ಸಿದ್ದರಾಮಯ್ಯ, ದೇವೆಗೌಡ ಸೇರಿದಂತೆ ಭಾರತದ ಹಲವು ನಾಯಕರು ಚೀನಾದ ಕಣ್ಗಾವಲಿನಲ್ಲಿ..!
ರಾಷ್ಟ್ರೀಯ

ಸಿದ್ದರಾಮಯ್ಯ, ದೇವೆಗೌಡ ಸೇರಿದಂತೆ ಭಾರತದ ಹಲವು ನಾಯಕರು ಚೀನಾದ ಕಣ್ಗಾವಲಿನಲ್ಲಿ..!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌. ಆರ್‌ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್‌ ಡಿ ದೇವೆಗೌಡ, ಕರ್ನಾಟಕದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಐಟಿ ಸೆಲ್‌ ಮುಖ್ಯಸ್ಥೆಯಾಗಿದ್ದ ದಿವ್ಯ ಸ್ಪಂದನಾ(ರಮ್ಯ) ಚೀನಾದ ಕಣ್ಗಾವಲು ಪಟ್ಟಿಯಲ್ಲಿ ಸೇರಿದ್ದಾರೆ.

ಪ್ರತಿಧ್ವನಿ ವರದಿ

ಅಂತರಾಷ್ಟ್ರೀಯ ಪ್ರಮುಖ ಮಾಹಿತಿಗಳ ದತ್ತಾಂಶ (Overseas Key Information Database - OKIDB) ಎಂಬ ಸಂಸ್ಥೆಯು ಚೈನಾ ಸರ್ಕಾರದೊಂದಿಗೆ ಸೇರಿ ಭಾರತದ ಹಲವಾರು ರಾಜಕಾರಣಿಗಳ, ನ್ಯಾಯಾಧೀಶರ, ಪ್ರಮುಖ ವ್ಯಕ್ತಿಗಳ ಸಾಮಾಜಿಕ ಜಾಲತಾಣಗಳ ಬಳಕೆಗಣುಗುಣವಾಗಿ, ಅವರ ಮಾಹಿತಿಯನ್ನು ಸಂಗ್ರಹಿಸಿದೆ ಹಾಗೂ ಅವರ ಚಲನವಲನದ ಮೇಲೆ ಕಣ್ಗಾವಲಿಟ್ಟಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತದಾದ್ಯಂತ ಬಿಜೆಪಿ, ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಕ್ಷಗಳಿಂದ ಹಿಡಿದು ಪ್ರಾಂತೀಯ ಪಕ್ಷಗಳ ನಾಯಕರವರೆಗೆ, ಮಂತ್ರಿಗಳಿಂದ ಹಿಡಿದು ಮೇಯರ್‌ಗಳವರೆಗೆ, ಶಾಸಕ, ಸಂಸದರಿಂದ ಹಿಡಿದ ನ್ಯಾಯಾಧೀಶರವರೆಗೆ ಸುಮಾರು 1350 ಭಾರತದ ಪ್ರಭಾವಿ ವ್ಯಕ್ತಿಗಳ ಮೇಲೆ ಚೈನಾ ತನ್ನ ಕಣ್ಗಾವಲಿಟ್ಟಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ತನಿಖಾ ವರದಿಯ ಪ್ರಕಾರ ಭಾರತದ 700 ಕ್ಕೂ ಹೆಚ್ಚು ರಾಜಕಾರಣಿಗಳು, 460 ರಷ್ಟು ರಾಜಕಾರಣಿಗಳ ಆಪ್ತರನ್ನು ಡೇಟಾಗಳನ್ನು ಸಂಗ್ರಹಿಸಿಟ್ಟಿದೆ. 100 ಕ್ಕೂ ಹೆಚ್ಚು ರಾಜಕಾರಣಿಗಳ ಕುಟುಂಬಸ್ಥರನ್ನ ಕೂಡಾ ಕಣ್ಗಾವಲಿನಲ್ಲಿಟ್ಟಿದೆ. ಕನಿಷ್ಟ 350 ರಷ್ಟು ಮಾಜಿ ಹಾಗೂ ಹಾಲಿ ಸಂಸದರನ್ನು ನಿಯಮಿತವಾಗಿ ಕಣ್ಗಾವಲು ಮಾಡುತ್ತಿದೆ.

ಕನಿಷ್ಟ 40ರಷ್ಟು ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು OKIDB ಪಟ್ಟಿಯಲ್ಲಿದ್ದಾರೆ. ಸಿದ್ದರಾಮಯ್ಯ, ಉದ್ಧವ್‌ ಠಾಕ್ರೆ, ಮಮತಾ ಬ್ಯಾನರ್ಜಿ ಈ ಪಟ್ಟಿಯಲ್ಲಿ ಸೇರಿದ್ದಾರೆ. ಜೊತೆಗೆ 12 ರಾಜ್ಯಗಳ ರಾಜ್ಯಪಾಲರೂ OKIDB ಪಟ್ಟಿಯಲ್ಲಿದ್ದಾರೆ,

ಗುರುತರವಾಗಿ, ಬೆಂಗಳೂರು, ಮುಂಬೈ, ಚೆನ್ನೈ, ವಡೋದರ, ಪುಣೆ, ಡೆಲ್ಲಿ ಸೇರಿದಂತೆ ಭಾರತದ ಸಣ್ಣ ಹಾಗೂ ದೊಡ್ಡ ನಗರಗಳ 70 ರಷ್ಟು ಮೇಯರ್‌ಗಳನ್ನು, ಉಪಮೇಯರ್‌ಗಳನ್ನೂ ಕೂಡಾ ಚೀನಾ ಗಮನದಲ್ಲಿಟ್ಟಿದೆ. ಚೀನಾದಲ್ಲಿ ನಗರ ಮೇಯರ್‌ಗಳಿಗೆ ಸಾಕಷ್ಟು ಅಧಿಕಾರ ಇರುವುದರಿಂದ, ಹಾಗೂ ಅವರು ಪ್ರಭಾವಿಗಳಾಗಿರುವುದರಿಂದ ಭಾರತದ ನಗರಗಳ ಮೇಯರ್‌ ಮೇಲೆಯೂ ಗಮನ ಹರಿಸಲಾಗಿದೆ ಎಂದು ಅಂದಾಜಿಸಲಾಗಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಕನಿಷ್ಟ ತಲಾ 200 ರಷ್ಟು ರಾಜಕಾರಣಿಗಳು ಚೀನಾದ ಕಣ್ಗಾವಲಿನಲ್ಲಿದ್ದಾರೆಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಹೇಳಿದೆ. ಅಲ್ಲದೆ ಸಿಪಿಐ, ಸಿಪಿಐ(ಎಮ್)‌ ಪಕ್ಷಗಳ 60ರಷ್ಟು ನಾಯಕರನ್ನು ಕೂಡಾ ಚೀನಾ ಗಮನದಲ್ಲಿಟ್ಟಿದೆ ಎಂದು ವರದಿ ತಿಳಿಸಿದೆ.

ರಾಜಿವ್‌ ಗಾಂಧಿ ಹಾಗೂ ಸಂಜಯ್‌ ಗಾಂಧಿ ಕುಟುಂಬ, ಪವಾರ್‌ ಕುಟುಂಬ, ಸಿಂಧಿಯಾ ಮೊದಲಾದ ರಾಜಕೀಯ ಕುಟುಂಬಗಳನ್ನು ಮಾತ್ರವಲ್ಲದೆ, ಅನುಪಮ್‌ ಖೇರ್‌, ಹೇಮಾ ಮಾಲಿನಿ, ಪರೇಶ್‌ ರಾವಲ್‌, ದಿವಂಗತ ವಿನೋದ್‌ ಖನ್ನಾ ಮೊದಲಾದ ಬಾಲಿವುಡ್‌ ತಾರೆಯರ ಮೇಲೂ ಚೀನಾ ತನ್ನ ಕಣ್ಣಿಟ್ಟಿದೆ.

ಮಾಜಿ ಪ್ರಧಾನಿಗಳಾದ ಎಚ್‌ ಡಿ ದೇವೇಗೌಡ, ಮನಮೋಹನ್‌ ಸಿಂಗ್‌, ಪಿ ವಿ ನರಸಿಂಹರಾವ್‌, ರಾಜಿವ್‌ ಗಾಂಧಿಯವರ ಕುಟುಂಬ ಹಾಗೂ ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್‌ ಕಲಾಮ್‌ ಹಾಗೂ ಪ್ರಣಬ್‌ ಮುಖರ್ಜಿಯವರ ಕುಟುಂಬವನ್ನೂ ಚೀನಾ ತನ್ನ ಕಣ್ಗಾವಲಿನಲ್ಲಿಟ್ಟಿದೆ.

ಕಮಲ್ ನಾಥ್, ಭೂಪಿಂದರ್ ಸಿಂಗ್ ಹೂಡ, ಅಶೋಕ್ ಚೌಹಾಣ್, ಸಿದ್ದರಾಮಯ್ಯ, ಶಂಕರ್ ವಘೇಲಾ, ಬುದ್ಧದೇಬ್ ಭಟ್ಟಾಚಾರ್ಜಿ, ಕಿರಣ್ ಕುಮಾರ್ ರೆಡ್ಡಿ, ರಾಮನ್ ಸಿಂಗ್, ದಿವಂಗತ ಮನೋಹರ್ ಪರಿಕ್ಕರ್, ಲಾಲು ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್. ಜನಾರ್ಧನ ರೆಡ್ಡಿ, ದಿವಂಗತ ಎಸ್.ಆರ್.ಬೊಮ್ಮಾಯಿ, ದಿವಂಗತ ಎಂ ಕರುಣಾನಿಧಿ ಮತ್ತು ದಿವಂಗತ ಜ್ಯೋತಿ ಬಸು ಮೊದಲಾದ ಮಾಜಿ ಮುಖ್ಯಮಂತ್ರಿಗಳು ಚೀನಾದ ಕಣ್ಗಾವಲು ಪಟ್ಟಿಯಲ್ಲಿ ಇದ್ದಾರೆ. ಅಲ್ಲದೆ ಶಶಿ ತರೂರ್, ಬೈಜಯಂತ್ ‘ಜೇ’ ಪಾಂಡ, ಮೀನಾಕ್ಷಿ ಲೇಖಿ, ಅಭಿಷೇಕ್ ಬ್ಯಾನರ್ಜಿ (ಮಮತಾ ಅವರ ಸೋದರಳಿಯ), ಕಾಳಿಕೇಶ ನಾರಾಯಣ್ ಸಿಂಗ್ ಡಿಯೋ, ಮತ್ತು ದಿವ್ಯಾ ಸ್ಪಂದನಾ(ರಮ್ಯ) ಕೂಡಾ ಈ ಪಟ್ಟಿಯಲ್ಲಿ ಸೇರಿದ್ದಾರೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ನೀಡಿರುವ ವರದಿ ಪ್ರಕಾರ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌. ಆರ್‌ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್‌ ಡಿ ದೇವೆಗೌಡ, ಕರ್ನಾಟಕದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಐಟಿ ಸೆಲ್‌ ಮುಖ್ಯಸ್ಥೆಯಾಗಿದ್ದ ದಿವ್ಯ ಸ್ಪಂದನಾ(ರಮ್ಯ) ಚೀನಾದ ಕಣ್ಗಾವಲಿನಲ್ಲಿ ಸೇರಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com