ಉದ್ಧವ್‌ ಠಾಕ್ರೆಯ ವ್ಯಂಗ್ಯ ಚಿತ್ರ ಹಂಚಿದ ಆರೋಪ: ನಿವೃತ್ತ ನೌಕಾಪಡೆ ಅಧಿಕಾರಿ ಮೇಲೆ ಹಲ್ಲೆ
ರಾಷ್ಟ್ರೀಯ

ಉದ್ಧವ್‌ ಠಾಕ್ರೆಯ ವ್ಯಂಗ್ಯ ಚಿತ್ರ ಹಂಚಿದ ಆರೋಪ: ನಿವೃತ್ತ ನೌಕಾಪಡೆ ಅಧಿಕಾರಿ ಮೇಲೆ ಹಲ್ಲೆ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯ ಕುರಿತಾದ ವ್ಯಂಗ್ಯಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಿವೃತ್ತ ನೌಕಾಸೇನೆಯ ಅಧಿಕಾರಿ ಮೇಲೆ ಶಿವಸೇನೆ ಕಾರ್ಯಕರ್ತರು ಅಮಾನವೀಯವಾಗಿ ಥಳಿಸಿದ ಘಟನೆ ಮುಂಬೈಯಲ್ಲಿ ನಡೆದಿದೆ.

ಪ್ರತಿಧ್ವನಿ ವರದಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯ ಕುರಿತಾದ ವ್ಯಂಗ್ಯಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಿವೃತ್ತ ನೌಕಾಸೇನೆಯ ಅಧಿಕಾರಿ ಮೇಲೆ ಶಿವಸೇನೆ ಕಾರ್ಯಕರ್ತರು ಅಮಾನವೀಯವಾಗಿ ಥಳಿಸಿದ ಘಟನೆ ಮುಂಬೈಯಲ್ಲಿ ನಡೆದಿದೆ.

ಮುಂಬೈಯ ಕಂಡಿವಲಿ ಘಟಕದ ಶಿವಸೇನೆ ಮುಖ್ಯಸ್ಥ ಕಮಲೇಶ್‌ ಕದಮ್‌ ನೇತೃತ್ವದ ತಂಡವು ನಿವೃತ್ತ ಅಧಿಕಾರಿ ಮದನ್‌ ಶರ್ಮ ಅವರ ಮೇಲೆ ಹಲ್ಲೆ ನಡೆಸಿದೆ. ಮದನ್‌ ಶರ್ಮರ ಅಪಾರ್ಟ್‌ಮೆಂಟ್‌ ಮುಂದೆಯೇ ನಡೆದ ಘಟನೆ ಭದ್ರತಾ ವ್ಯವಸ್ಥೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಚಿತ್ರೀಕರಣಗೊಂಡಿದ್ದರು, ವೀಡಿಯೋ ವ್ಯಾಪಕ ವೈರಲ್‌ ಆಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಘಟನೆ ವಿವರ:

ಮುಂಬೈಯ ಪೂರ್ವ ಕಂಡಿವಲಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿರುವ ನಿವೃತ್ತ ನೌಕಪಡೆ ಅಧಿಕಾರಿ ಮದನ್‌ ಶರ್ಮ(65) ಬುಧವಾರದಂದು, ತಮಗೆ ವಾಟ್ಸಪ್‌ನಲ್ಲಿ ಬಂದಿದ್ದ ಉದ್ಧವ್‌ ಠಾಕ್ರೆಗೆ ಸಂಬಂಧಿಸಿದ ವ್ಯಂಗ್ಯ ಚಿತ್ರವೊಂದನ್ನು (NCP ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೈ ಮುಗಿಯುವ ಚಿತ್ರ) ತಾವು ವಾಸಿಸುತ್ತಿರುವ ಹೌಸಿಂಗ್ ಸೊಸೈಟಿ ವಾಟ್ಸಾಪಿಗೆ ಫಾರ್ವಡ್ ಮಾಡಿದ್ದರು. ಇದು ಶಿವಸೇನೆ ಕಾರ್ಯಕರ್ತರ ಗಮನಕ್ಕೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರೆನ್ನಲಾದ ವ್ಯಂಗ್ಯ ಚಿತ್ರ
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರೆನ್ನಲಾದ ವ್ಯಂಗ್ಯ ಚಿತ್ರ

ಶುಕ್ರವಾರ ಬೆಳಗ್ಗೆ 10 ಗಂಟೆ ವೇಳೆ ಮದನ್‌ ಶರ್ಮ ಅವರ ನಂಬರ್‌ ಗೆ ಕರೆ ಮಾಡಿ ತಮ್ಮಲ್ಲಿ ಮಾತಾಡುವುದಿದೆ, ಹೊರಗೆ ಬನ್ನಿ ಎಂದು ಹಲ್ಲೆಕೋರರು ಕರೆದಿದ್ದಾರೆ. ಮಾತನಾಡಲು ಬಂದ ಶರ್ಮ ಅವರ ಮೇಲೆ ಗುಂಪು ಹಿಗ್ಗಾಮುಗ್ಗಾ ದಾಳಿ ಮಾಡಿದೆ.

ದಾಳಿಕೋರರಿಂದ ತಪ್ಪಿಸಿಕೊಳ್ಳಲು ತಮ್ಮ ಅಪಾರ್ಟ್‌ಮೆಂಟ್‌ ಕಂಪೌಂಡ್‌ ಒಳಗೆ ಓಡಿ ಬಂದ 65 ವರ್ಷದ ಶರ್ಮ ಅವರನ್ನು ಬೆನ್ನಟ್ಟಿ ಅಟ್ಟಾಡಿಸಿ ಹಲ್ಲೆ ನಡೆಸಿರುವುದು ವೈರಲ್‌ ಆದ ವಿಡಿಯೋದಲ್ಲಿ ಕಾಣುತ್ತದೆ. ಹಲ್ಲೆಯ ತೀವ್ರತೆಗೆ ಶರ್ಮಾ ಅವರ ಕಣ್ಣುಗಳಿಗೆ ಹಾನಿಗೊಂಡಿದೆ. ಲಭ್ಯವಾಗಿರುವ ಶರ್ಮಾರ ಚಿತ್ರದಲ್ಲಿ, ಕಣ್ಣುಗಳೆರಡು ಊದಿಕೊಂಡು, ರಕ್ತ ಹೆಪ್ಪುಗಟ್ಟಿರುವುದು ಕಾಣಿಸುತ್ತದೆ.

ಆರೋಪಿಗಳ ಬಂಧನ:

ಶುಕ್ರವಾರ ಸಂಜೆ ಮದನ್‌ ಶರ್ಮ ಸಮ್ತಾ ನಗರ್‌ ಪೊಲೀಸ್‌ ಠಾಣೆಯಲ್ಲಿ ಘಟನೆ ಸಂಬಂಧಿತ ಅಪರಿಚಿತ 8 ರಿಂದ 10 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಕದಮ್‌ ಹಾಗೂ ಆತನ ಸಹಚರರ ಮೇಲೆ ಭಾರತೀಯ ದಂಡ ಸಂಹಿತೆ ಪ್ರಕಾರ ಗಲಭೆ, ಹಲ್ಲೆಗೆ ಸಂಚು, ಹಲ್ಲೆ ಪ್ರಕರಣ ದಾಖಲಿಸಲಾಗಿದೆಯೆಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ದಿಲೀಪ್‌ ಸಾವಂತ್‌ ತಿಳಿಸಿದ್ದಾರೆ. ಈಗಾಗಲೇ ಮುಖ್ಯ ಆರೋಪಿ ಕಮಲೇಶ್‌ ಕದಮ್‌ ಸಹಿತ ಒಟ್ಟು ಏಳು ಮಂದಿ ಶಿವಸೇನೆ ಕಾರ್ಯಕರ್ತರನ್ನು ಬಂಧಿಸಲಾಗಿದೆಯೆಂದು ವರದಿಯಾಗಿದೆ.

ಹಲ್ಲೆ ಬಳಿಕ ಮದನ್‌ ಶರ್ಮ
ಹಲ್ಲೆ ಬಳಿಕ ಮದನ್‌ ಶರ್ಮ

ಘಟನೆಗೆ ಖಂಡನೆ:

ನೌಕಪಡೆಯ ನಿವೃತ್ತ ಅಧಿಕಾರಿ, ಹಿರಿಯ ನಾಗರಿಕನ ಮೇಲೆ ಅಮಾನವೀಯವಾಗಿ ನಡೆದ ದಾಳಿಯನ್ನು ದೇವೇಂದ್ರ ಫಡ್ನವೀಸ್‌, ನಟಿ ಸ್ವರಾ ಭಾಸ್ಕರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಖಂಡಿಸಿದ್ದಾರೆ.

“ಅತ್ಯಂತ ದುಖಕರ ಹಾಗೂ ಆಘಾತಕಾರಿʼ ಎಂದು ಘಟನೆ ಕುರಿತು ಪ್ರತಿಕ್ರಿಯಿಸಿದ ಫಡ್ನವೀಸ್‌, ಅಪರಾಧಿಗಳಿಗೆ ಕಠಿಣ ಶಿಕೆ ವಿಧಿಸುವಂತೆ ಉದ್ಧವ್‌ ಠಾಕ್ರೆಯನ್ನು ಒತ್ತಾಯಿಸಿದ್ದಾರೆ.

“ಒಂದು ವ್ಯಂಗ್ಯಚಿತ್ರಕ್ಕಾಗಿ ಶಿವಸೇನೆಯವರಿಂದ ಹಿರಿಯ ಸಂಭಾವಿತ ವ್ಯಕ್ತಿಯ ಮೇಲೆ ದಾಳಿ ನಡೆದಿರುವುದು ಆಘಾತಕಾರಿ, ನಾಚಿಕೆಗೇಡು ಮತ್ತು ಸಂಪೂರ್ಣವಾಗಿ ಖಂಡನೀಯ. ಈ ರೀತಿಯ ಹಿಂಸಾಚಾರಕ್ಕೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳದಿದ್ದರೆ ನೀವು ಉತ್ತಮ ಆಡಳಿತವನ್ನು ಪಡೆಯಲು ಸಾಧ್ಯವಿಲ್ಲ. ನಾಚಿಕೆಗೇಡು!” ಎಂದು ನಟಿ ಸ್ವರಾ ಭಾಸ್ಕರ್‌ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com