ಮೈಸೂರು: ನಶಿಸುತ್ತಿರುವ ಪಾರಂಪರಿಕ ಕುಂದನ ಕಲೆ
ರಾಷ್ಟ್ರೀಯ

ಮೈಸೂರು: ನಶಿಸುತ್ತಿರುವ ಪಾರಂಪರಿಕ ಕುಂದನ ಕಲೆ

ನೂರಾರು ವರ್ಷಗಳ ಹಿಂದಿನಿಂದಲೇ ಮೈಸೂರು ಕುಂದನ ಕಲೆಗೆ ಪ್ರಸಿದ್ದವಾಗಿದ್ದುದು ಹೊರ ರಾಜ್ಯಗಳವರಿಗೆ ಬಿಡಿ ಇಂದಿನ ಮೈಸೂರಿಗರಿಗೇ ಗೊತ್ತಿಲ್ಲ. ಅದರೆ ಕುಂದನ ಕಲೆಯು ಮೈಸೂರಿನ ಪಾರಂಪರಿಕ ಕಲೆ ಆಗಿದ್ದು ದೇಶದಲ್ಲಿ ಇದರ ಕೇಂದ್ರ ಮೈಸೂರೇ ಆಗಿದೆ.

ಕೋವರ್ ಕೊಲ್ಲಿ ಇಂದ್ರೇಶ್

ನಮ್ಮ ಭವ್ಯ ಭಾರತೀಯ ಶ್ರೀಮಂತ ಸಂಸ್ಕ್ರತಿ ಮತ್ತು ಕಲೆ ವಿಶ್ವದಲ್ಲೇ ಸುಪ್ರಸಿದ್ದವಾದುದು. ಅದರಲ್ಲೂ ಭಾರತೀಯ ಶಿಲ್ಪ ಕಲೆಯು ಯುನೆಸ್ಕೋ ಪಟ್ಟಿಯಲ್ಲಿಯೂ ಸೇರಿದೆ. ಪುರಾತನ ಕಾಲದಲ್ಲಿ 64 ಬಗೆಯ ಕಲೆಗಳಿದ್ದವೆಂದು ನಾವು ಪುಸ್ತಕದಲ್ಲಿ ಓದಿದ್ದೇವೆ. ಅದರೆ ಕಾಲ ಕಳೆದಂತೆ ಇಂತಹ ಕಲೆಗಳು ನಶಿಸಿ ಹೋಗಿವೆ, ಹೋಗುತ್ತಿವೆ. ಇದು ನಿಜಕ್ಕೂ ವಿಷಾದನೀಯ. ಯಾವುದೇ ರೀತಿಯ ಕಲೆ ಸೃಷ್ಟಿಯಾಗಲು ಕಲಾವಿದ ಅಥವಾ ಶಿಲ್ಪಿ ಬೇಕೇ ಬೇಕು. ಸೃಷ್ಟಿ ಮಾಡುವವರು ಅನುಭವಿಗಳೂ, ನೈಪುಣ್ಯತೆ ಹೊಂದಿದವರು ಮತ್ತು ನುರಿತವರಾಗಿರಬೇಕು. ಈ ರೀತಿ ನೈಪುಣ್ಯತೆ ಸಾಧಿಸಲೇ 10-20 ವರ್ಷಗಳ ಕಾಲ ಬೇಕಾಗುತ್ತದೆ. ಈ ನೈಪುಣ್ಯತೆ ಸಂಪಾದಿಸುವ ಸಮಯದಲ್ಲಿ ಕೈಗೊಂಡ ಕಲೆಗೆ ಬೇಡಿಕೆಯೂ ಇರಬೇಕಾಗುತ್ತದೆ. ಇಲ್ಲದಿದ್ದರೆ ಕಲಾವಿದರು ಬದುಕಲೇ ಸಾದ್ಯವಿಲ್ಲ. ರಚಿಸಿದ ಕೃತಿಗಳಿಗೆ ಬೇಡಿಕೆ ಇಲ್ಲದೆ, ಪೋಷಕರೂ ಇಲ್ಲದೆ ಹತ್ತಾರು ಕಲೆಗಳು ಇಂದು ಆಸ್ತಿತ್ವದಲ್ಲೇ ಇಲ್ಲ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಹತ್ತಾರು ಬಗೆಯ ಕಲೆಗಳನ್ನು, ಕಲಾವಿದರನ್ನು ಪ್ರೋತ್ಸಾಹಿಸುತಿದ್ದರು. ಆದರೆ ಪ್ರಜಾ ಪ್ರಭುತ್ವ ಆಡಳಿತ ಬಂದ ನಂತರ ಕೆಲವೊಂದು ಅಪರೂಪದ ಕಲೆಗಳಿಗೆ ಪೋಷಕರೆ ಇಲ್ಲದಂತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಮ್ಮ ಸಾಂಸ್ಕೃತಿಕ ನಗರಿಯು ಮೈಸೂರು ಪಾಕ್ ಮತ್ತು ಮೈಸೂರು ಸಿಲ್ಕ್ ಸೀರೆಗಳಿಗೆ ಪ್ರಸಿದ್ದಿ ಪಡೆದಿದೆ. ಆದರೆ ನೂರಾರು ವರ್ಷಗಳ ಹಿಂದಿನಿಂದಲೇ ಮೈಸೂರು ಕುಂದನ ಕಲೆಗೆ ಪ್ರಸಿದ್ದವಾಗಿದ್ದುದು ಹೊರ ರಾಜ್ಯಗಳವರಿಗೆ ಬಿಡಿ ಇಂದಿನ ಮೈಸೂರಿಗರಿಗೇ ಗೊತ್ತಿಲ್ಲ. ಅದರೆ ಕುಂದನ ಕಲೆಯು ಮೈಸೂರಿನ ಪಾರಂಪರಿಕ ಕಲೆ ಆಗಿದ್ದು ದೇಶದಲ್ಲಿ ಇದರ ಕೇಂದ್ರ ಮೈಸೂರೇ ಆಗಿದೆ. ಈ ಕುಂದನ ಕಲೆಗೆ 400 ವರ್ಷಗಳ ಇತಿಹಾಸ ಇದ್ದು, ಮೈಸೂರು ಮಹಾರಾಜರ ಕಾಲದಲ್ಲಿ ಈ ಕಲೆ ತುಂಬಾ ಪ್ರಸಿದ್ಧಿ ಪಡೆದಿದ್ದು, 2000 ಕ್ಕೂ ಹೆಚ್ಚು ಜನ ಕಲಾವಿದರಿದ್ದರು. ಕಾಲ ಕ್ರಮೇಣ ಈ ಕಲೆ ಕ್ಷೀಣಿಸತೊಡಗಿದ್ದು, ನಮ್ಮ ರಾಜ್ಯದಲ್ಲೀಗ ಕೇವಲ 200 ಮಂದಿ ಮಾತ್ರ ಕುಂದನ ಕಲಾವಿದರಿದ್ದಾರೆ ಎಂದು ಅಂದಾಜಿಸಲಾಗಿದೆ. ಕುಂದನ ಕಲೆ (ಇನ್-ಲೇ) ಎಂದರೇನು? ಮರದಿಂದ ಕೆತ್ತನೆ ಕೆಲಸವನ್ನು ಹಾಗೂ ಕತ್ತರಿಸಿದ ಮರದ ತುಂಡುಗಳಿಂದ ಕಲೆಗಳನ್ನು ರೂಪಿಸುವುದೇ ಈ ಕುಂದನ ಕಲೆಯಾಗಿದ್ದು, ಇಂದು ಅವಸಾನದ ಅಂಚಿನಲ್ಲಿದೆ. ಢಾಕಾ ಬ್ರಿಟಿಷರ ಕಾಲದಲ್ಲಿ ಮಸ್ಲಿನ್ ಬಟ್ಟೆಗಳ ತಯಾರಿಕೆಗೆ ಪ್ರಸಿದ್ದವಾಗಿತ್ತು ಎಂದು ನಾವೆಲ್ಲ ಓದಿದ್ದೇವೆ. ಆದರೆ ಈಗ ಆ ಬಟ್ಟೆಗಳನ್ನು ತಯಾರು ಮಾಡುವವರೇ ಅತ್ಯಲ್ಪ. ಆಧುನಿಕತೆಯ ಭರಾಟೆಯಲ್ಲಿ ಜನರು ಮಿಲ್ ಗಳಲ್ಲಿ ತಯಾರಾಗುವ ಪಾಲಿಯೆಸ್ಟರ್ ಬಟ್ಟೆಗಳಿಗೆ ಮಾರು ಹೋಗಿರುವುದರಿಂದ ಮಸ್ಲಿನ್ ಬಟ್ಟೆ ನೇಯುವವರ ಸಂಖ್ಯೆ ಇಂದು ಅತ್ಯಲ್ಪ, ಜತೆಗೆ ಬೇಡಿಕೆಯೂ ಇಲ್ಲ. ಕುಂದನ ಕಲಾವಿದರ ಪರಿಸ್ಥಿತಿಯೂ ಹೀಗೆಯೇ ಆಗಿದೆ.

ಈ ನಡುವೆ ಬೆಂಗಳೂರಿನ ಯುವ ಎಂಜಿನಿಯರಿಂಗ್ ಪದವೀದರ ಭಾನು ಪ್ರಕಾಶ್ ಕುಂದನ ಕಲೆಯ ಬಗ್ಗೆ ಸ್ವತಃ ಆಸಕ್ತಿ ಮೂಡಿಸಿಕೊಂಡು ಇದರ ಪುನರುಜ್ಜೀವನಕ್ಕೆ ಮುಂದಾಗಿರುವುದು ಶ್ಲಾಘನೀಯ. ಭಾನು ಪ್ರಕಾಶ್ ಅವರ ತಂದೆ ಮತ್ತೀಕೆರೆಯ ನಿವಾಸಿ ರಾಮಲಿಂಗರಾಜು ಅವರೂ ಐಟಿಐ ಉದ್ಯೋಗಿಯಾಗಿದ್ದು ಸ್ವತಃ ಕಲಾವಿದರಾಗಿದ್ದು ಕಲ್ಲಿನ ಕೆತ್ತನೆ, ಹವಳದಲ್ಲಿ ಕೆತ್ತನೆ ಮಾಡುತಿದ್ದರು ಇವರೇ ನನಗೆ ಸ್ಪೂರ್ತಿ ಎನ್ನುತ್ತಾರೆ ಭಾನು ಅವರು. ಇವರ ಅಜ್ಜ ಚಿನ್ನ ಬೆಳ್ಳಿ ಕೆಲಸಗಾರರಾಗಿದ್ದರು. ಕಲಾವಿದ ಭಾನು ಪ್ರಕಾಶ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಲಂಡನ್​​ನಲ್ಲಿ 4 ವರ್ಷ ಹಾಗೂ ಇಲ್ಲಿ 7 ವರ್ಷ ಸೇರಿ ಒಟ್ಟು 11 ವರ್ಷಗಳ ಕಾಲ ಇಂಜಿನಿಯರಿಂಗ್​ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ ಕುಂದನ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು ತಮ್ಮ ವೃತ್ತಿಯನ್ನು ತ್ಯಜಿಸಿ ಇದೀಗ ಪೂರ್ಣಾವಧಿಯಾಗಿ ಕಲಾಕೃತಿಯ ರಚನೆಗಿಳಿದಿದ್ದಾರೆ. ಮೈಸೂರಿಗೆ ಬಂದು ಕ್ರಾಫ್ಟ್​ ಮೆಲೆನ್​​ ಎಂಬ ಕಲಾ ಸಂಸ್ಥೆ ಸ್ಥಾಪಿಸಿದ್ದಾರೆ.

 ಕುಂದನ ಕಲಾವಿದ ಭಾನು ಪ್ರಕಾಶ್
ಕುಂದನ ಕಲಾವಿದ ಭಾನು ಪ್ರಕಾಶ್

ಈ ಕುರಿತು ಮಾತನಾಡಿದ ಭಾನು ಅವರು ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಕ್ರಾಫ್ಟ್ ಮೆಲಾನ್ ಎಂಬ ಘಟಕವನ್ನು ತೆರೆದು 24 ಕುಂದನ ಕಲಾವಿದರಿಗೆ ಉದ್ಯೋಗ ನೀಡಿರುವುದಾಗಿ ತಿಳಿಸಿದರು. 2015 ರಲ್ಲಿ ಪ್ರಾರಂಭಗೊಂಡ ಇವರ ಪುಟ್ಟ ಸಂಸ್ಥೆ ಪ್ರಾರಂಭದಲ್ಲಿ ವಾರ್ಷಿಕ 40 ರಿಂದ 50 ಲಕ್ಷ ರೂಪಾಯಿಗಳವರೆಗೂ ವಹಿವಾಟು ನಡೆಸುತಿತ್ತು. ಆದರೆ ಕೊರೋನ ಸಾಂಕ್ರಮಿಕ ಹರಡುವಿಕೆ ನಂತರ ವಹಿವಾಟು ಸಂಪೂರ್ಣ ನೆಲ ಕಚ್ಚಿದೆ ಎಂದು ನೋವಿನಿಂದ ನುಡಿದರು. ತಮ್ಮ ಮುಖ್ಯ ಉದ್ದೇಶ ನಶಿಸುತ್ತಿರುವ ಈ ಕಲೆಗೆ ಪುನರುಜ್ಜೀವನ ನೀಡುವುದೇ ಆಗಿದ್ದು ಕೆಲಸವಿಲ್ಲದೆ ಇದ್ದ ಅಪರೂಪದ ಕಲಾವಿದರಿಗೆ ಉದ್ಯೋಗ ಸೃಷ್ಟಿಸಿದ ಹೆಮ್ಮೆ ಇದೆ ಎಂದರು. ಕಳೆದ ಐದು ವರ್ಷಗಳಿಂದ ಘಟಕ ನಡೆಸುತಿದ್ದರೂ ಇದರಿಂದ ಬಂದಿರುವ ಆದಾಯ ಏನೇನೂ ಇಲ್ಲ ಎಂದ ಅವರು ಬೆಂಗಳೂರಿನಲ್ಲಿ ಸಾಫ್ಟ್‌ ವೇರ್‌ ಎಂಜಿನಿಯರ್‌ ಆಗಿ ದುಡಿಯುತ್ತಿರುವ ಪತ್ನಿ ಗಾಯತ್ರಿ ಅವರಿಂದಾಗಿ ಕುಟುಂಬ ನಿರ್ವಹಣೆ ಆಗುತ್ತಿದೆ ಎಂದರು.

ಪ್ರಸ್ತುತ ಹೆಬ್ಬಾಳದಲ್ಲಿರುವ ಕ್ರಾಫ್ಟ್‌ ಮೆಲಾನ್‌ ಘಟಕದಲ್ಲಿ ಕುಂದನ ಕಲೆಯಲ್ಲೆ ತಯಾರಿಸಲಾದ ಪೀಠೋಪಕರಣಗಳನ್ನು ತಯಾರಿ ಮಾಡಲಾಗುತ್ತಿದೆ. ಕ್ರಾಫ್ಟ್ ಮೆಲಾನ್‌ ಪೀಠೋಪಕರಣ ವಿನ್ಯಾಸಗಳು ಕ್ರಿಯಾತ್ಮಕವಾಗಿದ್ದು ಆಳವಾದ ಸೌಂದರ್ಯದ ಪ್ರಜ್ಞೆಯನ್ನು ಹೊಂದಿದವರಿಗೆ ಇಷ್ಟವಾಗುತ್ತವೆ. ಇಲ್ಲಿ ಪ್ರತಿ ಪೀಠೋಪಕರಣಗಳು ತರಬೇತಿ ಪಡೆದ ಕುಶಲಕರ್ಮಿಗಳಿಂದ ತಯಾರಿಸಲಾಗುತಿದ್ದು, ಅವರು ಮನೆಗೆ ಸೂಕ್ತವಾದ ಮತ್ತು ಗುಣಮಟ್ಟದ ಕಲಾಕೃತಿಗಳನ್ನು ರಚಿಸಿ ಕೊಡುತಿದ್ದಾರೆ. ನೀವು ತೆಗೆದುಕೊಳ್ಳುವ ಪೀಠೋಪಕರಣಗಳು ನಿಮ್ಮ ವೈಯಕ್ತಿಕ ಶೈಲಿ ಮತ್ತು ಅಭಿರುಚಿಗಳಿಗೆ ಸರಿಹೊಂದುವಂತೆ ವಿಶೇಷ ವಿನ್ಯಾಸಗಳ ಸಂಗ್ರಹವನ್ನು ವಿನ್ಯಾಸಕರು ವಿನ್ಯಾಸಗೊಳಿಸಿದ್ದಾರೆ. ಸಾಂಪ್ರದಾಯಿಕ ಮೈಸೂರು ವಿನ್ಯಾಸಗಳಲ್ಲಿ ಬೇಟೆ ಮರದಿಂದ ಮಾಡಿದ ದೇವರ ಮಂಟಪವನ್ನು ತಯಾರಿಸಿಕೊಂಡು ಈಗ ಮೈಸೂರಿನಲ್ಲಿ 10,000 ಚದರ ಅಡಿಗಳಷ್ಟು ಪೂರ್ಣ ಪ್ರಮಾಣದ ಪೀಠೋಪಕರಣಗಳ ಘಟಕ ತಲೆ ಎತ್ತಿದೆ.

ಕ್ರಾಫ್ಟ್‌ ಮೆಲಾನ್‌ ನ ಎಲ್ಲಾ ಪೀಠೋಪಕರಣಗಳು ಗಟ್ಟಿ ಮರದಿಂದ ತಯಾರಿಸಲ್ಪಟ್ಟಿದ್ದು, ಪೀಠೋಪಕರಣಗಳು ಮತ್ತು ಕರಕುಶಲ ವಸ್ತುಗಳನ್ನು ಎಮ್ಡಿಎಫ್ ಅಥವಾ ಪ್ಲೈವುಡ್ ಅನ್ನು ಕೂಡ ಬಳಸಿಕೊಳ್ಳಲಾಗಿದೆ., ಘನ ಮರದ ಪೀಠೋಪಕರಣಗಳನ್ನು ಮರದಿಂದ ಅದರ ನೈಸರ್ಗಿಕ ರೂಪದಲ್ಲಿ ತಯಾರಿಸಲಾಗುತ್ತದೆ. ಪ್ರತಿಯೊಂದು ಮರವು ಅದರ ಬಣ್ಣ, ವಿನ್ಯಾಸ, ಧಾನ್ಯಗಳು, ತೂಕ, ತೈಲ ಅಂಶ ಮತ್ತು ಇತರ ಅಂಶಗಳಿಂದ ನಿರ್ದಿಷ್ಟವಾದ ಗುರುತನ್ನು ಹೊಂದಿದೆ. ಪೀಠೋಪಕರಣಗಳನ್ನು ತಯಾರಿಸಲು ಬಳಸುವ ಮರದ ಮೂಲ ಗುಣಲಕ್ಷಣಗಳನ್ನು ಉಳಿಸಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ., ಇಲ್ಲಿ ಪೀಠೋಪಕರಣಗಳನ್ನು ಖರೀದಿಸುವುದು ಕಲೆಯ ಭಾಗವಾಗಿರುತ್ತದೆ.. ಶೈಲಿ, ಬಣ್ಣ, ಮುಕ್ತಾಯ, ವಿನ್ಯಾಸ, ಗುಣಮಟ್ಟದಿಂದ ಕೂಡಿದ ಪರಿಪೂರ್ಣ ಉತ್ಪನ್ನವನ್ನು ತಯಾರಿಸಲು ತಿಂಗಳುಗಟ್ಟಲೆ ಸಮಯ ಜತೆಗೆ ಅಪಾರ ಪರಿಶ್ರಮ ಬೇಕಾಗಿದೆ.

ಮೈಸೂರು: ನಶಿಸುತ್ತಿರುವ ಪಾರಂಪರಿಕ ಕುಂದನ ಕಲೆ
ಮೈಸೂರು: ನಶಿಸುತ್ತಿರುವ ಪಾರಂಪರಿಕ ಕುಂದನ ಕಲೆ

ಈ ಕಲಾವಿದರು ಇಂದು ನುರಿತವರಿದ್ದರೂ ಸೂಕ್ತ ಬೇಡಿಕೆ ಇಲ್ಲದೆ ಆಟೋ ಓಡಿಸುವುದು, ಕೂಲಿ ಕೆಲಸ ಮಾಡುವುದಕ್ಕೆ ಮುಂದಾಗುತಿದ್ದಾರೆ. ಇದು ಅವರ ಹೊಟ್ಟೆ ತುಂಬಿಸಲು ಅನಿವಾರ್ಯ ಕೂಡ. ಮುಂದಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆರ್ಟ್ಸ್‌ ಮತ್ತು ಕ್ರಾಪ್ಟ್ಸ್‌ ಕೋರ್ಸನ್ನು ಆರಂಬಿಸಲೂ ಭಾನು ಪ್ರಕಾಶ್‌ ಚಿಂತನೆ ನಡೆಸಿದ್ದಾರೆ. ಇದರಿಂದಾಗಿ ನಶಿಸುತಿದ್ದ ಕುಂದನ ಕಲೆಯ ಪರಿಚಯ ಮುಂದಿನ ಪೀಳಿಗೆಗೆ ಅಗಬಹುದು ಎನ್ನುವ ಆಶಯ ಅವರದ್ದು.

Click here to follow us on Facebook , Twitter, YouTube, Telegram

Pratidhvani
www.pratidhvani.com