ಅಗತ್ಯವಿದ್ದ ದಂಡನಾಯಕನನ್ನು ಆರಿಸುವ ಬದಲು ಸೇನಾಪತಿಗಳನ್ನು ನೇಮಿಸಿಕೊಂಡ ಕಾಂಗ್ರೆಸ್
ರಾಷ್ಟ್ರೀಯ

ಅಗತ್ಯವಿದ್ದ ದಂಡನಾಯಕನನ್ನು ಆರಿಸುವ ಬದಲು ಸೇನಾಪತಿಗಳನ್ನು ನೇಮಿಸಿಕೊಂಡ ಕಾಂಗ್ರೆಸ್

ವಾಸ್ತವವಾಗಿ ಶತಮಾನದ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷಕ್ಕೆ ಜರೂರಾಗಿ ಬೇಕಾಗಿರುವುದು ದಂಡನಾಯಕ. ನಾಯಕನಿಲ್ಲದೆ ಅಕ್ಷರಶಃ ಅತಂತ್ರ ಸ್ಥಿತಿ ಅನುಭವಿಸುತ್ತಿದೆ. ಆದರೆ ಆ ಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಂಡು ಪುಟಿದು ನಿಲ್ಲುವ ಬದಲು ಸೇನಾಪತಿಗಳನ್ನು ನೇಮಿಸಿಕೊಂಡು ಅವರ ಬಲದೊಂದಿಗೆ ಯುದ್ದ ಗೆಲ್ಲಲೊರಟಿದೆ

ಯದುನಂದನ

ವಾಸ್ತವವಾಗಿ ಶತಮಾನದ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷಕ್ಕೆ ಜರೂರಾಗಿ ಬೇಕಾಗಿರುವುದು ದಂಡನಾಯಕ. ನಾಯಕನಿಲ್ಲದೆ ಅಕ್ಷರಶಃ ಅತಂತ್ರ ಸ್ಥಿತಿ ಅನುಭವಿಸುತ್ತಿದೆ. ಆದರೆ ಆ ಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಂಡು ಪುಟಿದು ನಿಲ್ಲುವ ಬದಲು ಸೇನಾಪತಿಗಳನ್ನು ನೇಮಿಸಿಕೊಂಡು ಅವರ ಬಲದೊಂದಿಗೆ ಯುದ್ದ ಗೆಲ್ಲಲೊರಟಿದೆ. ಆದರೆ 2014ರ ಮತ್ತು 2019ರ ಲೋಕಸಭಾ ಚುನಾವಣೆಗಳನ್ನು ಸೋತ ಬಳಿಕ‌ ಹಾಗೂ ಕೆಲ ರಾಜ್ಯಗಳಲ್ಲೂ ಅಧಿಕಾರ ಕಳೆದುಕೊಂಡ ನಂತರ ನಿತ್ರಾಣ ಸ್ಥಿತಿಯಲ್ಲಿದ್ದ ಪಕ್ಷಕ್ಕೆ ಕಡೆಗೆ 'ಎಐಸಿಸಿಯ ಪುನರ್ರಚನೆಯದರೂ ಆಗಿದೆ' ಎಂಬುದೇ ಸಮಾಧಾನ ತರುವಂತಹ ವಿಷಯ.

ಜಡ್ಡುಗಟ್ಟಿದ್ದ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಸೃಷ್ಟಿಯಾಗಲು ಪ್ರೇರಕ ಶಕ್ತಿ ಇತ್ತೀಚೆಗೆ 23 ಹಿರಿಯ ನಾಯಕರು ಬರೆದ ಪತ್ರ. ಕಾಂಗ್ರೆಸ್ ಹೈಕಮಾಂಡಿನ ಪ್ರಭಾವಿ ನಾಯಕರಲ್ಲಿ ಒಬ್ಬರಾದ, ರಾಜ್ಯಸಭೆಯ ಪ್ರತಿಪಕ್ಷದ ನಾಯಕರೂ ಆದ, ಕಾಂಗ್ರೆಸ್ ಪಕ್ಷದ ಪಾಲಿನ 'ಟ್ರಬಲ್ ಶೂಟರ್' ಆದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಭಿ ಆಜಾದ್ ಈ ಪತ್ರ ಸಮರದ ನಾಯಕ. ಆದರೆ ಅದರ ಅಸಲಿ ರೂವಾರಿಗಳು ಕಾಂಗ್ರೆಸ್ ಪಾಲಿನ 'ಪೊಲಿಟಿಕಲಿ ಕ್ರಿಮಿನಲ್ ಮೈಂಡ್ಸ್' ಎಂದೇ ಕರೆಯಲಾಗುವ ಆನಂದಶರ್ಮಾ, ವೀರಪ್ಪ ಮೊಯ್ಲಿ. ಸ್ವಲ್ಪ ಮಟ್ಟಿಗೆ ಮನೀಷ್ ತಿವಾರಿ ಕೂಡ ತೆರೆಯ ಹಿಂದೆ ಬೆವರು ಹರಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದರಿಂದಾಗಿಯೇ ಎಐಸಿಸಿ ಪುನರ್ರಚನೆ ವೇಳೆ ಮೇಲೆ ಉಲ್ಲೇಖಿಸಿರುವ ನಾಲ್ವರನ್ನು ನಗಣ್ಯ ಮಾಡಲಾಗಿದೆ. ಗುಲಾಂ ನಬಿ ಆಜಾದ್ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಇರಬಹುದು ಆದರೆ ಅದು ಕಾಂಗ್ರೆಸ್ ಪಕ್ಷದ ಮಾರ್ಗದರ್ಶಕ ಮಂಡಳಿಯಾದ ಕಾರಣ ಕಿಮ್ಮತ್ತಿಲ್ಲ. ಉಳಿದಂತೆ ವೀರಪ್ಪ ಮೊಯ್ಲಿ ಅವರನ್ನು ಕೇಂದ್ರ ಚುನಾವಣಾ ಸಮಿತಿಯಿಂದ ಮನೆಗೆ ಕಳುಹಿಸಲಾಗಿದೆ. ಆನಂದ ಶರ್ಮಾ ರಾಜ್ಯಸಭೆಯ ಉಪನಾಯಕನ ಸ್ಥಾನ ಕಳೆದುಕೊಂಡಿದ್ದಾರೆ. ಮನೀಷ್ ತಿವಾರಿ ಅವರ ಹೆಸರು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ‌ ಸ್ಥಾನಕ್ಕೆ ಕೇಳಿಬಂದಿತ್ತು. ಆದರೀಗ ಯಾವ್ಯಾವ ಹುದ್ದೆಯೂ ಇಲ್ಲ. ಎಐಸಿಸಿ ಪುನರ್ರಚನೆಯಲ್ಲಿ ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಿರುವ ಸಂಗತಿ ಸ್ಪಷ್ಟವಾಗಿ ಕಾಣಿಸುತ್ತದೆ. ಜೊತೆಗೆ ರಾಹುಲ್ ಗಾಂಧಿ ಅವರ ಆಪ್ತರಿಗೆ ಮಣೆ ಹಾಕಿರುವುದು ಇನ್ನೂ ಸ್ಪಷ್ಟವಾಗಿ ಗೋಚರಿಸುತ್ತದೆ.

ಈ ಹಿರಿಯರು ಪತ್ರ ಬರೆದಿದ್ದು 'ಆದಷ್ಟು ಬೇಗ ಪಕ್ಷ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಿ' ಎಂದು. 'ಮೊದಲೇ ‌ಸೊರಗಿರುವ ಸಂಘಟನೆಯನ್ನು ನಾಯಕನಿಲ್ಲದೆ ನಿಭಾಯಿಸುವುದು ಕಷ್ಟ' ಎಂದು. ಆದರೆ ಈಗ ಅಧ್ಯಕ್ಷ ಸ್ಥಾನವೊಂದನ್ನು ಬಿಟ್ಟು ಉಳಿದೆಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಅಲ್ಲಿಗೆ ಪತ್ರದ ಅಸಲಿ ಉದ್ದೇಶ ಈಡೇರಿಲ್ಲ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡದೆ ಪತ್ರ ಬರೆದು ಮುಜುಗರ ಉಂಟುಮಾಡಿದರು ಎಂದೇ ಅಂದುಕೊಂಡರೂ 'ಸ್ಪಿರಿಟ್ ಆಫ್ ದಿ ಲೆಟರ್' ಅನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳಬೇಕಿತ್ತು.‌ ಆದರೆ ಗಾಂಧಿ ದ್ವಯರು ಪತ್ರದ ಹಿಂದಿದ್ದವರನ್ನು ನಗಣ್ಯಮಾಡಿ ಹೊಸ ಪದಾಧಿಕಾರಿಗಳನ್ನು ರಚಿಸುವ ಮೂಲಕ 'ಗಾಂಧಿ ಕುಟುಂಬಕ್ಕೆ ನಿಷ್ಠಾರಾಗಿರಿ, ಅಥವಾ ಮನೆಯ ಹಾದಿ ನೋಡಿಕೊಳ್ಳಿ' ಎಂಬ ಸಂದೇಶ ರವಾನಿಸಿದ್ದಾರೆ.

ಪತ್ರ ಬರೆದ ನಾಯಕರೆಲ್ಲರಿಗೂ ಅತಿ ಹೆಚ್ಚು ಅಸಮಾಧಾನ ಇದ್ದದ್ದು ಸೋನಿಯಾ ಗಾಂಧಿ ಅವರ ಮೇಲಲ್ಲ, ರಾಹುಲ್ ಗಾಂಧಿ ಅವರ ಮೇಲಲ್ಲ, ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮೇಲೆ. ರಾಹುಲ್ ಗಾಂಧಿ ಅವರ ಜೊತೆಗಿರುವ ಉತ್ತಮ ಸಂಬಂಧವನ್ನೇ ಉಪಯೋಗಿಸಿಕೊಂಡು ವೇಣುಗೋಪಾಲ್ ಇತರರನ್ನು ಕಡೆಗಣಿಸುತ್ತಿದ್ದರು. ಅಲ್ಲದೆ ರಾಹುಲ್ ಗಾಂಧಿ ಮತ್ತು ಹಿರಿಯರ ನಡುವಿನ ಕಂದಕ ಹೆಚ್ಚಾಗುವಂತೆ ಮಾಡುತ್ತಿದ್ದರು. ಆದರೀಗ ರಾಹುಲ್ ಗಾಂಧಿ ಅವರು ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಕೆ.ಸಿ. ವೇಣುಗೋಪಾಲ್ ಅವರನ್ನು ಮುಂದುವರೆಸುವ ಮೂಲಕ ಪಕ್ಷದೊಳಗಿದ್ದ ಶೀಥಲ ಸಮರ ಮುಂದುವರೆಯುವುದಕ್ಕೂ ಅವಕಾಶ ಮಾಡಿಕೊಟ್ಟಿದ್ದಾರೆ.

ರಾಹುಲ್ ಗಾಂಧಿ ಬಣವೆಂದು ಗುರುತಿಸಿಕೊಳ್ಳುವುದೇ ತಪ್ಪು, ಕಾಂಗ್ರೆಸ್ ಬಣ ಎಂದು ಗುರುತಿಸಿಕೊಳ್ಳಬೇಕೆಂಬ ಸರಳ ತರ್ಕ ರಾಹುಲ್ ಗಾಂಧಿ ಅವರಿಗೆ ಅರ್ಥವಾಗಬೇಕು. ಕೆ.ಸಿ. ವೇಣುಗೋಪಾಲ್ ವೈಯಕ್ತಿಕವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯದೆ ಪಲಾಯನ ಮಾಡಿದವರು. ಅವರು ಉಸ್ತುವಾರಿಯಾಗಿದ್ದ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಂತಹ ಜನಾನುರಾಗಿ ನಾಯಕ ಇದ್ದರೂ, ಒಳ್ಳೆಯ ಆಡಳಿತ ಕೊಟ್ಟಿದ್ದರೂ ರಾಜಕೀಯ ಕಾರಣಗಳಿಗಾಗಿ ಸೋಲಬೇಕಾಯಿತು. ಆದರೂ ಅವರಿಗೆ ಸಂಘಟನಾ ಪ್ರಧಾನ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆ ನೀಡಲಾಗಿದೆ.

ಎಐಸಿಸಿಯ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿರುವ ರಣದೀಪ್ ಸುರ್ಜೆವಾಲಾ ಜವಾಬ್ದಾರಿ ನಿರ್ವಹಿಸುವುದರಲ್ಲಿ ವಿಫಲರಾಗಿದ್ದಾರೆ‌. ಜೊತೆಗೆ ಎರಡೆರಡು ಬಾರಿ ಅವಕಾಶ ನೀಡಿದರೂ ಶಾಸಕ ಸ್ಥಾನ ಗೆಲ್ಲಲಾಗಿಲ್ಲ. ಅವರೀಗ ಕರ್ನಾಟಕದ ಉಸ್ತುವಾರಿ, ಜೊತೆಗೆ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರಿಗೆ ಸಲಹೆ ನೀಡುವ ಸಮಿತಿಯ ಸದಸ್ಯ. ಇನ್ನು ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷರಾಗಿ ವಿಫಲರಾಗಿದ್ದವರು. ಅವರನ್ನು ತಮಿಳುನಾಡು, ಪುದುಚೇರಿ ಮತ್ತು ಗೋವಾ ರಾಜ್ಯಗಳ ಉಸ್ತುವಾರಿ ಮಾಡಲಾಗಿದೆ. ಅಲ್ಲದೆ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯಲ್ಲಿ ಅವಕಾಶ ನೀಡಲಾಗಿದೆ‌.

ಹೀಗೆ ತಮಗಿಷ್ಟವಾದವರಿಗೆ ಮಾತ್ರ ಮಣೆ ಹಾಕಲಾಗಿದೆ. ಹಾಗೆ ಮಾಡುವಾಗ ಸಾಮರ್ಥ್ಯವನ್ನು ಪರಿಗಣಿಸುವ ಬದಲು 'ನಿಷ್ಠೆಯೇ' ಮುಖ್ಯವಾಗಿದೆ. ಹೊಸ ಚಿಗುರನ್ನು ಗುರುತಿಸಬೇಕೆಂಬುದು ನಿಜ‌ ಆದರೆ ಒಂದೇ ಏಟಿಗೆ ಹಳೆಯ ಬೇರುಗಳನ್ನು ಕಳಚಿದರೆ ಗಿಡವೇ ಬಡವಾಗಲಿದೆ ಎಂಬುದರ ಅರಿವಿರಬೇಕಾಗಿತ್ತು. ಗುಲಾಂ ನಭಿ ಆಜಾದ್, ಆನಂದ ಶರ್ಮಾ ಮತ್ತಿತರರ ಹಿರಿಯರು ಒಳಗಡೆ ಇದ್ದರೆ ಕಷ್ಟ ಎಂಬ ನಿರ್ಧಾರಕ್ಕೆ ಬಂದಂತಿದೆ. ಆದರೆ ವಾಸ್ತವವಾಗಿ ಇವರುಗಳು ಹೊರಗಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಕಷ್ಟವೇ. ಹೈಕಮಾಂಡ್ ನಾಯಕರು ಇದನ್ನು ಅರ್ಥಮಾಡಿಕೊಳ್ಳಬೇಕಿತ್ತು.

Click here to follow us on Facebook , Twitter, YouTube, Telegram

Pratidhvani
www.pratidhvani.com