ಪ್ರಶ್ನಿಸಲು ಅವಕಾಶವಿಲ್ಲದ ಭಾರತದ ಪ್ರಜಾಪ್ರಭುತ್ವ
ರಾಷ್ಟ್ರೀಯ

ಪ್ರಶ್ನಿಸಲು ಅವಕಾಶವಿಲ್ಲದ ಭಾರತದ ಪ್ರಜಾಪ್ರಭುತ್ವ

ಸಾಮಾನ್ಯ ಪ್ರಜೆ ಕೂಡಾ, ದೇಶವನ್ನು ಮುನ್ನಡೆಸುತ್ತಿರುವ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ಇದ್ದೇ ಇರುತ್ತದೆ. ಆದರೆ, ಈಗಿನ ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ

ಲಾಯ್ಡ್‌ ಡಾಯಸ್

ಲಾಯ್ಡ್‌ ಡಾಯಸ್

ನಾವೆಲ್ಲಾ ತಿಳಿದುಕೊಂಡಿರುವ ಪ್ರಕಾರ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವಂತಹ ಸರ್ಕಾರವನ್ನು ಪ್ರಜಾಪ್ರಭುತ್ವವೆಂದು ಕರೆಯುತ್ತಾರೆ. ಓರ್ವ ಸಾಮಾನ್ಯ ಪ್ರಜೆ ಕೂಡಾ, ದೇಶವನ್ನು ಮುನ್ನಡೆಸುತ್ತಿರುವ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ಇದ್ದೇ ಇರುತ್ತದೆ. ಆದರೆ, ಈಗಿನ ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.

ವಿಚಿತ್ರವಾಗಿ ಕಂಡರೂ ಸತ್ಯ. ದೇಶದ ಜಿಡಿಪಿ ಪಾತಾಳಕ್ಕೆ ಕುಸಿದಿದ್ದರೂ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತಿನಂತೆ ಎಲ್ಲ ತಪ್ಪುಗಳನ್ನು ದೇವರ ಪಾದಕ್ಕೆ ಅರ್ಪಿಸಿ ಸರ್ಕಾರ ನಡೆಸುವ ನಾಯಕರು ಮುಗುಮ್ಮಾಗಿ ಕುಳಿತಿದ್ದಾರೆ. ಕೋವಿಡ್‌ ಮೇಲೆ ಎಲ್ಲಾ ಭಾರವನ್ನು ಹೊರಿಸಿ ʼದೇವರಾಟವನ್ನು ಬಲ್ಲವರು ಯಾರುʼ ಎಂಬ ಪ್ರಶ್ನೆಯನ್ನು ಜನರ ಮುಂದಿಟ್ಟಿದ್ದಾರೆ. ಉತ್ತರ ನೀಡಬೇಕಾದವರು ಪ್ರಶ್ನೆ ಕೇಳಿದರೆ, ಪ್ರಶ್ನೆ ಕೇಳುವವರು ಏನು ತಾನೇ ಮಾಡಲು ಸಾಧ್ಯ? ಅಂದಹಾಗೆ, ಇವೆಲ್ಲವನ್ನು ಶಾಸನಾತ್ಮಕವಾಗಿ ಪ್ರಶ್ನಿಸಲು ಸಂಸತ್ತಿನಲ್ಲಿ ಪ್ರಶ್ನಾ ವೇಳೆ ಎಂದು ನಿಗದಿ ಪಡಿಸುತ್ತಾರೆ. ಆದರೆ, ಈ ಬಾರಿ ಸಂಸತ್‌ ಅಧಿವೇಶನದಲ್ಲಿ ಅದನ್ನು ನೋಡುವ ಭಾಗ್ಯ ಭಾರತದ ಪ್ರಜಾಪ್ರಭುತ್ವಕ್ಕಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತ್ತೀಚಿಗೆ, ಹೂಡಿಕೆದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತವು ಹೂಡಿಕೆದಾರರಿಗೆ ಏಕೆ ಸೂಕ್ತವಾದ ದೇಶವೆಂದು ವಿವರಿಸುವಾಗ ಹೇಳಿದ ಮೊದಲ ಮಾತು ಏನೆಂದರೆ, ಭಾರತವು ಪ್ರಜಾಪ್ರಭುತ್ವ ರಾಷ್ಟ್ರ ಎಂದು. ಹೌದು. ಇದು ಪ್ರಶ್ನಾತೀತ. ಹಾಗಾಗಿ ಇಲ್ಲಿ ಪ್ರಶ್ನೆಗಳನ್ನೇ ಕೇಳಬಾರದು ಹೇಳಿದರೆ ಹೇಗೆ ಸ್ವಾಮಿ?

ಪ್ರಶ್ನೆಗಳನ್ನು ಕೇಳಲೆಂದೇ ಕರೆಯಲಾಗಿತ್ತು ಸಂಸತ್ತು:

ಪ್ರಜಾಪ್ರಭುತ್ವದ ಶಕ್ತಿ ಇರುವುದೇ ಪ್ರಶ್ನೆಗಳಲ್ಲಿ. ಇಲ್ಲಿನ ಸಾಮಾನ್ಯ ವ್ಯಕ್ತಿಯೂ ಕೂಡಾ ಪ್ರಶ್ನಿಸುವ ಅಧಿಕಾರ ಮತ್ತು ಹಕ್ಕು ಎರಡನ್ನೂ ಹೊಂದಿರುತ್ತಾನೆ. 1962ರಲ್ಲಿ ಭಾರತ ಚೀನಾ ವಿರುದ್ದ ಯುದ್ದದ ಸಮಯದಲ್ಲಿ ಅಂದಿನ ಪ್ರಧಾನಿಯಾಗಿದ್ದ ಜವಹಾರ್‌ಲಾಲ್‌ ನೆಹರೂ ಹಾಗೂ ಅವರ ಸರ್ಕಾರ ತಳೆದ ನಿರ್ಧಾರಗಳನ್ನು ಪ್ರಶ್ನಿಸಲೆಂದೇ, ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಸಂಸತ್ತು ಸಭೆಯನ್ನು ಕರೆಯಲು ಆಗ್ರಹಿಸಿದ್ದರು.

ಅಕ್ಟೋಬರ್‌ 26, 1962ರಂದು ರಾಷ್ಟ್ರಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಆಗ ಕೇವಲ 36 ವರ್ಷ ವಯಸ್ಸಿನ ರಾಜ್ಯಸಭಾ ಸದಸ್ಯರಾಗಿದ್ದ ವಾಜಪೇಯಿ ಅವರ ಆಗ್ರಹವನ್ನು 76 ವರ್ಷ ವಯಸ್ಸಿನ ನೆಹರೂ ಅವರು ನೆರವೇರಿಸಿದ್ದರು. ನವೆಂಬರ್‌ 8ರಂದು ಸಂಸತ್ತಿನ ಎರಡೂ ಮನೆಗಳು ಸಭೆ ಸೇರಲು ಆದೇಶವನ್ನು ಕೂಡಾ ತುರ್ತಾಗಿ ಜಾರಿ ಮಾಡಿದ್ದರು. ಅಂದು ವಿರೋಧ ಪಕ್ಷದ ಶಕ್ತಿ ಆಡಳಿತ ಪಕ್ಷದ ಮೂರರ ಒಂದರಷ್ಟು ಕೂಡಾ ಇರಲಿಲ್ಲ. ಆದರೂ, ಪ್ರಶ್ನೆಗಳಿಗೆ ಸ್ವಾಗತವಿತ್ತು.

ಸುಮಾರು ಏಳು ದಿನಗಳ ಕಾಲ ಸಂಸತ್ತಿನ ತುರ್ತು ಅಧಿವೇಶನ ನಡೆದಿತ್ತು. ಏಕೆಂದರೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಯುದ್ದದ ಪರಿಸ್ಥಿತಿಯ ನಡುವೆಯೂ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ಸಂಸತ್ತಿಗೆ ಇದೆ, ಎಂಬುದನ್ನು ಬಿಜೆಪಿ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ ಅವರು ತೋರಿಸಿಕೊಟ್ಟಿದ್ದರು.

ಇಂದಿನ ಬಿಜೆಪಿ ನಾಯಕರು, ತಮ್ಮ ಪಕ್ಷದ ಇತಿಹಾಸವನ್ನು ಮಾತ್ರ ಓದಿದರೂ, ಪ್ರಜಾಪ್ರಭುತ್ವದ ಮೌಲ್ಯಗಳೆಂದರೆ ಏನೆಂದು ತಿಳಿಯುತ್ತಿತ್ತು. ಆಡಳಿತ ಪಕ್ಷವನ್ನು ಪ್ರಶ್ನಿಸುವ ಅಧಿಕಾರವನ್ನೇ ಕಸಿದುಕೊಂಡರೆ ಪ್ರಜಾಪ್ರಭುತ್ವ ಕೇವಲ ʼನಾಮ್‌ ಕೆ ವಾಸ್ತೆʼ ಉಳಿದುಬಿಡುತ್ತದೆ.

ಒಂದು ಸರ್ಕಾರವು ದೇಶವನ್ನು ಸುಭಧ್ರವಾಗಿ ಅಭಿವೃದ್ದಿಯತ್ತ ನಿರಂತರವಾಗಿ ಸಾಗಿಸುತ್ತಿದೆ ಎಂದರೆ, ಅಂತಹ ಸರ್ಕಾರ ಪ್ರಶ್ನಾತೀತವಾಗುವುದೇನೋ? ಅಥವಾ ಜನರು ಪ್ರಶ್ನೆ ಕೇಳದೆ ಇರಬಹುದೇನೋ. ಆದರೆ, ದೇಶದ ಅರ್ಥ ವ್ಯವಸ್ಥೆ ಬುಡಮೇಲಾಗಿರುವ ಸಂದರ್ಭದಲ್ಲಿ, ವಿಶ್ವವನ್ನೇ ಹೈರಾಣಾಗಿಸಿರುವ ಕೋವಿಡ್‌ನಂತಹ ಸಾಂಕ್ರಮಿಕ ರೋಗ ದೇಶವನ್ನು ಬಾಧಿಸುತ್ತಿರುವಾಗ ಹಾಗೂ ʼಒಂದು ಕೊಂಡರೆ ಒಂದು ಉಚಿತʼವೆಂಬಂತೆ ದೇಶದಲ್ಲಿ ಪ್ರತೀ ವಿಚಾರಕ್ಕೂ ಕೋಮು ದ್ವೇಷವನ್ನು ಉಚಿತವಾಗಿ ಹಂಚುತ್ತಿರುವ ಸಂದರ್ಭದಲ್ಲಿ ಸರ್ಕಾರವನ್ನು ಹಾಗೂ ಅದರ ಆಡಳಿತ ವೈಖರಿಯನ್ನು ಪ್ರಶ್ನಿಸಬಾರದು ಎಂದರೆ ಎಷ್ಟು ಸರಿ?

ಏನೇ ಆದರೂ, ʼಅನಗತ್ಯʼ (ಸರ್ಕಾರ ಭಾವಿಸುವಂತೆ) ಕಾರಣಕ್ಕೆ ಸಮಯವನ್ನು ವ್ಯರ್ಥ ಮಾಡುವ ಪ್ರಶ್ನಾ ವೇಳೆಯಂತಹ ವಿಚಾರಗಳನ್ನು ಯಶಸ್ವಿಯಾಗಿ ತೆಗೆದುಹಾಕುವಲ್ಲಿ ಬಿಜೆಪಿ ಸರ್ಕಾರವು ಸಫಲವಾಗಿದೆ. ಪ್ರಶ್ನಾತೀತವಾಗಿರುವ ಹೊಸ ಪ್ರಜಾಪ್ರಭುತ್ವದ ಸಂಸ್ಕೃತಿಗೆ ಈಗಿನ ಕೇಂದ್ರ ಸರ್ಕಾರ ಸ್ವಾಗತ ಮಾಡಿದೆ. ಭಾರತೀಯರು ಯಾವುದೇ ಹೊಸ ವಿಚಾರಕ್ಕೂ ಬೇಗನೇ ಹೊಂದಿಕೊಳ್ಳುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಪ್ರಶ್ನೆ ಮಾಡಬಾರದು ಎಂಬ ವಿಚಾರವನ್ನು ಈಗಲೇ ಪ್ರಶ್ನಿಸದಿದ್ದಲ್ಲಿ, ಮುಂದೆ ಪ್ರಶ್ನೆ ಕೇಳುವ ಅರ್ಹತೆಯನ್ನೇ ಕಳೆದುಕೊಳ್ಳಲಿದ್ದೇವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com