ಕೋವಿಡ್‌ 19: ದೇಶದ 11 ಜಿಲ್ಲೆಗಳಲ್ಲಿ ಶೇ. 42ರಷ್ಟು ಸಾವುಗಳು ದಾಖಲು

ಭಾರತೀಯರು ಸಮಾಧಾನ ಪಡುವಂತಹ ವಿಚಾರವೇನೆಂದರೆ, ಮೂರು ವಾರಗಳ ಹಿಂದೆ 1.83ರಷ್ಟು ಇದ್ದಂತಹ ಸಾವಿನ ಪ್ರಮಾಣ, ಈಗ 1.64ಕ್ಕೆ ಇಳಿದಿದೆ.
ಕೋವಿಡ್‌ 19: ದೇಶದ 11 ಜಿಲ್ಲೆಗಳಲ್ಲಿ ಶೇ. 42ರಷ್ಟು ಸಾವುಗಳು ದಾಖಲು

ಕರೋನಾ ಸೋಂಕಿನ ತೀವ್ರತೆ ದೇಶದಲ್ಲಿ ಇನ್ನೂ ಕಡಿಮೆಯಾಗಿಲ್ಲ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪ್ರತಿದಿನವೂ, ಸುಮಾರು 70,000ಕ್ಕೂ ಹೆಚ್ಚು ಕರೋನಾ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಕರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಿದ್ದರೂ, ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿರುವುದು ಆತಂಕಕಾರಿ ಬೆಳವಣಿಗೆ. ದೇಶದಲ್ಲಿ ಕರೋನಾದಿಂದ ಉಂಟಾದ ಸಾವಿನ ಸಂಖ್ಯೆಯನ್ನು ಗಮನಿಸಿದರೆ, 11 ಜಿಲ್ಲೆಗಳಿಂದ 42%ದಷ್ಟು ಸಾವಿನ ಪ್ರಮಾಣ ದಾಖಲಾಗಿದೆ.

ಈಗ ದೇಶದಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 80,000 ದಾಟಿದೆ. ಅದರಲ್ಲಿ ಮುಂಬಯಿ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಪುಣೆಗಳಲ್ಲಿ ಹೆಚ್ಚಿನ ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು ಮಹಾರಾಷ್ಟ್ರದ ನಾಗ್ಪುರ್‌ ಹಾಗೂ ಜಲ್‌ಗಾಂವ್‌ನಲ್ಲಿ ಕೂಡಾ 1000ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ. ಜಲ್‌ಗಾಂವ್‌ನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಅತೀ ಹೆಚ್ಚು ಇಲ್ಲದಿದ್ದರೂ, ಟಾಪ್‌ 25 ಜಿಲ್ಲೆಗಳ ಪಟ್ಟಿಯಲ್ಲಿ ಅದೂ ಸ್ಥಾನ ಪಡೆದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇನ್ನು ಮಹಾರಾಷ್ಟ್ರದ ಇನ್ನೂ ಮೂರು ಜಿಲ್ಲೆಗಳಾದ, ಸೋಲಾಪುರ್‌, ಕೊಲ್ಲಾಪುರ್‌ ಮತ್ತು ರಾಯ್‌ಘಢ್‌ನಲ್ಲಿ ಕೂಡಾ ಸಾವಿನ ಪ್ರಮಾಣ 900 ದಾಟಿದ್ದು, ಒಂದು ಸಾವಿರದತ್ತ ಸಾಗುತ್ತಿದೆ. ಮಹಾರಾಷ್ಟ್ರದಲ್ಲಿನ ಸಾವಿನ ಪ್ರಮಾಣ ಬೇರೆ ಎಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಿದೆ.

ಕಳೆದ ಮೂರು ವಾರಗಳಲ್ಲಿ ದೇಶದಲ್ಲಿ 20,000ಕ್ಕೂ ಹೆಚ್ಚು ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಅಂದರೆ ದಿನವೊಂದಕ್ಕೆ ಸುಮಾರು 1000 ಜನರು ಸಾವನ್ನಪ್ಪುತ್ತಿದ್ದಾರೆ. ಈ ಸಂಖ್ಯೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಈಗ ಹೆಚ್ಚಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ, ಮುಂದೆ ಸಾವಿನ ಪ್ರಮಾಣದಲ್ಲಿ ಬದಲಾಗುವ ಸೂಚನೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇವೆಲ್ಲದರ ಮಧ್ಯೆ, ಭಾರತೀಯರು ಸಮಾಧಾನ ಪಡುವಂತಹ ವಿಚಾರವೇನೆಂದರೆ, ಮೂರು ವಾರಗಳ ಹಿಂದೆ 1.83ರಷ್ಟು ಇದ್ದಂತಹ ಸಾವಿನ ಪ್ರಮಾಣ, ಈಗ 1.64ಕ್ಕೆ ಇಳಿದಿದೆ. ಆದರೆ, ವಿಜ್ಞಾನಿಗಳು ಹೇಳುವ ಪ್ರಕಾರ ಸಾವಿನ ಪ್ರಮಾಣವನ್ನು ಲೆಕ್ಕ ಹಾಕುವ ವಿಧಾನ ಹಾದಿ ತಪ್ಪಿಸುತ್ತಿದೆ. ಏಕೆಂದರೆ, ಇಂದು ಪತ್ತೆಯಾಗುವ ಪ್ರಕರಣಗಳಿಂದಲೇ ಯಾರೂ ಸಾವನ್ನಪ್ಪುವುದಿಲ್ಲ. ಸಾವನ್ನಪ್ಪಿದವರು ಮೂರು ನಾಲ್ಕು ವಾರಗಳ ಹಿಂದೆ ಕೋವಿಡ್‌ ಪಾಸಿಟಿವ್‌ ಆಗಿರುತ್ತಾರೆ. ಹಾಗಾಗಿ, ಸಾವಿನ ಪ್ರಮಾಣವನ್ನು ಅಳೆಯಲು, ಹೊಸ ವಿಧಾನ ಕಂಡುಹುಡುಕಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ದಿನದಲ್ಲಿ ಪತ್ತೆಯಾದ ಹೊಸ ಪ್ರಕರಣಗಳು ಹಾಗೂ ಅಂದು ದಾಖಲಾದ ಸಾವುಗಳ ಸಂಖ್ಯೆಯ ಅನುಪಾತದಿಂದ ಸಾವಿನ ಪ್ರಮಾಣವನ್ನು ಅಳೆಯಲಾಗುತ್ತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com