ವಲಸೆ ಕಾರ್ಮಿಕ ಬಿಕ್ಕಟ್ಟು: ಸಂಸತ್ತಿನಲ್ಲಿ ಉತ್ತರಿಸಿ ಎಡವುತ್ತಿರುವ ಕೇಂದ್ರ ಸರ್ಕಾರ

ಮೊದಲಿನಿಂದಲೂ ಕೇಂದ್ರ ತನ್ನ ವೈಫಲ್ಯಗಳನ್ನು, ಜವಾಬ್ದಾರಿಗಳನ್ನು ರಾಜ್ಯಗಳ ಮೇಲೆ ಗೂಬೆ ಕೂರಿಸಿ ತನ್ನ ಸಾಚಾತನವನ್ನು ಪ್ರದರ್ಶಿಸಲು ಯತ್ನಿಸುತ್ತಿರುವುದು ಮತ್ತೊಮ್ಮೆ ಬಯಲಾಗಿದೆ.
ವಲಸೆ ಕಾರ್ಮಿಕ ಬಿಕ್ಕಟ್ಟು: ಸಂಸತ್ತಿನಲ್ಲಿ ಉತ್ತರಿಸಿ ಎಡವುತ್ತಿರುವ ಕೇಂದ್ರ ಸರ್ಕಾರ

ವಲಸೆ ಕಾರ್ಮಿಕರ ಸಮಸ್ಯೆಗಳಿಗೆ ಪ್ರಧಾನಮಂತ್ರಿ ಹೇರಿದ ಹಠಾತ್‌ ಲಾಕ್‌ಡೌನ್‌ ಕಾರಣವಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿದೆ. ಮಾರ್ಚ್‌ 23 ರಂದು ಕರೋನಾ ತಡೆಗಟ್ಟುವ ನೆಪದಲ್ಲಿ ಪ್ರಧಾನಿ ಮೋದಿ ಯಾವುದೇ ಮುನ್ಸೂಚನೆಯಿಲ್ಲದೆ ಏಕಾಏಕಿ ದೇಶವ್ಯಾಪಿ ಲಾಕ್‌ಡೌನ್‌ ಹೇರಿದ್ದರು. ಸಹಜವಾಗಿ, ಊರು ಬಿಟ್ಟು ಊರು ಹೋದ ವಲಸೆ ಕಾರ್ಮಿಕರು ಸೇರಿದಂತೆ ಅಸಂಖ್ಯ ಜನರು ಲಾಕ್‌ಡೌನ್‌ ವೇಳೆ ಸೂಕ್ತ ಸಂಚಾರ, ಮೂಲಸೌಲಭ್ಯವಿಲ್ಲದೆ ಅಕ್ಷರಶಃ ನಲುಗಿದ್ದರು.

ಸಂಸತ್‌ ಅಧಿವೇಶನದಲ್ಲಿ, ತೀರಾ ಕಡಿಮೆ ಅವಧಿಯಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಲಾಕ್‌ಡೌನ್‌ ಹೇರಿದ ಅವಶ್ಯಕತೆ ಏನಿತ್ತು ಎಂಬ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಇಲಾಖೆಯ ರಾಜ್ಯ ಮಂತ್ರಿ ನಿತ್ಯಾನಂದ ರೈ, “ದೇಶದೊಳಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜನರ ಚಲನೆ ತಡೆಯಲು ಲಾಕ್‌ಡೌನ್‌ ಹೇರಲಾಯಿತು. ಅದಾಗ್ಯೂ ಸರ್ಕಾರ ಆಹಾರ, ನೀರು, ಆರೋಗ್ಯ ಸೇವೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ಖಾತರಿಪಡಿಸಿತ್ತು. ಆದರೆ ಅಂತಹ ಮೂಲ ಸೌಕರ್ಯಗಳು ತಮಗೆ ತಲುಪುವುದಿಲ್ಲವೆಂಬ ತಪ್ಪು ಮಾಹಿತಿ ವಲಸಿಗ ಕಾರ್ಮಿಕರ ಬಿಕ್ಕಟ್ಟಿಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಾಸ್ತವದಲ್ಲಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಮಂತ್ರಿ ಹೇಳಿರುವ ವಿಚಾರ ಸತ್ಯಕ್ಕೆ ದೂರವಾದದ್ದು. ದೊಡ್ಡ ಮಟ್ಟದ ವಲಸೆ ಕಾರ್ಮಿಕರ ಯಾತ್ರೆಯ ಕುರಿತಂತೆ ಸರ್ಕಾರದ ಬಳಿ ಅಂಕಿಅಂಶಗಳೇ ಇಲ್ಲ. ಸೆಪ್ಟೆಂಬರ್‌ 14 ರಂದು ಕಾರ್ಮಿಕ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್ ನೀಡಿರುವ ಹೇಳಿಕೆ ಪ್ರಕಾರ, ಸುಮಾರು ಒಂದು ಕೋಟಿ ವಲಸೆ ಕಾರ್ಮಿಕರು ಲಾಕ್‌ಡೌನ್‌ ಸಂಧರ್ಭದಲ್ಲಿ ಅತಂತ್ರರಾಗಿದ್ದರು. ಅವರಲ್ಲಿ 63.07 ಲಕ್ಷ ಕಾರ್ಮಿಕರು ಶ್ರಮಿಕ್‌ ರೈಲು ಮೂಲಕ ತಮ್ಮ ತವರುಗಳಿಗೆ ತೆರಳಿದರೆ, ಸುಮಾರು 40 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರ ಕುರಿತ ವಿವರಗಳು ಸರ್ಕಾರದ ಬಳಿ ಇಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ಕೋವಿಡ್‌ ಅಲ್ಲದ ಕಾರಣಕ್ಕೆ ಮೃತಪಟ್ಟವರ ಅಂಕಿಅಂಶವಾಗಲೀ, ಕಳೆದುಕೊಂಡ ಕೆಲಸಗಳ ಅಂಕಿ ಅಂಶಗಳಾಗಲಿ, ಲಾಕ್‌ಡೌನ್‌ ಸಂತ್ರಸ್ತರ ಅಂಕಿ ಅಂಶಗಳಾಗಲಿ ಸರ್ಕಾರದ ಬಳಿಯಿಲ್ಲ ಎಂಬುದು ಕೇಂದ್ರ ಸರ್ಕಾರದ ವೈಫಲ್ಯತೆಯನ್ನು ಎತ್ತಿಹಿಡಿಯುತ್ತದೆ.

ಸರ್ಕಾರ ನೀಡಿರುವ ಉತ್ತರ ಲಾಕ್‌ಡೌನ್‌ನ ನೈಜ ಸ್ವರೂಪವನ್ನು ಮುಚ್ಚಿಟ್ಟು, ಸಂಸತ್ತಿನಲ್ಲಿ ತನ್ನನ್ನು ತಾಣೇ ಬಣ್ಣಿಸಿಕೊಳ್ಳುವ ಇರಾದೆಯನ್ನು ಸ್ಪಷ್ಟಪಡಿಸುತ್ತದೆ.

ಮೊದಲನೆಯದಾಗಿ, ಲಾಕ್‌ಡೌನ್‌ ಆರಂಭಿಕ ದಿನಗಳಲ್ಲಿ ದಿನಗೂಲಿ ವಲಸಿಗ ಕಾರ್ಮಿಕರು ತಮ್ಮ ಹಸಿವು ನೀಗಿಸಲೂ ಹೆಣಗಾಡಿದ್ದಾರೆ. ತಾವು ಕೆಲಸ ಮಾಡಿದ ನಗರಗಳಲ್ಲಿ ಹಸಿವಿನಿಂದ ಬಳಲುವುದು ಅಥವಾ ಮನೆಗೆ ಪ್ರಯಾಣಿಸುವ ಆಯ್ಕೆಯ ನಡುವೆ ಎರಡನೆಯದ್ದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಪ್ರಕಟವಾದ ಹಲವಾರು ವರದಿಗಳು ನಗರಗಳಲ್ಲಿ ವ್ಯಾಪಕವಾಗಿದ್ದ ಹಸಿವಿನ ಬಗ್ಗೆ ಮತ್ತು ಬಾಡಿಗೆ ಪಾವತಿಸಲು ಸಾಧ್ಯವಾಗದ ಕುಟುಂಬಗಳ ಕುರಿತು ಬೆಳಕು ಚೆಲ್ಲುತ್ತವೆ.

ಲಾಕ್ ಡೌನ್ ಘೋಷಿಸಿದ ಒಂದೂವರೆ ತಿಂಗಳ ನಂತರ ಮೇ ತಿಂಗಳಲ್ಲಿ, ವಲಸೆ ಕಾರ್ಮಿಕರಿಗೆ, ವಿಶೇಷವಾಗಿ ಆಹಾರ ಭದ್ರತಾ ಯೋಜನೆಗಳ ವ್ಯಾಪ್ತಿಗೆ ಒಳಪಡದವರಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಲು ಸರ್ಕಾರ ಆತ್ಮನಿರ್ಭರ ಭಾರತ ಪ್ಯಾಕೇಜ್ ಅನ್ನು ಘೋಷಿಸಿತು. ಸೆಪ್ಟೆಂಬರ್‌ನಲ್ಲಿ, ಸರ್ಕಾರವೇ ನೀಡಿದ ಮಾಹಿತಿಯ ಪ್ರಕಾರ, ಕೇವಲ 33% ಆಹಾರ ಧಾನ್ಯ ಮತ್ತು 56% ಬೇಳೆ ಕಾಳುಗಳಷ್ಟೇ ವಲಸೆ ಕಾರ್ಮಿಕರಿಗೆ ಇದುವರೆಗೂ ಹಂಚಿಕೆಯಾಗಿದೆ.

ಎರಡನೆಯದಾಗಿ, ಒಂದು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆಂದು ಕೇಂದ್ರ ಒಪ್ಪಿದ್ದರೂ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಏಕೆಂದರೆ, ಸರ್ಕಾರ ನೀಡಿರುವ ಅಂಕಿಅಂಶವು ಉತ್ತರಾಖಂಡ್‌, ಛತ್ತೀಸ್‌ಗಡ, ಒಡಿಸ್ಸಾ ಹಾಗೂ ಹಿಮಾಚಲ್‌ ಪ್ರದೇಶ ಮೊದಲಾದ ರಾಜ್ಯಗಳ ವಲಸೆ ಕಾರ್ಮಿಕರ ಅಂಕಿಅಂಶಗಳನ್ನೇ ಹೊಂದಿಲ್ಲ. ಲಾಕ್‌ಡೌನ್‌ ಸಂಧರ್ಭದಲ್ಲಿ ವಿಶೇಷ ಶ್ರಮಿಕ ರೈಲು ಸಂಚಾರವನ್ನು ಸರ್ಕಾರ ಆಯೋಜಿಸಿತ್ತು. ಆದರೆ ಅದಕ್ಕೂ ಮೊದಲೇ ಲಕ್ಷಾಂತರ ವಲಸೆ ಕಾರ್ಮಿಕರು ಬರಿಗಾಲಿನಲ್ಲಿ ವಲಸೆ ಶುರುಮಾಡಿದ್ದರು. ವ್ಯವಸ್ಥೆಯಲ್ಲಿನ ಅಸಮರ್ಪಕತೆಯಿಂದ ರೈಲು ಟಿಕೇಟು ಸರಿಯಾಗಿ ಹಂಚಿಕೆಯಾಗಿರಲಿಲ್ಲ. ಮೇ ತಿಂಗಳಲ್ಲಿ ಪಾವತಿಸಿದ ದುಡ್ಡಿಗೆ ಜೂನ್‌ ಅಂತ್ಯದ ವೇಳೆ ಟಿಕೇಟುಗಳು ದೊರೆತಿತ್ತು. ಶ್ರಮಿಕ್‌ ರೈಲಿನ ಯಾತ್ರಿಕರು ಆಹಾರ, ನೀರು ಅಲಭ್ಯತೆಯ ಕುರಿತು ದೂರಿದ್ದಾರೆ. ಹಾಗೂ 80 ಕ್ಕೂ ಹೆಚ್ಚು ಪ್ರಯಾಣಿಕರು ಇದೇ ಕಾರಣದಿಂದ ಅಸುನೀಗಿದ್ದಾರೆ, ಆದರೆ ಸರ್ಕಾರ ಬೇರೆ ಬೇರೆ ಖಾಯಿಲೆಗಳಿಂದ ಮೃತಪಟ್ಟಿದ್ದಾರೆ ಎಂದಿತೇ ಹೊರತು ತನ್ನ ಅಸಮರ್ಥತೆಯನ್ನು ಒಪ್ಪಿಕೊಂಡಿಲ್ಲ.

ಕೇಂದ್ರವು ತನ್ನ ಬಳಿ ಇಲ್ಲ ಎಂದು ಹೇಳಿಕೊಳ್ಳುವ ದತ್ತಾಂಶವನ್ನು ಸರ್ಕಾರೇತರ ಸಂಶೋಧಕರು, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಂತಹ ಸಂಸ್ಥೆಗಳು ಸೂಕ್ಷ್ಮವಾಗಿ ಸಂಗ್ರಹಿಸಿಟ್ಟಿವೆ. ಸಂಗ್ರಹಿಸಿರುವ ಅಂದಾಜಿನ ಪ್ರಕಾರ, ಲಾಕ್‌ಡೌನ್ ಸಮಯದಲ್ಲಿ 971 ಕೋವಿಡ್ ಅಲ್ಲದ ಸಾವುಗಳು ಸಂಭವಿಸಿವೆ. ಹಸಿವು, ಬಳಲಿಕೆ, ವೈದ್ಯಕೀಯ ಆರೈಕೆಯ ಕೊರತೆ ಮತ್ತು ಅಪಘಾತಗಳು ಇತರ ಅಂಶಗಳಿಂದ ಈ ಸಾವುಗಳು ಉಂಟಾಗಿದೆ.

ಸರ್ಕಾರದ ಅಸಮರ್ಪಕ ಉತ್ತರದ ಬಳಿಕ, ಕಾರ್ಮಿಕ ಸಚಿವ ಗಂಗ್ವಾರ್‌, ವಲಸೆ ಕಾರ್ಮಿಕರ ದತ್ತಾಂಶ ಸಂಗ್ರಹಿಸುವುದು ರಾಜ್ಯಗಳ ಜವಾಬ್ದಾರಿಯೆಂದು ಹೇಳಿ ತಮ್ಮ ಜವಾಬ್ದಾರಿಯಿಂದ ನುಣುಚಿದ್ದಾರೆ. ಇದಕ್ಕಿಂತಲೂ ಹಿಂದೆ ಲಾಕ್‌ಡೌನ್‌ ಸಂಧರ್ಭದಲ್ಲಿ ವಲಸೆ ಕಾರ್ಮಿಕರ ದತ್ತಾಂಶ ಸಂಗ್ರಹಿಸುವ ಕಾರ್ಯಕ್ಕೆ ಕೇಂದ್ರ ಕಾರ್ಮಿಕ ಇಲಾಖೆ ಕೈ ಹಾಕಿತ್ತು. ಯಾವಾಗ ಈ ದತ್ತಾಂಶಗಳು ಲಾಕ್‌ಡೌನ್‌ನ ವೈಫಲ್ಯವನ್ನು ಎತ್ತಿ ತೋರಿಸಬಲ್ಲದು ಎಂದು ಮನಗಂಡಿತೋ, ಆವಾಗ ದತ್ತಾಂಶ ಸಂಗ್ರಹಿಸುವ ಕಾರ್ಯ ಕೈ ಬಿಡಲಾಯಿತು. ಮೊದಲಿನಿಂದಲೂ ಕೇಂದ್ರ ತನ್ನ ವೈಫಲ್ಯಗಳನ್ನು, ಜವಾಬ್ದಾರಿಗಳನ್ನು ರಾಜ್ಯಗಳ ಮೇಲೆ ಗೂಬೆ ಕೂರಿಸಿ ತನ್ನ ಸಾಚಾತನವನ್ನು ಪ್ರದರ್ಶಿಸಲು ಯತ್ನಿಸುತ್ತಿರುವುದು ಮತ್ತೊಮ್ಮೆ ಬಯಲಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com