶವನ್ನೂ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಈ ಹಿಂದಿನ ಪ್ರಣಯ್ ಸೇಥಿ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ಹೈಕೋರ್ಟ್ ಆ ತೀರ್ಪನ್ನು ಕೇವಲ ಮೃತ ವ್ಯಕ್ತಿಯ ಸಂದರ್ಭದಲ್ಲಿ ಮಾತ್ರ ಭವಿಷ್ಯದ ಗಳಿಕೆಯ ಅಂದಾಜು ಮಾಡುವುದು ಎಂದು ತಪ್ಪಾಗಿ ಅರ್ಥೈಸಿದೆ. ಆದರೆ, ವಾಸ್ತವವಾಗಿ ಅಪಘಾತದಲ್ಲಿ ಗಂಭೀರ ಗಾಯಗೊಂಡು ದೈಹಿಕ ನ್ಯೂನತೆಗೆ ಒಳಗಾಗಿ ದುಡಿಮೆಯ ಅವಕಾಶಗಳನ್ನು ಕಳೆದುಕೊಂಡ ಅಥವಾ ದುಡಿಮೆಯ ಅವಕಾಶ ಮಿತಿಗೊಂಡ ವ್ಯಕ್ತಿಯ ವಿಷಯದಲ್ಲಿಯೂ ಆ ಆದೇಶ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿ ಹೊಸ ಆದೇಶ ನೀಡಿದೆ. ಹಾಗೇ ಒಂದು ಕೈ ಕಳೆದುಕೊಂಡಿದ್ದನ್ನು ಶೇ.45ರಷ್ಟು ದೈಹಿಕ ನ್ಯೂನತೆ ಎಂದು ಪರಿಗಣಿಸಿದ ಕ್ರಮವನ್ನು ಕೂಡ ತಳ್ಳಿಹಾಕಿರುವ ಸುಪ್ರೀಂಕೋರ್ಟ್, ಪ್ರಕರಣದಲ್ಲಿ ವ್ಯಕ್ತಿ ತನ್ನ ವೃತ್ತಿಗೆ ನಿರ್ಣಾಯಕವಾದ ಬಲಗೈಯನ್ನೇ ಕಳೆದುಕೊಂಡಿರುವುದರಿಂದ ಅದನ್ನು ಶೇ.65ರಷ್ಟು ನೂನ್ಯತೆ ಎಂದೇ ಪರಿಗಣಿಸಬೇಕು ಎಂದೂ ಹೇಳಿದೆ. ಆ ಹಿನ್ನೆಲೆಯಲ್ಲಿ ಪಪ್ಪು ಡಿಯೋ ಯಾದವ್ ಗೆ ಒಟ್ಟು 19,65,600 ರೂ. ಪರಿಹಾರ ಘೋಷಿಸಲಾಗಿದೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com