ಕರೋನಾ ಬದಲು ಬಡವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಮೋದಿ: ರಾಹುಲ್ ಗಾಂಧಿ
ರಾಷ್ಟ್ರೀಯ

ಕರೋನಾ ಬದಲು ಬಡವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಮೋದಿ: ರಾಹುಲ್ ಗಾಂಧಿ

ಜಗತ್ತಿನಲ್ಲೇ ಅತಿಹೆಚ್ಚು ಕರೋನಾ ಸೋಂಕು ಪೀಡಿತರು ಇರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಏರಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೆಬ್ ಸರಣಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಯದುನಂದನ

ಕಂಡು ಕೇಳರಿಯದ ಕರೋನಾವನ್ನು ನಿಯಂತ್ರಣ ಮಾಡಲು ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಕರೋನಾ ನಿಯಂತ್ರಿಸುವುದಕ್ಕೆ ಎಂಬ ಹೆಸರಿನಲ್ಲಿ ಲಾಕ್‌ಡೌನ್ ಎಂಬ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಮಾತ್ರ ಬಡ ಭಾರತೀಯರ ಮೇಲೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ. ಕರೋನಾ ಮತ್ತು ಲಾಕ್‌ಡೌನ್ ಸೃಷ್ಟಿಯಾದ ಬಳಿಕ ರಾಹುಲ್ ಗಾಂಧಿ ವೆಬ್ ಸರಣಿ ಆರಂಭಿಸಿದ್ದಾರೆ. ಈಗ ಜಗತ್ತಿನಲ್ಲೇ ಅತಿಹೆಚ್ಚು ಕರೋನಾ ಸೋಂಕು ಪೀಡಿತರು ಇರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಏರಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೆಬ್ ಸರಣಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅದರಲ್ಲಿ ನೇರವಾಗಿ ನರೇಂದ್ರ ಮೋದಿ ಕಡುಕಷ್ಟದ ಕಾಲದಲ್ಲಿ ಬಡವರ ಹೊಟ್ಟೆಗೆ ಹೊಡೆದ ಬಗ್ಗೆ ವಿವರಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರೋನಾ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಣೆ ಮಾಡಲಾಯಿತು. ಆದರೆ ಈ ಲಾಕ್‌ಡೌನ್ ಯಾವ ವರ್ಗದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಮುನ್ನಂದಾಜು ಮಾಡಲಿಲ್ಲ. ಏಕಾಏಕಿ ಟಿವಿ ಮುಂದೆ ಬಂದ ಮೋದಿ ಕೇವಲ ೪ ಗಂಟೆಗಳ ಕಾಲದ ಗಡುವು ನೀಡಿ ಲಾಕ್‌ಡೌನ್ ಘೋಷಿಸಿಬಿಟ್ಟರು. ಇಂಥ ಅಸೂಕ್ಷ್ಮ, ಅವೈಜ್ಞಾನಿಕ, ಅಸಂವೇದನಾತ್ಮಕ ಕ್ರಮದಿಂದ ದೇಶದ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಅನುಭವಿಸಬೇಕಾಯಿತು. ಅತಿಹೆಚ್ಚು ಬಾಧೆಗೆ ಒಳಗಾದವರು ಬಡವರು, ಕಾರ್ಮಿಕರು, ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ಅಸಂಘಟಿತ ವರ್ಗದವರು, ರೈತರು, ರಸ್ತೆ ಬದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು, ಸಣ್ಣ-ಪುಟ್ಟ ವ್ಯಾಪಾರ ವಹಿವಾಟು ನಡೆಸುತ್ತಿದ್ದವರು, ಸೈಕಲ್ ರಿಕ್ಷಾ (ಉತ್ತರ ಭಾರತದಲ್ಲಿ ಅತಿಹೆಚ್ಚು), ಆಟೋ ರಿಕ್ಷಾ, ಟ್ಯಾಕ್ಸಿ ಓಡಿಸಿ ಜೀವನ ಸಾಗಿಸುತ್ತಿದ್ದವರು. ಅವತ್ತಿನ ಅನ್ನವನ್ನು ಅವತ್ತೇ ಹುಟ್ಟಿಸಿಕೊಳ್ಳುತ್ತಿದ್ದ ಅಸಂಖ್ಯಾತರು. ಒಂದಿನಿತೂ ಯೋಚಿಸದೆ ಇವರುಗಳ ಮೇಲೆ 'ಲಾಕ್‌ಡೌನ್ ಎಂಬ ಸರ್ಜಿಕಲ್ ಸ್ಟ್ರೈಕ್' ಮಾಡಲಾಯಿತು ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡುವ ಮುನ್ನ ಮೋದಿ, ಮೇಲೆ ಉಲ್ಲೇಖಿಸಿರುವ ವಿವಿಧ ವರ್ಗಗಳ ಜನರ ಬಗ್ಗೆ ಯೋಚನೆ ಮಾಡಬೇಕಿತ್ತು. ಕಡೆಯ ಪಕ್ಷ ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕವಾದರೂ ಮಿಡಿಯಬೇಕಾಗಿತ್ತು. ಹಾಗೂ ಮಾಡಲಿಲ್ಲ. ಕಾಂಗ್ರೆಸ್ ಪಕ್ಷ, ವೈಯಕ್ತಿಕವಾಗಿ ನಾನು, ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗೌರ್ವನರ್ ಡಾ. ರಘುರಾಮ್ ರಾಜನ್, ಅರ್ಥಶಾಸ್ತçದಲ್ಲಿ ನೋಬೆಲ್ ಪ್ರಶಸ್ತಿ ಪಡೆದಿರುವ ಭಾರತದ ಅಭಿಜಿತ್ ಬ್ಯಾನರ್ಜಿ ಮತ್ತಿತರರು 'ಬಡವರಿಗೆ ಈಗ ಏನು ಮಾಡಬೇಕು?' ಎಂಬ ಬಗ್ಗೆ ಸಲಹೆ ಕೊಟ್ಟಿದ್ದವು. ಅವುಗಳನ್ನೂ ಪರಿಗಣಿಸಲಿಲ್ಲ. ಇದೆಲ್ಲದರ ಪರಿಣಾಮ ಲಾಕ್‌ಡೌನ್ ಎಂಬುದು ಬಡವರ ಪಾಲಿಗೆ, ದಿನದ ತುತ್ತನ್ನು ಅಂದೇ ಗಿಟ್ಟಿಸಿಕೊಳ್ಳಬೇಕಾದವರಿಗೆ ಅಕ್ಷರಶಃ 'ಮರಣಶಾಸನವಾಗಿ' ಪರಿಣಮಿಸಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಲಾಕ್‌ಡೌನ್ ಘೋಷಣೆ ಮಾಡಿದ ಸಂದರ್ಭದಲ್ಲಿ ನಾನೂ ಸೇರಿದಂತೆ ಮತ್ತಿತರರು ಹೇಳಿದ್ದು 'ಕಷ್ಟದಲ್ಲಿ ಸಿಲುಕಿರುವ ಬಡವರ ಬಗ್ಗೆ ಕಾಳಜಿ ಮತ್ತು ಕರುಣೆ ತೋರಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿ ಅಂತಾ. ಅಲ್ಲದೆ ಅತಿಸಣ್ಣ, ಸಣ್ಣ ಮತ್ತು ಮಧ್ಯಮವರ್ಗದ ವ್ಯಾಪಾರಸ್ಥರು ಅವರ ವ್ಯಾಪಾರ-ವಹಿವಾಟನ್ನು ಮತ್ತೆ ಆರಂಭಿಸಲು ಅವರಿಗೆ ಹಣಕಾಸಿನ ನೆರವು ನೀಡಿ ಅಂತಾ. ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಈ ಎರಡೂ ಕೆಲಸವನ್ನು ಮಾಡಲಿಲ್ಲ. ವಾಸ್ತವವಾಗಿ ಈ ಎರಡೂ ಕೆಲಸಗಳನ್ನು ಮಾಡುವುದು ಕೇಂದ್ರ ಸರ್ಕಾರಕ್ಕೆ ಕಷ್ಟದ ಕೆಲಸ ಆಗಿರಲಿಲ್ಲ. ಏಕೆಂದರೆ ಸದ್ಯ ಭಾರತದ ಗೋದಾಮುಗಳಲ್ಲಿ 'ಬಫರ್ ಸ್ಟಾಕ್' ಹಂತವನ್ನು ಮೀರಿ ಆಹಾರ ಸಾಮಗ್ರಿಗಳ ಸಂಗ್ರಹವಿದೆ. ಅಲ್ಲದೆ ಬಡವರಿಗೆ ಕಾಂಗ್ರೆಸ್ ಪಕ್ಷ ಛತ್ತೀಸ್ಘಡದಲ್ಲಿ ಜಾರಿಗೆ ತಂದ 'ನ್ಯಾಯ್' ಮಾದರಿಯಲ್ಲಿ ನೆರವು ನೀಡಲು ಹಣಕಾಸಿನ ಅಭಾವವೂ ಸೃಷ್ಟಿಯಾಗುತ್ತಿರಲಿಲ್ಲ.

ಜನರ ಪ್ರಾಣ ಮೊದಲ ಆದ್ಯತೆ ಆಗಬೇಕಿತ್ತು. ಬಡವರ ಹಸಿವು ಮೊದಲ ಆದ್ಯತೆ ಆಗಬೇಕಿತ್ತು. ಕೈಯಲ್ಲಿ ಕಾಸು ಮತ್ತು ಕೆಲಸ ಎರಡೂ ಇಲ್ಲದೆ ಕಂಗಾಲಾಗಿದ್ದವರಿಗೆ ನೆರವು ನೀಡಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ 'ವಿಶೇಷ ಪ್ಯಾಕೇಜ್' ಎಂಬ ಭ್ರಮಾಲೋಕ ಸೃಷ್ಟಿಸಿತು. ಪ್ರಧಾನಿ ನರೇಂದ್ರ ಮೋದಿ '20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್' ಎಂದು ಜನರನ್ನು ನಿಬ್ಬೆರಗಾಗಿಸಿದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅದನ್ನು ಇನ್ನಷ್ಟು ಗೊಂದಲಮಯ ಮಾಡಿದರು. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಕರೋನಾ ಕಾರಣ ಕೊಟ್ಟು ಅತ್ಯಂತ ದುಸ್ಥಿತಿಯಲ್ಲಿ ಜನರನ್ನು ಕೈಬಿಟ್ಟುಬಿಟ್ಟಿತು ಎಂದು ರಾಹುಲ್ ಗಾಂಧಿ ವಿವರಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ಈ ನಿಷ್ಕಾರುಣ್ಯದ ಮತ್ತು ಜನವಿರೋಧಿಯ ಬಗ್ಗೆ ಒಗ್ಗಟ್ಟಾಗಿ ಹೋರಾಡಬೇಕೆಂದು ಕರೆಕೊಟ್ಟಿದ್ದಾರೆ.

ಸದ್ಯ ದೇಶದಲ್ಲಿ ಕರೋನಾ ಕಷ್ಟವೂ ಕರಗಿಲ್ಲ. ಜೊತೆಗೆ ಕರೋನಾಕ್ಕಿಂತ ಮೊದಲೇ ದೇಶವನ್ನು ಕಾಡುತ್ತಿದ್ದ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಜಿಡಿಪಿ ಕಳೆದ ೪೦ ವರ್ಷಗಳಲ್ಲೇ ಅತ್ಯಂತ ಕೆಳಕ್ಕಿಳಿದಿದೆ. -೨೩ರಷ್ಟು ಜಿಡಿಪಿ ಕುಸಿತವಾಗಿದೆ. ಇದರಿಂದ ಸಹಜವಾಗಿ ಈಗಾಗಲೇ ಲಾಕ್‌ಡೌನ್ ನಿಂದ ಲಕ್ವಾ ಹೊಡೆದಂತಾಗಿದ್ದ ವ್ಯಾಪರ, ವ್ಯವಹಾರ ಮತ್ತು ಜನಜೀವನಕ್ಕೆ ಗಾಯದ ಮೇಲೆ ಬರೆಎಳೆದಂತಾಗಿದೆ. ನಿರಂತರವಾಗಿ ರೂಪಾಯಿ ಮೌಲ್ಯವೂ ಕುಸಿಯುತ್ತಿದೆ. ಇಷ್ಟೆಲ್ಲದರ ನಡುವೆ ಕೇಂದ್ರ ಸರ್ಕಾರ ನಿರಂತರವಾಗಿ ಅತ್ಯಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಿಸುತ್ತಿದೆ. ಮುಂದೆ ಬೆಲೆ ಏರಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಇಂಥ ಕಷ್ಟಗಳ ಸರಣಿಯ ನಡುವೆಯಾದರೂ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಕ್ಷದ ನಾಯಕರು ನೀಡುವ ಮೌಲ್ಯಯುತವಾದ ಸಲಹೆಯನ್ನು ಸ್ವೀಕರಿಸಬೇಕಾದ, ಅದಕ್ಕನುಗುಣವಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

ಕರೋನಾ ಕಷ್ಟ ಶುರುವಾದಾಗಿನಿಂದಲೂ ರಾಹುಲ್ ಗಾಂಧಿ ಅವರು ನಿರಂತರವಾಗಿ ಕೇಂದ್ರ ಸರ್ಕಾರವನ್ನು ಎಚ್ಚರಿಸುತ್ತಿದ್ದಾರೆ. ಸಲಹೆ ಕೊಡುತ್ತಿದ್ದಾರೆ. ಹಿಂದೆ ಅವರ ಸಲಹೆ-ಶಿಫಾರಸ್ಸುಗಳನ್ನು ಮಾನ್ಯ ಮಾಡದ ನರೇಂದ್ರ ಮೋದಿ ಈಗ ಅವರ ಮಾತನ್ನು ಕೇಳಿ ಕ್ರಮ ಕೈಗೊಳ್ಳುವರೇ ಎಂಬ ಸಹಜವಾದ ಪ್ರಶ್ನೆ ಹುಟ್ಟುತ್ತದೆ. ಕಡೆಯ ಪಕ್ಷ ಬಿಜೆಪಿಯ ರಾಜ್ಯಸಭಾ ಸದಸ್ಯರೇಯಾದ ಸುಬ್ರಮಣಿಯನ್ ಸ್ವಾಮಿ ಅವರ ಸಲಹೆಯನ್ನಾದರೂ ಕೇಳಲಿ. ಅವರು ಕೂಡ ಸದ್ಯ ಬಡವರಿಗೆ ಬೇಕಿರುವುದು ಭಾಷಣವಲ್ಲ, ನೆರವು ಎಂದಿದ್ದಾರೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಬೇಕಿರುವುದು ಸಾಲವಲ್ಲ, ಹಣಕಾಸಿನ ಸಹಾಯ ಎಂದಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಅವರ ಸಲಹೆಗಳಿಗಾದರೂ ಮನ್ನಣೆ ಸಿಕ್ಕರೆ ಕೋಟ್ಯಂತರ ಜನ ನಿಟ್ಟುಸಿರು ಬಿಟ್ಟಾರು.

Click here to follow us on Facebook , Twitter, YouTube, Telegram

Pratidhvani
www.pratidhvani.com