ಅಮಿತ್ ಮಾಳವಿಯ ಪದಚ್ಯುತಿಗೆ ಸುಬ್ರಹ್ಮಣ್ಯನ್ ಸ್ವಾಮಿ ಗಡುವು
ರಾಷ್ಟ್ರೀಯ

ಅಮಿತ್ ಮಾಳವಿಯ ಪದಚ್ಯುತಿಗೆ ಸುಬ್ರಹ್ಮಣ್ಯನ್ ಸ್ವಾಮಿ ಗಡುವು

ಬಿಜೆಪಿ ಐಟಿ ಸೆಲ್‌ ನಕಲಿ ಟ್ವೀಟ್‌ಗಳ ಮೂಲಕ ತಮ್ಮ ವಿರುದ್ದ ಅಭಿಯಾನ ಆರಂಭಿಸಿದೆ ಎಂದು ಆರೋಪಿಸಿದ್ದ ಸುಬ್ರಹ್ಮಣ್ಯನ್‌ ಸ್ವಾಮಿ, ಅಮಿತ್‌ ಮಾಳವಿಯ ಅವರನ್ನು ಐಟಿ ಸೆಲ್‌ ಮುಖ್ಯಸ್ಥ ಹುದ್ದೆಯಿಂದ ತೆಗೆದು ಹಾಕಲು ಗಡುವು ನೀಡಿದ್ದಾರೆ.

ಪ್ರತಿಧ್ವನಿ ವರದಿ

ನಕಲಿ ಟ್ವೀಟ್‌ಗಳ ಮೂಲಕ ಬಿಜೆಪಿ ನಾಯಕ ಹಾಗೂ ಸಂಸದ ಸುಬ್ರಹ್ಮಣ್ಯನ್‌ ಸ್ವಾಮಿ ಅವರ ವಿರುದ್ದ ಅಭಿಯಾನ ಆರಂಭಿಸಿದ್ದ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್‌ ಮಾಳವಿಯ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಸುಬ್ರಹ್ಮಣ್ಯನ್‌ ಸ್ವಾಮಿ ಬಿಜೆಪಿಗೆ ಗಡುವು ನೀಡಿದ್ದಾರೆ. ನಾಳೆ (ಗುರುವಾರ) ಒಳಗಾಗಿ ಅಮಿತ್‌ ಮಾಳವೀಯ ಅವರನ್ನು ಐಟಿ ಸೆಲ್‌ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಬೇಕು ಎಂದು ತಾಕೀತು ನೀಡಿದ್ದಾರೆ.

“ಒಂದು ವೇಳೆ ಬಿಜೆಪಿಯ ನಾಯಕರು ಅಮಿತ್‌ ಮಾಳವಿಯ ಅವರನ್ನು ಐಟಿ ಸೆಲ್‌ನಿಂದ ತೆಗೆದು ಹಾಕದಿದ್ದಲ್ಲಿ, ನನ್ನನ್ನು ಬೆಂಬಲಿಸಲು ಅವರಿಗೆ ಇಷ್ಟವಿಲ್ಲವೆಂದು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಹಾಗಾದರೆ, ನನ್ನ ಪರವಾಗಿ ನಾನೊಬ್ಬನೇ ನಿಲ್ಲುತ್ತೇನೆ,” ಎಂದು ಅವರು ಟ್ವೀಟ್‌ ಮೂಲಕ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪಕ್ಷದಲ್ಲಿ ಈ ಕುರಿತಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಲು ಯಾವುದೇ ವೇದಿಕೆ ಇಲ್ಲದಿದ್ದಲ್ಲಿ, ನನ್ನನ್ನು ನಾನೇ ಬೆಂಬಲಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.

ಇದಕ್ಕೂ ಹಿಂದೆ, ಬಿಜೆಪಿಯ ಐಟಿ ಸೆಲ್‌ ರಾಕ್ಷಸೀಕರಣಗೊಂಡಿದೆ ಎಂದು ಸುಬ್ರಹ್ಮಣ್ಯನ್‌ ಸ್ವಾಮಿ ಟ್ವೀಟ್‌ ಮಾಡಿದ್ದರು. “ಅದರ ಕೆಲವು ಸದಸ್ಯರು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲು ನಕಲಿ ಐಡಿಯ ಮೂಲಕ ಟ್ವೀಟ್‌ಗಳನ್ನು ಹಾಕುತ್ತಿದ್ದಾರೆ. ಕೋಪಗೊಂಡ ನನ್ನ ಅನುಯಾಯಿಗಳು ವೈಯಕ್ತಿಕ ದಾಳಿಗಳನ್ನು ಮಾಡಿದರೆ ನಾನು ಹೊಣೆಗಾರನಾಗುವುದಿಲ್ಲ" ಎಂದು ಸ್ವಾಮಿ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದರು.

ಈ ವಿಚಾರವನ್ನು ಪರಿಹರಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಕೂಡಾ ಕೇಳಿಕೊಂಡಿದ್ದರು. ಆದರೆ, ಯಾವುದೇ ಪರಿಹಾರ ಸಿಗದಿದ್ದ ಕಾರಣಕ್ಕೆ ಈಗ ಬಿಜೆಪಿ ಹೈಕಮಾಂಡ್‌ಗೇ ಗಡುವು ನೀಡುವ ಮಟ್ಟಕ್ಕೆ ಈ ವಿವಾದ ತಲುಪಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com