ಬರೋಬ್ಬರಿ 45 ವರ್ಷಗಳ ಬಳಿಕ ಭಾರತ-ಚೀನಾ ಗಡಿಯಲ್ಲಿ ಗುಂಡಿನ ಸದ್ದು
ರಾಷ್ಟ್ರೀಯ

ಬರೋಬ್ಬರಿ 45 ವರ್ಷಗಳ ಬಳಿಕ ಭಾರತ-ಚೀನಾ ಗಡಿಯಲ್ಲಿ ಗುಂಡಿನ ಸದ್ದು

ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನಿಕರು ಗುಂಡು ಹಾರಿಸುವ ಮೂಲಕ ಗಡಿ ಬಿಕ್ಕಟ್ಟನ್ನ ಮತ್ತಷ್ಟು ಉಲ್ಬಣಗೊಳಿಸಿದ್ದಾರೆ. ಈ ಗುಂಡು ಹಾರಿಸುವ ಮೂಲಕ ಚೀನಾದ ಸೈನಿಕರು ಕಳೆದ 45 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ.

ಕೋವರ್ ಕೊಲ್ಲಿ ಇಂದ್ರೇಶ್

ಭಾರತ ಮತ್ತು ನೆರೆಯ ದೈತ್ಯ ಕುತಂತ್ರಿ ರಾಷ್ಟ್ರ ಚೀನಾದ ಗಡಿಯು ಬರೋಬ್ಬರಿ 3480 ಕಿಲೋಮೀಟರ್‌ ಗಳಷ್ಟು ಉದ್ದವಿದೆ. ಮೊದಲಿನಿಂದಲೂ ಒಂದು ರಾಷ್ಟ್ರವಾಗಿರುವುದಕ್ಕಿಂತ ಹೆಚ್ಚಾಗಿ ಅಕ್ಕ ಪಕ್ಕದ ರಾಷ್ಟ್ರಗಳಿಗೆ ಸೇರಿದ ಭೂಮಿಯನ್ನು ಕಬಳಿಸುವುದನ್ನೇ ಗುರಿಯಾಗಿಸಿಕೊಂಡಿರುವ ಚೀನಾವು ವಿಸ್ತಾರವಾದ ಟಿಬೆಟನ್ನು ನುಂಗಿ ಹಾಕಿದೆ. ಇದರಿಂದಾಗಿ ಸಾವಿರಾರು ಟಿಬೇಟಿಯನ್ನರು ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದುಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಸದಾ ವಿಸ್ತರಣಾವಾದವನ್ನೇ ಮೈಗೂಡಿಸಿಕೊಂಡು ಬಂದಿರುವ ಚೀನಾವು ಓರ್ವ ದುರಾಸೆಯ ರಿಯಲ್‌ ಎಸ್ಟೇಟ್‌ ಏಜೆಂಟ್‌ ಎಂದರೂ ತಪ್ಪೇನಿಲ್ಲ.

ಸುಮಾರು 3500 ಕಿಮಿ ಉದ್ದದ ಗಡಿಯನ್ನು ಕಾಯಲು ಎರಡೂ ದೇಶಗಳು ತಮ್ಮ ಸೈನಿಕರನ್ನುಶಸ್ತ್ರಾಸ್ತ್ರ ರಹಿತವಾಗಿಯೇ ನಿಯೋಜಿಸಿದ್ದವು. ಆದರೆ ತನ್ನ ಎಂದಿನ ನರಿ ಬುದ್ದಿ ಪ್ರದರ್ಶಿಸಿದ ಚೀನಾವು ಕಳೆದ ಜೂನ್‌ 15 ರಂದು ಗಾಲ್ವಾನ್‌ ಕಣಿವೆಯಲ್ಲಿ ಭಾರತದ ಗಡಿ ಆಕ್ರಮಿಸಿಕೊಂಡು ಎರಡು ಕಿಲೋಮೀಟರ್‌ ಗಳಷ್ಟು ಒಳ ನುಗ್ಗಿದೆ. ಆ ಸಂದರ್ಭ ಉಂಟಾದ ಎರಡೂ ಕಡೆ ಸೈನಿಕರ ಘರ್ಷಣೆಯಲ್ಲಿ ಭಾರತದ 20 ಕ್ಕೂ ಸೈನಿಕರು ಹುತಾತ್ಮರಾದರೆ ಚೀನಾದ 35 ಸೈನಿಕರು ಮೃತರಾದರು ಎನ್ನಲಾಗಿದೆ.

ಗಡಿಯಲ್ಲಿ ಆಯುಧಗಳನ್ನು ಹೊಂದುವಂತಿಲ್ಲ ಎಂದು ಎರಡೂ ದೇಶಗಳು ಮೊದಲೇ ಮಾಡಿಕೊಂಡಿದ್ದ ಒಪ್ಪಂದದಂತೆ ಚೀನಾವು ರೈಫಲ್‌ ಬಳಸಿಲ್ಲ, ಬದಲಿಗೆ ಮುಳ್ಳು ತಂತಿಗಳನ್ನು ಜೋಡಿಸಿದ ಕಬ್ಬಿಣದ ಪೈಪುಗಳ ಮೂಲಕ ಭಾರತದ ಸೈನಿಕರ ಮೇಲೆ ಧಾಳಿ ಮಾಡಿದೆ. ಇದಾದ ನಂತರ 4-5 ಬಾರಿ ಭಾರತ - ಚೀನಾ ಸೇನಾಧಿಕಾರಿಗಳು ಗಡಿ ಉದ್ವಿಗ್ನತೆ ಶಮನಗೊಳಿಸಲು ಮಾತುಕತೆ ನಡೆಸಿದರೂ ಮೊಂಡನಂತೆ ವರ್ತಿಸುತ್ತಿರುವ ಚೀನಾವು ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಆಸಕ್ತಿ ವಹಿಸಲಿಲ್ಲ. ಬದಲಿಗೆ ಗಡಿಗಳಲ್ಲಿ ಇನ್ನಷ್ಟು ಸೇನಾ ಜಮಾವಣೆ ಮಾಡಿ ಯುದ್ದೋಪಕರಣಗಳನ್ನು ಸಂಗ್ರಹಿಸಿಟ್ಟಿದೆ. ಇದರಿಂದ ಭಾರತವೂ ಗಡಿಯ ಪ್ರತಿಕೂಲ ಹವಾಮಾನದಲ್ಲೂ ಸೇನೆ ಜಮಾವಣೆ ಮಾಡಿದೆ. ಅಲ್ಲದೆ ರಕ್ಷಣಾ ಇಲಾಖೆ ಸೈನಿಕರಿಗೆ ಸಂಪೂರ್ಣ ಅಧಿಕಾರ ನೀಡಿದ್ದು ಈಗ ರೈಫಲ್‌ ಗಳನ್ನು ಗಡಿಯ ಸೈನಿಕರು ಹೊಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನಿಕರು ಗುಂಡು ಹಾರಿಸುವ ಮೂಲಕ ಗಡಿ ಬಿಕ್ಕಟ್ಟನ್ನ ಮತ್ತಷ್ಟು ಉಲ್ಬಣಗೊಳಿಸಿದ್ದಾರೆ. ಈ ಗುಂಡು ಹಾರಿಸುವ ಮೂಲಕ ಚೀನಾದ ಸೈನಿಕರು ಕಳೆದ 45 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಕಳೆದ 1975 ರಲ್ಲಿ ಅರುಣಾಚಲ ಪ್ರದೇಶದ ತಲುಂಗ್‌ ಲಾ ಗಡಿಯಲ್ಲಿ ಚೀನಾ ಸೈನಿಕರು ಗುಂಡು ಹಾರಿಸಿ ಅಸ್ಸಾಂ ರೈಫಲ್ಸ್‌ ನ ನಾಲ್ವರು ಸೈನಿಕರನ್ನು ಕೊಂದು ಹಾಕಿದ್ದರು.

ನಿಯಂತ್ರಣ ರೇಖೆಯ ದಕ್ಷಿಣದ ದಂಡೆಯ ಪಾಂಗೊಂಗ್ ತ್ಸೊದಲ್ಲಿ ಭಾರತೀಯ ಸೈನಿಕರು ಕಾವಲು ಕಾಯುತ್ತಿರುವಾಗ ಅವರನ್ನು ಅಲ್ಲಿಂದ ಹಿಮ್ಮೆಟ್ಟಿಸಿ ಆ ಪ್ರದೇಶವನ್ನು ವಶಪಡಿಸಿಕೊಳ್ಳಲು ಚೀನಿಯರು ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದರೆ ಭಾರತೀಯ ಸೈನಿಕರೂ ಗುಂಡಿನ ಮೂಲಕವೇ ಉತ್ತರ ನೀಡಿದ್ದು ಗಡಿ ಆಕ್ರಮಿಸಿಕೊಳ್ಳುವ ಯತ್ನವನ್ನು ವಿಫಲಗೊಳಿಸಿದ್ದಾರೆ. ಆದರೆ ಕುತಂತ್ರಿ ಚೀನಾ ಮಿಲಿಟರಿ ಅಧಿಕಾರಿಗಳು ಹೇಳಿಕೆ ನೀಡಿ ಭಾರತೀಯ ಸೈನಿಕರು ಎಲ್‌ಎಸಿ ದಾಟಿ ಒಳ ಬರುವ ಯತ್ನ ನಡೆಸಿದಾಗ ಅವರತ್ತ ಗುಂಡು ಹಾರಿಸಿ ಹಿಮ್ಮೆಟ್ಟಿಸಲಾಗಿದೆ ಎಂದು ಹೇಳಿಕೊಂಡಿದೆ.

ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ಹೇಳಿಕೆಯನ್ನು ತಮ್ಮ ದೇಶೀಯ ಮತ್ತು ಅಂತರರಾಷ್ಟ್ರೀಯ ಸಮುದಾಯವನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಭಾರತೀಯ ಸೇನೆಯು ಹೇಳಿದೆ. ಚೀನಾದ ಸೈನಿಕರು ಭಾರತೀಯ ಸೈನಿಕರೊಂದಿಗೆ ಮುಖಾಮುಖಿ ಅಗುವಾಗಲೇ ಕಬ್ಬಿಣದ ಪೈಪ್‌ ಗಳಿಗೆ ಮುಳ್ಳುಗಳನ್ನು ಅಳವಡಿಸಿದ್ದ ದೊಣ್ಣೆಯನ್ನು ಹಿಡಿದುಕೊಂಡೇ ಘರ್ಷಣೆಗೆ ಸಜ್ಜಾಗಿಯೇ ಬಂದಿದ್ದರು. ಅಲ್ಲದೆ ಭಾರತೀಯ ಸೈನಿಕರನ್ನು ಆ ಮೂಲಕ ಪ್ರಚೋದಿಸಿ ಆ ಸ್ಥಳವನ್ನು ಆಕ್ರಮಿಸಿಕೊಳ್ಳುವ ಏಕೈಕ ಗುರಿ ಹೊಂದಿದ್ದರು ಎಂದು ಮಿಲಿಟರಿ ಮೂಲಗಳು ತಿಳಿಸಿವೆ.

ಸೋಮವಾರ ಸಂಜೆ 6 ಘಂಟೆ ಸಮಯಕ್ಕೆ 40 ಚೀನಿ ಸೈನಿಕರು ಮೂರು ಗುಂಪುಗಳಾಗಿ ಕಬ್ಬಿಣದ ದೊಣ್ಣೆಗಳನ್ನೂ, ರೈಫಲ್‌ ಗಳನ್ನು ತೆಗೆದುಕೊಂಡು ಭಾರತೀಯ ಸೈನಿಕರ ಬಳಿ ಬಂದು ಹಿಂದೆ ಸರಿಯುವಂತೆ ಧಮಕಿ ಹಾಕಿದರು. ಆದರೆ ಈ ಸೈನಿಕರ ಬೆದರಿಕೆಗೆ ಸೊಪ್ಪು ಹಾಕದ ಭಾರತೀಯ ಸೈನಿಕರು ಅವರನ್ನೇ ಗದರಿಸಿದರು. ಆ ಸಮಯದಲ್ಲಿ ಬೆದರಿಸಲು ಚೀನಾ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ನಂತರ ಭಾರತೀಯ ಸೈನಿಕರೂ ಗುಂಡಿನ ಮೂಲಕವೇ ಉತ್ತರಿಸಿದರು. ಈ ರೀತಿಯ ಗಂಭೀರ ಪ್ರಚೋದನೆಯ ಹೊರತಾಗಿಯೂ, ಭಾರತೀಯ ಪಡೆಗಳು ಹೆಚ್ಚಿನ ಸಂಯಮವನ್ನು ಪ್ರದರ್ಶಿಸಿದವು ಮತ್ತು ಪ್ರಬುದ್ಧ, ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಿದವು ಎಂದು ತಿಳಿದು ಬಂದಿದೆ. ಈಗ ಚೀನೀ ಪಡೆಗಳು ಭಾರತೀಯ ಪಡೆಗಳಿಗಿಂತ ಕೇವಲ 200 ಮೀಟರ್‌ ದೂರದಲ್ಲಿ ಟೆಂಟ್‌ ಗಳನ್ನು ಹಾಕಿಕೊಂಡು ಕಾವಲು ಕಾಯುತ್ತಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಮ್ಮ ಸೈನಿಕರು ಗಡಿಯಲ್ಲಿ 50 ಕಿಲೋಮೀಟರ್‌ಗಳಷ್ಟು ವಿಸ್ತಾರವಾದ ಎತ್ತರದಲ್ಲಿ ಪ್ರಾಬಲ್ಯ ಸಾಧಿಸಿದಾಗಿನಿಂದಲೂ, ಚೀನಿಯರು ಅವರನ್ನು ಹೊರಗೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಸೂಕ್ಷ್ಮ ಪರಿಸ್ಥಿತಿ ಅಗಿದ್ದು ಭಾರತೀಯ ಸೈನಿಕರು ತಮ್ಮ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಎರಡೂ ಸೈನ್ಯಗಳು ಮುಖಾಮುಖಿಯಾಗಿ ನಿಂತಿಲ್ಲವಾದ್ದರಿಂದ ಇದು ಅಕ್ಷರಶಃ ಮುಖಾಮುಖಿಯಲ್ಲ. ಆದಾಗ್ಯೂ, ಕಳೆದ ಸೋಮವಾರದಿಂದ ಚೀನಿಯರು ಗಡಿ ಅತಿಕ್ರಮಣಕ್ಕೆ ಅನೇಕ ಪ್ರಯತ್ನಗಳನ್ನು ಮಾಡಿರುವುದರಿಂದ ಪರಿಸ್ಥಿತಿ ಸೂಕ್ಷ್ಮವಾಗಿ ಉಳಿದಿದೆ ಎಂದು ಸೈನ್ಯದ ಮೂಲವೊಂದು ತಿಳಿಸಿದೆ.

ಈ ಹಿಂದೆ ಭಾರತದ ಭೂಮಿ ಕಬಳಿಸಿದಂತೆ ಈ ಬಾರಿಯೂ ಚೀನಾವು ಕಬಳಿಕೆಗೆ ಬಂದಿದೆ. ಆದರೆ ಚೀನಾದ ಕುತಂತ್ರವನ್ನು ಅರಿತಿದ್ದ ಭಾರತೀಯ ಸೈನಿಕರು ಮೊದಲೇ ಆ ಪ್ರದೇಶವನ್ನು ವಶಕ್ಕೆ ಪಡೆದುಕೊಂಡಿದ್ದು ಚೀನಾಕ್ಕೆ ಸೂಕ್ತ ತಿರುಗೇಟು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತ ಮತ್ತು ಚೀನಾ ಗುರುತಿಸಿಕೊಂಡಿರುವ ವಾಸ್ತವ ನಿಯಂತ್ರಣ ರೇಖೆಯು ಚಶುಲ್‌ ವಲಯದ ಕೈಲಾಶ ಪರ್ವತ ಶ್ರೇಣಿಯ ಮೇಲೆಯೇ ಹಾದು ಹೋಗಿದೆ. ಈ ಪ್ರದೇಶ ತುಂಬ ಕಡಿದಾಗಿದ್ದು ಚಾಂಗ್ ಲಾ ದಿಂದ ಜರಾ ಲಾ ವರೆಗಿನ ಕೈಲಾಶ ಶ್ರೇಣಿಯನ್ನು 40 ಚದಕ ಕಿ.ಮೀ ಗಳಷ್ಟು ಭೂ ಭಾಗವನ್ನು 1962 ರಲ್ಲಿ ನಡೆದ ಯುದ್ದದಲ್ಲಿ ಚೀನಿಯರು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಗಡಿ ರಕ್ಷಣೆಗೆ ಸುಮಾರು 3500 ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಮಿಲಿಟರಿ ಉನ್ನತ ಮೂಲಗಳು ತಿಳಿಸಿವೆ. ಈ ಗಡಿ ಪ್ರದೇಶದಲ್ಲಿ ವಿಶೇಷ ತರಬೇತಿ ಪಡೆದಿರುವ ಟಿಬೆಟನ್‌ ನಿರಾಶ್ರಿತರೇ ಅಧಿಕವಾಗಿರುವ ಸ್ಪೆಷಲ್‌ ಫ್ರಾಂಟಿಯರ್‌ ಫೋರ್ಸ್‌ ನ್ನು ನಿಯೋಜಿಸಲಾಗಿದೆ. ಈಗಿನ ಪರಿಸ್ಥಿತಿ ಅವಲೋಕಿಸಿದಾಗ ಗಡಿಯ ಬಿಕ್ಕಟ್ಟು ಸದ್ಯಕ್ಕೆ ಶಮನಗೊಳ್ಳುವ ಸಾದ್ಯತೆ ಇಲ್ಲ.

Click here to follow us on Facebook , Twitter, YouTube, Telegram

Pratidhvani
www.pratidhvani.com