ಎಪ್ಪತ್ತು ತುಂಬಿದ ಪ್ರಧಾನಿ ನರೇಂದ್ರ ಮೋದಿಗೆ ಬರೀ 70 ಸಲಹೆಗಳು!
ರಾಷ್ಟ್ರೀಯ

ಎಪ್ಪತ್ತು ತುಂಬಿದ ಪ್ರಧಾನಿ ನರೇಂದ್ರ ಮೋದಿಗೆ ಬರೀ 70 ಸಲಹೆಗಳು!

ಪ್ರಬುಧ್ಧ ಪ್ರಧಾನಿಗಳೇ, ನೀವು ಎಪ್ಪತ್ತು ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ನಿಮಗೆ ಎಪ್ಪತ್ತು ಸಲಹೆಗಳಿವೆ. ಈ ಸಲಹೆಗಳು ಇದು ಈ ದೇಶದ 138 ಕೋಟಿ ಪ್ಲಸ್ ಜನರ ಸಲಹೆಗಳು ಅಂದುಕೊಳ್ಳಿ. ನಿಜವಾದ ಅರ್ಥದಲ್ಲಿ ಇವು ಸಲಹೆಗಳಲ್ಲ. 138 ಕೋಟಿ ಜನರ ಮನವಿಯೂ ಹೌದು.

ರೇಣುಕಾ ಪ್ರಸಾದ್ ಹಾಡ್ಯ

ನರೇಂದ್ರ ದಾಮೋದರ ದಾಸ್ ಮೋದಿ ಅವರೇ, ನೀವು ಪ್ರಧಾನ ಮಂತ್ರಿಯಾಗಿ ಅರ್ಧ ಡಜನ್ ವರ್ಷಗಳನ್ನು ಈಗಾಗಲೇ ಪೂರೈಸಿದ್ದೀರಿ. ಈಗ ಎಪ್ಪತ್ತು ವಸಂತಗಳನ್ನು ಪೂರೈಸುತ್ತಿದ್ದೀರಿ. ಹೃದಯಪೂರ್ವಕ ಅಭಿನಂದನೆಗಳು. ನೀವು ಬಿಜೆಪಿ ಪ್ರಧಾನಿನೇ ಆಗಿರಬಹುದು. ಆದರೆ, ನೀವು ಈ ದೇಶದ ಪ್ರಧಾನಿ. ಈ ದೇಶದ ಪ್ರಧಾನಿ ಎಪ್ಪತ್ತರ ನಿರ್ಣಾಯಕ ಘಟ್ಟ ಮುಟ್ಟಿದಾಗ ಅಭಿನಂದಿಸುವುದು ಈ ದೇಶದ ಪ್ರಜೆಯಾಗಿ ನಮ್ಮ ಕರ್ತವ್ಯ. ಈ ಹೊತ್ತಿನಲ್ಲಿ ನಾವು ಹಾರೈಸುವುದೊಂದೇ- ಮುಂದಿನ ನಿಮ್ಮ ಮೂರು ಮುಕ್ಕಾಲು ವರ್ಷದ ಅವಧಿಯಲ್ಲಿ ನೀವೂ ಎಂದೂ ಆಸ್ಪತ್ರೆಗೆ ದಾಖಲಾಗದಂತಹ ಪರಿಸ್ಥಿತಿ ಬರಲಿ. ಅರ್ಥಾತ್ ನಿಮ್ಮ ಆರೋಗ್ಯ ಚೆನ್ನಾಗಿರಲಿ. ಇನ್ನು ಐಶ್ವರ್ಯದ ಬಗ್ಗೆ ಹೆಚ್ಚಿಗೆ ನಾವೇನೂ ಹೇಳಬೇಕಿಲ್ಲ. ಇಡೀ ಬೊಕ್ಕಸವೇ ನಿಮ್ಮದು. ಅತ್ತ ಆರ್‌ಬಿಐ, ಇತ್ತ, ಸಾರ್ವಜನಿಕ ವಲಯದ ಉದ್ಯಮ, ಜತೆಗೆ ಪಿಎಂ ಕೇರ್ಸ್ ನಿಧಿ ಎಲ್ಲವೂ ನಿಮ್ಮದೇ ಆಗಿರುವುದರಿಂದ ನಿಮ್ಮ ಐಶ್ವರ್ಯ ಹೆಚ್ಚಾಗಲಿ ಅಂತ ಹಾರೈಸುವುದರಲ್ಲಿ ‘ಅರ್ಥ’ ಇಲ್ಲ!

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರೀತಿಯ, ಹೆಮ್ಮೆಯ, ಒಲುಮೆಯ, ಪ್ರಬುಧ್ಧ ಪ್ರಧಾನಿಗಳೇ, ನೀವು ಎಪ್ಪತ್ತು ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ನಿಮಗೆ ಎಪ್ಪತ್ತು ಸಲಹೆಗಳಿವೆ. ಈ ಸಲಹೆಗಳು ಇದು ಈ ದೇಶದ 138 ಕೋಟಿ ಪ್ಲಸ್ ಜನರ ಸಲಹೆಗಳು ಅಂದುಕೊಳ್ಳಿ. ನಿಜವಾದ ಅರ್ಥದಲ್ಲಿ ಇವು ಸಲಹೆಗಳಲ್ಲ. 138 ಕೋಟಿ ಜನರ ಮನವಿಯೂ ಹೌದು.

1- ಹೆಮ್ಮೆಯ ಪ್ರಧಾನಿಗಳೇ ಎಪ್ಪತ್ತು ವರ್ಷ ಪೂರೈಸಿದ್ದೀರಿ, ಪ್ರಬುದ್ಧರಾಗಿ. ಪ್ರಬುದ್ಧತೆ ಸಮೃದ್ಧತೆಗೆ ದಾರಿಯಾಗುತ್ತದೆ. ಈ ದೇಶಕ್ಕೆ ಒಬ್ಬ ಪ್ರಬುದ್ಧ ಮತ್ತು ಸೌಹಾರ್ಧ ಸಮೃದ್ಧತೆ ತರುವ ಪ್ರಧಾನಿಯ ಅಗತ್ಯತೆ ಇದೆ.

2- ರಾಜಕಾರಣಿಯೊಬ್ಬ ಪ್ರಬುದ್ಧನಾದರೆ, ರಾಜಾತಾಂತ್ರಿಕನಾಗುತ್ತಾನೆ. ರಾಜತಾಂತ್ರಿಕ ಮುಂದಿನ ಚುನಾವಣೆಯ ಬದಲಿಗೆ, ಮುಂದಿನ ತಲೆಮಾರಿನ ಬಗ್ಗೆ ಚಿಂತಿಸುತ್ತಾನೆ.

3-ಸದ್ಯಕ್ಕೆ ನೀವು ಬಿಹಾರ ಚುನಾವಣೆಯ ಬಗ್ಗೆ ಚಿಂತಿಸಬೇಡಿ, ಬಿಹಾರದ ಅಷ್ಟೇ ಅಲ್ಲ ಇಡೀ ದೇಶದ ಮುಂದಿನ ತಲೆಮಾರಿನ ಬಗ್ಗೆ ಚಿಂತಿಸಿ.

4 ಸುಳ್ಳು ಹೇಳಬೇಡಿ.

5- ಪ್ರೈಮ್‌ಟೈಮ್ ನಲ್ಲಂತೂ ಸುಳ್ಳು ಹೇಳಲೇ ಬೇಡಿ.

6-ನಮ್ಮ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ ಎಂದು ವಿರೋಧಿಗಳೂ ಟೀಕಿಸುವುದೂ ನಮಗೆ ಇಷ್ಟವಾಗಲ್ಲ. ಸತ್ಯವನ್ನಷ್ಟೇ ಹೇಳಿ.

7- ಸುಳ್ಳು ಹೇಳುವ ಸಂದರ್ಭ ಬಂದಾಗ ಮಹಾತ್ಮಗಾಂಧೀಜಿ ನೆನೆಸಿಕೊಳ್ಳಿ.

8- ದೇಶಾ ಮುಖ್ಯಾನಾ ಪಕ್ಷ ಮುಖ್ಯಾನಾ ಯೋಚಿಸಿ.

9- ಒಂದು ಕ್ಷಣ ದೇಶಾನೇ ಮುಖ್ಯ ಅಂದ್ಕೊಳ್ಳಿ.

10- ನಿಮ್ಮ ಪಕ್ಷ ನಿಮ್ಮ ನೇತೃತ್ವದಲ್ಲಿ ಒಂದು ಚುನಾವಣೆ ಸೋತರೆ, ಪ್ರಪಂಚದಲ್ಲಿ ಪ್ರಳಯವಾಗೋದಿಲ್ಲ. 11-ಸೋಲಿಲ್ಲದ ಸರದಾರ ಎಂಬ ಹುಂಬ ನಂಬಿಕೆ ಬಿಡಿ.

12- ಸೋಲು ಆತ್ಮವಿಮರ್ಶೆಗೆ ಅವಕಾಶ ಮಾಡಿಕೊಡುತ್ತದೆ.

13-ಆತ್ಮವಿಮರ್ಶೆ ಮಾಡಿಕೊಳ್ಳದ ವ್ಯಕ್ತಿಯಲ್ಲಿ ಮೃಗೀಯ ಭಾವನೆ ಬೆಳೆಯುತ್ತದೆ.

14- ಆತ್ಮವಿಮರ್ಶೆಗೆ ಸಕಾಲ ಅಂತಾ ನೀವು ಅಂದುಕೊಂಡರೆ, ನಮ್ಮ ಮೊದಲ ಸಲಹೆ/ಮನವಿಯನ್ನು ಈಡೇರಿಸಿದಂತೆಯೇ!

15- ಮನೆಯ ಯಜನಮಾನ ನೀವು. ಹೆಚ್ಚು ಜವಾಬ್ದಾರಿಯಿಂದ ಇರಬೇಕು.

16- ಮನೆಯ ಆಗುಹೋಗುಗಳ ಬಗ್ಗೆ ನಿಗಾ ಇಡಬೇಕು.

17- ಮನೆಯ ಹಿತ್ತಿಲ ಬೇಲಿಯನ್ನು ಯಾರೋ ಗೊತ್ತಿಲ್ಲದಂತೆ ದಾಟಿ ಬಂದಿದ್ದಾರೆ ಎಂದರೆ, ಮನೆ ಯಜಮಾನ ದುರ್ಬಲ ಅಂತಾನೇ ಅರ್ಥ.

18- ಮನೆ ಬೇಲಿ ಬೇರೆ ಅಲ್ಲ, ದೇಶದ ಗಡಿ ಬೇರೆ ಅಲ್ಲ.

19-ದೇಶಪ್ರೇಮವನ್ನು ಚುನಾವಣೆ ಗೆಲ್ಲುವ ಅಸ್ತ್ರ ಮಾಡಿಕೊಳ್ಳಬೇಡಿ.

20- ನಮ್ಮ ಸೈನಿಕರು ನಮ್ಮ ಆಸ್ತಿ, ಅವರನ್ನು ಚುನಾವಣಾ ರಾಜಕಾರಣಕ್ಕೆ ಎಳೆಯಬೇಡಿ.

21- ರಾಮನಂತೂ ಆರಂಭದಿಂದಲೇ ನಿಮ್ಮ ಚುನಾವಣಾ ಅಸ್ತ್ರವಾಗಿಬಿಟ್ಟಿದ್ದಾನೆ. ರಾಮನ ಮಟ್ಟಕ್ಕೆ ನಮ್ಮ ಸೈನಿಕರನ್ನು ಎಳೆಯಬೇಡಿ.

22- ಮನೆ ಯಜಮಾನ ಬೇರೆಯವರು ಬೇಲಿ ದಾಟದಂತೆ ನೋಡಿಕೊಳ್ಳುವುದು ಎಷ್ಟು ಮುಖ್ಯಾನೋ, ಮನೆಯ ಆಸ್ತಿಪಾಸ್ತಿಗಳನ್ನು ಕಾಪಾಡುವುದು ಅಷ್ಟೇ ಮುಖ್ಯ. ದೇಶದ ಸಂಪತನ್ನು ಬಿಕರಿಗಿಡಬೇಡಿ.

23-ಗೆಳೆತನ ಮುಖ್ಯ. ಹಾಗಂತ ಮನೆಯ ಮಕ್ಕಳ ಹಿತಾಸಕ್ತಿಯನ್ನು ಮಾರಾಟ ಮಾಡಿ ಗೆಳೆತನ ಗಳಿಸುವ, ಅಧಿಕಾರ ಉಳಿಸುವ ಹಪಾಹಪಿ ಬೇಡ.

24- ಅಪ್ಪ ಕೂಡಿಟ್ಟ ಆಸ್ತಿ ಮಾರಾಟ ಮಾಡೋ ಮಗನನ್ನು ಉಡಾಳ ಅನ್ನುತ್ತಾರೆ. ಬೇಜವಾಬ್ದಾರಿ ಅನ್ನುತ್ತಾರೆ. ದಯವಿಟ್ಟು ದೇಶದ ಆಸ್ತಿಗಳನ್ನು ನಿಮ್ಮ ಗೆಳೆಯರಿಗೆ ಮಾರಾಟ ಮಾಡಬೇಡಿ.

25- ಹೊಸ ಆಸ್ತಿ ಸಂಪಾದನೆ ಮಾಡುವುದಿರಲಿ, ಅಪ್ಪ ಕೂಡಿಟ್ಟ ಆಸ್ತಿ ಕೂಡಾ ರಕ್ಷಿಸಲಾಗದವನು ಎಂಬ ಕಳಂಕವನ್ನು ಹೊತ್ತುಕೊಳ್ಳಬೇಡಿ.

26- ಜನಾ ಸುಮ್ಸುಮ್ನೆ ನಿಮ್ಮ ಬಗ್ಗೆ ಟೀಕೆ ಮಾಡೋದು ನಮಗೆ ಇಷ್ಟ ಆಗೋಲ್ಲ.

27-ಅರ್ಥಶಾಸ್ತ್ರ ಓದ್ಕೊಳ್ಳಿ, ತಿಳ್ಕೊಳ್ಳಿ.

28- ಇಡೀ ದೇಶದ ಜನತೆ ಇವತ್ತು ದಿಕ್ಕೆಟ್ಟ ಪರಿಸ್ಥಿತಿಗೆ ನಿಮ್ಮ ಆರ್ಥಿಕ ನೀತಿಯೇ ಕಾರಣ.

29-ಅಹಂ ಬ್ರಹ್ಮಾಸ್ಮಿ ಅಂದ್ಕೊಬ್ಯಾಡಿ.

30- ಸಾವಿರಾರು ಜನರು ಮೆರೆದು ಅಳಿದು ಮಣ್ಣಾಗಿ ಹೋಗಿದ್ದಾರೆ.

31- ಅರ್ಥಶಾಸ್ತ್ರ ತಿಳಿದವನಿಗೆ ಸಾಮಾನ್ಯ ಜ್ಞಾನ ಇರುತ್ತಂತೆ. ಹಾಗೆಯೇ ಸಾಮಾನ್ಯ ಜ್ಞಾನ ಇದ್ದವನಿಗೆ ಕೊಂಚ ಅರ್ಥಶಾಸ್ತ್ರವೂ ಅರ್ಥವಾಗುತ್ತದಂತೆ!.

32-ನೀವು ಸಾಮಾನ್ಯಜ್ಞಾನವನ್ನೂ ತಿಳಿದುಕೊಂಡು, ಅರ್ಥಶಾಸ್ತ್ರವನ್ನು ಅರಿತರೆ ದೇಶಕ್ಕೆ ಒಳಿತು.

33- ನೀವು ನೋಟ್ ಬ್ಯಾನ್ ಯೋಜನೆ ಮೂಲಕ ದೇಶದ ಜನರ ನೆಮ್ಮದಿಯನ್ನೇ ಬ್ಯಾನ್ ಮಾಡಿದ್ದೀರಿ.

34- ಸರ್ಕಾರಿ ಪ್ರಾಯೋಜಿತ ಅರ್ಥಶಾಸ್ತ್ರಜ್ಞರನ್ನು ನಂಬಬೇಡಿ. ಅವರು ಸತ್ಯ ಹೇಳುವಷ್ಟು ನೈತಿಕವಾಗಿ ಶಕ್ತರಾಗಿರುವುದಿಲ್ಲ.

35- ನೋಟ್ ಬ್ಯಾನ್ ನಿಂದ ದೇಶದ ಆರ್ಥಿಕತೆ ಹಾಳಾಯ್ತು ಅನ್ನೋದನ್ನಾ ಒಂದ್ ಸಲ ಒಪ್ಕೊಳ್ಳಿ.

36-ದೇಶದ ಜನರ ಕ್ಷಮೆ ಕೇಳಿ.

37-ನಿಮ್ಮ ಎಂತೆಂತದೋ ಸಾಹಸಗಳನ್ನು ಕ್ಷಮಿಸಿರುವ ಜನತೆ ನೋಟ್ ಬ್ಯಾನ್ ಬ್ಲಂಡರ್ ಅನ್ನು ಕ್ಷಮಿಸುತ್ತಾರೆ.

38- ನೀವು ಕ್ಷಮೆ ಯಾಕೆ ಕೇಳಬೇಕು ಅಂದರೆ- ಮುಂದೆ ಮತ್ತೆ ಅಂತಹದ್ದೊಂದು ಬ್ಲಂಡರ್ ಮಾಡದೇ ಇರುವ ಎಚ್ಚರಿಕೆ ನಿಮ್ಮಲ್ಲಿರುತ್ತದೆ.

39- ನಿಮ್ಮ ಮುಖ್ಯ ಆರ್ಥಿಕ ಸಲಹೆಗಾರರ ಸಲಹೆಯನ್ನು ಪಡೆಯುವುದಿರಲಿ, ಅವರ ಗಮನಕ್ಕೂ ತಾರದೇ ನೋಟ್ ಬ್ಯಾನ್ ಮಾಡಿದ್ದೀರಿ. ಇದೇ ಮತ್ತೊಂದು ಬ್ಲಂಡರ್.

40- ಇದು ನಿಮಗೆ ಆರ್ಥಶಾಸ್ತ್ರ ಅರ್ಥವಾಗೊಲ್ಲ, ಆರ್ಥಿಕತೆ ತಿಳಿಯಲ್ಲ ಎಂಬುದನ್ನು ಪ್ರತಿಬಿಂಬಿಸುತ್ತದೆ.

41- ಮಾನ್ಯ ಪ್ರಧಾನಿಗಳೇ ನೀವು ಮಾಡಿದ ನೋಟ್ ಬ್ಯಾನ್ ಬ್ಲಂಡರ್ ನಿಂದಾಗಿ ಇಂದು ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

42- ಸರಕು ಮತ್ತು ಸೇವಾ ತೆರಿಗೆಯನ್ನು ತರಾತುರಿಯಲ್ಲಿ ಜಾರಿಗೆ ಮಾಡುವಲ್ಲಿ ನಿಮ್ಮ ಅಪ್ರಬುದ್ಧತೆ ಎದ್ದು ಕಂಡಿದೆ.

43- ಇದೂ ಕೂಡಾ ನಿಮ್ಮ ಆರ್ಥಿಕ ಅರಿವಿನ ಕೊರತೆಯನ್ನು ಎತ್ತಿ ತೋರಿಸಿದೆ.

44- ಹೀಗಾಗಿ ಆರ್ಥಿಕ ವಿಷಯಗಳು ಬಂದಾಗ ನಿಜವಾದ ಆರ್ಥಿಕ ತಜ್ಞರ ಸಲಹೆ ಪಡೆಯಿರಿ. ಸಂಘಪರಿವಾರ ಪ್ರಣೀತ ಆರ್ಥಿಕ ನೀತಿಗಳು ಈ ದೇಶವನ್ನು ಒಂದು ಶತಮಾನದಷ್ಟು ಹಿಂದಕ್ಕೆ ಒಯ್ಯುವ ಅಪಾಯ ಇದೆ.

45- ಅಂತಹ ಪರಿಸ್ಥಿತಿ ಬಂದರೆ ನೀವು ಮತ್ತೆ ಪ್ರಧಾನಿ ಆಗೋ ಚಾನ್ಸ್ ಸಿಗೊಲ್ಲ ಅನ್ನೋದು ನಿಮ್ಮ ಗಮನದಲ್ಲಿರಲಿ.

46- ಅಸಮರ್ಥ ಅಧಿಕಾರಿಗಳನ್ನು ಅವಧಿಗೆ ಮುನ್ನ ಕಡ್ಡಾಯ ನಿವೃತ್ತಿಗೊಳಿಸುವ ನಿಮ್ಮ ಅತ್ಯುತ್ಸಾಹಕ್ಕೆ ಏನನ್ನಬೇಕೋ ಗೊತ್ತಿಲ್ಲ.

46- ಅಸಮರ್ಥತೆ ಪಟ್ಟ ಕಟ್ಟಿ ನಿಮ್ಮ ನೀತಿ ನಿಲುವುಗಳನ್ನು ಒಪ್ಪದ, ಮತ್ತು ಅದರ ವಿರುದ್ಧ ದನಿ ಏರಿಸುವವರನ್ನು ಬೆದರಿಸುವ ಅಸ್ತ್ರವನ್ನಾಗಿ ಬಳಸುತ್ತಿದ್ದೀರಿ.

47- ನಿಮ್ಮ ಸಾಮರ್ಥ್ಯವೆಲ್ಲವೂ ಇಂತಹ ಕುಟಿಲ ಕುತಂತ್ರಗಳಿಗೆ ಬಳಕೆಯಾಗಿದೆ.

48- ಈ ಆರು ವರ್ಷಗಳಲ್ಲಿ ನಿಮ್ಮ ಯೋಗ್ಯತೆಯನ್ನು ಅಳೆಯಲು ಸಾಕಷ್ಟು ಮಾನದಂಡಗಳಿವೆ.

49- ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನಿಮ್ಮ ಯೋಗ್ಯತೆ ಏನು ಎಂಬುದನ್ನು ತಿಳಿಸುವ ಒಂದು ಪ್ರಾತಿನಿಧಿಕ ಸಂಸ್ಥೆಯಾಗಿದೆ.

50- ಸಮೃದ್ಧವಾಗಿದ್ದ ಸಂಸ್ಥೆಯನ್ನು ಮುಚ್ಚುವ ಹಂತಕ್ಕೆ ತಂದಿದ್ದೀರಿ. ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳಿಸಿದ್ದೀರಿ.

51- ಈಗ ಯಾವುದೇ ಹೊಸ ಸರ್ಕಾರಿ ಉದ್ಯೋಗ ಸೃಷ್ಟಿಸುವಂತಿಲ್ಲ ಎಂದು ಫರ್ಮಾನು ಹೊರಡಿಸಿದ್ದೀರಿ.

52-ಜನಾ ನಿಮ್ಮನ್ನ ಶೋಕಿಲಾಲ ಅಂತಾರೆ. ಅದಕ್ಕೆ ಕಾರಣ, ಮೈತುಂಬಾ ಬಟ್ಟೆ ಹಾಕಲು ಆಗದಂತಹ ದುಸ್ಥಿತಿಯಲ್ಲಿರುವ ಕೋಟ್ಯಾಂತರ ಜನರಿದ್ದಾಗ್ಯೂ ನೀವು ದಿನಕ್ಕೆ ಅರ್ಧ ಡಜನ್ ಡ್ರಸ್ ಬದಲಾಯಿಸುತ್ತೀರಂತೆ. ನಿಮ್ಮ ಶೋಕಿ ಎಂತಾದು ಎಂಬುದು ಅಮೆರಿಕಾ ಅಧ್ಯಕ್ಷ ಒಬಾಮಾ ಬಂದಾಗಲೇ ಸಾಬೀತಾಗಿತ್ತು. ನಿಮ್ಮದೇ ಸೂಟಿನ ಮೇಲೆ, ಚಿನ್ನದ ದಾರದಲ್ಲಿ ನಿಮ್ಮದೇ ಹೆಸರನ್ನು ಹಾಕಿಕೊಂಡು ಮೆರೆದ ಜ್ವಲಂತ ಉದಾಹರಣೆ ನಮ್ಮ ಮುಂದಿದೆ.

53- ಜನಾ ನಿಮ್ಮುನ್ನಾ ಶೋಕಿಲಾಲ ಅಂದಾಗ ಶಾನೆ ಬೇಜಾರಾಗುತ್ತೆ. 18 ಗಂಟೆ ಕೆಲಸ ಮಾಡೋ ಪ್ರಧಾನಿಗೆ ಹೀಗೆ ಟೀಕೆ ಮಾಡಬಹುದಾ ಅಂತಾ? ಆದರೆ, ಈ 18 ಗಂಟೆಯಲ್ಲಿ ನೀವು ದೇಶದ ಒಳಿತಿಗಾಗಿ ಎಷ್ಟು ನಿಮಿಷ ವಿನಿಯೋಗಿಸತ್ತಿದ್ದೀರಾ ಅಂತಾ ದೇಶದ ಜನತೆಗೆ ತಿಳಿಸಿಕೊಡಿ.

54-ನಿಮಗೆ ದೇಶ ಶ್ರೀಮಂತವಾಗಿದೆ, ಸಮೃದ್ಧವಾಗಿದೆ ಎಂಬುದನ್ನು ಪ್ರತಿಬಿಂಬಿಸುವ ಉಮೇದು ಇರುವುದು ಶ್ಲಾಘನೀಯ. ಆದರೆ, ಟ್ರಂಪ್ ಬರ್ತಾನೆ ಅಂತಾ ನೀವು ನಿಮ್ಮ ತವರು ರಾಜ್ಯ ಗುಜರಾತಿನ ಸ್ಮಮ್ಮು ಕಾಣದಂತೆ ಗೋಡೆ ಕಟ್ಟಿಸಿದ್ದೀರಿ. ನಿಮಗೆ ಅರ್ಥಶಾಸ್ತ್ರ ಗೊತ್ತಿಲ್ಲ ಅನ್ನೋದು ಆಗ ಮತ್ತೆ ಪ್ರೂವ್ ಆಗಿತ್ತು. ಆ ಗೊಡೆ ಕಟ್ಟಿಸೋ ದುಡ್ಡಲ್ಲಿ ಮನೆಗಳನ್ನು ಕಟ್ಟಿಸಿದ್ರೇ, ಆ ಸ್ಮಮ್ಮಿನ ಜನರಿಗೆ ಶಾಶ್ವತ ವಸತಿ ದಕ್ಕುತ್ತಿತ್ತು.

55-ನಿಮ್ಮ ವಿಎಫ್ಎಕ್ಸ್ ಶೈಲಿಯ ಜೀವನವನ್ನು ಬಿಟ್ಟುಬಿಡಿ. ಇಲ್ಲದ್ದನ್ನು ಇದ್ದಂತೆ ಸೃಷ್ಟಿಸುವ ವಿಎಫ್ಎಕ್ಸ್ ಅನ್ನು ಸಿನಿಮಾದಲ್ಲಿ ಬಳಸಿದರೆ ಚೆನ್ನಾ. ವಾಸ್ತವದಲ್ಲಿ ಬಳಸಿದರೆ, ಗುಜರಾತಿನ ಸ್ಮಮ್ಮಿಗೆ ಕಟ್ಟಿದ ಗೋಡೆಯಂತಾಗುತ್ತದೆ.

56- ನೀವೇನೂ ಒಂದೇ ವರ್ಷದಲ್ಲಿ ದೇಶ ಉದ್ಧಾರ ಮಾಡಬೇಕಿಲ್ಲ ಪ್ರಧಾನಿಗಳೇ, ದೇಶೋದ್ಧಾರ ಅನ್ನೋದು, ನಿರಂತರ ಪ್ರಕ್ರಿಯೆ. ನೋಡಿ, ನಿಮ್ಮ ಗೃಹ ಸಚಿವ ಅಮಿತ್ ಶಾ ಅವರು ಆಗಾಗ್ಗೆ ಆರೋಗ್ಯ ತಪಾಸಣೆಗೆ ತೆರಳುವ ಅಖಿಲ ಭಾರತ ಆರೋಗ್ಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಅನ್ನು ನೆಹರೂ ಅವರು ಕಟ್ಟಿದ್ದರು. ಅದನ್ನು ಕಟ್ಟಲು ಹಲವು ವರ್ಷಗಳೇ ಬೇಕಾದವು. ಅದರ ಉಪಯೋಗವನ್ನು ನಿಮ್ಮ ಗೃಹಸಚಿವರೂ ಪಡೆಯುತ್ತಿದ್ದಾರೆ. ಅದೇ ನೀವು ಕಟ್ಟಿದ ಮುಗಿಲೆತ್ತರದ ಪಟೇಲ್ ವಿಗ್ರಹದಿಂದ ಗುತ್ತಿಗೆದಾರರು ಮತ್ತು ಚೀನಾದ ಕಬ್ಬಿಣ ಉತ್ಪಾದಕರು ಬಿಟ್ಟರೆ ಬೇರ್ಯಾರಿಗೆ ಉಪಯೋಗವಾಯ್ತು?

57- ಮಾನ್ಯ ಪ್ರಧಾನಿಗಳೇ, ಎಷ್ಟೆಲ್ಲ ಅವಕಾಶ ಇದ್ದರೂ ಒಬ್ಬ ರಾಜಕಾರಣಿಯಾಗಿಯೇ ನಶಿಸಿ ಹೋಗುವುದಕ್ಕೂ, ರಾಜತಾಂತ್ರಿಕನಾಗಿ ಅಮರನಾಗುವುದಕ್ಕೂ ಇರುವ ವ್ಯತ್ಯಾಸ ಇಷ್ಟೇ! ನಮ್ಮ ದೇಶಕ್ಕೆ ಆಸ್ಪತ್ರೆಗಳು ಬೇಕೋ ಅಥವಾ ಮುಗಿಲೆತ್ತರದ ಮೂರ್ತಿಗಳು ಬೇಕೋ ಎಂಬುದು ಅರ್ಥಶಾಸ್ತ್ರ ತಿಳಿದವರಿಗೆ ಆರ್ಥವಾಗುತ್ತದೆ. ನಾವು ಮತ್ತೆ ಮನವಿ ಮಾಡ್ತೇವೆ, ದಯವಿಟ್ಟು ಅರ್ಥಶಾಸ್ತ್ರ ತಿಳಿದುಕೊಳ್ಳಿ.

58- ಅಧಿಕಾರದ ಗದ್ದುಗೆ ಏರಿದವರಿಗೆ ಮಾನವೀಯತೆ ಮುಖ್ಯ. ನೀವು ಏಕಾಏಕಿ ಲಾಕ್ಡೌನ್ ಘೋಷಿಸಿದಾಗ ಅದೆಷ್ಟು ಲಕ್ಷ ಜನರು ತಾವು ಕಟ್ಟಿಕೊಂಡ ಬದುಕನ್ನು ಕಳೆದುಕೊಂಡರು ಎಂಬುದರ ಬಗ್ಗೆ ನೀವು ಚಿಂತಿಸಲಿಲ್ಲ. ಮಾನವೀಯತೆ ಅತಿ ಶ್ರೇಷ್ಠ ಮೌಲ್ಯ. ಅದನ್ನು ರೂಢಿಸಿಕೊಳ್ಳಿ.

59- ಲಾಕ್ಡೌನ್ ಅವಧಿಯಲ್ಲಿ ಸತ್ತವರ ಲೆಕ್ಕವೇ ಇಲ್ಲ ಎಂದು ಸಂಸತ್ತಿನಲ್ಲಿ ಹೇಳುವಷ್ಟು ಅಮಾನವೀಯ ಮತ್ತು ಕ್ರೌರ್ಯತೆಯನ್ನು ಬೆಳೆಸಿಕೊಳ್ಳುವುದು ಈ ದೇಶದ ಒಳಿತಿಗಷ್ಟೇ ಅಲ್ಲ, ಅಧಿಕಾರ ಶಾಶ್ವತ ಅಂದ್ಕೊಂಡಿರೋ ನಿಮ್ಮ ಕೇಸರಿ ಪಕ್ಷಕ್ಕೂ ಮಾರಕ.

60- ಪ್ರಧಾನಿಗಳೇ ಮೊದಲು ಮಾನವರಾಗಿ.

61- ಆರು ವರ್ಷದಲ್ಲಿ ಪಟೇಲ್ ಪ್ರತಿಮೆ ಬಿಟ್ಟರೆ, ದೇಶದಲ್ಲಿ ಅದೆಷ್ಟು ಆಸ್ಪತ್ರೆ ಕಟ್ಟಿದ್ದೀರಿ, ಅದೆಷ್ಟು ವೈದ್ಯ ಕಾಲೇಜು ಕಟ್ಟಿದ್ದೀರಿ, ಅದೆಷ್ಟು ಶಾಲಾ ಕಾಲೇಜು ಕಟ್ಟಿದ್ದೀರಿ ಲೆಕ್ಕಕೊಟ್ಟು ಪುಣ್ಯಕಟ್ಕೊಳ್ಳಿ.

ಪಟೇಲ್‌  ಪ್ರತಿಮೆಯೆದುರು ಪ್ರಧಾನಿ ಫೋಟೊಶೂಟ್
ಪಟೇಲ್‌ ಪ್ರತಿಮೆಯೆದುರು ಪ್ರಧಾನಿ ಫೋಟೊಶೂಟ್

62- ನಿಮ್ಮದೇ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಕಟ್ಟಿ ವರ್ಷ ತುಂಬುವ ಮುನ್ನವೇ ಕುಸಿದುಬಿದ್ದ ಸೇತುವೆಗಳು ನೀವೆಷ್ಟು ಭ್ರಷ್ಟರು ಎಂಬುದನ್ನು ಸಾರಿಸಾರಿ ಹೇಳುತ್ತಿವೆ. ದಯವಿಟ್ಟು ಭ್ರಷ್ಟಾಚಾರ ತೊಲಗಿಸುವುದಾಗಿ ಸುಳ್ಳು ಹೇಳಬೇಡಿ.

63- ನೀವು ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬಂದಿದೆ ಎಂದು ಹಲವು ವರದಿಗಳು ಹೇಳುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿ ನೀವು ಅಧಿಕಾರಕ್ಕೆ ಬಂದಿದ್ದೀರಿ. ಏರಿದ ಏಣಿಯನ್ನು ಒದೆಯಬೇಡಿ.

64- ಬಹುಸಂಖ್ಯಾಬಲದ ಮದನ್ಮೋತ್ತ ನಿರ್ಧಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾಯಿಸುತ್ತವೆ. ಪ್ರಜಾಪ್ರಭುತ್ವ ಸತ್ತರೆ ಸರ್ವಾಧಿಕಾರಿ ಹುಟ್ಟಿಕೊಳ್ಳುತ್ತಾನೆ. ಮತ್ತೆ ಪ್ರಜೆಗಳೇ ಸರ್ವಾಧಿಕಾರಿಯನ್ನು ಸಾಯಿಸುತ್ತಾರೆ. ಇತಿಹಾಸವನ್ನು ಮರೆಯಬೇಡಿ.

65- ಸಂವಿಧಾನಿಕ ಸತ್ಸಂಪ್ರದಾಯಗಳು ಪ್ರಜಾಪ್ರಭುತ್ವನ್ನು ಹೆಚ್ಚು ಆರೋಗ್ಯಕರವಾಗಿಡುತ್ತವೆ. ದಯವಿಟ್ಟು ಸಂವಿಧಾನಿಕ ಪ್ರಕ್ರಿಯೆಗಳನ್ನು ಪಾಲಿಸಿ, ಸಂವಿಧಾನ ಗೌರವಿಸಿ. ಬಹುಮತದ ಬಲದ ಮದದಿಂದ ಸಿಕ್ಕಸಿಕ್ಕದ್ದನ್ನೆಲ್ಲ ಬದಲಾಯಿಸುವ ಪ್ರವೃತ್ತಿ ಅಪಾಯಕಾರಿ.

66- ಮಾತಿಗೆ ತಪ್ಪುವವರನ್ನು ವಿಶ್ವಾಸದ್ರೋಹಿಗಳು ಎನ್ನುತ್ತಾರೆ. ರಾಜ್ಯಗಳ ಜಿಎಸ್ಟಿ ಪಾಲು ನೀಡುವ ವಿಷಯದಲ್ಲಿ ನಿಮ್ಮ ಸರ್ಕಾರ ಮಾತಿಗೆ ತಪ್ಪಿದೆ. ನಮ್ಮ ಪ್ರಧಾನಿ ವಿಶ್ವಾಸದ್ರೋಹಿ ಎಂದು ಯಾವುದೇ ರಾಜ್ಯದ ಮುಖ್ಯಮಂತ್ರಿಯೋ, ಅರ್ಥ ಸಚಿವರೋ ಹೇಳುವುದನ್ನು ಕೇಳಿಸಿಕೊಳ್ಳಲು ನಮಗಂತೂ ಇಷ್ಟ ಇಲ್ಲಾ.

67- ನಿಮ್ಮದು 56 ಇಂಚಿನ ಸುತ್ತಳತೆಯ ಎದೆಗುಂಡಿಗೆಯು ಧೈರ್ಯದ ಪ್ರತೀಕವಾಗಬೇಕಿತ್ತು. ಸತ್ಯವನ್ನು ಹೇಳುವ, ಸತ್ಯವನ್ನೇ ನಂಬುವ ಮತ್ತು ಸತ್ಯಕ್ಕಾಗಿ ಬದುಕುವ ದಿಟ್ಟತನ ಇರಬೇಕಿತ್ತು. ಆದರೆ, ನೀವು ಚೀನಾ ಗಡಿತಂಟೆ ಕುರಿತಂತೆ ಪ್ರೈಮ್ಟೈಮ್ ನಲ್ಲಿ ಇಡೀ ದೇಶದ ಜನತೆಗೆ ಸುಳ್ಳು ಹೇಳಿದ್ದೀರಿ. ಆ ಸುಳ್ಳು ನೀವೊಬ್ಬ ರಾಜತಾಂತ್ರಿಕ ಅಲ್ಲ ಕೇವಲ ರಾಜಕಾರಣಿ ಎಂಬುದನ್ನು ಸಾರಿಸಾರಿ ಹೇಳುತ್ತಿದೆ.

68- ದೇಶದ ಆರ್ಥಿಕತೆ ಕುಸಿದಿದೆ, ಜಿಡಿಪಿ -23.5ಕ್ಕೆ ತಗ್ಗಿದೆ. ಈ ಕುಸಿತವು ಮತ್ತಷ್ಟು ಮುಂದುವರೆಯಲಿದೆ. ದೇಶದಲ್ಲಿ 10 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಹಲವು ಕೋಟಿ ಕುಟುಂಬಗಳು ಆದಾಯವಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಅದನ್ನು ಒಪ್ಪಿಕೊಳ್ಳುವ ಮತ್ತು ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯ ಅಂತಾ ಯಾವಾಗ ಅಂದ್ಕೊತೀರಿ ಅದನ್ನು ದೇಶದ ಜನತೆಗೆ ತಿಳಿಸಿ.

69- ನೀವೇನೋ ದೇಶ ಉದ್ದಾರ ಮಾಡ್ತೀರಿ ಅಂತಾ ಜನಾ ನಿಮಗೆ ಎರಡೆರಡು ಬಾರಿ ಅಧಿಕಾರ ನೀಡಿದ್ದಾರೆ. ಆದರೆ, ನೀವು ದೇಶದ ಆರ್ಥಿಕತೆ ಕುಸಿಯುವಂತೆ ಮಾಡಿದ್ದೀರಿ, ನಿರುದ್ಯೋಗಿಗಳ ಕಾರ್ಖಾನೆ ಸೃಷ್ಟಿಸಿದ್ದೀರಿ, ಸೌಹಾರ್ದತೆ ತಗ್ಗಿಸಿದ್ದೀರಿ, ನಿಮ್ಮ ಗೆಳೆಯರ ಒಳಿತಿಗಾಗಿ ದೇಶದ ಹಿತಾಸಕ್ತಿಯನ್ನೇ ಬಲಿಗೊಟ್ಟಿದ್ದೀರಿ. ಕೋವಿಡ್ ಬರುವ ಮುನ್ನವೇ ನೀವು ಸಂಪೂರ್ಣ ವಿಫಲರಾಗಿದ್ದೀರಿ.

70- ಮಾನ್ಯ ಪ್ರಧಾನಿಗಳೇ ನಿಮ್ಮ ವೈಫಲ್ಯಗಳನ್ನು ಒಪ್ಪಿಕೊಳ್ಳಿ, ನೈತಿಕ ಜವಾಬ್ದಾರಿ ಹೊತ್ತುಕೊಳ್ಳಿ, ದಯವಿಟ್ಟು ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಈ ದೇಶವನ್ನು, ದೇಶದ ಜನರನ್ನು ಕಾಪಾಡಿ!

Click here to follow us on Facebook , Twitter, YouTube, Telegram

Pratidhvani
www.pratidhvani.com