ಕೇರಳದ ಈ ಗ್ರಾಮದಲ್ಲಿ ದಲಿತರ ಕ್ಷೌರ ಮಾಡಲು ಸಲೂನ್‌ಗಳಿಲ್ಲ..!
ರಾಷ್ಟ್ರೀಯ

ಕೇರಳದ ಈ ಗ್ರಾಮದಲ್ಲಿ ದಲಿತರ ಕ್ಷೌರ ಮಾಡಲು ಸಲೂನ್‌ಗಳಿಲ್ಲ..!

ತೆಂಗಿನ ಚಿಪ್ಪುಗಳಲ್ಲಿ ಆಹಾರವನ್ನು ಬಡಿಸುವುದು ಅಥವಾ ಚಹಾ ಅಂಗಡಿಗಳಲ್ಲಿ ದಲಿತರಿಗೆ ಪ್ರತ್ಯೇಕ ಟಂಬ್ಲರ್‌ಗಳನ್ನು ಇಡುವುದು ಮುಂತಾದ ವಿಲಕ್ಷಣ ಪದ್ಧತಿಗಳು 90 ರ ದಶಕದವರೆಗೆ ವಟ್ಟವಾಡದಲ್ಲಿ ಅಸ್ತಿತ್ವದಲ್ಲಿದ್ದವು.

ಪ್ರತಿಧ್ವನಿ ವರದಿ

ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಇಡುಕಿಯ ವಟ್ಟವಡ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ಒಂದೇ ಒಂದು ಸಲೂನ್‌ ಕೂಡಾ ಇಲ್ಲ. ಗ್ರಾಮದಲ್ಲಿರುವ ಸಲೂನ್‌ಗಳು ತನ್ನ ಸೇವೆಗಳನ್ನು ದಲಿತರಿಗೆ ನಿರಾಕರಿಸಿದೆ. ಈ ಹಳ್ಳಿಯ ಉನ್ನತ ಜಾತಿಗೆ ಸೇರಿದವರು ತಾವು ಭೇಟಿ ನೀಡುವ ಸಲೂನ್‌ಗಳಲ್ಲಿ ದಲಿತರಿಗೆ ಸೇವೆ ನೀಡಬಾರದೆಂದು ತಾಕೀತು ಪಡಿಸಿರುವುದರಿಂದ ದಲಿತರಿಗೆ ಯಾವ ಸಲೂನ್‌ಗಳೂ ಸೇವೆ ನೀಡುತ್ತಿಲ್ಲ.

"ಗ್ರಾಮದ ಕ್ಷೌರಿಕರು ಮೇಲ್ಜಾತಿಯವರ ಒತ್ತಡಕ್ಕೆ ಒಳಗಾಗಿದ್ದಾರೆ” ಎಂದು ಮೂಲಗಳು ತಿಳಿಸಿವೆ. ತಮಿಳು ಜನರು ಪ್ರಾಬಲ್ಯ ಹೊಂದಿರುವ ವಟ್ಟವಡದಲ್ಲಿ ಈ ಪದ್ಧತಿ ಸಾಮಾನ್ಯವಾಗಿದೆ. ನೆರೆಯ ತಮಿಳುನಾಡಿನಲ್ಲಿ ಆಚರಿಸುವ ಪ್ರಾಚೀನ ಪದ್ಧತಿಗಳನ್ನು ಇಲ್ಲಿ ಹೆಚ್ಚು ಅನುಸರಿಸಲಾಗುತ್ತದೆ. ದಲಿತರು ಕೂಡ ಇದರ ವಿರುದ್ಧ ಈ ಹಿಂದೆ ಯಾವುದೇ ಗಟ್ಟಿ ಧ್ವನಿ ಎತ್ತಿರಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತ್ತೀಚೆಗೆ ಗ್ರಾಮದ ಕೆಲವು ದಲಿತ ಯುವಕರು ಇಂತಹ ತಾರತಮ್ಯದ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಆದರೆ ಕ್ಷೌರಿಕರು ದಲಿತರ ಕ್ಷೌರ ಮಾಡಲು ನಿರಾಕರಿಸಿದ್ದಾರೆ. ಮತ್ತು ದಲಿತರ ಕೂದಲನ್ನು ಕತ್ತರಿಸುವುದಕ್ಕಿಂತ ತಮ್ಮ ಅಂಗಡಿಗಳನ್ನು ಮುಚ್ಚಲು ಅವರು ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಅಂತಿಮವಾಗಿ, ಇದೇ ಕಾರಣಕ್ಕೆ ವಟ್ಟವಾಡದಲ್ಲಿ ಎರಡು ಕ್ಷೌರ ಅಂಗಡಿಗಳನ್ನು ಐದು ತಿಂಗಳ ಹಿಂದೆ ಪಂಚಾಯತ್ ಅಧಿಕಾರಿಗಳು ಮುಚ್ಚಿಸಿದ್ದರು. ಅದಾಗ್ಯೂ ಹಳ್ಳಿಯ ದಲಿತ ಪುರುಷರು ಹತ್ತಿರದ ಮುನ್ನಾರ್ ಅಥವಾ ಎಲ್ಲಪ್ಪೆಟ್ಟಿಯ ಪಟ್ಟಣದ ಸಲೂನ್‌ಗಳಿಗೆಯೇ ಕೂದಲು ಕತ್ತರಿಸಲು ಹೋಗಬೇಕಿದೆ.

ಈ ಹಿಂದೆ, ತೆಂಗಿನ ಚಿಪ್ಪುಗಳಲ್ಲಿ ಆಹಾರವನ್ನು ಬಡಿಸುವುದು ಅಥವಾ ಚಹಾ ಅಂಗಡಿಗಳಲ್ಲಿ ದಲಿತರಿಗೆ ಪ್ರತ್ಯೇಕ ಟಂಬ್ಲರ್‌ಗಳನ್ನು ಇಡುವುದು ಮುಂತಾದ ವಿಲಕ್ಷಣ ಪದ್ಧತಿಗಳು 90 ರ ದಶಕದವರೆಗೆ ವಟ್ಟವಾಡದಲ್ಲಿ ಅಸ್ತಿತ್ವದಲ್ಲಿದ್ದವು. ಸ್ಥಳೀಯ ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಜಂಟಿ ಪ್ರಯತ್ನಗಳಿಂದಾಗಿ ಪದ್ಧತಿಗಳನ್ನು ಕೊನೆಗೊಳಿಸಲಾಗಿತ್ತು.

ವಟ್ಟವಡದಲ್ಲಿ ಚಕ್ಲಿಯಾ ಸಮುದಾಯದಿಂದ 270 ಕುಟುಂಬಗಳಿವೆ ಮತ್ತು ಉಳಿದವರು ಮನ್ನಡಿಯಾರ್, ಮರಾವರ್, ತೇವರ್ ಮತ್ತು ಚೆಟ್ಟಿಯಾರ್ ಸಮುದಾಯಗಳಿಗೆ ಸೇರಿದವರು.

ವಟ್ಟವಡ ಪಂಚಾಯತ್ ಅಧ್ಯಕ್ಷ ರಾಮರಾಜ್ "ವಟ್ಟವಾಡದಲ್ಲಿ ಸುಮಾರು ಒಂದು ಶತಮಾನದಿಂದ ಕೆಳಜಾತಿಯ ಪುರುಷರು ಪ್ರತ್ಯೇಕ ಸಲೊನ್‌ಗಳಲ್ಲಿ ಕೂದಲು ಕತ್ತರಿಸುವ ಪದ್ಧತಿ ಜಾರಿಯಲ್ಲಿದೆ. ಆದರೆ ಕೆಲವು ದಲಿತ ಯುವಕರ ಕೋರಿಕೆಯಂತೆ, ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಾವು ಸಮುದಾಯ ಪ್ರತಿನಿಧಿಗಳೊಂದಿಗೆ ಇತ್ತೀಚೆಗೆ ಸಭೆ ಕರೆದಿದ್ದೇವೆ. ಆದರೆ ಕ್ಷೌರಿಕರು ಚಕ್ಲಿಯಾ ಸಮುದಾಯದ ಜನರ ಕೂದಲನ್ನು ಕತ್ತರಿಸುವುದಿಲ್ಲ ಎಂದು ಅಚಲರಾಗಿ ನಿಂತಿದ್ದಾರೆ. ಹೀಗಾಗಿ ಎರರಡು ಸಲೂನ್‌ಗಳನ್ನು ಮುಚ್ಚಲಾಯಿತು "ಎಂದು ಹೇಳಿದ್ದಾರೆ.

ಜಾತಿ ತಾರತಮ್ಯವನ್ನು ನಿಗ್ರಹಿಸಲು ರಾಮರಾಜ್ ಅವರು ಶೀಘ್ರದಲ್ಲೇ ಕೋವಿಲೂರ್‌ನ ಬಸ್ ನಿಲ್ದಾಣದ ಬಳಿ ಪಂಚಾಯತ್ ಸಾರ್ವಜನಿಕ ಸಲೂನ್ ತೆರೆಯಲಿದ್ದು, ಅಲ್ಲಿ ಎಲ್ಲಾ ಸಮುದಾಯದ ಪುರುಷರು ಕೂದಲು ಕತ್ತರಿಸಿಕೊಳ್ಳಬಹುದು. ಉನ್ನತ-ಜಾತಿಯ ಪುರುಷರು ಸಾರ್ವಜನಿಕ ಸಲೂನ್‌ಗಳಿಂದ ದೂರವಿರುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದ್ದರೂ, ರಾಮರಾಜ್ ಸೇರಿದಂತೆ ಕೆಲವು ಮೇಲ್ಜಾತಿಯ ಜನರು ಸಾರ್ವಜನಿಕ ಸಲೂನ್‌ನಲ್ಲಿ ತಮ್ಮ ಕೂದಲನ್ನು ಕತ್ತರಿಸುತ್ತಾರೆ, ಇದರಿಂದ ಇತರರು ಅನುಕರಿಸಲು ಇದು ಮಾದರಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ವಟ್ಟವಡದಲ್ಲಿರುವ ಕ್ಷೌರಿಕ ಸಮುದಾಯದಿಂದ ಪ್ರಗತಿಪರ ಚಿಂತನೆಯಿರುವ ಕ್ಷೌರಿಕನನ್ನು ಹೊಸ ಸಲೂನ್‌ನಲ್ಲಿ ನೇಮಿಸಲು ಪಂಚಾಯತ್ ನಿರ್ಧರಿಸಿದೆ, ಇದರಿಂದಾಗಿ ಅವರ ಸಮುದಾಯದ ಇತರರು ತಮ್ಮ ಮನಸ್ಥಿತಿಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ ಎಂದು ಪಂಚಾಯತ್‌ ನಂಬಿದೆ.

"ಪಂಚಾಯತ್ ವಿವಿಧ ಸಮುದಾಯ ಕಾರ್ಯಕ್ರಮಗಳನ್ನು ಸಹ ಕೈಗೊಳ್ಳುತ್ತಿದೆ, ಅಲ್ಲಿ ಮೇಲ್ಜಾತಿಯವರು ಮತ್ತು ದಲಿತರು ಒಟ್ಟಿಗೆ ತಿನ್ನಲು, ಕುಡಿಯಲು ಮತ್ತು ಒಟ್ಟಿಗೆ ಕುಳಿತು ಅಧ್ಯಯನ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಇದು ನಿಧಾನ ಪ್ರಕ್ರಿಯೆ ಮತ್ತು ನಾವು ಈ ಸಮಸ್ಯೆಯನ್ನು ನಿವಾರಿಸಲು ನಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದು ರಾಮರಾಜ್ ಹೇಳಿದ್ದಾರೆ.

ಕೃಪೆ. ಇಂಡಿಯನ್‌ ಎಕ್ಸ್‌ಪ್ರೆಸ್

Click here to follow us on Facebook , Twitter, YouTube, Telegram

Pratidhvani
www.pratidhvani.com