ಪ್ರತಿಭಟಿಸುವುದು ಸಾಂವಿಧಾನಿಕವಾಗಿ ಖಾತರೀಪಡಿಸಿದ ಹಕ್ಕು –ಕೊಚ್ಚಿ NIA ನ್ಯಾಯಾಲಯ
ರಾಷ್ಟ್ರೀಯ

ಪ್ರತಿಭಟಿಸುವುದು ಸಾಂವಿಧಾನಿಕವಾಗಿ ಖಾತರೀಪಡಿಸಿದ ಹಕ್ಕು –ಕೊಚ್ಚಿ NIA ನ್ಯಾಯಾಲಯ

ಮಾವೋಯಿಸಂಗೆ ಸಂಬಂಧಿಸಿದ ಪುಸ್ತಕಗಳನ್ನು ಹೊಂದಿರುವುದರಿಂದ, ಸರ್ಕಾರ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರಿಂದ ಅಥವಾ ದೃಢವಾದ ರಾಜಕೀಯ ನಂಬಿಕೆಗಳನ್ನು ಹೊಂದಿರುವುದರಿಂದ ಓರ್ವ ವ್ಯಕ್ತಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಹೇಳಲು ಆಗುವುದಿಲ್ಲ

ಪ್ರತಿಧ್ವನಿ ವರದಿ

“ಪ್ರತಿಭಟನೆ ನಡೆಸುವುದು ಸಾಂವಿಧಾನಿಕವಾಗಿ ಖಾತರಿಪಡಿಸಿದ ಹಕ್ಕು,” ಎಂದು ಕೊಚ್ಚಿಯ ವಿಶೇಷ ನ್ಯಾಯಾಲಯ ಹೇಳಿದೆ. ಇಬ್ಬರು ವಿದ್ಯಾರ್ಥಿಗಳನ್ನು ಯುಎಪಿಎ(UAPA) ಕಾಯ್ದೆಯಡಿಯಲ್ಲಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ ಕೋರ್ಟ್‌, ಇಬ್ಬರೂ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರು ಮಾಡಿದೆ. ಜೊತೆಗೆ ಕೇವಲ ಸರ್ಕಾರದ ವಿರುದ್ದ ಪ್ರತಿಭಟಿಸಿದ ಕಾರಣಕ್ಕಾಗಿ ಅವರನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಮಾವೋಯಿಸಂಗೆ ಸಂಬಂಧಿಸಿದ ಪುಸ್ತಕಗಳನ್ನು ಹೊಂದಿರುವುದರಿಂದ, ಸರ್ಕಾರ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರಿಂದ ಅಥವಾ ದೃಢವಾದ ರಾಜಕೀಯ ನಂಬಿಕೆಗಳನ್ನು ಹೊಂದಿರುವುದರಿಂದ ಓರ್ವ ವ್ಯಕ್ತಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಹೇಳಲು ಆಗುವುದಿಲ್ಲ,” ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ ನಿಷೇಧಗೊಂಡಿರುವ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾವೋವಾದಿ) ಪಕ್ಷದೊಂದಿಗೆ ಸಂಬಂಧವಿದೆ ಎಂಬ ಕಾರಣಕ್ಕಾಗಿ, ಕೇರಳ ಪೊಲೀಸ್‌ ಹಾಗೂ ಎನ್‌ಐಎ(NIA), ಆಲನ್‌ ಶುಯೇಬ್‌ ಮತ್ತು ತ್ವಾಹಾ ಫಜ಼ಲ್‌ ಎಂಬ ಇಬ್ಬರು ವಿದ್ಯಾರ್ಥಿಗಳನ್ನು ಸುಮಾರು ಹತ್ತು ತಿಂಗಳ ಹಿಂದೆ ಬಂಧಿಸಿದ್ದರು. ಇವರ ವಿರುದ್ದ ಸರ್ಕಾರಿ ವಕೀಲರು ಯಾವುದೇ ದೃಢವಾದ ಸಾಕ್ಷ್ಯಗಳನ್ನು ನೀಡಲು ವಿಫಲವಾದ ಕಾರಣಕ್ಕೆ ಜಾಮೀನು ಮಂಜೂರು ಮಾಡಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ ಪೊಲೀಸರು ಸುಮಾರು 12 ಸಾಕ್ಷ್ಯಗಳನ್ನು ಒದಗಿಸಿದ್ದರು. ರಾಜಕೀಯ ಸಿದ್ದಾಂತಗಳ ಬಿತ್ತಿ ಪತ್ರಗಳು, ಬ್ಯಾನರ್‌ಗಳು ಮತ್ತು ಇತರ ಸಾಹಿತ್ಯಿಕ ಪುಸ್ತಕಗಳನ್ನು ಕೋರ್ಟ್‌ಗೆ ಸಾಕ್ಷ್ಯಗಳ ರೂಪದಲ್ಲಿ ನೀಡಲಾಗಿತ್ತು. ಪಶ್ಚಿಮ ಘಟ್ಟಗಳ ಕುರಿತು ಮಾಧವ್‌ ಗಾಡ್ಗಿಲ್‌ ನೀಡಿದ ವರದಿಯ ನೋಟೀಸ್‌ಗಳು, ಮಾವೋವಾದಿಗಳ ಹತ್ಯೆಯನ್ನು ಖಂಡಿಸಿ ಬರೆದ ಲೇಖನಗಳು ಮತ್ತು ಪೊಲೀಸರ ದೌರ್ಜನ್ಯದ ವಿರುದ್ದ ಬರೆದಂತಹ ಬರಹಗಳನ್ನು ಕೋರ್ಟ್‌ಗೆ ನೀಡಲಾಗಿತ್ತು. ಮಾರ್ಕ್ಸ್‌ ಸಿದ್ದಾಂತ ಮತ್ತು ಇಸ್ಲಾಮಿಕ್‌ ಸಿದ್ದಾಂತಗಳನ್ನು ಪ್ರಚುರಪಡಿಸುವ ಪುಸ್ತಕಗಳು ಕೂಡಾ ಆ ಪಟ್ಟಿಯಲ್ಲಿ ಇದ್ದವು.

ಇವೆಲ್ಲ ಸಾಕ್ಷ್ಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಕೋರ್ಟ್‌, ಇವುಗಳಲ್ಲಿ ಹೆಚ್ಚಿನ ದಾಖಲೆಗಳು ರಾಜಕೀಯ ಸಮಸ್ಯೆಗಳನ್ನು ನಿವಾರಿಸುವುದರ ಕುರಿತಾಗಿವೆ. ಈ ರೀತಿಯ ಬರಹಗಳು, ಸಾರ್ವಜನಿಕವಾಗಿ ಲಭ್ಯವಿವೆ. ಯಾವುದೇ ದಾಖಲೆಗಳು, ಇಬ್ಬರು ವಿದ್ಯಾರ್ಥಿಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎನ್ನುವುದನ್ನು ನಿರೂಪಿಸುತ್ತಿಲ್ಲ. ಸಾರ್ವಜನಿಕವಾಗಿ ಚರ್ಚೆಯಾದಂತಹ ವಿಚಾರಗಳ ಕುರಿತಾಗಿ ಎಲ್ಲಾ ದಾಖಲೆಗಳಿವೆ ಹಾಗೂ, ಅವರು ಭಾಗವಹಿಸಿದ್ದ ಎಲ್ಲಾ ಪ್ರತಿಭಟನೆಗಳು ಯಾವುದೇ ರೀತಿಯ ಗಲಭೆಗಳಿಲ್ಲದೇ ಶಾಂತವಾಗಿಯೇ ನಡೆದಿವೆ, ಎಂದು ಹೇಳಿದೆ.

ವಿಚಾರಣೆಯ ಸಂದರ್ಭದಲ್ಲಿ ಶುಯೇಬ್‌ನ ಖಾಸಗೀ ಡೈರಿಯನ್ನು ಕೂಡಾ ಕೋರ್ಟಿಗೆ ಒಪ್ಪಿಸಿದ್ದ ಎನ್‌ಐಎ, ಅದರಲ್ಲಿ ಸರ್ಕಾರದ ವಿರುದ್ದ ಬಂದೂಕಿನಿಂದ ಹೋರಾಟ ನಡೆಸುವ ಕುರಿತು ಹಾಗೂ ಹಿಂಸಾತ್ಮಕ ಹೋರಾಟಗಳನ್ನು ನಡೆಸುವ ಕುರಿತು ಬರೆದುಕೊಂಡಿದ್ದಾರೆ ಎಂದು ಹೇಳಿತ್ತು. ಈ ದಾಖಲೆಯನ್ನು ಕೂಡಾ ತಳ್ಳಿ ಹಾಕಿರುವ ಕೋರ್ಟ್‌, ಇದೆಲ್ಲಾ ʼಅಪ್ರಬುದ್ದ ಆಲೋಚನೆಗಳುʼ. ಅವರಲ್ಲಿ ಯಾವುದೇ ದಾಳಿಗೆ ಸಂಬಂಧಿಸಿದ ನೀಲಿ ನಕ್ಷೆ ಇಲ್ಲ, ಎಂದು ಹೇಳಿದೆ.

“ಡೈರಿ ಎಂಬುದು ಹೊರಗಿನ ಜಗತ್ತಿನ ಟೀಕೆ – ಟಿಪ್ಪಣಿಗಳನ್ನು ಬಿಟ್ಟು, ನಮ್ಮ ಮನಸ್ಸಿನಲ್ಲಿರುವ ನೋವನ್ನು ಸ್ವತಂತ್ರವಾಗಿ ಬರೆಯಲು ಇರುವಂತಹ ಪುಸ್ತಕ. ಇದು ಮನಸ್ಸಿನ ವಿಸ್ತರಿತ ಭಾಗ. ಸ್ವತಂತ್ರ ಮತ್ತು ಸುರಕ್ಷಿತ. ಒಂದು ಪ್ರಚೋದನಾಕಾರಿ ಚಿಂತನೆ, ಆ ವ್ಯಕ್ತಿ ಅಪರಾಧ ಮಾಡಲು ಹೊರಟಿದ್ದಾನೆಂದು ದೃಢೀಕರಿಸುವುದಿಲ್ಲ,” ಎಂದು ಕೋರ್ಟ್‌ ಹೇಳಿದೆ.

ಈ ಪ್ರಕರಣವು ರಾಜಕೀಯ ಸ್ವರೂಪವನ್ನು ಕೂಡಾ ಪಡೆದಿದ್ದು, ಆಡಳಿತರೂಢ ಕಮ್ಯುನಿಸ್ಟ್‌ ಪಾರ್ಟಿಯು ಇಬ್ಬರು ಯುವಕರ ಬಂಧನವಾದ ಕೂಡಲೇ ಅವರನ್ನು ಪಕ್ಷದಿಂದ ಹೊರಹಾಕಿತ್ತು. ಈ ಪ್ರಕರಣವು, ಕಮ್ಯುನಿಸ್ಟ್‌ ಪಾರ್ಟಿಯಲ್ಲಿ ಆಂತರಿಕ ಒಡಕನ್ನು ಕೂಡಾ ಹುಟ್ಟು ಹಾಕಿತ್ತು. ಕೇರಳ ಸಿಎಂ ಪಿಣರಾಯಿ ವಿಜಯನ್‌, ಬಂಧಿತರ ವಿರುದ್ದ ಮಾತನಾಡಿದರೆ, ಪಕ್ಷದ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ, ಕಮ್ಯುನಿಸ್ಟ್‌ ನಾಯಕರಾದ ಪ್ರಕಾಶ್‌ ಕಾರಟ್‌, ಥೋಮಸ್‌ ಐಸಾಕ್‌ ಮುಂತಾದವರು ಬಂಧಿತರನ್ನು ಬೆಂಬಲಿಸಿದ್ದರು.

Click here to follow us on Facebook , Twitter, YouTube, Telegram

Pratidhvani
www.pratidhvani.com