ಹತ್ತು ಕಾಶ್ಮೀರಿ ಯುವಕರ ಮೇಲೆ UAPA ದಾಖಲಿಸಲು ಕಾರಣವಾದ ಒಂದು ಕ್ರಿಕೆಟ್ ಪಂದ್ಯ
ರಾಷ್ಟ್ರೀಯ

ಹತ್ತು ಕಾಶ್ಮೀರಿ ಯುವಕರ ಮೇಲೆ UAPA ದಾಖಲಿಸಲು ಕಾರಣವಾದ ಒಂದು ಕ್ರಿಕೆಟ್ ಪಂದ್ಯ

ಜಮ್ಮು ಕಾಶ್ಮೀರದಲ್ಲಿ ಮೊದಲಿನಿಂದಲೂ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಮಾನವ ಹಕ್ಕು ಹೋರಾಟಗಾರರು ಆರೋಪಿಸುತಿದ್ದಾರೆ. ಅದರ ಜೊತೆಗೆ ಪೊಲೀಸ್‌ ದೌರ್ಜನ್ಯ ಪ್ರಕರಣಗಳು ಕೇಳಿಬರುತ್ತಿದೆ. ಪ್ರಸ್ತುತ, 10 ಕ್ರಿಕೆಟಿಗರ ಮೇಲೆ UAPA ಪ್ರಕರಣದಡಿಯಲ್ಲಿ ಬಂಧಿಸಿದ್ದು ಸಾಕಷ್ಟು ಚರ್ಚೆಗೆ ಒಳಗಾಗಿವೆ.

ಕೋವರ್ ಕೊಲ್ಲಿ ಇಂದ್ರೇಶ್

ಜಮ್ಮು ಕಾಶ್ಮೀರವು ದಶಕಗಳಿಂದಲೂ ಒಂದಿಲ್ಲೊಂದು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ರಾಜ್ಯವಾಗಿದೆ. ಕಳೆದ ಆಗಸ್ಟ್‌ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ಸ್ವಾತಂತ್ರ್ಯಾ ನಂತರದಿಂದಲೂ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದು ಗೊಳಿಸುವ ಮೂಲಕ ದೊಡ್ಡ ಮಟ್ಟದ ಸುದ್ದಿ ಆಯಿತು. ಜಮ್ಮು ಕಾಶ್ಮೀರವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವ ಬೆನ್ನಲ್ಲೇ ರಾಜ್ಯದ ಆಡಳಿತದಲ್ಲೂ ಸಾಕಷ್ಟು ಬದಲಾವಣೆ ಆಗುತ್ತಿದೆ.

ಜಮ್ಮು ಕಾಶ್ಮೀರದಲ್ಲಿ ಮೊದಲಿನಿಂದಲೂ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಮಾನವ ಹಕ್ಕು ಹೋರಾಟಗಾರರು ಆರೋಪಿಸುತಿದ್ದಾರೆ. ಅದರ ಜೊತೆಗೆ ಪೊಲೀಸ್‌ ದೌರ್ಜನ್ಯ ಪ್ರಕರಣಗಳು ಕೇಳಿಬರುತ್ತಿದೆ. ಪ್ರಸ್ತುತ, 10 ಕ್ರಿಕೆಟಿಗರ ಮೇಲೆ UAPA ಪ್ರಕರಣದಡಿಯಲ್ಲಿ ಬಂಧಿಸಿದ್ದು ಸಾಕಷ್ಟು ಚರ್ಚೆಗೆ ಒಳಗಾಗಿವೆ.

ಜಮ್ಮು ಕಾಶ್ಮೀರದಲ್ಲಿ ಕ್ರಿಕೆಟ್‌ ಆಟಗಾರರ ಮೇಲೆ ಪೋಲೀಸ್‌ ಅತಿರೇಕದ ಪ್ರಕರಣವೊಂದು ವರದಿ ಆಗಿದೆ. ಕಾಶ್ಮೀರದಲ್ಲಿ ಭಯೋತ್ಪಾದಕನನ್ನು ವೈಭವೀಕರಿಸಿದ ಆರೋಪದ ಮೇಲೆ ಶೊಪಿಯಾನ್‌ ಜಿಲ್ಲೆಯ ಕ್ರಿಕೆಟ್‌ ತಂಡದ ಹತ್ತು ಯುವಕರ ಮೇಲೆ UAPA (Unlawful Activities Prevention Act) ನಂತ ಕಠಿಣ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನೆಲ್ಲ ಈಗಲೂ ಬಂಧನದಲ್ಲಿ ಇರಿಸಲಾಗಿದೆ.

ಭಯೋತ್ಪಾದಕನೊಬ್ಬನ ಗೋರಿಯ ಪಕ್ಕ ನಿಂತು ಫೋಟೋ ತೆಗೆಸಿಕೊಂಡಿದ್ದು ಈ ಯುವಕರ ಬಂಧನಕ್ಕೆ ಕಾರಣವಾಗಿದೆ. ಈ ಫೋಟೋ ಕಾಶ್ಮೀರದ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಅಗಿದೆ. ಈ ಫೋಟೋವನ್ನು ಕಳೆದ ಆಗಸ್ಟ್‌ 3 ರಂದು ತೆಗೆಯಲಾಗಿದ್ದು ಶೋಪಿಯಾನ್‌ ಜಿಲ್ಲೆಯ ಪಾಶ್ಪೋರ ಗ್ರಾಮದ ಯುವಕರ ಕ್ರಿಕೆಟ್‌ ತಂಡವು ಪಂದ್ಯದಲ್ಲಿ ಜಯಗಳಿಸಿದ ನಂತರ ಗ್ರಾಮಕ್ಕೆ ಮರಳುವಾಗ ನಜೊಂಪೋರ ಎಂಬಲ್ಲಿ ಭಯೋತ್ಪಾದಕ ನಾಯಕನ ಗೋರಿಯ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡಿತ್ತು. ಇದೇ ಕಾರಣಕ್ಕೆ ಪೋಲೀಸರು UAPA ಅಡಿ ಪ್ರಕರಣ ದಾಖಲಿಸಿದ್ದಾರೆ.

ಇದೊಂದೇ ಅಲ್ಲ, 2019 ರಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಸಯ್ಯದ್‌ ರುಬಾನಿ ಎಂಬಾತನ ಹೆಸರಿದ್ದ ಟಿ ಶರ್ಟ್‌ ನ್ನು ಕ್ರಿಕೆಟ್‌ ಆಟಗಾರರಿಗೆ ವಿತರಿಸಿದ ಆರೋಪವನ್ನು ಇಮ್ರಾನ್‌ ಎಂಬಾತನ ಮೇಲೆ ಹೊರಿಸಿ ಬಂಧಿಸಲಾಗಿದೆ. ಈ ಭಯೋತ್ಪಾದಕನು ಕ್ರಿಕೆಟ್‌ ತಂಡದ ಆಟಗಾರನೊಬ್ಬನ ಸಹೋದರನಾಗಿದ್ದು, ಮುಸ್ಲಿಮರು ಮೃತ ಪಟ್ಟವರ ಗೋರಿಯ ಬಳಿ ನಿಂತು ಫತೇ ಕವ್ಹಾನಿ ಪ್ರಾರ್ಥನೆ ಮಾಡುವುದು ವಾಡಿಕೆಯಾಗಿದೆ ಎಂದು ಬಂಧಿಸಲ್ಪಟ್ಟ ಕ್ರಿಕೆಟ್‌ ಆಟಗಾರನೊಬ್ಬನ ತಂದೆ ಫರೂಕ್‌ ವಾನಿ ಹೇಳುತ್ತಾರೆ. ಈ ಪ್ರಕರಣವು ಜಮ್ಮು ಕಾಶ್ಮೀರದಲ್ಲಿ ಪ್ರಮುಖ ಸುದ್ದಿಯಾಗಿದ್ದು ಸಾಮಾಜಿಕ ತಾಣಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕ್ರಿಕೆಟ್‌ ಆಟಗಾರರ ತಂಡದವರೆಲ್ಲರೂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ ಮತ್ತು ಈತನಕವೂ ಯಾವುದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿಲ್ಲ ಎಂಬುದು ಮುಖ್ಯವಾದ ವಿಷಯ. ಈ ಪ್ರಕರಣದಲ್ಲಿ ಕೊನೆಯದಾಗಿ ಕಳೆದ ಸೆಪ್ಟೆಂಬರ್‌ 4 ರಂದು ಬಂಧನಕ್ಕೊಳಗಾದುದು ಇಮ್ರಾನ್ ಎಂಬ ಯುವಕ . ಶ್ರೀನಗರದ ಜವಾಹರ್ ನಗರ ಪ್ರದೇಶದ ಬಾಡಿಗೆ ಮನೆಯಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈತನನ್ನು ಬಂಧಿಸಿದರು. ನಂತರ ಪೋಷಕರು ಪೋಲೀಸರ ಬಳಿ ವಿಚಾರಿಸಿದಾಗ ಪೋಲೀಸ್‌ ಅಧಿಕಾರಿಯೊಬ್ಬರು ತಮ್ಮ ಭಯೋತ್ಪಾದನಾ-ವಿರೋಧಿ ಕಾನೂನಿನಡಿಯಲ್ಲಿ ಪ್ರಕರಣವು ‘ಅವರ ಕೈಯಿಂದ ಹೊರಗಿದೆ’ ಎಂದು ತಿಳಿಸಿದ್ದಾರೆ.

ನಾಜಿಂಪೊರಾ ಗ್ರಾಮದ ನಿವಾಸಿ ಹುಸೇನ್, ಬಂಧನದಲ್ಲಿರುವ ತಮ್ಮ ಮಗನ ಬಿಡುಗಡೆಗಾಗಿ ಕಳೆದ ಎರಡು ದಿನಗಳಿಂದ ಸಹಾಯಕ್ಕಾಗಿ ತಮ್ಮ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಮೊರೆ ಹೋಗುತ್ತಿದ್ದಾರೆ. ಬಂಧಿಸಲ್ಪಟ್ಟ ಮಾಜಿ ವಿದ್ಯಾರ್ಥಿ ಕಾರ್ಯಕರ್ತ ಇಮ್ರಾನ್ ಚಂಡೀಗಢ ಕಾಲೇಜಿನಿಂದ ಎಂಬಿಎ ಪಡೆದಿದ್ದಾರೆ. ಸೇಬು ಕೃಷಿಕ ಹುಸೇನ್ ಪ್ರಕಾರ, (ಕ್ರಿಕೆಟ್) ತಂಡದ ಸದಸ್ಯರು ರುಬಾನಿಯ ಸಮಾಧಿಯಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ. ಅವರು ಸಮವಸ್ತ್ರವನ್ನು ಖರೀದಿಸಲು ಶಕ್ತರಾಗಿರಲಿಲ್ಲ, ಆದ್ದರಿಂದ ಇಮ್ರಾನ್ ಅದನ್ನು ಅವರಿಗಾಗಿ ಖರೀದಿಸಿದ್ದಾರೆ ಎಂದು ಅವರು ಹೇಳಿದರು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಯುವಕರನ್ನು ಉತ್ತೇಜಿಸಲು ಇಮ್ರಾನ್ ಸಮವಸ್ತ್ರವನ್ನು ವಿತರಿಸಿದ್ದಾರೆ ಎಂದು ಹುಸೇನ್ ಹೇಳಿದರು.

ಸೈಯದ್‌ ರುಬಾನಿ ಹೆಸರಿರುವ ಕ್ರಿಕೆಟ್‌ ಜೆರ್ಸಿ
ಸೈಯದ್‌ ರುಬಾನಿ ಹೆಸರಿರುವ ಕ್ರಿಕೆಟ್‌ ಜೆರ್ಸಿಕೃಪೆ: ದಿ ಕ್ವಿಂಟ್

ಇತ್ತೀಚೆಗೆ ಯಾರೋ ಒಬ್ಬರು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ ಮತ್ತು ಅದು ವೈರಲ್ ಆಗಿದೆ. ಆತನನ್ನು ಏಕೆ ಬಂಧಿಸಲಾಗಿದೆ ಎಂದು ನಮಗೆ ತಿಳಿದಿಲ್ಲ. ಸತ್ತ ಸಹೋದರನಿಗಾಗಿ ಪ್ರಾರ್ಥಿಸುವ ಮೂಲಕ ಅವನು ಅಪರಾಧ ಮಾಡಿದ್ದಾನೆಯೇ? ಎಂದು ಅವರು ತಮ್ಮನ್ನು ಸಂದರ್ಶಿಸಿದ ಪತ್ರಕರ್ತನನ್ನು ಪ್ರಶ್ನಿಸಿದರು. ಶ್ರೀನಗರದ ಕೋತಿ ಬಾಗ್ ಪೊಲೀಸ್ ಠಾಣೆಯ ತಂಡವೊಂದು ಬುಧವಾರ ರಾತ್ರಿ ಇಮ್ರಾನ್ ಅವರನ್ನು ಬಂಧಿಸಿತ್ತು. ಇಮ್ರಾನ್ ಅವರ ಸಹೋದರಿ ಸೈಯದ್ ಆಲಿಯಾ ಅವರ ಸ್ನೇಹಿತರೊಬ್ಬರು ಬಂಧನದ ಬಗ್ಗೆ ಮಾಹಿತಿ ನೀಡಿದ ನಂತರ ಅವರು ಈ ಸುದ್ದಿಯನ್ನು ಪೋಷಕರಿಗೆ ತಿಳಿಸಿದರು. ʼಈ ಪಂದ್ಯವನ್ನು ಆಡಿ ಸುಮಾರು ಒಂದು ತಿಂಗಳಾಗಿದೆ. ಈಗ ಅದು ಏಕೆ ಸಮಸ್ಯೆಯಾಗಿದೆ? ನಾನು ಈಗಾಗಲೇ ಒಬ್ಬ ಸಹೋದರನನ್ನು ಕಳೆದುಕೊಂಡಿದ್ದೇನೆ. ಈಗ ಅವನನ್ನು ಶಿಕ್ಷಿಸುವ ಮೂಲಕ ಅವರು ಏನು ಸಾಧಿಸಲು ಬಯಸುತ್ತಾರೆ?ʼ ಎಂದು ಆಲಿಯಾ ಕೇಳುತ್ತಾರೆ. ಇಮ್ರಾನ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ 100 ಯುವಕರಿಗೆ ಕ್ರಿಕೆಟ್ ಸಮವಸ್ತ್ರಗಳನ್ನು "ತನ್ನ ಸಹೋದರನ ಪ್ರೀತಿಯ ಸ್ಮರಣೆಯಲ್ಲಿ ವಿತರಿಸಿದ್ದೇನೆ” ಎಂದು ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಉಗ್ರರಿಗೆ ಸಂಬಂಧಿಸಿದ ವಸ್ತುಗಳನ್ನು ವಿತರಿಸುವುದು ಅಥವಾ ಪ್ರಸಾರ ಮಾಡುವುದು, ಉಗ್ರಗಾಮಿತ್ವವನ್ನು ಪ್ರಚೋದಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. "ಅಂತಹ ಕೃತ್ಯಗಳನ್ನು ಸಹಿಸಲಾಗುವುದಿಲ್ಲ" ಎಂದು ಅಧಿಕಾರಿ ಹೇಳುತ್ತಾರೆ. ಶೋಪಿಯಾನ್‌ನ ಹಿರಿಯ ವಕೀಲ ಹಬೀಲ್ ಇಕ್ಬಾಲ್, ಕ್ರಿಕೆಟ್ ಗೆಲುವನ್ನು ಆಚರಿಸಿದ ಯುವ ಹುಡುಗರ ವಿರುದ್ಧ ಯುಎಪಿಏ ಕಾಯ್ದೆಯನ್ನು ಬಳಸುವುದು ಅಪಾಯಕಾರಿ ಎಂದು ಹೇಳುತ್ತಾರೆ. ಕ್ಷುಲ್ಲಕ ಆಚರಣೆಯ ಮೇಲೆ ಭಯೋತ್ಪಾದನಾ-ವಿರೋಧಿ ಕಾನೂನನ್ನು ಬಳಸುವುದು ಹೆಚ್ಚು ತಾರತಮ್ಯ ಮತ್ತು ದಬ್ಬಾಳಿಕೆಯಾಗಿದೆ. ಬಂಧಿತರಿಗೆ ಈ ಕಾಯ್ದೆಯಡಿಯಲ್ಲಿ ಜಾಮೀನು ಪಡೆಯುವುದು ಕಷ್ಟದ ಕೆಲಸ ಎಂದೂ ಅವರು ಹೇಳಿದರು. ಒಟ್ಟಿನಲ್ಲಿ ಪೋಲೀಸರ ಕ್ರಮವನ್ನು ನ್ಯಾಯಾಲಯವು ಪರಿಶೀಲನೆಗೊಳಪಡಿಸಿದರೆ ಯುವಕರಿಗೆ ನ್ಯಾಯ ದೊರೆಯಲಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com