ನ್ಯೂಯಾರ್ಕ್‌ನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್.
ನ್ಯೂಯಾರ್ಕ್‌ನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್.|ಸಂಗ್ರಹ ಚಿತ್ರ; PTI
ರಾಷ್ಟ್ರೀಯ

ಸಮಸ್ಯೆ ಪರಿಹರಿಸಲು ಭಾರತ, ಚೀನಾದ ನಡುವೆ ಐದು ಅಂಶಗಳ ಒಪ್ಪಂದ

ರಷ್ಯಾದ ಮಾಸ್ಕೋದಲ್ಲಿ ಭಾರತ-ಚೀನಾ ದೇಶದ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ ಬಳಿಕ, ಉಭಯ ರಾಷ್ಟ್ರಗಳು ಐದು ಅಂಶಗಳ ಒಪ್ಪಂದಕ್ಕೆ ಬಂದಿರುವುದಾಗಿ ಘೋಷಿಸಿಕೊಂಡಿದೆ.

ಪ್ರತಿಧ್ವನಿ ವರದಿ

ಗುರುವಾರ, ಭಾರತೀಯ ವಿದೇಶಾಂಗ ವ್ಯವಹಾರ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಾತುಕತೆಯಲ್ಲಿ ಉಭಯ ದೇಶಗಳೂ ಸಂಧಾನಕ್ಕೆ ಒಪ್ಪಿಕೊಂಡಿವೆ. ಹಾಗಾಗಿ ಭಾರತ- ಚೀನಾ ಗಡಿಯಲ್ಲಿನ ಬಿಕ್ಕಟ್ಟು ಶಮನಗೊಳ್ಳುವ ಆರಂಭಿಕ ಲಕ್ಷಣಗಳು ಗೋಚರಿಸತೊಡಗಿವೆ.

ಸೆಪ್ಟೆಂಬರ್ 7 ರಂದು ಕಳೆದ ನಾಲ್ಕು ದಶಕಗಳಲ್ಲೇ ಪ್ರಥಮವಾಗಿ ವಾಸ್ತಾವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಮತ್ತು ಚೀನಾದ ಪಡೆಗಳು ಪರಸ್ಪರ ಗುಂಡು ಹಾರಿಸಿತ್ತು, ಇದರಿಂದ ಉದ್ವಿಘ್ನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎಂಬ ಆತಂಕ ಶುರುವಾಗಿತ್ತು. ಯುದ್ಧಾತಂಕವನ್ನು ನಿವಾಳಿಸುವಂತೆ ಎರಡೂ ರಾಷ್ಟ್ರಗಳು ಸಂಧಾನದ ಕಡೆಗೆ ಒಲವು ತೋರಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಶುಕ್ರವಾರ ಮುಂಜಾನೆ ಭಾರತದ ವಿದೇಶಾಂಗ ಸಚಿವಾಲಯವು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಎರಡೂ ವಿದೇಶಿ ಮಂತ್ರಿಗಳು ಎರಡೂವರೆ ಗಂಟೆಗಳ ಕಾಲ ನಡೆಸಿದ ಚರ್ಚೆಯ ನಂತರ ಐದು ಅಂಶಗಳನ್ನು ಪಟ್ಟಿಮಾಡಿ ಸಮ್ಮತಿಸಿದ್ದಾರೆ.

ಒಪ್ಪಂದದ ಐದು ಅಂಶಗಳು:

1. ಭಿನ್ನಾಭಿಪ್ರಾಯಗಳು ವಾಗ್ವಾದವಾಗಲು ಅವಕಾಶ ನೀಡದಿರುವುದು ಸೇರಿದಂತೆ ಭಾರತ-ಚೀನಾ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಎರಡೂ ಕಡೆಯವರು ಮಾರ್ಗದರ್ಶನ ಪಡೆಯಬೇಕು.

2. ಗಡಿ ಪ್ರದೇಶಗಳಲ್ಲಿನ ಪ್ರಸ್ತುತ ಪರಿಸ್ಥಿತಿ ಎರಡೂ ಕಡೆಯ ಹಿತದೃಷ್ಟಿಯಿಂದಲ್ಲ ಎಂದು ಇಬ್ಬರು ವಿದೇಶಾಂಗ ಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಎರಡೂ ಕಡೆಯ ಗಡಿ ಪಡೆಗಳು ತಮ್ಮ ಸಂವಾದವನ್ನು ಮುಂದುವರೆಸಬೇಕು, ತ್ವರಿತವಾಗಿ ಸೇನೆಯ ಮುಖಾಮುಖಿಯನ್ನು ಬೇರ್ಪಡಿಸಬೇಕು, ಉಭಯ ಸೇನೆಗಳ ಸರಿಯಾದ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಉದ್ವಿಗ್ನತೆಯನ್ನು ಕಡಿಮೆಗೊಳಿಸಬೇಕು.

3. ಚೀನಾ-ಭಾರತ ಗಡಿ ವ್ಯವಹಾರಗಳ ಬಗ್ಗೆ ಅಸ್ತಿತ್ವದಲ್ಲಿರುವ ಎಲ್ಲಾ ಒಪ್ಪಂದಗಳು ಮತ್ತು ನಿಯಮಾವಳಿಗಳನ್ನು ಎರಡೂ ಕಡೆಯವರು ಪಾಲಿಸಬೇಕು, ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮವನ್ನು ತಪ್ಪಿಸಬೇಕು.

4. ಭಾರತ-ಚೀನಾ ಗಡಿ ಪ್ರಶ್ನೆಯ ಕುರಿತು ವಿಶೇಷ ಪ್ರತಿನಿಧಿ ಕಾರ್ಯವಿಧಾನದ ಮೂಲಕ ಸಂವಾದ ಮತ್ತು ಸಂವಹನವನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತು ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ವರ್ಕಿಂಗ್ ಮೆಕ್ಯಾನಿಸಮ್ (Working Mechanism for Consultation and Coordination (WMCC) ಸಹ ತನ್ನ ಸಭೆಗಳನ್ನು ಮುಂದುವರಿಸಬೇಕು.

5. ಪರಿಸ್ಥಿತಿ ಸರಾಗವಾಗುತ್ತಿದ್ದಂತೆ, ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಹೊಸ ನಂಬಿಕೆಯನ್ನು ಹೆಚ್ಚಿಸುವ ಕ್ರಮಗಳನ್ನು ತೀರ್ಮಾನಿಸಲು ಉಭಯ ಕಡೆಯವರು ಕಾರ್ಯವನ್ನು ತ್ವರಿತಗೊಳಿಸಬೇಕು.

Click here to follow us on Facebook , Twitter, YouTube, Telegram

Pratidhvani
www.pratidhvani.com