ಉನ್ನಾವೊ ಅತ್ಯಾಚಾರ: ತಪ್ಪತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಧಾವಂತ ತೋರದ ಯೋಗಿ ಸರ್ಕಾರ
ರಾಷ್ಟ್ರೀಯ

ಉನ್ನಾವೊ ಅತ್ಯಾಚಾರ: ತಪ್ಪತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಧಾವಂತ ತೋರದ ಯೋಗಿ ಸರ್ಕಾರ

ಸಂತ್ರಸ್ತೆಯ ಪರಿಸ್ಥಿತಿ ಇನ್ನಷ್ಟು ಹದಗೆಡಲು ಐಎಎಸ್ ಅಧಿಕಾರಿ ಅದಿತಿ ಸಿಂಗ್ ಮತ್ತು ಐಪಿಎಸ್ ಅಧಿಕಾರಿಗಳಾದ ನೇಹಾ ಪಾಂಡೆ, ಪುಷ್ಪಾಜಲಿ ದೇವಿ ಮತ್ತು ಅಷ್ಟಭೂಜಾ ಸಿಂಗ್ ಅವರೇ ಕಾರಣವೆಂದು ಸಿಬಿಐ ಹೇಳಿದೆ

ಪ್ರತಿಧ್ವನಿ ವರದಿ

ಲಕ್ನೋ: 2018 ರಲ್ಲಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಬದುಕು ಇನ್ನಷ್ಟು ದುರ್ಭರಗೊಳ್ಳಲು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಕೇಂದ್ರ ತನಿಖಾ ದಳವು ಸ್ಪಷ್ಟವಾಗಿ ಹೆಸರಿಸಿದ್ದಾಗ್ಯೂ ಉತ್ತರ ಪ್ರದೇಶ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಯಾವುದೇ ಆತುರ ತೋರಿಸುತ್ತಿಲ್ಲ.

ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಜೊತೆಗೆ ಐಎಎಸ್‌ ಹಾಗೂ ಮೂವರು ಐಪಿಎಸ್‌ ಅಧಿಕಾರಿಗಳ ತಪ್ಪಿತಸ್ಥರೆಂದು ಸಿಬಿಐ ಪತ್ತೆ ಹಚ್ಚಿದ ಬಳಿಕವೂ ವಾಡಿಕೆಯಂತೆ ಅವರ ಬಡ್ತಿಗಳು ನಡೆದಿವೆ.

2018 ರಲ್ಲಿ ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವ ತನಕವೂ, ಸೆಂಗಾರ್‌ ಗಾಗಿ ಈ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಕರಣ ಮುಚ್ಚಲು ಯತ್ನಿಸಿದ್ದರು, ಆದರೆ ಬಳಿಕ ಸೆಂಗಾರ್‌ನ ಮೇಲೆ ಅತ್ಯಾಚಾರ ಮಾತ್ರವಲ್ಲದೆ, ಸಂತ್ರಸ್ತೆಯ ತಂದೆಯ ಕೊಲೆ ಸಂಬಂಧದಲ್ಲೂ ಶಿಕ್ಷೆ ಪ್ರಕಟಿಸಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದಾಗ್ಯೂ, ಪ್ರಕರಣದ ಬಳಿಕ ಐಎಎಸ್‌ ಅಧಿಕಾರಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌(DM) ಆಗಿ ಮುಂದುವರೆಸಲಾಗಿದೆ. ಉಳಿದ ಮೂವರು ಐಪಿಎಸ್‌ ಅಧಿಕಾರಿಗಳಿಗೆ ಯೋಗಿ ಸರ್ಕಾರ ಬಡ್ತಿ ನೀಡಿದೆ.

ಜನವರಿ 24, 2017 ರಿಂದ ಅಕ್ಟೋಬರ್ 26, 2017 ರವರೆಗೆ ಉನ್ನಾವೊದ DM ಆಗಿದ್ದ ಐಎಎಸ್ ಅಧಿಕಾರಿ ಅದಿತಿ ಸಿಂಗ್ ವಿವಾದಾತ್ಮಕ ದಾಖಲೆಯನ್ನು ಹೊಂದಿದ್ದಾರೆ. ಪ್ರಸ್ತುತ, ಅವರು ಹಾಪುರ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಗಿದ್ದಾರೆ.

ಫೆಬ್ರವರಿ 2, 2016 ರಿಂದ ಅಕ್ಟೋಬರ್ 26, 2017 ರವರೆಗೆ ಉನ್ನಾವೊ ಎಸ್ಪಿ ಆಗಿದ್ದ ಐಪಿಎಸ್ ಅಧಿಕಾರಿ ನೇಹಾ ಪಾಂಡೆ ಪ್ರಸ್ತುತ ಗುಪ್ತಚರ ಬ್ಯೂರೋಗೆ ಬಡ್ತಿ ಹೊಂದಿದ್ದಾರೆ.

ಅಕ್ಟೋಬರ್ 27, 2017 ರಿಂದ 2018 ರ ಏಪ್ರಿಲ್ 30 ರವರೆಗೆ ಉನ್ನಾವೊ ಎಸ್ಪಿ ಆಗಿದ್ದ ಐಪಿಎಸ್ ಅಧಿಕಾರಿ ಪುಷ್ಪಾಂಜಲಿ ದೇವಿ ಈಗ ರೈಲ್ವೆ ಪೊಲೀಸ್ ಉಪ ಇನ್ಸ್ಪೆಕ್ಟರ್ ಜನರಲ್ (GRP) ಯಾಗಿ ವರ್ಗಾವಣೆಯಾಗಿದ್ದಾರೆ.

ಘಟನೆಯ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಷ್ಟಭೂಜಾ ಸಿಂಗ್ ಅವರು 2019 ರಲ್ಲಿ ಐಪಿಎಸ್ ಕೇಡರ್ ಆಗಿ ಬಡ್ತಿ ಪಡೆದರು ಮತ್ತು ಪ್ರಸ್ತುತ ಪಿಎಸಿ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದಾರೆ(Commandant of a PAC battalion).

ಕ್ರಮ ತೆಗೆದುಕೊಳ್ಳುವಲ್ಲಿನ ನಿಷ್ಕ್ರಿಯದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಉತ್ತರ ಪ್ರದೇಶ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನಿಶ್ ಕುಮಾರ್ ಅವಸ್ಥಿ, “ನಾವು ಸಿಬಿಐ ಶಿಫಾರಸುಗಳನ್ನು ಸ್ವೀಕರಿಸಿದ್ದೇವೆ. ನಾವು ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಮೊದಲು ಅಧಿಕಾರಿಗಳಿಗೆ ಶೋ ಕಾಸ್‌ ನೋಟಿಸ್ ನೀಡುತ್ತೇವೆ ಮತ್ತು ಅವರಿಂದ ವಿವರಣೆಯನ್ನು ಪಡೆಯುತ್ತೇವೆ. ” ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯ ಕುಟುಂಬವು ನ್ಯಾಯಕ್ಕಾಗಿ ಅದಿತಿ ಸಿಂಗ್‌, ನೇಹಾ ಪಾಂಡೆ, ಪುಷ್ಪಾಂಜಲಿ ದೇವಿ ಬಳಿ ಮನವಿ ಮಾಡಿಕೊಂಡಿದ್ದರು, ಸೆಂಗಾರ್‌ ವಿರುದ್ಧ ಕೇವಲ ಅಪಹರಣದ ಪ್ರಕರಣವನ್ನು ದಾಖಲಿಸಿ ಪ್ರಕರಣವನ್ನು ದುರ್ಬಲಗೊಳಿಸಲು ಮೂವರೂ ಪ್ರಯತ್ನಿಸಿದ್ದರು ಎಂಬುವುದನ್ನು ಸಿಬಿಐ ಉಲ್ಲೇಖಿಸಿದೆ.

“ಈ ಅಧಿಕಾರಿಗಳಲ್ಲಿ ಯಾರೊಬ್ಬರೂ ಹುಡುಗಿ ಮತ್ತು ಆಕೆಯ ಕುಟುಂಬವನ್ನು ಕೇಳಲು ಕಾಳಜಿ ವಹಿಸಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಸಿಬಿಐ ಮೂಲಗಳು ದಿ ವೈರ್‌ಗೆ ತಿಳಿಸಿದೆ.

ಪ್ರಕರಣದ ಕುರಿತಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮತ್ತು ಎರಡು ಎಸ್ಪಿಗಳು ಏನೂ ಮಾಡಲಿಲ್ಲ ಎಂಬುದು ಸಿಬಿಐ ಪತ್ತೆ ಹಚ್ಚಿದೆ. "ಆಡಳಿತ ಪಕ್ಷದ ಶಾಸಕ ಸೆಂಗಾರ್ ಅವರನ್ನು ಕಾಪಾಡಲು ಅವರೆಲ್ಲರೂ ಹೆಚ್ಚು ಉತ್ಸುಕರಾಗಿದ್ದಾರೆಂದು ತೋರುತ್ತಿದೆ, ಅವರ ಪ್ರಭಾವವು ಅವರಿಗೆ ತಿಳಿದಿದೆ" ಎಂದು ಮೂಲವು ಆರೋಪಿಸಿದೆ, ಈ ಪ್ರಕರಣದ ಪ್ರಾಥಮಿಕ ವಿಚಾರಣೆಯನ್ನು ಎರಡು ವಾರಗಳಲ್ಲಿ ಮಾಡಬೇಕಾಗಿತ್ತು, ನಂತರ ಒಂದು ಪ್ರಕರಣ ನೋಂದಾಯಿಸಿರಬೇಕಿತ್ತು. ಆದರೆ ಅಂತಹ ಯಾವುದೇ ವಿಚಾರಣೆ ನಡೆದಿಲ್ಲ ಎಂದು ಸಿಬಿಐ ಮೂಲ ತಿಳಿಸಿದೆ.

ಬದಲಾಗಿ ಸಂತ್ರಸ್ತೆಯ ಕುಟುಂಬಕ್ಕೆ ಹಲವು ರೀತಿಯ ಕಿರುಕುಳ ನೀಡಲಾಯಿತು. ಅತ್ಯಾಚಾರದ ಸಂತ್ರಸ್ತೆಯ ಚಿಕ್ಕಪ್ಪನ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಸಂತ್ರಸ್ತೆಯ ತಂದೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡುವುದನ್ನು ತಡೆಯುವ ಸಲುವಾಗಿ, ಅವರ ವಿರುದ್ಧ ಸೆಂಗಾರ್‌ನ ಸಹಾಯಕರು ದಾಳಿ ನಡೆಸಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ಗ್ರಾಮಸ್ಥರು ಮತ್ತು ಪೊಲೀಸ್ ಸಿಬ್ಬಂದಿಯ ಎದುರೇ ಗ್ರಾಮದ ಹೊರವಲಯದವರೆಗೆ ಎಳೆದೊಯ್ದರು.

ಸಂತ್ರಸ್ತೆಯ ತಂದೆಯ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಯಿತು. ಅಲ್ಲಿ ಅವರು ನಾಲ್ಕು ದಿನಗಳಲ್ಲಿಯೇ ಮತ್ತೆ ಹಲ್ಲೆಗೊಳಗಾದರು. ಗಂಭೀರವಾದ ಗಾಯಗಳಿಂದಾಗಿ ಅವರನ್ನು ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳು ಪ್ರಯತ್ನಿಸಿದಾಗ, ಸೆಂಗಾರ್ ಮತ್ತೊಮ್ಮೆ ಅಡ್ಡ ಬಂದಿದ್ದ ಎಂದು ಸಿಬಿಐ ಕಂಡುಹಿಡಿದಿದೆ.

ಮುಖ್ಯಮಂತ್ರಿ ಆದಿತ್ಯನಾಥ್ ಅವರ ಲಕ್ನೋದಲ್ಲಿ ನಿವಾಸದ ಎದುರು ಸಂತ್ರಸ್ತರು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಆಕ್ರೋಶಕ್ಕೆ ಒಳಗಾಯಿತು. ಕೆಲವೇ ಗಂಟೆಗಳಲ್ಲಿ ಸಿಬಿಐ ಈ ಪ್ರಕರಣವನ್ನು ರಾಜ್ಯ ಪೊಲೀಸರಿಂದ ವಹಿಸಿಕೊಂಡಿತು. ಲಕ್ನೋದಲ್ಲಿ ಮುಕ್ತವಾಗಿ ಸೆಂಗಾರ್ ತಿರುಗಾಡುತ್ತಿದ್ದಾಗಲೂ ರಾಜ್ಯ ಪೊಲೀಸರು ಸೆಂಗಾರ್‌ “ನಾಪತ್ತೆ” ಎಂದು ನಿರ್ಲಕ್ಷ್ಯ ವಹಿಸಿದ್ದರು.

ಕೃಪೆ: ದಿ ವೈರ್

Click here to follow us on Facebook , Twitter, YouTube, Telegram

Pratidhvani
www.pratidhvani.com