ಗಡಿ ಉದ್ವಿಗ್ನತೆ ನಡುವೆ ಚೀನಾದೊಂದಿಗೆ ಮಾತನಾಡುವ ಅವಶ್ಯಕತೆ ಇಲ್ಲ- ಸ್ವಾಮಿ

ಬೂದಿ ಮುಚ್ಚಿದ ಕೆಂಡದಂತಿರುವ ಭಾರತ ಮತ್ತು ಚೀನಾ ಗಡಿಸಮಸ್ಯೆಯನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳಲು ವೈಫಲ್ಯವಾಗಿದೆ ಎಂಬುದು ಹಂತಹಂತವಾಗಿ ಸಾಬೀತಾಗತೊಡಗಿದೆ. ಇದೇ ಮೇ ತಿಂಗಳ 5 ರಿಂದ ಆರಂಭವಾದ ಗಡಿ ಸಂಘರ್ಷ ಈಗ ಮತ್ತೊಂದು ಮಗ್ಗುಲಿಗೆ ಹೊರಳಿದೆ.
ಗಡಿ ಉದ್ವಿಗ್ನತೆ ನಡುವೆ ಚೀನಾದೊಂದಿಗೆ ಮಾತನಾಡುವ ಅವಶ್ಯಕತೆ ಇಲ್ಲ- ಸ್ವಾಮಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಳವಡಿಸಿಕೊಂಡಿರುವ ವಿದೇಶಾಂಗ ನೀತಿ ವಿಫಲವಾಗಿದೆ. ಗಡಿಯಲ್ಲಿ ಅನುಸರಿಸುತ್ತಿರುವ ಕಾರ್ಯತಂತ್ರಗಳು ಕೈಕೊಟ್ಟಿವೆ. ಬೂದಿ ಮುಚ್ಚಿದ ಕೆಂಡದಂತಿರುವ ಭಾರತ ಮತ್ತು ಚೀನಾ ಗಡಿಸಮಸ್ಯೆಯನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳಲು ವೈಫಲ್ಯವಾಗಿದೆ ಎಂಬುದು ಹಂತಹಂತವಾಗಿ ಸಾಬೀತಾಗತೊಡಗಿದೆ. ಇದೇ ಮೇ ತಿಂಗಳ 5 ರಿಂದ ಆರಂಭವಾದ ಗಡಿ ಸಂಘರ್ಷ ಈಗ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಗಲ್ವಾನ್ ಕಣಿವೆಯಲ್ಲಿ 20 ಮಂದಿ ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಂಡ ಚೀನಾ ಸೇನೆ ಈಗ ಪಾಂಗೊಂಗ್ ಸರೋವರದತ್ತ ಖ್ಯಾತೆ ತೆಗೆದಿದೆ.

ಭಾರತದ ಗಡಿಯೊಳಗೆ ನುಸಳಲು ಚೀನಾ ಯತ್ನ

ಇತ್ತೀಚೆಗಷ್ಟೇ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಹಕ್ಕು ಪ್ರತಿಪಾದಿಸಲು ಪ್ರಯತ್ನಿಸಿದ್ದ ಚೀನಾ ಸೇನೆ, ಅಲ್ಲಿ ಭಾರತದ 20 ಸೈನಿಕರನ್ನು ಹತ್ಯೆ ಮಾಡಿತ್ತು. ಈ ಘಟನೆ ಮರೆಯುವ ಮುನ್ನವೇ ಈಗ ಪಾಂಗೊಂಗ್ ಸರೋವರದ ದಕ್ಷಿಣ ಭಾಗದಲ್ಲಿ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ಚೀನಾದ ನುಸುಳುವಿಕೆ ಬಗ್ಗೆ ಸ್ವತಃ ಭಾರತೀಯ ಸೇನೆ ಸರ್ಕಾರಕ್ಕೆ ಮಾಹಿತಿ ರವಾನಿಸಿದೆ. ಅಲ್ಲದೆ ಸದ್ಯ ಪಾಂಗೊಂಗ್ ಸರೋವರದ ಗಡಿ ಗಸ್ತಿನಲ್ಲಿ ನಿಯೋಜಿತರಾಗಿರುವ ಸೈನಿಕರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚನೆ ನೀಡಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತದ ಕಡೆ ಬೊಟ್ಟು ಮಾಡುತ್ತಿರುವ ಚೀನಾ

ಒಂದೆಡೆ ಪಾಂಗೊಂಗ್ ಸರೋವರದ ಬಳಿ ಭಾರತದ ಗಡಿಯೊಳಗೆ ನುಸುಳುವ ಪ್ರಯತ್ನ ನಡೆಸುತ್ತಿರುವ ಚೀನಾ ಇನ್ನೊಂದೆಡೆ 'ಭಾರತವೇ ಗಡಿ ಒಪ್ಪಂದವನ್ನು ಉಲ್ಲಂಘಿಸುತ್ತಿದೆ. ಗಡಿಯಲ್ಲಿ ಪ್ರಚೋದನಾಕಾರಿ ನಡೆ ಇಡುತ್ತಿದೆ' ಎಂಬ ಗಂಭೀರ ಆರೋಪ ಮಾಡುತ್ತಿದೆ. ಪ್ರತಿಬಾರಿ ಚೀನಾ ಇದೇ ತಂತ್ರವನ್ನೇ ಅನುಸರಿಸುತ್ತಿದೆ. ಸಮಸ್ಯೆ ಸೃಷ್ಟಿ ಆಗುತ್ತಿದ್ದಂತೆ ಮೊದಲಿಗೇ 'ಭಾರತದ ಮೇಲೆ ಗೂಬೆ ಕೂರಿಸುವ ಕೆಲಸ' ಮಾಡುತ್ತಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು 'ಖಳನಾಯಕನ ಸ್ಥಾನದಲ್ಲಿ' ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ ತಡವಾಗಿ ಪ್ರತಿಕ್ರಿಯಿಸುತ್ತಾ ಚೀನಾ ಸಂಚಿಗೆ ಬಲಿಯಾಗುತ್ತಿದೆ. ಸದ್ಯ ಪಾಂಗೊಂಗ್ ಸರೋವರದ ಬಳಿ ಉಂಟಾಗಿರುವ ಉದ್ವಿಗ್ನತೆ ವಿಷಯದಲ್ಲೂ ಚೀನಾ ನಿನ್ನೆ ರಾತ್ರಿಯೇ ಆರೋಪ ಮಾಡಿದೆ. ಭಾರತ ಇಂದು ಬೆಳಿಗ್ಗೆ ತಡವಾಗಿ ಪ್ರತಿಕ್ರಿಯಿಸಿದೆ.

ಭಾರತ-ಚೀನಾ ವಿದೇಶಾಂಗ ಸಚಿವರ ಸಭೆ

ಎರಡೂ ದೇಶಗಳ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿರುವಾಗಲೇ ರಷ್ಯಾದ ಮಾಸ್ಕೊದಲ್ಲಿ ಭಾರತ ಮತ್ತು ಚೀನಾ ವಿದೇಶಾಂಗ ಸಚಿವರು ಭೇಟಿಯಾಗುತ್ತಿದ್ದಾರೆ. ಶೆಂಗೈ ಕೋಅಪರೇಷನ್ ಅರ್ಗಾನೈಸೇಷನ್ (SCO) ಆಯೋಜಿಸಿರುವ ಈ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾ ವಿದೇಶಾಂಗ ಸಚಿವರ ಬಳಿ ಸದ್ಯದ ಸಮಸ್ಯೆ ಬಗ್ಗೆ ಸಮಾಲೋಚನೆ ನಡೆಸುತ್ತಾರೆ‌. ಆದರೆ ವಾಸ್ತವ ಏನೆಂದರೆ ಈ ಕೌನ್ಸಿಲ್ ಆಫ್ ಫಾರಿನ್‌ ಮಿನಿಸ್ಟರ್ಸ್ (CFM) ಸಭೆ ನಡೆಯುತ್ತಿರುವುದು ಇದು ಮೊದಲೇನಲ್ಲ. ಇದು ಮೂರನೇ ಸಭೆ. ಇದಕ್ಕೂ ಮೊದಲು 2018ರ ಏಪ್ರಿಲ್ 23 ಮತ್ತು 24ರಂದು ಚೀನಾದ ಬೀಜಿಂಗ್ ನಲ್ಲಿ ಹಾಗೂ 2019ರ ಮೇ 21 ಮತ್ತು 22ರಂದು ಕಿರ್ಗಿಜ್ ರಿಪಬ್ಲಿಕ್ ನ‌ ಬಿಶ್ಕೆಕ್ ನಲ್ಲಿ ಸಭೆ ನಡೆದಿತ್ತು. ಎರಡೂ ಸಭೆಗಳಿಂದ ಏನೇನೂ‌ ಪ್ರಯೋಜನ ಆಗಿಲ್ಲ ಎನ್ನುವುದಕ್ಕೆ ಸದ್ಯ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿ.

ಆದರೂ ಏಕೆ ಚೀನಾದೊಂದಿಗೆ ಮಾತುಕತೆ?

ಹಿಂದಿನ‌ ಸಭೆಗಳಿಂದ ನಯಾಪೈಸೆಯ ಉಪಯೋಗ ಆಗಿಲ್ಲದಿದ್ದರೂ ಮತ್ತೆ ನೆಪಮಾತ್ರಕ್ಕೆ ಸಭೆ ನಡೆಸುತ್ತಿರುವುದೇಕೆ? ಎಂಬುದು ಮೋದಿ ಸರ್ಕಾರದಲ್ಲಿ ಉತ್ತರ ಸಿಗದ ಪ್ರಶ್ನೆಗಳ ಪೈಕಿ ಮತ್ತೊಂದು. ಅದರಲ್ಲೂ ಗಡಿಯಲ್ಲಿ 'ಯಾವಾಗ ಏನು ಬೇಕಾದರೂ ಆಗಬಹುದು' ಎಂಬ ವಾತಾವರಣ ನಿರ್ಮಾಣವಾಗಿರುವ ಹೊತ್ತಿನಲ್ಲಿ. ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ಇದೇ ಶೆಂಗೈ ಕೋಅಪರೇಷನ್ ಅರ್ಗಾನೈಸೇಷನ್ (SCO) ಇದೇ ಸೆಪ್ಟೆಂಬರ್ 4ರಂದು ಆಯೋಸಿದ್ದ ರಕ್ಷಣಾ ಸಚಿವರ ಸಭೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚೀನಾದ ರಕ್ಷಣಾ ಸಚಿವ ವೈ ಫೆಂಗ್ವೆ ಅವರನ್ನು ಭೇಟಿ ಮಾಡಿದ್ದರು. ಆಗ ಭಾರತ ಮತ್ತು ಚೀನಾ ಗಡಿ ಸಂಘರ್ಷದ ಬಗ್ಗೆಯೂ ಸಮಾಲೋಚನೆ ನಡೆದಿತ್ತು. ಹಿಂದಿನ‌ ಒಪ್ಪಂದಗಳನ್ನು ಎರಡೂ ದೇಶಗಳು ಉಲ್ಲಂಘಿಸಬಾರದೆಂಬ ನಿರ್ಧಾರಕ್ಕೆ ಬರಲಾಗಿತ್ತು.

ಆದರೆ ಈಗ ಭಾರತ ಮತ್ತು ಚೀನಾ ಗಡಿಯಲ್ಲಿ ಏನಾಗುತ್ತಿದೆ‌. ಒಂದೆಡೆ ಅರುಣಾಚಲ ಪ್ರದೇಶದಲ್ಲಿ ಭೇಟೆಯಾಡಲೆಂದು ಕಾಡಿಗೆ ಹೋಗಿದ್ದ ಐವರು ಬೇಟೆಗಾರರನ್ನು ಚೀನಾ ಅಪಹರಿಸಿ ಇನ್ನೂ ಬಿಡುಗಡೆ ಮಾಡಿಲ್ಲ. ಇನ್ನೊಂದೆಡೆ ಈಗ ಪಾಂಗೊಂಗ್ ಸರೋವರದ ದಕ್ಷಿಣ ಭಾಗದಲ್ಲಿ ಭಾರತದ ಗಡಿ ನುಸುಳುವ ಪ್ರಯತ್ನ ನಡೆಸುತ್ತಿದೆ. ಆಧಾರ ರಹಿತವಾಗಿ ಭಾರತದ ಮೇಲೆ ಆರೋಪಿಸಿ ಪರೋಕ್ಷವಾದ ಪ್ರಚೋದನಕಾರಿ ಹಾದಿ ತುಳಿಯುತ್ತಿದೆ. ಎಲ್ಲಕ್ಕೂ ಮಿಗಿಲಾಗಿ ಭಾರತ ಮತ್ತು ಚೀನಾದ 3,488 ಕಿಲೋ ಮೀಟರ್ ಉದ್ದದ ಗಡಿಯಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ. ಏಕೆಂದರೆ ಎರಡೂ ದೇಶಗಳ ಸೇನೆಗಳು ಹಿಂದೆಂದಿಗಿಂತ ಹೆಚ್ಚು ಜಮಾವಣೆ ಆಗಿವೆ. ಇದು ರಕ್ಷಣಾ ಸಚಿವರ ಸಭೆಯ ಮಾತುಕತೆಯಿಂದ ಉಂಟಾದ ಪ್ರತಿಫಲವಾ?

ಚೀನಾದೊಂದಿಗೆ ಮಾತುಕತೆ ಬೇಡ: ಸ್ವಾಮಿ

ವಿರೋಧ ಪಕ್ಷದ ನಾಯಕರು ಈ ಮಾತು ಹೇಳಿದ್ದರೆ ಬೇರೆ ರೀತಿಯ ವ್ಯಾಖ್ಯಾನವಾಗುತ್ತಿದ್ದವು. ಆದರೀಗ ಬಿಜೆಪಿಯ ರಾಜ್ಯಸಭಾ ಸದಸ್ಯರೇ ಆಗಿರುವ ಸುಬ್ರಮಣಿಯನ್ ಸ್ವಾಮಿ ಅವರೇ 'ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿರುವ ಸಂದರ್ಭದಲ್ಲಿ ಚೀನಾದೊಂದಿಗೆ ಮಾತನಾಡಬಾರದು. ಕೂಡಲೇ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ರಷ್ಯಾದಿಂದ ಭಾರತಕ್ಕೆ ಕರೆಸಿಕೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.

ಪಾಕಿಸ್ತಾನಕ್ಕೊಂದು ಚೀನಾಕ್ಕೊಂದು ನೀತಿ

ಭಾರತದ ವಿದೇಶಾಂಗ ನೀತಿ ಸೂತ್ರ ಹರಿದ ಗಾಳಿಪಟದಂತಾಗಿದೆ ಎಂಬುದಕ್ಕೆ ಇದು ಕೂಡ ಒಂದು ನಿದರ್ಶನ. ಜಮ್ಮು ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ, ಭಯೋತ್ಪಾದನಾ ನಿಗ್ರಹಕ್ಕೆ ಸಂಬಂಧಿಸಿದಂತೆ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಸೃಷ್ಟಿಯಾಗಿ ಪಾಕಿಸ್ತಾನ ಮಾತುಕತೆಗೆ ಆಹ್ವಾನಿಸಿದರೆ ಭಾರತ ಕಡ್ಡಿಮುರಿದಂತೆ ನಿರಾಕರಿಸುತ್ತದೆ. ಮೊದಲು ಶಾಂತಿ ನೆಲಸಲಿ, ನಂತರ ಮಾತುಕತೆ ಎಂದು ಖಡಕ್ ಹೇಳುತ್ತದೆ. ಇದೇ ನಿಲುವು ಚೀನಾ ಬಗ್ಗೆ ಏಕಿಲ್ಲ? ಚೀನಾ ವಿಷಯದಲ್ಲೂ‌ 'ಮೊದಲು ಗಡಿಯಲ್ಲಿ ಶಾಂತಿ ನೆಲಸಲಿ, ನಿಮ್ಮ ಸೇನೆಯನ್ನು ಹಿಂಪಡೆಯಿರಿ, ನಂತರ ಚರ್ಚೆ ಮಾಡೋಣ' ಎಂದು ಸ್ಪಷ್ಟವಾಗಿ ಹೇಳಬಹುದಲ್ಲವೇ? ಚೀನಾ ವಿರುದ್ಧ ಇಂಥ ದೃಢ ನಿಲುವು ಪ್ರದರ್ಶಿಸಲು ಇರುವ ಅಡ್ಡಿಯಾದರೂ ಏನು? ಪಾಕಿಸ್ತಾನದ ವಿಷಯದಲ್ಲಿ ಒಂದು ನಿಲುವು ಚೀನಾದ ವಿಷಯದಲ್ಲಿ ಇನ್ನೊಂದು ನಿಲುವು ತೆಗೆದುಕೊಂಡರೆ ಅಂತಾರಾಷ್ಟ್ರೀಯ ಸಮುದಾಯವೂ ಒಪ್ಪುವುದಿಲ್ಲ.‌ ದೇಶದೊಳಗಿನ ಅನುಮಾನಗಳೂ ಬಗೆಹರಿಯುವುದಿಲ್ಲ. ನರೇಂದ್ರ ಮೋದಿ ಅವರ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com