ಆಂತರಿಕವಾಗಿ ದುರ್ಬಲಗೊಂಡ ಚೀನಾ, ಯುದ್ಧೋನ್ಮಾದದಿಂದ ಹಿಂಜರಿಯುವುದೇ?
ರಾಷ್ಟ್ರೀಯ

ಆಂತರಿಕವಾಗಿ ದುರ್ಬಲಗೊಂಡ ಚೀನಾ, ಯುದ್ಧೋನ್ಮಾದದಿಂದ ಹಿಂಜರಿಯುವುದೇ?

ಅದೇನೇ ದೊಡ್ಡ ಸೈನ್ಯ ಹೊಂದಿದ್ದರೂ ಚೀನಾವು ಈಗ ಪ್ರಮುಖ ಆಹಾರ ಬಿಕ್ಕಟ್ಟಿನಲ್ಲಿದೆ, ಏಕೆಂದರೆ ಪ್ರವಾಹವು ಕೃಷಿಭೂಮಿಗಳನ್ನು ಹಾಳು ಮಾಡಿದೆ. ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕನಾಗಿರುವ ಚೀನಾ ಇದೀಗ ಹೆಚ್ಚು ಆಮದು ಮಾಡಿಕೊಳ್ಳಲು ಮುಂದಾಗಿದೆ.

ಕೋವರ್ ಕೊಲ್ಲಿ ಇಂದ್ರೇಶ್

ಕಳೆದ ನಾಲ್ಕು- ಐದು ತಿಂಗಳಿನಿಂದಲೂ ಗಡಿ ವಾಸ್ತವ ರೇಖೆಯ ಬಳಿ ಚೀನಾ ಹಾಗೂ ಭಾರತ ಸೇನಾ ಪಡೆಗಳ ನಡುವೆ ಸಂಘರ್ಷ ನಡೆದೇ ಇದೆ. ಈಗಾಗಲೇ ಐದು ಆರು ಬಾರಿ ಎರಡೂ ಸೆನಾಧಿಕಾರಿಗಳ ನಡುವೆ ಮಾತುಕತೆಗಳು ನಡೆದಿದ್ದರೂ ಗಡಿ ಉದ್ವಿಗ್ನತೆ ಸಂಪೂರ್ಣವಾಗಿ ಶಮನಗೊಂಡಿಲ್ಲ. ಇಡೀ ಗಡಿಯ ಉದ್ದ 3400 ಕಿಲೋಮೀಟರ್‌ ಆಗಿದ್ದು ಎರಡೂ ಸೇನೆಗಳು ಹೆಚ್ಚು ಸೇನಾ ಜಮಾವಣೆ ಮಾಡಿಕೊಂಡಿವೆ. ಈ ನಡುವೆ ಶುಕ್ರವಾರ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ಸಭೆ ನಡೆಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಗಡಿಯಲ್ಲಿ ಶಸ್ತ್ರಸಜ್ಜಿತ ಸೇನಾ ಜಮಾವಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಭಾರತ-ಚೀನಾ ವಿದೇಶಾಂಗ ಸಚಿವರ ಮಾತುಕತೆ ನಡೆಯುತ್ತಿದ್ದು, ಗಡಿ ವಾಸ್ತವ ರೇಖೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಚೀನಾದ ಕಡೆಯಿಂದ ನಿಖರ ಸ್ಪಷ್ಟ ವಿವರಣೆ ಸಿಕ್ಕಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಚೀನಾ ಸೇನಾಪಡೆಯ ಪ್ರಚೋದನಕಾರಿ ವರ್ತನೆ, ಭಾರತ-ಚೀನಾ ಮಧ್ಯೆ ಏರ್ಪಟ್ಟಿದ್ದ ದ್ವಿಪಕ್ಷೀಯ ಒಪ್ಪಂದ ಮತ್ತು ಶಿಷ್ಟಾಚಾರಗಳನ್ನು ಮುರಿದಿದೆ ಎಂದು ಕಂಡುಬರುತ್ತಿದೆ ಎಂದು ಸಭೆಯಲ್ಲಿ ಜೈಶಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ. ಗಡಿ ವಾಸ್ತವ ರೇಖೆ, ಗಡಿ ವಿಚಾರದ ಕುರಿತಂತೆ ಎರಡೂ ದೇಶಗಳು ಮಾಡಿಕೊಂಡಿದ್ದ ಒಪ್ಪಂದಗಳನ್ನು ಪಾಲಿಸಲು ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತ ಚೀನಾ ದೇಶದಿಂದ ನಿರೀಕ್ಷಿಸುತ್ತಿದ್ದು, ಚೀನಾ ಇದಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿತ್ತು.

ಅದಾಗ್ಯೂ, ರಶ್ಯದಲ್ಲಿ ನಡೆದ ರಾಜಿ ಒಪ್ಪಂದಗಳು ಐದು ಅಂಶಗಳನ್ನು ಸಮ್ಮತಿಸುವುದರೊಂದಿಗೆ ಸಂಧಾನಕ್ಕೆ ಒಲವು ತೋರಿಸಿದೆ. ಶುಕ್ರವಾರ ಬೆಳಿಗ್ಗೆ ಭಾರತ-ಚೀನಾ ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ, ಗಡಿ ವಿವಾದ ಭುಗಿಲೇಳಲು ಬಿಡಬಾರದು, ವಿವಾದ ವ್ಯತ್ಯಾಸಗಳನ್ನು ತರಲು ಎರಡೂ ದೇಶಗಳ ಮಧ್ಯೆ ಅಂತರ ತರಲು ಬಿಡಬಾರದು ಎಂದು ತೀರ್ಮಾನಕ್ಕೆ ಬಂದಿರುವುದಾಗಿ ತಿಳಿದುಬಂದಿದೆ. ಈಗ ಗಡಿಯಲ್ಲಿ ಏನು ಪರಿಸ್ಥಿತಿಯಿದೆ ಅದು ಇಬ್ಬರಿಗೂ ಇಷ್ಟವಿಲ್ಲದ ಸ್ಥಿತಿಯಾಗಿದೆ ಎಂದು ಉಭಯ ನಾಯಕರು ಹೇಳಿರುವುದಾಗಿ ವರದಿಯಾಗಿದೆ.

ಸದ್ಯ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಎರಡೂ ದೇಶಗಳ ಜನರಿಗೆ ಸಮಾಧಾನ, ಖುಷಿ ನೀಡುತ್ತಿಲ್ಲ. ಎರಡೂ ಕಡೆಯ ಸೇನಾಪಡೆಗಳು ಮಾತುಕತೆ ಮುಂದುವರಿಸಿ ತಕ್ಷಣವೇ ಸೈನ್ಯವನ್ನು ಹಿಂತೆಗೆದುಕೊಂಡು ಸರಿಯಾದ ಅಂತರ ಕಾಯ್ದುಕೊಂಡು ಉದ್ವಿಗ್ನ ಪರಿಸ್ಥಿತಿಯನ್ನು ನಿವಾರಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ನಡುವೆ ಭಾರತ-ಚೀನಾ ಪೂರ್ವ ಗಡಿ ಪ್ರದೇಶ ಲಡಾಖ್ ನಲ್ಲಿ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಚೀನಾ ಸೇನೆಯು ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಗಡಿ ರೇಖೆಯು ಬೂದಿ ಮುಚ್ಚಿದ ಕೆಂಡದಂತೆ ಮಾರ್ಪಟ್ಟಿದೆ. ಪ್ಯಾಂಗಾಂಗ್ ತ್ಸೋ ಸರೋವರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೀನಾ ಹೆಚ್ಚುವರಿ ಸೇನೆಯನ್ನು ನಿಯೋಜನೆ ಮಾಡುತ್ತಿದ್ದು, ಪ್ರತಿಯಾಗಿ ಭಾರತೀಯ ಸೇನೆ ಕೂಡಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ನಡುವೆ ಚುಶುಲ್ ಬಯಲು ಪ್ರದೇಶದಲ್ಲೇ ಬ್ರಿಗೇಡಿಯರ್ ಹಂತದ ಸಭೆ ನಡೆಸಲಾಗುತ್ತಿದೆ. ಪೂರ್ವ ಗಡಿಯಲ್ಲಿ ಸೇನಾ ಚಟುವಟಿಕೆಗಳನ್ನು ನಿಲ್ಲಿಸುವುದು ಹಾಗೂ ಸೇನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಿದ್ದು, ಒಮ್ಮತದ ತೀರ್ಮಾನವನ್ನು ಇದುವರೆಗೂ ತೆಗೆದುಕೊಳ್ಳಲು ಆಗಿಲ್ಲ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಕೋಪದಲ್ಲಿದೆ. ಇದರ ಒಂದು ಭಾಗವು ಲಡಾಕ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಹೆಚ್ಚುತ್ತಿರುವ ಉದ್ವಿಗ್ನತೆಗೆ ಕಾರಣವಾಗಿದ್ದರೂ, ಪಿಎಲ್‌ಎಯ ಹೆಚ್ಚಿನ ಭ್ರೀಫಿಂಗ್‌ ಮತ್ತು ವ್ಯಾಖ್ಯಾನಗಳು ಅಮೇರಿಕಾ ಮತ್ತು ಅದರ ಅಧಿಕಾರಿಗಳ ಕ್ರಮಗಳ ಮೇಲೆ ಕೇಂದ್ರೀಕೃತವಾಗಿವೆ.

ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರ ಸಂಘರ್ಷದ ಕುರಿತ ಹೇಳಿಕೆ ಮತ್ತು ಹವಾಯಿಯಲ್ಲಿ ಮಾಡಿರುವ ಭಾಷಣಕ್ಕೆ ಕೂಡ ಪಿಎಲ್‌ಏ ಪ್ರತಿಕ್ರಿಯೆ ನೀಡಿದೆ. ಚೀನಾದ ಕೋಪವನ್ನು ಹೆಚ್ಚಿಸಿದಂತೆ ತೋರುತ್ತಿರುವುದು ಎಸ್ಪರ್‌ನ ದಿಟ್ಟ ಹೇಳಿಕೆ ಅಮೆರಿಕದ ಸಶಸ್ತ್ರ ಪಡೆಗಳಂತಲ್ಲದೆ, ಪಿಎಲ್‌ಎ ತನ್ನ ಸಂವಿಧಾನ ಅಥವಾ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮಿಲಿಟರಿ ಅಲ್ಲ, - ಅದು ರಾಜಕೀಯ ಘಟಕಕ್ಕೆ ಸೇವೆ ಸಲ್ಲಿಸುತ್ತದೆ. ಚೀನಾ ರಕ್ಷಣಾ ಸಚಿವಾಲಯದ ವಕ್ತಾರರಾದ ಹಿರಿಯ ಕರ್ನಲ್ ರೆನ್ ಗುವಾಕಿಯಾಂಗ್ ಇದನ್ನು ಆಧಾರರಹಿತ ಅಸಂಬದ್ಧ ಎಂದು ಪ್ರತಿಕ್ರಿಯಿಸಿದರು. ಜನರಿಗೆ ಹೃದಯಪೂರ್ವಕ ಸೇವೆ ಸಲ್ಲಿಸುವ ಗುರಿಯೊಂದಿಗೆ ಪಿಎಲ್ಎಯನ್ನು ಸಿಪಿಸಿ ರಚಿಸಿದ ಮತ್ತು ಮುನ್ನಡೆಸಿದ ಸಶಸ್ತ್ರ ಪಡೆ ಎಂದು ಹೇಳಲು ಚೀನಾದ ಸಂವಿಧಾನವನ್ನು ಉಲ್ಲೇಖಿಸಿದರು. ಮೇಲ್ನೋಟಕ್ಕೆ ಗಡಿಯಲ್ಲಿ ಚೀನಾ -ಭಾರತೀಯ ಪಡೆಗಳ ನಡುವೆ ಸಂಘರ್ಷ ಇದ್ದರೂ ಅಮೇರಿಕ ಮತ್ತು ಚೀನಾ ನಡುವಿನ ಶಕ್ತಿ ಪ್ರದರ್ಶನ, ಮಾತಿನ ಶೀತಲ ಸಮರ ಹೇಳಿಕೆಗಳಲ್ಲಿ ನಡೆಯುತ್ತಿದೆ. ಅಷ್ಟೇ ಅಲ್ಲ ಅಮೇರಿಕ ಮತ್ತು ಚೀನಾದ ಸೈನ್ಯ ಬಲವನ್ನೂ ತುಲನೆ ಮಾಡಲಾಗುತ್ತಿದೆ.

ಅಮೇರಿಕದ ಕಾಂಗ್ರೆಸ್‌ಗೆ ನೀಡಿದ ವರದಿಯ ಪ್ರಕಾರ, ಚೀನಾ ಸುಮಾರು 350 ಹಡಗುಗಳು ಮತ್ತು 150 ಜಲಾಂತರ್ಗಾಮಿ ನೌಕೆಗಳ ಯುದ್ಧ ಪಡೆ ಹೊಂದಿದೆ. ಅಮೇರಿಕದ ನೌಕಾಪಡೆಯು ಸುಮಾರು 293 ಹಡಗುಗಳನ್ನು ಹೊಂದಿದೆ. ಅಮೇರಿಕದ ವಿಮಾನವಾಹಕ ನೌಕೆಗಳು ತುಂಬಾ ಶ್ರೇಷ್ಠವಾಗಿದ್ದರೆ, ಚೀನಾದ ಸಾಂಪ್ರದಾಯಿಕವಾಗಿರುವ ಎರಡು ವಿಮಾನವಾಹಕ ನೌಕೆಗಳನ್ನು ಚಾಲಿತವಾಗಿದೆ ಮತ್ತು ಆ ಮೂಲಕ ಆನ್‌ಬೋರ್ಡ್ ತಂತ್ರಜ್ಞಾನದ ಹೊರತಾಗಿ ಪ್ರಯಾಣದ ಸಹಿಷ್ಣುತೆಯನ್ನು ಕಳೆದುಕೊಳ್ಳುತ್ತದೆ. ಚೀನಾವು ಸಣ್ಣ ಯುದ್ಧನೌಕೆಗಳು, ಉತ್ತಮ ಬೆಂಗಾವಲು ಮತ್ತು ವೇಗದ ದಾಳಿಯ ಕರಕುಶಲತೆಯನ್ನು ಹೊಂದಿದೆ. ಅಮೇರಿಕವು ತನ್ನ ದೇಶದಲ್ಲಿ 40 ನೆಲೆಗಳನ್ನೂ ಮತ್ತು ಒಂಬತ್ತು ಸಾಗರೋತ್ತರ ನೆಲೆಗಳನ್ನು ಹೊಂದಿದೆ, ಇದು ಭಾರತೀಯ ಕರಾವಳಿಯ ಹೊರಗಿನ ನಿಲುಗಡೆ ಬಂದರುಗಳನ್ನು ಒಳಗೊಂಡಿಲ್ಲ. ಚೀನಾವು ಜಿಬೌಟಿಯಲ್ಲಿ ಮೂರು ದೊಡ್ಡ ನೆಲೆಗಳನ್ನು ಮತ್ತು ಒಂದು ಸಾಗರೋತ್ತರ ಬಂದರನ್ನು ಹೊಂದಿದೆ.

ಪಿಎಲ್‌ಎ ವಿಶ್ವದ ಮೂರನೇ ಅತಿದೊಡ್ಡ ವಾಯು ಪಡೆ ಹೊಂದಿದೆ, ಪಿಎಲ್‌ಎ ವಿಶ್ವದ ಅತಿದೊಡ್ಡ ಸೈನ್ಯವಾಗಿದೆ, ಆದರೆ 1979 ರಿಂದ ಯುದ್ಧ ಮಾಡಿಲ್ಲ. ರಾಕೆಟ್ ಪಡೆಗಳು ತಮ್ಮ ಸಿಡಿತಲೆಗಳನ್ನು ದ್ವಿಗುಣಗೊಳಿಸಲು ಸಜ್ಜಾಗಿವೆ, ಅದೇನೇ ಇದ್ದರೂ ಚೀನಾವು ಈಗ ಪ್ರಮುಖ ಆಹಾರ ಬಿಕ್ಕಟ್ಟಿನಲ್ಲಿದೆ, ಏಕೆಂದರೆ ಪ್ರವಾಹವು ಕೃಷಿಭೂಮಿಗಳನ್ನು ಹಾಳು ಮಾಡಿದೆ. ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕನಾಗಿರುವ ಚೀನಾ ಇದೀಗ ಹೆಚ್ಚು ಆಮದು ಮಾಡಿಕೊಳ್ಳಲು ಮುಂದಾಗಿದೆ. ಕಳೆದ ಮೂರು ತಿಂಗಳಿನಲ್ಲಿ ಚೀನಾದಲ್ಲಿ ಸೋಯಾ ಬೆಲೆಗಳು ಶೇಕಡಾ 30 ರಷ್ಟು ದ್ವಿಗುಣಗೊಂಡಿವೆ. ಚೀನಾವು ಸ್ವತಃ ಆಹಾರದ ಸ್ವಾವಲಂಬನೆ ಹೊಂದಲು ಸಾಧ್ಯವಿಲ್ಲ, ಅಮೇರಿಕದಿದಂದ ಕಾರ್ನ್ ಆಮದು 2014 ರಿಂದ ಗರಿಷ್ಠವಾಗಿದೆ. ಕರೋನೋತ್ತರವಾಗಿ ಚೀನಾದಲ್ಲಿ 80 ಮಿಲಿಯನ್‌ ಜನತೆ ನಿರುದ್ಯೋಗಿಗಳಾಗಿದ್ದು ಅದರ ಜತೆ ಹೊಸ ಪದವೀಧರರು 8.7 ಮಿಲಿಯನ್‌ ಸೇರಿಕೊಂಡಿದ್ದಾರೆ. ದೊಡ್ಡ ಬ್ಯಾಂಕುಗಳಾದ ಚೀನಾ ಕನ್ಸ್ಟ್ರಕ್ಷನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಚೀನಾ ಒಂದು ದಶಕದಲ್ಲಿ ಅತಿದೊಡ್ಡ ಲಾಭ ಕುಸಿತವನ್ನು ದಾಖಲಿಸಿದೆ. ಇವುಗಳಲ್ಲಿ ಯಾವುದೂ ಚೀನಾ ಕುಸಿಯುತ್ತಿದೆ ಎಂದರ್ಥವಲ್ಲ. ಆದರೆ ಚೀನಾ ಮೇಲ್ನೋಟಕ್ಕೆ ಬಲಶಾಲಿಯಾಗಿ ಮತ್ತು ಆಂತರಿಕವಾಗಿ ದುರ್ಬಲವಾಗಿರುವುದರ ಬಗ್ಗೆ ಪೆಂಟಗನ್‌ ವರದಿ ಮಾಡಿದೆ.

ಗಡಿ ಸಂಘರ್ಷವು ಭಾರತ ಮತ್ತು ಚೀನಾ ಎರಡೂ ದೇಶಗಳಿಗೂ ಮಾರಕವೇ ಆಗಿದೆ. ಏಕೆಂದರೆ ಎರಡೂ ದೇಶಗಳೂ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಅದರೆ ಭೂದಾಹಿ ಚೀನಾಗೆ ಇದನ್ನು ಅರ್ಥಮಾಡಿಸುವುದು ಕಷ್ಟಕರ.

Click here to follow us on Facebook , Twitter, YouTube, Telegram

Pratidhvani
www.pratidhvani.com