ಸೈನಿಕರು ಮತ್ತು ಸೇನಾ ಅಧಿಕಾರಿಗಳ ನಡುವೆ ತಾರತಮ್ಯ: ರಾಹುಲ್ ಗಾಂಧಿ ಆರೋಪವನ್ನು ಒಪ್ಪಿದ ಕೇಂದ್ರ ಸರ್ಕಾರ

'ಸೈನಿಕರಿಗೆ ಒಂದು ರೀತಿ ಸೇನಾಧಿಕಾರಿಗಳಿಗೆ ಇನ್ನೊಂದು ರೀತಿ' ಎಂಬ ತಾರತಮ್ಯ 'ಶ್ರಮ ಸಂಸ್ಕೃತಿ'ಗೆ ವಿರುದ್ಧವಾದುದು. ಭೌದ್ಧಿಕ ಶ್ರಮಕ್ಕೆ ಹೆಚ್ಚು ಗೌರವಾದರಗಳನ್ನು ನೀಡುವ ದೈಹಿಕ ಶ್ರಮವನ್ನು ನಗಣ್ಯ ಮಾಡುವ ಇತರೆ ವರ್ಗ, ಕೆಲಸಗಳಂತೆ ಸೇನೆಯಲ್ಲೂ ಆಗುವುದು ತರವಲ್ಲ‌.
ಸೈನಿಕರು ಮತ್ತು ಸೇನಾ ಅಧಿಕಾರಿಗಳ ನಡುವೆ ತಾರತಮ್ಯ: ರಾಹುಲ್ ಗಾಂಧಿ ಆರೋಪವನ್ನು ಒಪ್ಪಿದ ಕೇಂದ್ರ ಸರ್ಕಾರ

ಸೇನೆಯ ಬಗ್ಗೆ ಸಕಾರಣಕ್ಕೆ ಸೊಲ್ಲೆತ್ತಿದರೂ ದೇಶದ್ರೋಹಿಯ ಪಟ್ಟಕಟ್ಟುವ ವಿಷಮ ಕಾಲವಿದು.‌ ಆದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧೈರ್ಯದಿಂದ ಅದಕ್ಕೂ ಮಿಗಿಲಾಗಿ ಮುಕ್ತ ಮನಸ್ಸಿನಿಂದ ಸೇನೆಯಲ್ಲಾಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ.‌ ಅದರಲ್ಲೂ ಉರಿಯುವ ಬಿಸಿಲು, ಕೊರೆಯುವ ಚಳಿ ಎನದೆ ಗಡಿಯಲ್ಲಿ ಶತ್ರುವಿನ ಗುಂಡಿಗೆ ಸದಾ ಎದೆಯೊಡ್ಡಿಕೊಂಡು ನಿಂತಿರುವ ಸೈನಿಕರಿಗೆ ನೀಡಲಾಗುತ್ತಿರುವ ಊಟ ಹಾಗೂ ಭದ್ರತೆ, ಭತ್ಯೆ ಮತ್ತು ಸಂಬಳಗಳನ್ನು ದಂಡಿಯಾಗಿ ಪಡೆಯುತ್ತಿರುವ ಸೇನಾ ಅಧಿಕಾರಿಗಳಿಗೆ ಕೊಡಲಾಗುತ್ತಿರುವ ಊಟದ ನಡುವಿನ ತಾರತಮ್ಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ರಾಹುಲ್ ಗಾಂಧಿ ಅವರು ಗಡಿಯಲ್ಲಿ ಚೀನಾ ಸೈನಿಕರು ಭಾರತದ ಭೂಮಿಯನ್ನು ವಶಪಡಿಸಿಕೊಂಡಿರುವ ಬಗ್ಗೆ, ಜೊತೆಗೆ ಈ ವಿಷಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತೆಳೆದಿರುವ ಜಾಣಮೌನದ ಬಗ್ಗೆ ಪ್ರಶ್ನೆ ಕೇಳುತ್ತಿರುವುದು ಇದು ಮೊದಲೇನಲ್ಲ. ಈ ಬಾರಿ ಭಾರತ-ಚೀನಾ ಗಡಿಯಲ್ಲಿ ಮೇ ತಿಂಗಳ 5 ರಿಂದ ಉದ್ವಿಗ್ನತೆ ಉಂಟಾಯಿತು. ಸೇನೆ ಹಾಗೂ ರಾಜತಾಂತ್ರಿಕ ಮಟ್ಟದ ಮಾತುಕತೆಗಳಾದವು. ಸೇನೆ ಹಾಗೂ ರಾಜತಾಂತ್ರಿಕ ಮಟ್ಟದ ಮಾತುಕತೆಗಳು ಭಾರೀ ಯಶಸ್ವಿಯಾದವೆಂದು ಕೇಂದ್ರ ಸರ್ಕಾರ ತನ್ನ ಭಟ್ಟಂಗಿ ಮಾಧ್ಯಮಗಳಲ್ಲಿ ಸುದ್ದಿ ಮಾಡಿಸಿತು. ಅದರ ನಡುವೆಯೇ ಚೀನಾ ಸೇನೆ ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಬಹಳ ಸೂಕ್ಷ್ಮವಾಗಿ, ತೀಕ್ಷ್ಣವಾಗಿ ಜೊತೆಗೆ ನಿರಂತರವಾಗಿ ಕೇಂದ್ರ ಸರ್ಕಾರದ ಮೇಲೆ ಪ್ರಶ್ನೆಗಳ ಮಳೆಗೈಯುತ್ತಲೇ ಇದ್ದಾರೆ.

ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರದಿಂದ, ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರಿಂದ, 'ಸುಳ್ಳಿನ ಫ್ಯಾಕ್ಟರಿ' ಎಂಬ 'ಖ್ಯಾತಿ' ಗಳಿಸಿರುವ ಬಿಜೆಪಿಯ ಐಟಿ ಸೆಲ್ ನಿಂದ ರಾಹುಲ್ ಗಾಂಧಿ ಅವರನ್ನು ಅಪಮಾನಿಸುವ, ದೇಶದ್ರೋಹದ ಪಟ್ಟಕಟ್ಟುವ ಕೆಲಸವಾಯಿತು. ಈ ಕುಕೃತ್ಯಕ್ಕೂ ಎದೆಗುಂದದೆ ರಾಹುಲ್ ಗಾಂಧಿ ಪ್ರಶ್ನೆ ಕೇಳುವುದನ್ನು ಮುಂದುವರೆಸಿದಾಗ 'ರಾಹುಲ್ ಗಾಂಧಿ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿ ಸಭೆಯಲ್ಲಿ ಪ್ರಶ್ನೆ ಕೇಳಬಹುದು.‌ ಆದರೆ ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿಗೆ ಮುಜುಗರ ಉಂಟುಮಾಡಲೆಂದೇ ಹೊರಗಡೆ ಮಾತನಾಡುತ್ತಾರೆ' ಎಂದು ಆರೋಪಿಸಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈಗ ರಾಹುಲ್ ಗಾಂಧಿ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿ ಸಭೆಯಲ್ಲಿ ಪ್ರಶ್ನೆ ಕೇಳಲು ಆರಂಭಿಸಿದ್ದಾರೆ. ಮೊದಲ ಪ್ರಶ್ನೆಯೇ ಸೈನಿಕರು ಮತ್ತು ಸೇನಾ ಅಧಿಕಾರಿಗಳಿಗೆ ಬೇರೆ ಬೇರೆ ರೀತಿಯ ಊಟವನ್ನೇಕೆ ನೀಡುತ್ತಿದ್ದೀರಿ? ತಾರತಮ್ಯವನ್ನು ಏಕೆ ಮಾಡುತ್ತಿದ್ದೀರಿ ಎಂದು. ಇಷ್ಟು ದಿನ ರಕ್ಷಣಾ ಸಮಿತಿಯಲ್ಲಿ ರಾಹುಲ್ ಗಾಂಧಿ ಪ್ರಶ್ನೆ ಮಾಡುತ್ತಿಲ್ಲ ಎನ್ನುತ್ತಿದ್ದವರು ಈಗ ಮೊದಲ ಪ್ರಶ್ನೆಗೆ ಸುಸ್ತು ಹೊಡೆದಿದ್ದಾರೆ. ಈ ಅನಿರೀಕ್ಷಿತ ಕ್ಲಿಷ್ಟ ಪ್ರಶ್ನೆ ಸಭೆಯಲ್ಲಿದ್ದ ಚೀಫ್ ಆಫ್ ಡಿಫೆನ್ಸ್ (CDS) ಜನರಲ್ ಬಿಪಿನ್ ರಾವತ್‍ ತಡಬಡಾಯಿಸುವಂತೆ ಮಾಡಿದೆ. ಸುಧಾರಿಸಿಕೊಂಡು ಮಾತನಾಡಿರುವ ಅವರು ಮೊದಲಿಗೆ 'ಸೈನಿಕರು ಮತ್ತು/ಸೇನಾಧಿಕಾರಿಗಳ ನೀಡಲಾಗುತ್ತಿರುವ ಆಹಾರದಲ್ಲಿ ತಾರತಮ್ಯ ಮಾಡುತ್ತಿಲ್ಲ' ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ರಾಹುಲ್ ಗಾಂಧಿ ಉದಾಹರಣೆಗಳ ಸಮೇತ ತಾರತಮ್ಯದ ಬಗ್ಗೆ ಪ್ರಶ್ನೆ ಮಾಡಿದಾಗ 'ಸೈನಿಕರು ಹಾಗೂ ಸೇನಾಧಿಕಾರಿಗಳ ಆಹಾರ ಪದ್ಧತಿಯಲ್ಲಿ ಬಹಳ ವ್ಯತ್ಯಾಸ ಇದೆ. ಸೈನಿಕರು ಗ್ರಾಮಾಂತರ ಪ್ರದೇಶದಿಂದ ಬಂದಿರುತ್ತಾರೆ, ಆದುದರಿಂದ ಅವರಿಗೆ ರೊಟ್ಟಿಗಳನ್ನು ನೀಡಲಾಗುತ್ತದೆ. ಸೇನಾಧಿಕಾರಿಗಳು ನಗರ ಪ್ರದೇಶಗಳಿಂದ ಬಂದಿರುತ್ತಾರೆ, ಆದುದರಿಂದ ಅವರು ಬ್ರೆಡ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸೈನಿಕರು ದೇಸೀ ತುಪ್ಪವನ್ನು ಇಷ್ಟಪಡುತ್ತಾರೆ. ಸೇನಾಧಿಕಾರಿಗಳು ಚೀಜ್ ಇಷ್ಟಪಡುತ್ತಾರೆ,' ಎಂದು ಉತ್ತರಿಸಿದ್ದಾರೆ.

ಎರಡು ವರುಷಗಳ ಹಿಂದೆ ಗಡಿ ಭದ್ರತಾ ಪಡೆಯ (BSF) ಯೋಧ ತೇಜ್ ಬಹಾದ್ದೂರ್ ಯಾದವ್ ಅವರು 'ಗಡಿ ಕಾಯುತ್ತಿರುವ ಸೈನಿಕರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ' ಎಂದು ಆಕ್ಷೇಪಿಸಿ ವಿಡಿಯೋ ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಅವರನ್ನು 'ಮಾನಸಿಕ ಸ್ಥಿಮಿತತೆ ಇಲ್ಲದವರು' ಎಂಬ ಪಟ್ಟಕಟ್ಟಿ ಅಮಾನತ್ತುಗೊಳಿಸಲಾಗಿತ್ತು. ಇದಲ್ಲದೆ ಸೇನೆಯಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಮಾತನಾಡಿದವರನ್ನು ಟ್ರೋಲ್ ಮಾಡುವ, ದೇಶದ್ರೋಹಿಗಳ ಪಟ್ಟಕಟ್ಟುವ ಕೆಲಸ ಸಾಂಗವಾಗಿ ನಡೆಯುತ್ತಿದೆ. ಈಗ ಸ್ವತಃ ಚೀಫ್ ಆಫ್ ಡಿಫೆನ್ಸ್ (CDS) ಜನರಲ್ ಬಿಪಿನ್ ರಾವತ್‍ ಅವರು ಸೇನೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸೈನಿಕರಿಗೆ ಒಂದು ರೀತಿಯ ಊಟ ಸೇನಾ ಅಧಿಕಾರಿಗಳಿಗೆ ಇನ್ನೊಂದು ಬಗೆಯ ಊಟ ನೀಡುತ್ತಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

ಇದರಿಂದ ಹಲವು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸೈನ್ಯ ಮತ್ತು ಸೈನಿಕರ ಹೆಸರಿನಲ್ಲಿ ದೇಶಭಕ್ತಿ ಉಕ್ಕಿಸುವ, ಉನ್ಮಾದ ಉಂಟುಮಾಡುವವರಿದ್ದಾರೆ. ವಾಸ್ತವದಲ್ಲಿ ಸೈನಿಕರಿಗೆ ಸೇನೆಯಿಂದಲೇ ಅನ್ಯಾಯ, ತಾರತಮ್ಯ ಆಗುತ್ತಿದೆ. ಅದರ ಬಗ್ಗೆ ಮುಚ್ಚಿಡಲಾಗುತ್ತಿದೆ. ಬಡತನದ ಹಿನ್ನಲೆಯವರೇ ಹೆಚ್ಚಾಗಿ ಸೈನ್ಯ ಸೇರುತ್ತಾರೆ. ದೇಶಭಕ್ತಿಗಿಂತ ಬಡತನ ಅವರನ್ನು ಸೇನೆಗೆ ಸೇರುವಂತೆ ಪ್ರೇರೇಪಿಸಿರುತ್ತದೆ. ಆದರೆ ದೇಶಭಕ್ತಿಯ ಬಗ್ಗೆ ಭಾಷಣ ಮಾಡುವ ಬಿಜೆಪಿ ಅಥವಾ ಆರ್ ಎಸ್ ಎಸ್ ನಾಯಕರ ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆ. ವಿದೇಶಿ ಕಂಪನಿಗಳಲ್ಲಿ ಬೆಚ್ಚಗೆ ಕೂತು ಕಂತೆಗಟ್ಟಲೆ ಸಂಬಳ ತೆಗೆದುಕೊಳ್ಳುತ್ತಿರುತ್ತಾರೆ.‌ ಗಡಿಯಲ್ಲಿ ಸಾಯಲು ಬಡವರ ಮಕ್ಕಳು, ದೇಶಭಕ್ತಿಯ ಭಾಷಣ ಮಾಡಿ ಅಧಿಕಾರ ಪಡೆಯುವವರು ರಾಜಕಾರಣಿಗಳು.

'ಸೈನಿಕರಿಗೆ ಒಂದು ರೀತಿ ಸೇನಾಧಿಕಾರಿಗಳಿಗೆ ಇನ್ನೊಂದು ರೀತಿ' ಎಂಬ ತಾರತಮ್ಯ 'ಶ್ರಮ ಸಂಸ್ಕೃತಿ'ಗೆ ವಿರುದ್ಧವಾದುದು. ಭೌದ್ಧಿಕ ಶ್ರಮಕ್ಕೆ ಹೆಚ್ಚು ಗೌರವಾದರಗಳನ್ನು ನೀಡುವ ದೈಹಿಕ ಶ್ರಮವನ್ನು ನಗಣ್ಯ ಮಾಡುವ ಇತರೆ ವರ್ಗ, ಕೆಲಸಗಳಂತೆ ಸೇನೆಯಲ್ಲೂ ಆಗುವುದು ತರವಲ್ಲ‌.‌ ಕ್ರಮೇಣವಾಗಿಯಾದರೂ ಬಡವರೇ ಸೈನ್ಯ ಸೇರುವ, ದೇಶಕ್ಕಾಗಿ ಹುತಾತ್ಮರಾಗುವ, ಆ ಹಾದಿಯಲ್ಲಿ ತಮ್ಮದೇ ಸೇನಾಧಿಕಾರಿಗಳಿಂದ ತಾರತಮ್ಯ ಅನುಭವಿಸುವ ಅನಿಷ್ಟಗಳು ಅಂತ್ಯಗೊಳ್ಳಬೇಕು. ಸೇನಾಧಿಕಾರಿಗಳು ಸುಧಾರಿಸಬೇಕು. ತಮ್ಮದೇ ಸೈನಿಕರ ಬಗ್ಗೆ ಸಹಾನುಭೂತಿಯಿಂದ ನಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಎತ್ತಿರುವ ಪ್ರಶ್ನೆ ನಿಜವಾಗಿಯೂ ಸೈನಿಕರ ಪರವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com