ʻಮಹಾʼ ಹೈಡ್ರಾಮಕ್ಕೆ ನಟಿ ಕಂಗನಾ ರಣಾವತ್‌ ಕಂಗಾಲು..!
ರಾಷ್ಟ್ರೀಯ

ʻಮಹಾʼ ಹೈಡ್ರಾಮಕ್ಕೆ ನಟಿ ಕಂಗನಾ ರಣಾವತ್‌ ಕಂಗಾಲು..!

ಸಿಎಂ ಹಾಗೂ ಸಚಿವರ ವಿರುದ್ಧ ಮಾತಾಡಿದ್ದಕ್ಕಾಗಿ ಕಂಗನಾ ವಿರುದ್ದ ಹಕ್ಕುಚ್ಯುತಿ ಮಂಡಿಸಲಾಗಿದೆ

ಕೃಷ್ಣಮಣಿ

ಮಹಾರಾಷ್ಟ್ರದಲ್ಲಿ June 14, 2020ರಂದು ಬಾಲಿವುಡ್ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಧನರಾಗಿದ್ದರು. ಅಂದು ನೇಣು ಬಿಗಿದ ಸ್ಥಿತಿಯಲ್ಲಿದ್ದ ಅವರ ಶರೀರವನ್ನು ಕಂಡು ಸಾಕಷ್ಟು ಜನರು ಅನುಮಾನ ವ್ಯಕ್ತಪಡಿಸಿದ್ದರು. ಮುಂಬೈ ಪೊಲೀಸರು ಎಫ್ಐಆರ್‌ ದಾಖಲು ಮಾಡಿಕೊಂಡರು ತನಿಖೆ ಪ್ರಗತಿ ಕಾಣಲಿಲ್ಲ ಎನ್ನುವ ಕಾರಣಕ್ಕೆ ಸಿಬಿಐ ತನಿಖೆಗೆ ಕೇಸ್‌ ವರ್ಗಾಯಿಸುವಂತೆ ಆಗ್ರಹಿಸಲಾಗಿತ್ತು. ಆ ನಂತರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಕರಣ ಬಿಹಾರಕ್ಕೆ ವರ್ಗಾವಣೆ ಆಗಿತ್ತು. ಮಹಾರಾಷ್ಟ್ರದಲ್ಲಿ ಆರೋಪಿಗಳನ್ನು ಉಳಿಸುವ ಕೆಲಸ ಆಗುತ್ತಿದೆ ಎಂದು ಮಹಾ ಅಘಾಡಿ ಸರ್ಕಾರದ ವಿರುದ್ಧ ದೂಷಣೆಗಳು ಕೇಳಿಬಂದಿದ್ದವು. ಮಹಾರಾಷ್ಟ್ರ ಸರ್ಕಾರ ಮಾತ್ರ ನಾವು ಪಾರ್ದರ್ಶಕವಾಗಿಯೇ ತನಿಖೆ ಮಾಡುತ್ತಿದ್ದೇವೆ ಎಂದರೂ ಯಾರೂ ನಂಬಲಿಲ್ಲ. ಆಕ್ರೋಶ ಭರಿತ ಹೇಳಿಕೆಗಳು ಸರ್ಕಾರವನ್ನು ಹಿಯಾಳಿಸುವಂತಿತ್ತು. ಅರಲ್ಲಿ ಕಂಗನಾ ರಣಾವತ್ಅವರೂ ಒಬ್ಬರೂ ಕೂಡ. ಸುಶಾಂತ್ ಸಿಂಗ್ ಸಾವಿನ ಕೇಸ್, ಸಿಬಿಐಗೆ ವಹಿಸಿದ್ದಕ್ಕೆ ಸ್ವಾಗತ ಮಾಡಿದ್ದರು. ಇದೀಗ ಎಲ್ಲರ ಬಣ್ಣವೂ ಬಯಲಾಗುತ್ತದೆ ಎಂದಿದ್ದರು.

ಸುಶಾಂತ್‌ ಸಾವಿನ ಪ್ರಕರಣದಲ್ಲಿ ಕಂಗನಾ ಸವಾಲು..!

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ನಟಿ ಕಂಗನಾ ರಣಾವತ್‌ ಭಾರಿ ಗದ್ದಲ ಎಬ್ಬಿಸಿದ್ದರು. ಸುಶಾಂತ್ ಸಾವು ಸಹಜವಲ್ಲ, ಅದೊಂದು ದುಷ್ಕೃತ್ಯ ಎಂದು ಪ್ರತಿಪಾದಿಸಿದ್ದರು. ಸುಶಾಂತ್ ಸಾವಿನ ಹಿಂದೆ ಡ್ರಗ್ಸ್ ಮಾಫಿಯಾ ಇದೆ ಎಂದು ವಾದಿಸಿದ್ದರು. ಸುಶಾಂತ್‌ ಸ್ನೇಹಿತೆ ರಿಯಾ ಚಕ್ರವರ್ತಿ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದರು. ನಟ ಸುಶಾಂತ್ ಕೇಸ್ ತನಿಖೆಯನ್ನು ಸಿಬಿಐಗೆ ವಹಿಸಿದಾಗ ಕಂಗನಾ ರಣಾವತ್‌ ಶ್ಲಾಘನೆ ವ್ಯಕ್ತಪಡಿಸಿದ್ದರು.

ಈ ವೇಳೆ ನಟಿ ಕಂಗನಾ ರಣಾವತ್‌ ಕೂಡಾ ಡ್ರಗ್ಸ್ ವ್ಯಸನಿ ಎಂದು ಹೇಳಿದ್ದ ಮಹಾರಾಷ್ಟ್ರ ಸಚಿವರ ಮಾತು ಸಾಕಷ್ಟು ಟೀಕೆಯನ್ನು ಎದುರಿಸಬೇಕಾಯಿತು. ಒಂದು ವೇಲೆ ಆರೋಪ ಸಾಬೀತಾದರೆ ನಾನು ಮುಂಬೈ ತೊರೆಯುವೆ ಎಂದು ಸವಾಲು ಹಾಕಿದ್ದರು. ಬಿ ಟೌನ್ ನಲ್ಲಿ ಶೇಕಡ 99ರಷ್ಟು ಜನರು ಡ್ರಗ್ಸ್ ಸೇವನೆ ಮಾಡುತ್ತಾರೆ ಎಂದಿದ್ದರು. ಒಂದು ವೇಳೆ ಸರ್ಕಾರ ನನಗೆ ಭದ್ರತೆ ಕೊಟ್ಟರೆ ಎಲ್ಲರ ಹೆಸರನ್ನೂ ಹೇಳ್ತೀನಿ ಎಂದಿದ್ದರು. ಆ ನಂತರ ಡ್ರಗ್ಸ್ ಆರೋಪದಡಿ ಕಂಗನಾ ವಿರುದ್ಧವೇ ತನಿಖೆಗೆ ಆದೇಶ ಆಗಿತ್ತು.

ಬುಧವಾರ ಮುಂಬೈನಲ್ಲಿ ಆಗಿದ್ದೇನು..?

ಮುಂಬೈನ ಪಾಲಿ ಹಿಲ್‌ನಲ್ಲಿರುವ ನಿವಾಸವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನೋಟಿಸ್‌ ಕೊಟ್ಟಿದ್ದ ಬೃಹತ್ಮುಂಬೈ ಮಹಾ ನಗರ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಸಜ್ಜಾಗಿದ್ದರು. ಹುಟ್ಟೂರು ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ನಟಿ ಕಂಗನಾ ರಣಾವತ್, ವಿಷಯ ತಿಳಿಯುತ್ತಿದ್ದ ಹಾಗೆ ಮುಂಬೈಗೆ ತೆರಳಲು ತಯಾರಿ ಮಾಡಿದರು. ವಿಮಾನ ಏರುವ ಮುನ್ನವೇ ಕಟ್ಟಡ ತೆರವು ಮಾಡುತ್ತಿರುವ ವಿಷಯ ತಿಳಿದ ರಣಾವತ್, ಪ್ರಜಾಪ್ರಭುತ್ವದ ಸಾವು ಎಂದು ಟ್ವೀಟ್‌ ಮಾಡಿದ್ದರು. ಇತ್ತ ಬಾಂಬೆ ಹೈಕೋರ್ಟ್‌ಗೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. 12.30ಕ್ಕೆ ಅರ್ಜಿ ವಿಚಾರಣೆಗೆ ಬರುವ ವೇಳೆಗೆ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಕಟ್ಟಡದ ಬಹುತೇಕ ಭಾಗವನ್ನು ಜೆಸಿಬಿಗಳು ನೆಲಕ್ಕೆ ಉರುಳಿಸಿದ್ದವು.

ಕಂಗನಾ ರಣಾವತ್ ಬೆಂಬಲಕ್ಕೆ ನಿಂತಿದ್ದ ಕರ್ಣಿ ಸೇನಾ ಸದಸ್ಯರು ಶಿವಸೇನೆ ವಕ್ತಾರ ಸಂಜಯ್ ರಾವತ್ ವಿರುದ್ಧ ಪ್ರತಿಭಟನೆ ನಡೆಸಿದರು. ‘ಬಾಬರ್ ಮತ್ತು ಅವನ ಸೇನೆ’ ಎಂದು ಟ್ವೀಟಿಸುವ ಮೂಲಕ ಬಿಎಂಸಿ ನಿರ್ಧಾರವನ್ನು ಕಂಗನಾ ರಣಾವತ್‌ ಖಂಡಿಸಿದರು. ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ..? ಎಂದು ಬಿಎಂಸಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಚಂಡೀಘಡದಿಂದ ಮುಂಬೈಗೆ ಬಂದಿಳಿದ ನಟಿ ಕಂಗನಾ ರಣಾವತ್ Y+ ಭದ್ರತೆಯೊಂದಿಗೆ ನಿವಾಸದತ್ತ ತೆರಳಿದರು. ಅಷ್ಟರಲ್ಲಿ ಬಾಂಬೆ ಹೈಕೋರ್ಟ್‌ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ನಿರ್ದೇಶನ ನೀಡಿತ್ತು. ಮನೆ ನಿರ್ಮಾಣದಲ್ಲಿ ಅಕ್ರಮ ಆಗಿಲ್ಲ ಎಂದ ವಕೀಲರು ವಾದಿಸಿದರು. ಆದರೆ ಅಷ್ಟರಲ್ಲಿ ಕಟ್ಟಡ ಸಾಕಷ್ಟು ಹಾನಿಗೊಳಗಾಗಿತ್ತು.

ಟ್ವಿಟರ್‌ನಲ್ಲಿ ಆಕ್ರೋಶ ಹೊರ ಹಾಕಿದ ಕಂಗನಾ..!

ಮಹಾರಾಷ್ಟ್ರ ಸರ್ಕಾರದ ವಿರುದ್ಧ ನಟಿ ಕಂಗನಾ ರಣಾವತ್‌ ಕಿಡಿಕಾರಿದ್ದರು. ಕಾಶ್ಮೀರಿ ಪಂಡಿತರ ಉದಾಹರಣೆ ಕೊಟ್ಟ ಕಂಗನಾ ರಣಾವತ್, ಕಾಶ್ಮೀರಿ ಪಂಡಿತ ನೆನಪಾಗುತ್ತಾರೆ. ನಮ್ಮ ಮನೆ ಮುರಿಯುತ್ತಿರೋದು ಎಷ್ಟು ಸರಿ..? ಫಿಲಂ ಮಾಫಿಯಾದೊಂದಿಗೆ ನಂಟಿದೆಯಾ..? ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಹುನ್ನಾರವೇ? ಇವತ್ತು ನನ್ನ ಮನೆ, ನಾಳೆ ನಿಮ್ಮ ದುರಹಂಕಾರ..! ಕಾಲಚಕ್ರ ಒಂದೇ ಕಡೆ ಇರೋದಿಲ್ಲ, ತಿರುಗುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೂಡಾ ನೀಡಿದ್ದಾರೆ. ಅದಾಗಿ ಕೆಲವೇ ಗಂಟೆಗಳಲ್ಲಿ ಒಂದು ವಿಡಿಯೋ ಪೋಸ್ಟ್‌ ಮಾಡಿದ ಕಂಗನಾ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.

ಸಂಜೆ ವೇಳೆಗೆ ಮತ್ತೊಂದು ಟ್ವೀಟ್ ಮಾಡಿದ ನಟಿ ಕಂಗನಾ ರಣಾವತ್‌ ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೆ ಸವಾಲ್ ಹಾಕಿದ್ದರು. ಉದ್ಧವ್ ಠಾಕ್ರೆ ಮತ್ತು ಕರಣ್ ಜೋಹರ್ ಗ್ಯಾಂಗ್ ಗೆ ಸವಾಲ್ ಎಂದಿರುವ ನಟಿ ಕಂಗನಾ, ನೀವು ನಮ್ಮ ಕಚೇರಿ ಒಡೆದು ಹಾಕಿದ್ದೀರಿ, ನನ್ನ ಮನೆ, ಮುಖ, ದೇಹವನ್ನೂ ಒಡೆದು ಹಾಕಿ, ನಾನು ಬದುಕಿರಲಿ, ಸತ್ತಿರಲಿ ನಿಮ್ಮ ಬಣ್ಣ ಬಯಲು ಮಾಡ್ತೀನಿ ಎಂದಿದ್ದರು. ಅದರ ಜೊತೆಗೆ ನನಗೆ ಈಗಾಗಲೇ ಬೆದರಿಕೆ ಕರೆಗಳು ಬರ್ತಿವೆ ಎಂದಿದ್ದಾರೆ. ನಟಿ ಕಂಗನಾ ವಿರುದ್ಧ ಡ್ರಗ್ಸ್ ಕೇಸ್ ವಿಚಾರಣೆ ನಡೆಯುತ್ತಿದೆ. ಜೊತೆಗೆ ಸಿಎಂ ಹಾಗೂ ಸಚಿವರ ವಿರುದ್ಧ ಮಾತಾಡಿದ್ದಕ್ಕಾಗಿ ಹಕ್ಕುಚ್ಯುತಿ ಮಂಡಿಸಲಾಗಿದೆ. ಬಿಎಂಸಿಯಿಂದ ಪದೇಪದೇ ನೋಟಿಸ್ ಕೊಡುವ ಮೂಲಕ ಮಾನಸಿಕ ನೆಮ್ಮದಿ ಹಾಳುಗೆಡಗುವ ಪ್ರಯತ್ನ ಸಾಗಿದೆ. ಕಂಗನಾ ವಿರುದ್ಧ ದೇಶದ್ರೋಹದ ಕೇಸ್ ಕೂಡ ಹಾಕಲಾಗಿದೆ.

ಪಿಒಕೆ ಎಂದಿದ್ದನ್ನು ಸಹಿಸುವರೇ ಮಹಾರಾಷ್ಟ್ರಿಗರು..?

ಮರಾಠಿಗರು ನಮ್ಮ ಉಸಿರೇ ಹಿಂದೂ ಧರ್ಮ ಎನ್ನುತ್ತಾರೆ. ನಾವು ಹಿಂದೂ ಧರ್ಮ ಸ್ಥಾಪನೆ ಮಾಡುತ್ತೇವೆ ಎನ್ನುತ್ತಾರೆ ಶಿವಸೇನೆ ಕಾರ್ಯಕರ್ತರು. ಅಂದರೆ ಇಬ್ಬರದ್ದೂ ಒಂದೇ ನಿಲುವು. ಇದೀಗ ಅಕ್ರಮವಾಗಿ ಮನೆ ಕಟ್ಟಲಾಗಿದೆ ಎನ್ನುವ ಕಾರಣಕ್ಕೆ ಮನೆ ತೆರವು ಮಾಡಲಾಗಿದೆ ಎಂದು ಬಿಎಂಸಿ ಹೇಳಿಕೊಂಡಿದೆ. ಆದರೆ ತಮ್ಮ ಮನೆಯನ್ನು ತೆರವು ಮಾಡಿದ್ದಕ್ಕೆ ಕಂಗನಾ ರಣಾವತ್ ಆಕ್ರೋಶಗೊಂಡಿದ್ದಾರೆ. ಮುಂಬೈ ಕೂಡ PoK ಅನ್ನೋದು ಸಾಬೀತು ಎಂದು ಲೇವಡಿ ಮಾಡಿದ್ದಾರೆ. ಈ ಟೀಕೆಗೆ ಮರಾಠಿಗರು ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಈ ನಡುವೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ನಟಿ ರಿಯಾ ಚಕ್ರವರ್ತಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ರಿಯಾ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್, ನ್ಯಾಯಾಂಗ ಬಂಧನಕ್ಕೆ ಕಳಹಿಸಿದೆ. ರಿಯಾರನ್ನು ಮುಂಬೈನ ಬೈಕುಲ್ಲಾ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನು ಪೊಲೀಸರು ರಿಯಾ, ಆಕೆಯ ಪೋಷಕರಾದ ಇಂದ್ರಜಿತ್, ಸಂಧ್ಯಾ ಚಕ್ರವರ್ತಿ, ಸಹೋದರ ಶೋಯಿಕ್ ಚಕ್ರವರ್ತಿವೂ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಒಟ್ಟಾರೆ ಸುಶಾಂತ್‌ ಸಾವಿನ ಬಳಿಕ ಬಾಲಿವುಡ್‌ ತಾರೆಯರು ಸೇರಿದಂತೆ ಮಹಾರಾಷ್ಟ್ರ ನೆಮ್ಮದಿ ಕಳೆದುಕೊಂಡಿದೆ ಎಂದರೆ ಸುಳ್ಳಲ್ಲ.

Click here to follow us on Facebook , Twitter, YouTube, Telegram

Pratidhvani
www.pratidhvani.com