ಜಮ್ಮು ಕಾಶ್ಮೀರದಲ್ಲಿ 15 ಸಾವಿರ ಎಂಜಿನಿಯರ್ ಗಳ ಉದ್ಯೋಗ ಕಸಿದುಕೊಂಡ ಸರ್ಕಾರ

ಎಂಜಿನಿರ್‌ಗಳು ಈಗ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಜಮ್ಮು ಕಾಶ್ಮೀರದಾದ್ಯಂತ ವ್ಯಾಪಕ ಆಂದೋಲನವನ್ನು ಆಯೋಜಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ಅವರ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 15 ಸಾವಿರ ಎಂಜಿನಿಯರ್ ಗಳ ಉದ್ಯೋಗ ಕಸಿದುಕೊಂಡ ಸರ್ಕಾರ

ಕೇಂದ್ರದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉದ್ಯೋಗ ಸೃಷ್ಟಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಆಶ್ವಾಸನೆಗಳನ್ನು ನೀಡುತ್ತಲೇ ಬಂದಿದೆ. ತನ್ನ ಚುನಾವಣಾ ಪ್ರಣಾಳಿಕೆಗಳಲ್ಲಿ ಬಿಜೆಪಿಯು ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿಯೂ ಭರವಸೆ ನೀಡಿತ್ತು. ಇದಕ್ಕಾಗಿ ಮೇಕ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಎಂಬ ಯೋಜನೆಗಳನ್ನೂ ಜಾರಿಗೊಳಿಸಿತ್ತು. ಆದರೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಜಾರಿಯಲ್ಲಿದ್ದ ಸ್ವಸಹಾಯ ಪಂಗಡದ ಯೋಜನೆಯೊಂದನ್ನು ಸ್ಥಗಿತಗೊಳಿಸಿ 15 ಸಾವಿರ ಎಂಜಿನಿಯರ್ ಗಳನ್ನು ಮನೆಗೆ ಕಳಿಸಿದೆ.

ಕಳೆದ ಆಗಸ್ಟ್ 12 ರಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ ಮನೋಜ್ ಸಿನ್ಹಾ ಅವರು ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸುವ ಪುಸ್ತಕವನ್ನು ಬಿಡುಗಡೆ ಮಾಡಿದರು. ಕಳೆದ 17 ವರ್ಷದಿಂದ ಜಾರಿಯಲ್ಲಿರುವ ಯೋಜನೆಯಡಿ ಕೆಲಸ ಮಾಡುವ ನಿರುದ್ಯೋಗಿ ಎಂಜಿನಿರ್‌ಗಳು ನಿರ್ವಹಿಸಿದ ಪಾತ್ರದ ಬಗ್ಗೆ ಇದರಲ್ಲಿ ಹೆಚ್ಚಿನ ಉಲ್ಲೇಖವಿದೆ. ಸುಮಾರು 15 ಸಾವಿರ ನಿರುದ್ಯೋಗಿ ಎಂಜಿನಿಯರ್ ಗಳು ಸರ್ಕಾರದ ಈ ಯೋಜನೆಯಡಿಯಲ್ಲಿ ಸ್ವಸಹಾಯ ಗುಂಪುಗಳ ಅಡಿಯಲ್ಲಿ ಕೆಲಸ ಮಾಡುತಿದ್ದಾರೆ ಎಂದೂ ಪುಸ್ತಕ ತಿಳಿಸಿದೆ. ಅದರೆ ಈ ಪುಸ್ತಕ ಬಿಡುಗಡೆಗೆ ಕೇವಲ ಎರಡು ದಿನ ಮೊದಲು ಜಮ್ಮು ಕಾಶ್ಮೀರ ಆಡಳಿತ 17 ವರ್ಷಗಳಿಂದ ಜಾರಿಯಲ್ಲಿದ್ದ ಈ ಯೋಜನೆಯನ್ನು ರದ್ದುಗೊಳಿಸಿದೆ. ಇದರಿಂದಾಗಿ 15 ಸಾವಿರ ಎಂಜಿನಿಯರ್ ಗಳು ನಿರುದ್ಯೋಗಿಗಳಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈಗಿನ ಆರ್ಥಿಕ ಹಿಂಜರಿತ ಮತ್ತು ಕರೋನ ಕಾರಣದಿಂದಾಗಿ ಜಮ್ಮು ಕಾಶ್ಮೀರದಲ್ಲಿ ನಿರುದ್ಯೋಗ ಸಮಸ್ಯೆ ದಿನೆ ದಿನೇ ಏರಿಕೆ ದಾಖಲಿಸುತ್ತಿದೆ. ಈಗ ಈ ಹೊಸ ಆದೇಶವು ಎಂಜಿನಿಯರ್ ಗಳನ್ನು ಬಾಣಲೆಯಿಂದ ಬೆಂಕಿಗೆ ನೂಕಿದ ಹಾಗಾಗಿದೆ ಎಂದು 49 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಸಯ್ಯದ್ ಪರ್ವೇಜ್‌ ಹೇಳುತ್ತಾರೆ. ಪರ್ವೇಜ್‌ ಅವರು 2003 ರಲ್ಲಿ ಈ ಯೋಜನೆಗೆ ಸೇರಿಕೊಂಡಿದ್ದು ಇವರಂತೆಯೇ ಸಾವಿರಾರು ಎಂಜಿನಿಯರ್ ಗಳು ಈ ಉದ್ಯೋಗದಿಂದ ತಮ್ಮ ಕುಟುಂಬವನ್ನು ಸಾಕುತಿದ್ದಾರೆ. ಈ ಎಂಜಿನಿಯರ್ ಗಳಿಗೆ ಈಗ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ವಯಸ್ಸೂ ಮೀರಿ ಹೋಗಿದ್ದು ಇವರ ಬದುಕು ಬೀದಿಗೆ ಬಂದಿದೆ. ಈ ಎಂಜಿನಿಯರ್ ಗಳು ತಾವು 17 ವರ್ಷಗಳಿಂದ ಮಾಡುತ್ತಿರುವ ಉದ್ಯೋಗವನ್ನು ಸರ್ಕಾರ ಖಾಯಂಗೊಳಿಸಲಿದೆ ತಮ್ಮ ಬದುಕು ಉತ್ತಮವಾಗಲಿದೆ ಎಂದು ನಿರೀಕ್ಷಿಸಿದ್ದರು. ಆದರೆ ಆಡಳಿತ ಸರ್ಕಾರದ ನಿರ್ಧಾರ ಅವರಿಗೆ ಬರ ಸಿಡಿಲು ಬಡಿದಂತಾಗಿದೆ.

ಸ್ವಸಹಾಯ ಗುಂಪು ಎಂಜಿನಿಯರ್ ಗಳ ಸಂಘದ ಅದ್ಯಕ್ಷರೂ ಆಗಿರುವ ಪರ್ವೇಜ್‌ ಅವರ ಪ್ರಕಾರ 15 ಸಾವಿರ ಎಂಜಿನಿಯರ್ ಗಳಲ್ಲಿ ಸಿವಿಲ್, ಮೆಕ್ಯಾನಿಕಲ್ , ಎಲೆಕ್ಟ್ರಿಕಲ್ , ಕಂಪ್ಯೂಟರ್, ಬಯೊಮೆಡಿಕಲ್ ಎಂಜಿನಿಯರುಗಳಿದ್ದು ಮನೆಗೆ ಹತ್ತಿರದಲ್ಲೇ ಉದ್ಯೋಗ ಸಿಗುತ್ತದೆ ಎಂಬ ಕಾರಣದಿಂದ ಹೊರ ಜಿಲ್ಲೆ ಹೊರ ದೇಶಗಳ ಆಕರ್ಷಕ ಉದ್ಯೋಗಗಳಿಗೂ ಅರ್ಜಿ ಸಲ್ಲಿಸಲಿಲ್ಲ. ಜಮ್ಮು ಕಾಶ್ಮೀರ ರಾಜ್ಯವು ಕಳೆದೊಂದು ದಶಕದಿಂದ ಅಭಿವೃದ್ದಿ ಅಗಿರುವಲ್ಲಿ ತಮ್ಮ ಪಾಲು ಮಹತ್ವದ್ದಾಗಿದೆ ಎಂದು 2007 ರಿಂದ ಕೆಲಸ ಮಾಡುತ್ತಿರುವ ಮತ್ತೋರ್ವ ಎಂಜಿನಿಯರ್ ಮುಜಾಫರ್ ಹುಸೇನ್ ಹೇಳುತ್ತಾರೆ.

ಜಮ್ಮು ಕಾಶ್ಮೀರ ರಾಜ್ಯವನ್ನು ಕಳೆದ ಆಗಸ್ಟ್ 5 ರಂದು ಸಂವಿಧಾನದ 370 ನೇ ವಿಧಿಯನ್ನು ರದ್ದು ಗೊಳಿಸಿವ ಮೂಲಕ ಕೇಂದ್ರ ಸರ್ಕಾರ ಮೂರು ಭಾಗಗಳನ್ನಾಗಿ ವಿಂಗಡಿಸಿದ್ದು ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದೆ. ಆ ಸಮಯದಲ್ಲಿ ಸರ್ಕಾರವು ʼಜೆಕೆʼಯ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಿ ಇಡೀ ಕಣಿವೆಯನ್ನು ಅಭಿವೃದ್ದಿಪಡಿಸುವುದಾಗಿ ಭರವಸೆ ನೀಡಿತ್ತು. ಅದರೆ ಈಗ ಉದ್ಯೋಗವನ್ನೇ ಕಸಿದುಕೊಂಡಿದೆ. 2002 ರಲ್ಲಿ ನೂರಾರು ಎಂಜಿನಿಯರಿಂಗ್ ಪದವೀಧರರು ಉದ್ಯೋಗಕ್ಕಾಗಿ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು, ನಂತರ 2003 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಿಡಿಪಿ ಸರ್ಕಾರದ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಅವರು ಈ ಹೊಸದೊಂದು ಯೋಜನೆ ಜಾರಿಗೆ ತಂದು ಎಂಜಿನಿಯರ್ ಗಳಿಗೆ ಉದ್ಯೋಗ ನೀಡಿದ್ದರು. ಈ ಎಂಜಿನಿಯರ್ ಗಳ 8-10 ಜನರ ಸ್ವಸಹಾಯ ಗುಂಪುಗಳನ್ನು ರಚಿಸಿ ಅದರಲ್ಲಿ ನೋಂದಾಯಿಸಿಕೊಂಡು ವಿವಿಧ ಇಲಾಖೆಗಳ ಶೇಕಡಾ 10 ರಷ್ಟು ಕೆಲಸವನ್ನು ಈ ಗುಂಪುಗಳಿಗೆ ನೀಡಲಾಗುತಿತ್ತು. ಈ ಗುಂಪುಗಳಿಗೆ ತಲಾ ವಾರ್ಷಿಕ 5 ಲಕ್ಷ ರೂಪಾಯಿಗಳ ಕೆಲಸವನ್ನೂ ನೀಡಲಾಗುತಿತ್ತು. ನಂತರ ಇಲಾಖೆಗಳ ಕೆಲಸವನ್ನು ಶೇಕಡಾ 20 ಕ್ಕೆ ನಂತರ 30 ಕ್ಕೆ ಹೆಚ್ಚಿಸಲಾಯಿತು. ಕೆಲಸದ ಮೊತ್ತವನ್ನೂ 60 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಯಿತು ಕೆಲವೊಮ್ಮೆ ಇದು 1.25 ಕೋಟಿ ರೂಪಾಯಿಗಳವರೆಗೂ ತಲುಪಿತ್ತು.

SAJJAD QAYYUM

2017 ರಲ್ಲಿ, ಈ ಎಂಜಿನಿರ್‌ಗಳ ವರ್ಷಗಳ ಹೋರಾಟದ ನಂತರ, ಸರ್ಕಾರವು ಔಪಚಾರಿಕ ಮಾರ್ಗಸೂಚಿಗಳನ್ನು ಸಹ ನೀಡಿತು, ಕೋಟ್ಟ ಮಾರ್ಗಸೂಚಿಗಳ ಪ್ರಕಾರ ಈ ಸ್ವಸಹಾಯ ಸಂಘಗಳಿಗೆ ವಾರ್ಷಿಕವಾಗಿ ಇಲಾಖೆಗಳಿಗೆ ನಿಯೋಜಿಸಲು ನಿರ್ದೇಶನ ನೀಡಿತು. ಇದಲ್ಲದೆ, ವಿಭಾಗೀಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ಸಹ ಸ್ಥಾಪಿಸಲಾಯಿತು, ಮತ್ತು ಯೋಜನೆಯ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಉದ್ಯೋಗ ನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಲಾಯಿತು. ಆದರೆ ದಿಢೀರಾಗಿ ರದ್ದು ಪಡಿಸಿರುವುದಕ್ಕೆ ಈತನಕ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹಿರಿಯ ಅಧಿಕಾರಿಯೊಬ್ಬರು ಈ ನಿರ್ಧಾರವನ್ನು "ಉನ್ನತ ಮಟ್ಟದಲ್ಲಿ" ತೆಗೆದುಕೊಳ್ಳಲಾಗಿದೆ ಮತ್ತು ಆಡಳಿತ ಅಥವಾ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಗಳಿಂದ ಯಾವುದೇ ಮಾಹಿತಿ ಪಡೆಯಲಾಗಿಲ್ಲ ಎಂದು ಹೇಳಿದರು.

ರಾಜ್ಯದ ಸದ್ಯದ ಆರ್ಥಿಕತೆಯ ಸ್ಥಿತಿಯನ್ನು ಗಮನಿಸಿದರೆ, ಈ ನಿರ್ಧಾರವು ಸುಮಾರು 10,000 ರಿಂದ 15,000 ಎಂಜಿನಿಯರ್‌ಗಳನ್ನು ನಿರುದ್ಯೋಗಿಗಳನ್ನಾಗಿ ಮಾಡಿರುವುದರಿಂದ, ಮತ್ತೆ ಇಷ್ಟೇ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುವುದು ಅಸಾಧ್ಯದ ಮಾತು ಎಂದೂ ಹೇಳಲಾಗಿದೆ. ಆದರೆ ಎಂಜಿನಿರ್‌ಗಳು ಮಾತ್ರವಲ್ಲದೆ ಸ್ವಸಹಾಯ ಗುಂಪುಗಳು ನೇಮಕ ಮಾಡುವ ಸಿಬ್ಬಂದಿಗಳೂ ಈಗ ನಿರುದ್ಯೋಗಿಗಳಾಗಿದ್ದಾರೆ. ಪ್ರತಿ ಗುಂಪು ಕಚೇರಿಗಳನ್ನು ನಡೆಸಲು ಕಂಪ್ಯೂಟರ್ ಆಪರೇರ್‌ಗಳು, ಅಕೌಂಟೆಂಟ್ ಸಹಾಯಕರು ಮತ್ತು ಇತರರು ಸೇರಿದಂತೆ ಕನಿಷ್ಠ ಮೂರರಿಂದ ನಾಲ್ಕು ಜನರನ್ನು ನೇಮಿಸಿಕೊಂಡಿದೆ. ಸುಮಾರು ಒಂದು ಲಕ್ಷ ಜನರನ್ನು ಒಳಗೊಂಡ 20,000 ಕ್ಕೂ ಹೆಚ್ಚು ಕುಟುಂಬಗಳು ಈ ಜನ ವಿರೋಧಿ ನಿರ್ಧಾರದಿಂದ ಸಂಕಷ್ಟಕ್ಕೀಡಾಗಿವೆ ಎಂದು ಪರ್ವೇಜ್‌ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ 1,400 ಕ್ಕೂ ಹೆಚ್ಚು ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರವು ಹಠಾತ್ ನಿರ್ಧಾರವನ್ನು ಘೋಷಿಸಿದಾಗ ಅವುಗಳಲ್ಲಿ ಹಲವು ಈಗಾಗಲೇ ನಿಗದಿಪಡಿಸಿದ ಕಾರ್ಯಗಳನ್ನು ನಿರ್ವಹಿಸುತ್ತಿವೆ. ತಮ್ಮ ಸಂಸ್ಥೆಯಾದ ಮಲ್ಟಿಪಲ್ ಎಂಜಿನಿರ್ಸ್‌ ವರ್ಕ್ಸ್‌ ಎರಡು ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪರ್ವೇಜ್‌ ಹೇಳಿದರು, ಅನುಮೋದಿತ ವೆಚ್ಚವು 60 ಲಕ್ಷ ರೂ.ಗಳಿಗಿಂತ ಹೆಚ್ಚಾಗಿದ್ದು ಅರ್ಧ ಕೆಲಸ ಆಗಿದೆ ಅದರೆ ಈಗ, ಇಲಾಖೆಯ ಯಾರೂ ನಮ್ಮ ಮಾತುಗಳನ್ನು ಕೇಳಲು ಸಿದ್ಧರಿಲ್ಲ ಎಂದು ಅವರು ಹೇಳಿದರು. ಅಧಿಕೃತ ಅಂಕಿಅಂಶಗಳ ಪ್ರಕಾರ, ಸ್ವಸಹಾಯ ಸಂಘಗಳಿಗೆ 2019-20ರಲ್ಲಿ 2.4 ಕೋಟಿ ರೂ.ಗಳ ವೆಚ್ಚದಲ್ಲಿ 2,445 ಯೋಜನೆಗಳನ್ನು ನೀಡಲಾಯಿತು. ಎಲ್ಲಾ ಗುಂಪುಗಳು ಮಾಡಿದ ಹೂಡಿಕೆಗಳು ಮತ್ತು ಅವುಗಳ ಬಾಕಿ ಇರುವ ಹೊಣೆಗಾರಿಕೆಗಳು ಕೋಟ್ಯಂತರ ರೂಪಾಯಿಗಳಾಗಿವೆ. ಸರ್ಕಾರವು ಯೋಜನೆಯನ್ನು ಮುಚ್ಚಿದಾಗ ಇಲಾಖೆಗಳು ಹೇಗೆ ಸಹಕರಿಸುತ್ತವೆ? ಎಂದು ಪರ್ವೇಜ್‌ ಹೇಳಿದರು.

ಈಗ ಈ ಎಂಜಿನಿರ್‌ಗಳು ಈಗ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಜಮ್ಮು ಕಾಶ್ಮೀರದಾದ್ಯಂತ ವ್ಯಾಪಕ ಆಂದೋಲನವನ್ನು ಆಯೋಜಿಸುತ್ತಿದ್ದಾರೆ. ಕಳೆದ ವಾರ ಅವರು ನಾಗರಿಕ ಸಚಿವಾಲಯದ ಹೊರಗೆ ಪ್ರತಿಭಟನೆ ನಡೆಸಿದರು. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ವಾರದಿಂದ ನಾವು ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಪರ್ವೇಜ್‌ ಹೇಳಿದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com