ಕರೋನಾ ಇಲ್ಲ, ಮಮತಾ ನಾಟಕವಾಡುತ್ತಿದ್ದಾರೆ: ಬಿಜೆಪಿ ನಾಯಕ ದಿಲೀಪ್ ಘೋಷ್ ಹಾಸ್ಯಾಸ್ಪದ ಹೇಳಿಕೆ
ಪ್ರಧಾನಮಂತ್ರಿ ಕರೋನಾದ ಗಂಭೀರತೆಯನ್ನು ಎತ್ತಿ ಹಿಡಿದರೆ, ಅವರದೇ ಪಕ್ಷದ ನಾಯಕರು ಕರೋನಾ ಸೋಂಕು ಇಲ್ಲ ಎಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ.

ಬಂಗಾಳದಲ್ಲಿ ಚುನಾವಣೆ ನಡೆಯಲು ಇನ್ನು ಕೆಲವೇ ತಿಂಗಳುಗಳಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ವಿರುದ್ಧದ ಅಭಿಯಾನಕ್ಕೆ ರಾಜ್ಯದ ಬಿಜೆಪಿ ಘಟಕವು ಕರೋನ ವೈರಸ್ ಅನ್ನು ಬಳಸಿಕೊಳ್ಳುತ್ತಿದೆ. ದೇಶವು ಕರೋನವೈರಸ್ ಪ್ರಕರಣಗಳಲ್ಲಿ ದಾಖಲೆಯ ಹೆಚ್ಚಳವನ್ನು ಎದುರಿಸುತ್ತಿರುವ ಸಮಯದಲ್ಲಿಯೇ “ಕರೋನಾ ಹೋಗಿದೆ" ಎಂದು ಬಂಗಾಳದ ಬಿಜೆಪಿಯ ಉನ್ನತ ನಾಯಕ ದಿಲೀಪ್ ಘೋಷ್ ಗುರುವಾರ ಸಾರ್ವಜನಿಕ ರ‌್ಯಾಲಿಯಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ರ‌್ಯಾಲಿಗಳನ್ನು ನಿರ್ಬಂಧಿಸುವ ಏಕೈಕ ಉದ್ದೇಶಕ್ಕಾಗಿ ಮಮತಾ ಬ್ಯಾನರ್ಜಿ ವೈರಸ್ ಸುತ್ತಲೂ "ನಟಿಸುತ್ತಿದ್ದಾರೆ" ಮತ್ತು ಲಾಕ್‌ಡೌನ್‌ಗಳನ್ನು ವಿಧಿಸುತ್ತಿದ್ದಾರೆ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.

"ಕರೋನಾ ಚೋಲ್ ಗೆಚೆ (ಕರೊನಾವೈರಸ್ ಹೋಗಿದೆ) ಮಮತಾ ಬ್ಯಾನರ್ಜಿ ಕೇವಲ ನಟಿಸುತ್ತಿದ್ದಾರೆ ಮತ್ತು ಲಾಕ್‌ಡೌನ್ ಹಾಕುತ್ತಿದ್ದಾರೆ, ಇದರಿಂದಾಗಿ ಬಿಜೆಪಿಗೆ ರಾಜ್ಯದಲ್ಲಿ ಸಭೆ ಮತ್ತು ರ‌್ಯಾಲಿಗಳನ್ನು ಆಯೋಜಿಸಲು ಸಾಧ್ಯವಿಲ್ಲ.ಆದರೂ ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ" ಎಂದು ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಧನಿಯಖಾಲಿಯಲ್ಲಿ ನಡೆದ ರ‌್ಯಾಲಿಯಲ್ಲಿ ಹೇಳಿದ್ದಾರೆ.

ಭಾರತವು 45 ಲಕ್ಷ ಕೊರೊನಾವೈರಸ್ ಪ್ರಕರಣಗಳನ್ನು ದಾಟಿ 96,551 ಹೊಸ ಕರೋನಾ ಪ್ರಕರಣಗಳನ್ನು ಹಾಗೂ 1,209 ಹೊಸ ಸಾವುಗಳನ್ನು ದಾಖಲಿಸಿದೆ. ಬಂಗಾಳದಲ್ಲಿ ಸುಮಾರು 2 ಲಕ್ಷ ಕರೋನಾ ಪ್ರಕರಣಗಳಿದ್ದು 3,700 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೋವಿಡ್ -19 ಬಿಕ್ಕಟ್ಟಿನ ಕುರಿತು ತಮ್ಮ ಇತ್ತೀಚಿನ ಪ್ರತಿಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೋನವೈರಸ್ ಅನ್ನು ಲಘುವಾಗಿ ಪರಿಗಣಿಸಬಾರದು ಮತ್ತು ಮುಖಗವಸು ಧರಿಸಲು ಮತ್ತು ಸಂಶೋಧಕರು ಲಸಿಕೆ ಅಭಿವೃದ್ಧಿಪಡಿಸುವವರೆಗೆ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದ್ದರು.

ಆದರೆ, ಇತರ ಪಕ್ಷಗಳು ಆನ್‌ಲೈನ್‌ ಸಮಾವೇಶಗಳನ್ನು ನಡೆಸುತ್ತಿರುವಾಗ, ಪ್ರಧಾನಿಯವರ ಪಕ್ಷದ ನಾಯಕರು ಆನ್‌ಲೈನ್ ರ‌್ಯಾಲಿಗಳನ್ನು ಮಾಡುವ ಬದಲು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ, ಹಾಗೂ ಕರೋನಾದ ಗಂಭೀರತೆಯನ್ನು ಕ್ಷುಲ್ಲಕಗೊಳಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ, ಬಂಗಾಳದ ಹದಗೆಡುತ್ತಿರುವ ವೈರಸ್ ಬಿಕ್ಕಟ್ಟಿನ ಬಗ್ಗೆ ತೃಣಮೂಲ ಆಡಳಿತದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಟ್ಟುಬಿಡದೆ ಆಕ್ರಮಣ ಮಾಡಿತ್ತು, ಸರ್ಕಾರ ಉದ್ದೇಶಪೂರ್ವಕವಾಗಿ ಪ್ರಕರಣಗಳ ವರದಿಯನ್ನು ಕಡಿಮೆಗೊಳಿಸುತ್ತಿದೆ ಎಂದು ಆರೋಪಿಸಿತ್ತು.

ಬಿಜೆಪಿಯ ರಾಷ್ಟ್ರೀಯ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಗುರುವಾರ ಮಮತಾ ಬ್ಯಾನರ್ಜಿಯನ್ನು ಗುರಿಯಾಗಿಸಿಕೊಂಡು, ಆಗಸ್ಟ್ 5 ರಂದು (ಅಯೋಧ್ಯೆಯ ರಾಮ್ ಮಂದಿರದ ಭೂಮಿಪೂಜೆ ನಡೆದ ದಿನ) ಲಾಕ್ ಡೌನ್ ಮಾಡಲು ಆದೇಶಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಸರ್ಕಾರವನ್ನು "ಹಿಂದೂ ವಿರೋಧಿ" ಎಂದು ಕರೆದಿದ್ದರು.

ಒಟ್ಟಿನಲ್ಲಿ, ಪ್ರಧಾನಮಂತ್ರಿ ಕರೋನಾದ ಗಂಭೀರತೆಯನ್ನು ಎತ್ತಿ ಹಿಡಿದರೆ, ಅವರದೇ ಪಕ್ಷದ ನಾಯಕರು ಕರೋನಾ ಸೋಂಕು ಇಲ್ಲ ಎಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕರೋನಾ ನಿಯಂತ್ರಿಸಲು ತೆಗೆದುಕೊಂಡ ನಿರ್ಣಯಗಳನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು, ಬಿಜಪಿಯೇತರ ಸರ್ಕಾರದ ಮೇಲೆ ದಾಳಿ ಮಾಡುತ್ತಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com