ಕಂಗನಾ ಬಂಗಲೆಯ ಅನಧಿಕೃತ ಭಾಗವನ್ನು ತೆರವುಗೊಳಿಸಿದ BMC
ರಾಷ್ಟ್ರೀಯ

ಕಂಗನಾ ಬಂಗಲೆಯ ಅನಧಿಕೃತ ಭಾಗವನ್ನು ತೆರವುಗೊಳಿಸಿದ BMC

ಮುಂಬಯಿ ಅನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಕರೆದ ಕಂಗನಾ ರಾಣಾವತ್‌ ಅವರ ಮುಂಬಯಿನಲ್ಲಿರುವ ʼಮಣಿಕರ್ಣಿಕಾʼ ಕಚೇರಿಯ ಅನಧಿಕೃತ ಭಾಗವನ್ನು BMC ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಕಂಗನಾ ಖಾರವಾಗಿಪ್ರತಿಕ್ರಿಯಿಸಿದ್ದಾರೆ.

ಪ್ರತಿಧ್ವನಿ ವರದಿ

ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಅವರ ಮುಂಬಯಿ ಬಂಗಲೆಯ ಕೆಲವು ಭಾಗ ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ಬೃಹನ್ಮುಂಬಯಿ ಮುನಿಸಿಪಲ್‌ ಕಾರ್ಪೊರೇಷನ್‌ (BMC)ಯ ಅಧಿಕಾರಿಗಳು ಅನಧಿಕೃತ ಭಾಗವನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಶಿವಸೇನೆಯ ವಿರುದ್ದ ಮಾತನಾಡಿದ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ತಮ್ಮನ್ನು ಗುರಿಯಾಗಿಸುತ್ತಿದೆ ಎಂದು ಕಂಗನಾ ದೂರಿದ್ದಾರೆ.

ಮುಂಬಯಿನಲ್ಲಿ ಇರಲು ಭಯವಾಗುತ್ತದೆ. ಮುಂಬಯಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತಾಗಿದೆ ಎಂಬ ಕಂಗನಾ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಮುಂಬಯಿ ಪೊಲೀಸರ ಮೇಲೆ ನಂಬಿಕೆಯಿಲ್ಲ ಎಂದು ಅವರು ಹೇಳಿದ್ದರು. ವಿವಾದಿತ ಪಿಒಕೆ ಹೇಳಿಕೆಗಾಗಿ ಅವರಿಗೆ ಸಾಕಷ್ಟು ಜೀವ ಬೆದರಿಕೆಗಳು ಬಂದಿದ್ದ ಕಾರಣಕ್ಕಾಗಿ ಕೇಂದ್ರ ಗೃಹ ಇಲಾಖೆ ಅವರಿಗೆ Y+ ಭದ್ರತೆಯನ್ನು ನೀಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈಗ ಮನೆಯ ಅನಧಿಕೃತ ಭಾಗವನ್ನು ಕೆಡವಲಾಗುತ್ತಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಸಿ ಕಾರ್ಯನಿರ್ವಾಹ ಇಂಜಿನಿಯರ್ “ತಮ್ಮ ಬಂಗಲೆಯ ಅನಧಿಕೃತ ಭಾಗದ ಕುರಿತಾಗಿ ಬಿಎಂಸಿಯಿಂದ ಪಡೆದ ಪರವಾನಿಗೆಯನ್ನು ಸಲ್ಲಿಸಲು ಕಂಗನಾ ಅವರಿಗೆ ಸಮಯ ನೀಡಲಾಗಿತ್ತು. ಆದರೆ, ಅವರು ಯಾವುದೇ ದಾಖಲೆಗಳನ್ನು ನೀಡಲಿಲ್ಲ. ಅದಾದ ಬಳಿಕ ಅವರಿಗೆ ನೋಟೀಸ್‌ ಕೂಡಾ ನೀಡಲಾಗಿತ್ತು. ಕಂಗನಾ ಬಂಗಲೆಯ ಸಿಬ್ಬಂದಿಗಲು ನೋಟೀಸ್‌ ಪಡೆಯಲು ನಿರಾಕರಿಸಿದ್ದರಿಂದ, ಅದನ್ನು ಅವರ ಮನೆಯ ಗೇಟಿನ ಹೊರಗಡೆ ಅಂಟಿಸಲಾಗಿತ್ತು. 24 ಗಂಟೆಯ ಒಳಗಾಗಿ ಅನಧಿಕೃತ ಕೆಲಸಗಳನ್ನು ನಿಲ್ಲಿಸಲು ನೋಟೀಸ್‌ನಲ್ಲಿ ಸೂಚಿಸಲಾಗಿತ್ತು,” ಎಂದು ಅವರು ಹೇಳಿದ್ದಾರೆ.

ಘಟನೆಯ ಕುರಿತು ಟ್ವಿಟರ್‌ನಲ್ಲಿ ʼಪಾಕಿಸ್ತಾನ್‌ʼ ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ ಬಾಬರ್‌ ಮತ್ತು ಅವನ ಸೇನೆ ಎಂದು ಮುಂಬಯಿ ಮುನಿಸಿಪಾಲ್‌ ಕಾರ್ಪೊರೇಷನ್‌ನ ಸಿಬ್ಬಂದಿಗಳ ಫೋಟೋವನ್ನು ಹಾಕಿದ್ದಾರೆ. “ನಾನೇನು ತಪ್ಪು ಮಾಡಿಲ್ಲ. ನನ್ನ ಶತ್ರುಗಳು ಮುಂಬಯಿ ಏಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ," ಎಂದು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ. ಇದರೊಂದಿಗೆ, #deathofdemocracy (ಪ್ರಜಾಪ್ರಭುತ್ವದ ಸಾವು) ಎಂಬ ಹ್ಯಾಷ್‌ಟ್ಯಾಗ್‌ ಬಳಸಿಕೊಂಡಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com