ಉತ್ತರಾಖಂಡ: 13 ಮಿಲಿಯನ್ ವರ್ಷ ಹಳೆಯ ಏಪ್ ಪಳೆಯುಳಿಕೆ ಪತ್ತೆ
ರಾಷ್ಟ್ರೀಯ

ಉತ್ತರಾಖಂಡ: 13 ಮಿಲಿಯನ್ ವರ್ಷ ಹಳೆಯ ಏಪ್ ಪಳೆಯುಳಿಕೆ ಪತ್ತೆ

ಉತ್ತರಾಖಂಡದಲ್ಲಿ ದೊರೆತ 13 ದಶಲಕ್ಷ ವರ್ಷಗಳಷ್ಟು ಹಳೆಯದಾದ ಏಪ್ ಪಳೆಯುಳಿಕೆ ಆಧುನಿಕ-ಗಿಬ್ಬನ್ ವಾನರ ಪ್ರಭೇಧದ ಪೂರ್ವಜ ಎಂದು ಸಂಶೋಧಕರು ಹೇಳುತ್ತಾರೆ. ಈ ಸಂಶೋಧನೆ ಜೀವ ಪ್ರಭೇದದ ಪ್ರಮುಖ ಕೊಂಡಿಯ ಅಧ್ಯಯನಕ್ಕೆ ಸಹಾಯಕಾರಿ ಎಂದು ವಿಶ್ಲೇಷಿಸಲಾಗಿದೆ.

ಪ್ರತಿಧ್ವನಿ ವರದಿ

ಉತ್ತರಾಖಂಡದಲ್ಲಿ 13 ದಶಲಕ್ಷ ವರ್ಷಗಳಷ್ಟು ಹಳೆಯದಾದ ಏಪ್‌ ಪಳೆಯುಳಿಕೆಯನ್ನು ಅಂತರಾಷ್ಟ್ರೀಯ ಸಂಶೋಧಕರ ತಂಡ ಕಂಡುಹಿಡಿದಿದೆ. ಪತ್ತೆಯಾಗಿರುವ ಪಳೆಯುಳಿಕೆ ಆಧುನಿಕ ಗಿಬ್ಬನ್‌ ವಾನರ ಪ್ರಭೇಧದ ಪೂರ್ವಜ ಎಂದು ಸಂಶೋಧಕರು ತಿಳಿಸಿದ್ದಾರೆ. 'ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ ಬಿ' ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನೆಯು, ಇಂದಿನ ಗಿಬ್ಬನ್‌ನ ಪೂರ್ವಜರು ಆಫ್ರಿಕಾದಿಂದ ಏಷ್ಯಾಕ್ಕೆ ವಲಸೆ ಬಂದ ಕುರಿತಾದ ಪ್ರಮುಖ ಹೊಸ ಪುರಾವೆಗಳನ್ನು ಒದಗಿಸುತ್ತದೆ. ಹಾಗಾಗಿ ಈ ಸಂಶೋಧನೆಯು ಏಪ್ ಪಳೆಯುಳಿಕೆ ದಾಖಲೆಯಲ್ಲಿ ಒಂದು ಪ್ರಮುಖ ಅನೂರ್ಜಿತತೆಯನ್ನು ತುಂಬುತ್ತದೆ. ಈ ಸಂಶೋಧನೆ ಜೀವ ಪ್ರಭೇದದ ಪ್ರಮುಖ ಕೊಂಡಿಯ ಅಧ್ಯಯನಕ್ಕೆ ಸಹಾಯಕಾರಿ ಎಂದು ವಿಶ್ಲೇಷಿಸಲಾಗಿದೆ.

ಸದ್ಯ ಕಂಡು ಬಂದಿರುವ ಪಳೆಯುಳಿಕೆಯ ಕೆಳ ದವಡೆಯು, ಈ ಹಿಂದೆ ಪತ್ತೆಯಾದ ಅಪರಿಚಿತ ತಳಿಗಳಿಗೆ ಸೇರುತ್ತದೆ. ಹಾಗೂ ಈ ಹಿಂದೆ ರಾಮನಗರ್‌ನಲ್ಲಿ ಪತ್ತೆಯಾದ ಮೊದಲ ಪಳೆಯುಳಿಕೆಯನ್ನು ಹೋಲುತ್ತದೆ. ಅಮೆರಿಕಾ ಮೂಲದ ಅರಿಝೋನಾ ಸ್ಟೇಟ್‌ ಯುನಿವರ್ಸಿಟಿ ಹಾಗೂ ಚಂಢೀಗಡ್‌ನ ಪಂಜಾಬ್‌ ಯುನಿವರ್ಸಿಟಿಯ ಸಂಶೋಧಕರಿಗೆ ವರ್ಷದ ಹಿಂದೆ ಈ ದವಡೆ ಪಳೆಯುಳಿಕೆ ಪತ್ತೆಯಾಗಿತ್ತು.

ಗಿಬ್ಬನ್
ಗಿಬ್ಬನ್gibbon

ತಂಡವು ಅಲ್ಪ ವಿಶ್ರಾಂತಿ ವಿರಾಮ ಪಡೆಯುತ್ತಿರುವಾಗ, ನೆಲದ ಮೇಲಿನ ಸಣ್ಣ ಕೊಳೆಯ ರಾಶಿಯಲ್ಲಿ ಹೊಳೆಯುವ ವಸ್ತುವನ್ನು ಗುರುತಿಸಿತು. "ಇದು ಪ್ರೈಮೇಟ್ ಹಲ್ಲು ಎಂದು ನಮಗೆ ತಕ್ಷಣ ತಿಳಿದಿತ್ತು, ಆದರೆ ಇದು ಈ ಪ್ರದೇಶದಲ್ಲಿ ಹಿಂದೆ ಕಂಡುಬಂದ ಯಾವುದೇ ಸಸ್ತನಿಗಳ ಹಲ್ಲಿನಂತೆ ಕಾಣಲಿಲ್ಲ. ಈವರೆಗೂ ಗೊತ್ತಿರುವ ಯಾವುದೇ ವಾನರ ಪ್ರಭೇದೊಂದಿಗೆ ಈ ಪಳಿಯುಳಿಕೆ ಹೋಲಿಕೆಯಾಗುವುದಿಲ್ಲ " ಎಂದು ಅಮೆರಿಕಾ ನ್ಯೂಯಾರ್ಕ್ ಸಿಟಿ ಯೂನಿವರ್ಸಿಟಿಯ ಕ್ರಿಸ್ಟೋಫರ್ ಸಿ. ಗಿಲ್ಬರ್ಟ್ ಹೇಳಿದ್ದಾರೆ.

ಪತ್ತೆಯಾದ ಪಳೆಯುಳಿಕೆಯ ಗಾತ್ರ ಹಾಗೂ ಆಕಾರವನ್ನು ಗಮನಿಸಿ ಇದು ಪ್ರಸ್ತುತ ಇರುವ ಗಿಬ್ಬನ್‌ನ ಪೂರ್ವಜ ಎಂದು ಆರಂಭಿಕ ಊಹೆಗೆ ಬಂದಿದ್ದೇವೆ. ಅದು ನಿಜವೆಂದು ತೋರುತ್ತದೆ. ಸಿಕ್ಕಿರುವ ಪಳೆಯುಳಿಕೆಯ ಏಪ್‌ಗಳು ವಾಸ್ತವಿಕವಾಗಿ ಈಗ ಅಸ್ತಿತ್ವದಲ್ಲಿಲ್ಲ ಎಂದು ಗಿಲ್ಬರ್ಟ್‌ ಹೇಳಿದ್ದಾರೆ. ರಾಮನಗರದಲ್ಲಿ ಬೇರೆ ಬೇರೆ ಏಪ್ ಜಾತಿಗೆ ಸೇರಿದ ತಳಿಗಳ ಪಳೆಯುಳಿಕೆ ಪತ್ತೆಯಾಗಿದೆ. ಆದರೆ ಗಿಬ್ಬನ್‌ನ ಪಳೆಯುಳಿಕೆಗಳು ಇದುವರೆಗೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪತ್ತೆಯಾಗಿರುವ ಪಳೆಯುಳಿಕೆಯ ಛಾಯಾಚಿತ್ರ ತೆಗೆದು ಸಿಟಿ-ಸ್ಕ್ಯಾನ್‌ ನಡೆಸಲಾಗಿದೆ. ಹಲ್ಲಿನ ಅಂಗರಚನಾಶಾಸ್ತ್ರದಲ್ಲಿನ ಪ್ರಮುಖ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಹಾಗೂ ಅಳಿದಿರುವ ಹಾಗೂ ಅಸ್ತಿತ್ವದಲ್ಲಿರುವ ಹಲವು ಮಾದರಿಯ ತಳಿಗಳೊಂದಿಗೆ ತುಲನಾತ್ಮಕ ಮಾದರಿಗಳನ್ನು ಪರೀಕ್ಷಿಸಲಾಯಿತು ಎಂದು ಅವರು ಹೇಳಿದರು.

"ನಾವು ಕಂಡುಕೊಂಡದ್ದು ಏನೆಂದರೆ ಗಿಬ್ಬನ್‌ಗಳೊಂದಿಗೆ 13 ದಶಲಕ್ಷ ವರ್ಷಗಳಷ್ಟು ಹಳೆಯದಾದ ಹಲ್ಲಿನ ನಿಕಟ ಸಂಬಂಧಗಳನ್ನು ನಿರಾಕರಿಸಲಾಗದು, ಹಾಗೂ ಸಂಬಂಧ ಸಾಕಷ್ಟು ಬಲವಾದದ್ದು " ಎಂದು ಸಂಶೋಧನಾ ತಂಡದ ಭಾಗವಾಗಿರುವ ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯ ಅಲೆಜಾಂಡ್ರಾ ಒರ್ಟಿಜ಼್ ಹೇಳಿದ್ದಾರೆ.

ಈಗ, ನಮ್ಮಲ್ಲಿ ಕೇವಲ ಒಂದು ಹಲ್ಲು ಮಾತ್ರ ಇದ್ದರೂ, ಇದು ಒಂದು ಅನನ್ಯ ಆವಿಷ್ಕಾರವಾಗಿದೆ. ಇದು ಗಿಬ್ಬನ್‌ಗಳ ಹಳೆಯ ಪಳೆಯುಳಿಕೆ ದಾಖಲೆಯನ್ನು ಕನಿಷ್ಠ ಐದು ದಶಲಕ್ಷ ವರ್ಷಗಳ ಹಿಂದಕ್ಕೆ ತಳ್ಳುತ್ತದೆ, ಅವುಗಳ ವಿಕಸನೀಯ ಇತಿಹಾಸದ ಆರಂಭಿಕ ಹಂತಗಳಲ್ಲಿ ಹೆಚ್ಚು ಅಗತ್ಯವಿರುವ ನೋಟವನ್ನು ಒದಗಿಸುತ್ತದೆ "ಎಂದು ಒರ್ಟಿಜ್ ತಿಳಿಸಿದ್ದಾರೆ.

ಒರಾಂಗಟುನ್
ಒರಾಂಗಟುನ್orangutan

ಸುಮಾರು 13 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪಳೆಯುಳಿಕೆಯ ವಯಸ್ಸು ಈಗಾಗಲೇ ಲಭ್ಯವಿರುವ ಪ್ರಸಿದ್ಧ ಏಪ್‌ಗಳ ಪಳೆಯುಳಿಕೆಗಳೊಂದಿಗೆ ಸಮಕಾಲೀನವಾಗಿದೆ ಎಂಬುವುದನ್ನು ಸಂಶೋಧಕರು ಗಮನಿಸಿದ್ದಾರೆ. ಲಭಿಸಿರುವ ಸಾಕ್ಷ್ಯವು, ಏಪ್‌ಗಳು ಆಫ್ರಿಕಾದಿಂದ ಏಷಿಯಾ ಖಂಡಕ್ಕೆ ವಲಸೆ ಬಂದ ವಾದವನ್ನು ಪುಷ್ಟೀಕರಿಸುತ್ತದೆ.

"ಈ ಜೈವಿಕ-ಭೌಗೋಳಿಕ ಘಟಕವು ನಿಜವಾಗಿಯೂ ಆಸಕ್ತಿದಾಯಕವಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ" ಎಂದು ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯ ಕ್ರಿಸ್ ಕ್ಯಾಂಪಿಸಾನೊ ಹೇಳಿದ್ದಾರೆ. "ಇಂದು, ಆಗ್ನೇಯ ಏಷ್ಯಾದ ಸುಮಾತ್ರಾ ಮತ್ತು ಬೊರ್ನಿಯೊದಲ್ಲಿ ಗಿಬ್ಬನ್ ಮತ್ತು ಒರಾಂಗುಟಾನ್ ಎರಡನ್ನೂ ಕಾಣಬಹುದು, ಮತ್ತು ಕಂಡುಕೊಂಡಿರುವ ಅತ್ಯಂತ ಹಳೆಯ ಪಳೆಯುಳಿಕೆಯ ಏಪ್‌ಗಳು ಆಫ್ರಿಕಾದಿಂದ ಬಂದವು. ಇವು ಏಷ್ಯಾದಾದ್ಯಂತ ಇದೇ ರೀತಿಯ ವಲಸೆ ಇತಿಹಾಸವನ್ನು ಹೊಂದಿದೆ. ಹಾಗಾಗಿ ಇಂದಿನ ಗಿಬ್ಬನ್‌ನ ಪೂರ್ವಜರು ಆಫ್ರಿಕಾದಿಂದ ಏಷ್ಯಾಕ್ಕೆ ವಲಸೆ ಬಂದ ಇತಿಹಾಸದ ಮೇಲೆ ಈ ಸಂಶೋಧನೆ ಬೆಳಕು ಚೆಲ್ಲಲಿದೆ ” ಎಂದು ಅವರು ತಿಳಿಸಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com