ರಾಜಕೀಯ ನಾಯಕರ ಆರೋಗ್ಯದ ಬಗ್ಗೆ ಪಾರದರ್ಶಕತೆಯ ಅನಿವಾರ್ಯತೆಯಲ್ಲಿ ಭಾರತ
ರಾಷ್ಟ್ರೀಯ

ರಾಜಕೀಯ ನಾಯಕರ ಆರೋಗ್ಯದ ಬಗ್ಗೆ ಪಾರದರ್ಶಕತೆಯ ಅನಿವಾರ್ಯತೆಯಲ್ಲಿ ಭಾರತ

ಅಮಿತ್‌ ಶಾ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಭಾರತದಲ್ಲಿ ಗೃಹಮಂತ್ರಿಯ ಅನುಪಸ್ಥಿತಿ ಇದೆ. ಚುನಾಯಿತ ಅಭ್ಯರ್ಥಿಗೆ ತನ್ನ ಪ್ರಮಾಣವಚದಂತೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿದೆಯೋ ಇಲ್ಲವೋ ಎಂಬುವುದು ಪ್ರಜೆಗಳಿಗೆ ಬಹಿರಂಗಪಡಿಸುವುದು ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಿಷ್ಟಗೊಳಿಸಬಹುದು.

ಫೈಝ್

ಫೈಝ್

ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಕಳೆದ ಆರು ವಾರಗಳಲ್ಲಿ ಮೂರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗಸ್ಟ್‌ 2 ರಂದು ಅಮಿತ್‌‌ ಶಾ ಕರೋನಾ ಪಾಸಿಟಿವ್‌ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಆರು ತಿಂಗಳಿಂದ ಅಮಿತ್‌‌ ಶಾ ಅವರು ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದಾರೆಂದು ವದಂತಿಗಳು ಹಬ್ಬಿತ್ತು. ಯಾಕೆಂದರೆ, ಭಾರತದಲ್ಲಿ ಕರೋನಾ ಸೋಂಕು ತನ್ನ ಪರಿಣಾಮ ಬೀರಲು ಆರಂಭಿಸಿದ್ದರಿಂದ ದೇಶದ ಎರಡನೇ ಪ್ರಭಾವಿ ನಾಯಕ ಶಾ, ಸಾರ್ವಜನಿಕವಾಗಿ ಎಂದೂ ಕಾಣಿಸಿಕೊಂಡಿರಲಿಲ್ಲ.

ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಶಾ ಚೇತರಿಸಿಕೊಂಡಿದ್ದಾರೆಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆಗಸ್ಟ್‌ 14 ರವರೆಗೆ, ಅಂದರೆ ಡಿಸ್ಟಾರ್ಜ್ ಆಗುವವರೆಗೆ ಅಮಿತ್‌ ಶಾ ಅವರ ಆರೋಗ್ಯದ ಸ್ಥಿತಿಯ ಕುರಿತಂತೆ ಯಾವುದೇ ಅಧಿಕೃತ ಸುದ್ದಿಗಳು ಹೊರಬಂದಿರಲಿಲ್ಲ. ಹಾಗಾಗಿ ವದಂತಿಗೆ ಇನ್ನಷ್ಟು ರೆಕ್ಕೆ-ಪುಕ್ಕಗಳು ಸೇರಿಕೊಂಡಿದ್ದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದಾಗಿ ಮೂರು ದಿನಗಳ ಬಳಿಕ, ಅಂದರೆ ಆಗಸ್ಟ್‌ 17 ರ ಮಧ್ಯರಾತ್ರಿ ಅಮಿತ್‌ ಶಾರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಾರಿ ಏಮ್ಸ್‌ ಆಸ್ಪತ್ರೆಗೆ ದಾಖಲಾದ ಅಮಿತ್‌‌ ಶಾರಿಗೆ ಕೋವಿಡೋತ್ತರ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಹೇಳಲಾಗಿತ್ತು. ತದನಂತರ ಆಗಸ್ಟ್‌ 30ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಇದಾಗಿ ಎರಡು ವಾರಗಳ ತರುವಾಯ ಅಂದರೆ, ಸೆಪ್ಟೆಂಬರ್‌ 12 ರ ಮಧ್ಯರಾತ್ರಿ ಮತ್ತೆ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರಿಸುಮಾರು ಒಂದು ತಿಂಗಳು ಪೂರ ಅಮಿತ್‌ ಶಾ ಆಸ್ಪತ್ರೆಯಲ್ಲೇ ದಾಖಲಾಗಿದ್ದರಿಂದ ಭಾರತ ಆಗಸ್ಟ್ ತಿಂಗಳು ಪೂರ್ತಿ ಗೃಹಮಂತ್ರಿಯ ಅನುಪಸ್ಥಿತಿ ಇತ್ತು. ಇತ್ತೀಚೆಗಿನ ಆಸ್ಪತ್ರೆ ದಾಖಲಾತಿಯು ಸಂಸತ್ತು ಅಧಿವೇಶನದ ಎರಡು ದಿನಗಳ ಹಿಂದೆಯಷ್ಟೇ ಆಗಿರುವುದರಿಂದ ಗೃಹಮಂತ್ರಿ ಇಲ್ಲದೆಯೇ ಅಧಿವೇಶನ ನಡೆಯುತ್ತಿದೆ.

ಅದಾಗ್ಯೂ, ಸೆಪ್ಟಂಬರ್‌ 13ರಂದು ಏಮ್ಸ್‌ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ “ಅಮಿತ್‌ ಶಾ, ಸಂಸತ್‌ ಅಧಿವೇಶನಕ್ಕೆ ಮುಂಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆಗಾಗಿ ದಾಖಲಾಗಿದ್ದಾರೆ” ಎಂದಿತ್ತು. ಕೇಂದ್ರ ಗೃಹ ಸಚಿವಾಲಯ ಹಾಗೂ ಏಮ್ಸ್‌ ಇದುವರೆಗೂ ಗೃಹಮಂತ್ರಿಯ ಆರೋಗ್ಯದ ಬಗ್ಗೆ ಯಾವುದೇ ಖಚಿತ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲದಿರುವುದರಿಂದ ಅವರ ಆರೋಗ್ಯದ ಕುರಿತಂತೆ ಗೊಂದಲವೇ ಶುರುವಾಗಿದೆ.

ಒಂದರ್ಥದಲ್ಲಿ ಪ್ರಸ್ತುತ ನಡೆಯುತ್ತಿರುವ ಸಂಸತ್‌ ಅಧಿವೇಶನ ನಿರ್ಣಾಯಕವಾದದ್ದು. ಒಂದು ಕಡೆ, ಭಾರತವು ಬ್ರೆಜಿಲ್ ಅನ್ನು ದಾಟಿ ವಿಶ್ವದ ಎರಡನೇ ಅತ್ಯಂತ ಕೆಟ್ಟ ಕರೋನಾ ಪೀಡಿತ ರಾಷ್ಟ್ರವಾಗಿ ಮಾರ್ಪಟ್ಟಿದೆ, ಚೀನಾ- ಭಾರತ ಬಿಕ್ಕಟ್ಟು ಉಲ್ಬಣಿಸಿದೆ, ಜಮ್ಮು-ಕಾಶ್ಮೀರದ ಆಂತರಿಕ ಭದ್ರತೆ ಅಸ್ಥಿರವಾಗಿದೆ, ಈಶಾನ್ಯ ರಾಜ್ಯಗಳಲ್ಲಿ ನಾಗಾ ಶಾಂತಿ ಮಾತುಕತೆ ಮೊದಲಾದ ಪ್ರಮುಖ ವಿಷಯಗಳು ಚರ್ಚೆಯಾಗಬೇಕಿದೆ. ಇಂತಹ ಪ್ರಮುಖ ಸಂಸತ್‌ ಅಧಿವೇಶನಕ್ಕೆ ಕೇಂದ್ರ ಗೃಹಮಂತ್ರಿಯ ಅನುಪಸ್ಥಿತಿ ಹಾಗೂ ಆರೋಗ್ಯದ ಅಸ್ಪಷ್ಟ ಮಾಹಿತಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ.

ಅನಾರೋಗ್ಯದ ಕಾರಣದಿಂದ ಅಶಕ್ತಗೊಂಡಾಗ ಈ ನಿರ್ಣಾಯಕ ಸಮಸ್ಯೆಗಳೊಂದಿಗೆ ತೊಡಗಿಸಿಕೊಳ್ಳಲು ಸಾಧ್ಯವಾಗದಿರಬಹುದು. ಆದರೂ ಚುನಾಯಿತ ಪ್ರತಿನಿಧಿಯೊಬ್ಬರು ಸಾರ್ವಜನಿಕ ಕಚೇರಿಯನ್ನು ಸಮರ್ಥವಾಗಿ ಕಾರ್ಯನಿರ್ವಹಿಸುವುದು ಸಾರ್ವಜನಿಕ ಕಾಳಜಿಯ ವಿಷಯವಾಗಿರಬೇಕು. ಆದರೆ, ಭಾರತದಲ್ಲಿ ಚುನಾಯಿತ ನಾಯಕರ ಆರೋಗ್ಯವನ್ನು "ವೈಯಕ್ತಿಕ" ಸಮಸ್ಯೆಯೆಂದು ಪರಿಗಣಿಸಲಾಗುತ್ತದೆ-ಇದು ವೈಯಕ್ತಿಕ ಗೌಪ್ಯತೆಯ ಒಂದು ಅಂಶವಾಗಿದ್ದು, ಇದನ್ನು ಸಾರ್ವಜನಿಕವಾಗಿ ಚರ್ಚಿಸಬಾರದೆಂದಿದೆ.

ಭಾರತದ ಮಟ್ಟಿಗೆ, ಅರುಣ್‌ ಜೇಟ್ಲಿ, ಸುಶ್ಮಾ ಸ್ವರಾಜ್‌ ಹಾಗೂ ಮನೋಹರ್‌ ಪರಿಕ್ಕರ್‌ ತಮ್ಮ ಗಂಭೀರ ಖಾಯಿಲೆಗಳ ಹೊರತಾಗಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಹಾಜರಾಗುತ್ತಿದ್ದರು.

ಬಹುತೇಕ ಬೇರೆ ದೇಶಗಳಲ್ಲಿ ಉನ್ನತ ನಾಯಕರ ಆರೋಗ್ಯ ಸ್ಥಿತಿಯನ್ನು ಅಷ್ಟೇನೂ ರಹಸ್ಯವಾಗಿಡಲಾಗುವುದಿಲ್ಲ. ಆಗಸ್ಟ್‌ 28 ರಂದು ಜಪಾನ್‌ ಪ್ರಧಾನಮಂತ್ರಿ ಶಿಂಝೋ ಅಬೆ ತನ್ನ ಅನಾರೋಗ್ಯದ ಹಿನ್ನಲೆಯಲ್ಲಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಾಗ ತನ್ನ ಸ್ಥಾನದಿಂದ ತೆರವುಗೊಂಡಿದ್ದರು. ಈ ಹಿಂದೆ 2007 ರಲ್ಲೂ ಅನಾರೋಗ್ಯದ ನಿಮಿತ್ತ ಅಬೆ ತನ್ನ ಸ್ಥಾನದಿಂದ ನಿರ್ಗಮಿಸಿದ್ದರು. ಇಂತಹ ರಾಜಕೀಯ ಪ್ರಾಮಾಣಿಕತೆ ಭಾರತದ ಮಟ್ಟಿಗೆ ಅಪರಿಚಿತ. ಯಾಕೆಂದರೆ ಇಲ್ಲಿ ಉನ್ನತ ನಾಯಕರ ಆರೋಗ್ಯ ಸ್ಥಿತಿಯನ್ನು ರಾಷ್ಟ್ರೀಯ ರಹಸ್ಯವೆಂಬಂತೆ ಕಾಣಲಾಗುತ್ತಿದೆ.

ಅಮೇರಿಕದಲ್ಲಿರುವ ಸಂಪ್ರದಾಯದಂತೆ ಅಲ್ಲಿನ ಅಧ್ಯಕ್ಷ ವರ್ಷಕ್ಕೊಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಹಾಗೂ ಸಾರ್ವಜನಿಕರಿಗೆ ಆರೋಗ್ಯದ ವರದಿಯನ್ನು ಬಹಿರಂಗಗೊಳಿಸಬೇಕು. ಆದಾಗ್ಯೂ, ಅಧ್ಯಕ್ಷರು ತಮ್ಮ ವೈದ್ಯರನ್ನು ತಾವೇ ಆಯ್ಕೆ ಮಾಡಬಹುದು ಮತ್ತು ಯಾವ ಮಾಹಿತಿಯನ್ನು ಬಿಡುಗಡೆ ಮಾಡುತ್ತಾರೆ ಎಂಬುದನ್ನು ನಿಯಂತ್ರಿಸಬಹುದು. ಜಾನ್ ಎಫ್ ಕೆನಡಿ, ರೊನಾಲ್ಡ್ ರೇಗನ್ ಮತ್ತು ಫ್ರಾಂಕ್ಲಿನ್ ರೂಸ್ವೆಲ್ಟ್ ಸೇರಿದಂತೆ ಅನೇಕ ಅಮೇರಿಕನ್ ಅಧ್ಯಕ್ಷರು ಅಧಿಕಾರದಲ್ಲಿದ್ದಾಗ ತಮ್ಮ ಕಾಯಿಲೆಗಳನ್ನು ಮರೆಮಾಚಿದ್ದಾರೆಂದು ಬಳಿಕ ತಿಳಿದುಬಂದಿದೆ, ಆದರೆ ಅವರ ಅಧ್ಯಕ್ಷತೆಯಲ್ಲಿ ಅವರಲ್ಲಿ ಯಾರೂ ಸಾವನ್ನಪ್ಪಲಿಲ್ಲ. ಆದರೂ, ರಾಷ್ಟ್ರೀಯ ರಾಜಕೀಯ ನಾಯಕನ ಆರೋಗ್ಯವು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯವಾಗಿದೆ ಎಂಬ ಮಾನ್ಯತೆಯಿಂದಾಗಿಯೇ ಈ ಸಂಪ್ರದಾಯ ಅಸ್ತಿತ್ವದಲ್ಲಿದೆ ಎಂಬುದು ಸ್ಪಷ್ಟ.

ಅಮಿತ್‌ ಶಾ ಹಾಗೂ ಅಮೆರಿಕಾದ ಕೆಲವು ಮಾಜಿ ಅಧ್ಯಕ್ಷರಂತೆ ಈ ಹಿಂದೆಯೂ ಹಲವಾರು ನಾಯಕರು ತಮ್ಮ ರೋಗಾವಸ್ಥೆಯನ್ನು ರಹಸ್ಯವಾಗಿಟ್ಟಿದ್ದರು. 1996 ರಲ್ಲಿ ಫ್ರೆಂಚ್‌ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಮಿಟ್ಟರ್ಯಾಂಡ್‌ ಅವರ ವೈಯಕ್ತಿಕ ವೈದ್ಯರಾಗಿದ್ದ ಕ್ಲೌಡೆ ಗುಬ್ಲರ್ ಎಂಬವರು, ಫ್ರೆಂಚ್‌ ಅಧ್ಯಕ್ಷ ತನ್ನ ಆರೋಗ್ಯ ಸ್ಥಿತಿಯನ್ನು ಮುಚ್ಚಿಟ್ಟಿದ್ದರೆಂಬ ಅಂಶವನ್ನು ದ ಗ್ರೇಟ್‌ ಸೀಕ್ರೆಟ್‌ ಎಂಬ ಪುಸ್ತಕದ ಮೂಲಕ ಬಹಿರಂಗಗೊಳಿಸಿದ್ದರು.

ಗುಬ್ಲರ್ ಅವರಿಗೆ 1981 ರ ನವೆಂಬರ್‌ನಲ್ಲಿ ಅಧ್ಯಕ್ಷರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು, ಆದರೆ ರಹಸ್ಯ ಕಾಪಾಡುವಂತೆ ಗುಬ್ಲರ್‌ಗೆ ಸೂಚಿಸಲಾಗಿತ್ತು. ಕ್ಯಾನ್ಸರ್ ಅಂತಿಮವಾಗಿ 1996 ರಲ್ಲಿ ಮಿತ್ರರಾಂಡ್‌ನನ್ನು ಕೊಂದಿತು. ಆದರೆ ಗುಬ್ಲರ್ ಪ್ರಕಾರ, 1994 ರ ವೇಳೆಗಾಗಲೇ, ಅವರು ಅಧ್ಯಕ್ಷರನ್ನು "ಇನ್ನು ಮುಂದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿಲ್ಲ" ಎಂದು ಪರಿಗಣಿಸಿದ್ದರು. “ಫ್ರೆಂಚ್ ಜನರು ಆತನನ್ನು ಆಯ್ಕೆ ಮಾಡಿದ ಆದೇಶವನ್ನು ಪೂರೈಸುತ್ತಿಲ್ಲ. ಏಕೆಂದರೆ ಅವರ ಅನಾರೋಗ್ಯವನ್ನು ಹೊರತುಪಡಿಸಿ ಬೇರೇನೂ ಅವರಿಗೆ ಆಸಕ್ತಿಯಿರಲಿಲ್ಲ.” ಎಂದು ಗುಬ್ಲರ್‌ ಪುಸ್ತಕದಲ್ಲಿ ಉಲ್ಲೇಖಿಸಿದ್ದರು.

ಉನ್ನತ ನಾಯಕರ ಆರೋಗ್ಯ ಗೌಪ್ಯತೆಯನ್ನು ರಹಸ್ಯವಾಗಿಡುವುದು ಹಲವಾರು ರಾಷ್ಟ್ರಗಳಲ್ಲಿ ಹೊಸ ಪರಿಪಾಠವೇನಲ್ಲ. ಆಫ್ರಿಕಾದ ಕೆಲವು ದೇಶಗಳಲ್ಲಿ ನಾಯಕನ ಆರೋಗ್ಯದ ಕುರಿತಂತೆ ಸಾರ್ವಜನಿಕವಾಗಿ ಚರ್ಚಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಚೈನಾದ ನಾಯಕನ ಆರೋಗ್ಯದ ಕುರಿತಂತೆ ಯಾರಿಗೂ ಮಾಹಿತಿಯೇ ಇಲ್ಲ. ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಅನಾರೋಗ್ಯದ ಕುರಿತ ವದಂತಿ ಇಂದು ನಿನ್ನೆಯದಲ್ಲ. ಪ್ರಜಾಪ್ರಭುತ್ವನ್ನು ಪಾಲಿಸದ ನಾಯಕರು ಆರೋಗ್ಯ ಸ್ಥಿತಿಯನ್ನು ಗೌಪ್ಯವಾಗಿಡುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಪ್ರಜಾಪ್ರಭುತ್ವ ದೇಶದಲ್ಲೂ ಚುನಾಯಿತ ಅಭ್ಯರ್ಥಿಗಳ ಆರೋಗ್ಯ ಸ್ಥಿತಿಯನ್ನು ಮುಚ್ಚಿಡಲಾಗುತ್ತಿದೆ.

ಭಾರತದಲ್ಲಿ, ಒಬ್ಬ ವ್ಯಕ್ತಿಯು ಆರೋಗ್ಯವಂತನೆಂದು ಹೇಳಿಕೊಳ್ಳುವವರೆಗೂ, ಅವನು ಅಥವಾ ಅವಳು ಸಾರ್ವಜನಿಕ ಕಚೇರಿಯಲ್ಲಿ ಮುಂದುವರಿಯಲು ಅನುಮತಿಸಲಾಗುತ್ತದೆ ಎಂಬುದು ಸಾಮಾನ್ಯ ಪರಿಪಾಠ. ಆದರೂ ನಾಯಕನ ಆರೋಗ್ಯದಿಂದಾಗಿ ಆಡಳಿತದ ಗುಣಮಟ್ಟ ಮತ್ತು ನೀತಿ ನಿರೂಪಣೆಯು ಬಳಲುತ್ತಿದೆಯೆ ಎಂದು ನಿರ್ಧರಿಸಲು ಯಾವುದೇ ಪಾರದರ್ಶಕ ಪ್ರಕ್ರಿಯೆಯಿಲ್ಲ, ಅಥವಾ ಈ ನಿರ್ಧಾರವನ್ನು ಯಾರು ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯೂ ಇಲ್ಲ. ಯಾವುದೇ ಸ್ವತಂತ್ರ ಪರಿಶೀಲನೆಯಿಲ್ಲ.

ನಾಯಕನ ಆರೋಗ್ಯ ಸ್ಥಿತಿಯನ್ನು ಬಹಿರಂಗಪಡಿಸಲು ಪಾರದರ್ಶಕತೆ ಮತ್ತು ವೈಯಕ್ತಿಕ ಗೌಪ್ಯತೆಯ ನಡುವೆ ಕಠಿಣ ಸಮತೋಲನ ಕ್ರಿಯೆಯ ಅಗತ್ಯವಿದೆ. ಪಾರದರ್ಶಕತೆ ಸಾರ್ವಜನಿಕ ಹೊಣೆಗಾರಿಕೆಗೆ ಕೊಡುಗೆ ನೀಡಿದರೆ, ಅದರ ಅನುಪಸ್ಥಿತಿಯು ರಾಷ್ಟ್ರ, ಸರ್ಕಾರಕ್ಕೆ ಅಪಾಯವನ್ನುಂಟು ಮಾಡುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾರ್ವಜನಿಕ ನಾಯಕತ್ವಕ್ಕೆ ಆರೋಗ್ಯವಂತ ನಾಯಕನನ್ನು ಆಯ್ಕೆ ಮಾಡಲು ಮತದಾರರಿಗೆ ಈ ಪಾರದರ್ಶಕತೆ ಅವಕಾಶ ನೀಡುತ್ತದೆ. ಆದಾಗ್ಯೂ, ಸಾರ್ವಜನಿಕ ವ್ಯಕ್ತಿಗಳಿಗೆ ಇತರ ನಾಗರಿಕರಂತೆ ವೈಯಕ್ತಿಕ ಗೌಪ್ಯತೆಯ ಅಗತ್ಯವಿರುತ್ತದೆ. ಅವರ ಆರೋಗ್ಯ ವಿವರಗಳನ್ನು ಬಹಿರಂಗಪಡಿಸುವುದು ಅವರ ಪ್ರತಿಸ್ಪರ್ಧಿಗಳಿಗೆ ಅನಗತ್ಯ ಪ್ರಯೋಜನವನ್ನು ನೀಡುತ್ತದೆ. ಅಂತಹ ವಿವರಗಳು ಇತರ ದೇಶಗಳೊಂದಿಗೆ ಸಂಬಂಧಗಳನ್ನು ಪ್ರಭಾವಿಸುತ್ತವೆ.

ಪಾರದರ್ಶಕತೆಯ ಅಗತ್ಯತೆಯೋ ಅಥವಾ ಗೌಪ್ಯತೆಯ ಅಗತ್ಯವೋ ಯಾವುದು ಹೆಚ್ಚು ಮುಖ್ಯವಾದುದು ಎಂದು ನಿರ್ಧರಿಸುವುದು ಸುಲಭದ ಕೆಲಸವಲ್ಲ. ಆದರೆ ಅದನ್ನು ರೋಗಪೀಡಿತ ನಾಯಕರ ವೈಯಕ್ತಿಕ ಪ್ರಜ್ಞೆಗೆ ಬಿಡಲಾಗುವುದಿಲ್ಲ. ಹಾಗಾಗಿ ಮಂತ್ರಿಗಳ ಆರೋಗ್ಯ ಸ್ಥಿತಿಯನ್ನು ಬಹಿರಂಗಪಡಿಸುವುದನ್ನು ಸಾಂವಿಧಾನಿಕ ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ಸೇರಿಸಿಕೊಳ್ಳಬೇಕು. ಆರೋಗ್ಯ ಸ್ಥಿತಿಯ ಕಡ್ಡಾಯ ಬಹಿರಂಗಪಡಿಸುವಿಕೆಯು ಭಾರತೀಯ ಪ್ರಜಾಪ್ರಭುತ್ವವನ್ನು ಹೆಚ್ಚು ಸುರಕ್ಷಿತ ಮತ್ತು ಸ್ಥಿರವಾಗಿಸಬಲ್ಲದು.

ಕೃಪೆ:‌ ದಿ ಕ್ಯಾರವಾನ್

Click here to follow us on Facebook , Twitter, YouTube, Telegram

Pratidhvani
www.pratidhvani.com