ಚೀನಾವ ಸೇನೆಯನ್ನು ಹಿಮ್ಮೆಟ್ಟಿಸಿದ Special Frontier Force ಬಗ್ಗೆ ಒಂದಿಷ್ಟು..
ರಾಷ್ಟ್ರೀಯ

ಚೀನಾವ ಸೇನೆಯನ್ನು ಹಿಮ್ಮೆಟ್ಟಿಸಿದ Special Frontier Force ಬಗ್ಗೆ ಒಂದಿಷ್ಟು..

ಹುತಾತ್ಮರಾದ 51 ವರ್ಷ ವಯಸ್ಸಿನ ಯೋಧ ತೆನ್ಜಿನ್ ನೈಮ ಅವರ ಶರೀರವನ್ನು ತ್ರಿವರ್ಣ ಹಾಗೂ ಟಿಬೇಟಿಯನ್ ರಾಷ್ಟ್ರದ್ವಜದಲ್ಲಿ ಸುತ್ತಿ ತರುತ್ತಿರುವ ಫೋಟೋಗಳು ಪ್ರಕಟಗೊಳ್ಳುತಿದ್ದಂತೆ ಮಾದ್ಯಮಗಳು Special Frontier Force ಬಗ್ಗೆ ಆಸಕ್ತಿ ವಹಿಸಲು ಕಾರಣವಾಯಿತು

ಕೋವರ್ ಕೊಲ್ಲಿ ಇಂದ್ರೇಶ್

ದೇಶದ ಉತ್ತರ ಭಾಗದ ಗಡಿಯನ್ನು ಜಗಳ ಗಂಟ ರಾಷ್ಟ್ರವೆಂದೇ ಕುಖ್ಯಾತಿ ಪಡೆದಿರುವ ಚೀನಾದ ಜತೆ ಹಂಚಿಕೊಂಡಿರುವುದು ನಿಜಕ್ಕೂ ದುರದೃಷ್ಟಕರ ಎಂದೇ ಹೇಳಬಹುದು. ಭಾರತ -ಚೀನಾ ಗಡಿಯು ಬರೋಬ್ಬರಿ 34೦೦ ಕಿಲೋಮೀಟರ್‌ ಗಳಷ್ಟು ಉದ್ದವಿದೆ. ಅದರಲ್ಲೂ ಚೀನಾ ಎಂಬ ಸದಾ ಭೂಮಿಗಾಗಿ ಹಪಹಪಿಸುವ ರಾಷ್ಟ್ರದೊಂದಿಗೆ ಗಡಿ ರಕ್ಷಣೆಯಲ್ಲಿ ತೊಡಗಿರುವ ನಮ್ಮ ಭದ್ರತಾ ಪಡೆಗಳು ನಿತ್ಯವೂ ಸಾಹಸ, ಶೌರ್ಯ ಪ್ರದರ್ಶಿಸಬೇಕಾಗಿದೆ. ಇದು ಇಂದಿನ ಅನಿವಾರ್ಯ ಕೂಡ ಆಗಿದೆ.

ಏಕೆಂದರೆ ಏಷ್ಯಾದ ಅತೀ ದೊಡ್ಡ ರಾಷ್ಟ್ರ ಚೀನಾವು ತಾನು ಗಡಿ ಹಂಚಿಕೊಂಡಿರುವ ಎಲ್ಲ ದೇಶಗಳ ಜತೆಯೂ ಗಡಿ ವಿವಾದ ಹೊಂದಿದೆ. ಈ ವಿವಾದವು ಚೀನಾದ ಭೂ ಕಬಳಿಕೆಯ ದುರ್ಬುದ್ದಿಯಿಂದ ಮಾತ್ರ ಇದೆಯೇ ಹೊರತು ಬೇರೇನಲ್ಲ. ಇಂದು ಚೀನಾವು ಒಂದು ರಾಷ್ಟ್ರವಾಗಿದೆಯೋ ಇಲ್ಲ ರಿಯಲ್‌ ಎಸ್ಟೇಟ್‌ ಎಜೆಂಟನಂತೆ ಇದೆಯೋ ಹೇಳುವುದು ಕಷ್ಟ. ತನ್ನ ನೆರೆಯ ಯಾರದ್ದೇ ಭೂ ಭಾಗವನ್ನು ಚೀನಾ ನೋಡಿದರೂ ತನಗೆ ಸೇರಿದ್ದು ಎಂದು ಹಕ್ಕು ಪ್ರತಿಪಾದಿಸಲು ಮುಂದಾಗುತ್ತದೆ. ಮತ್ತೆ ಯಥಾ ಪ್ರಕಾರ ಸಹಜವಾಗೇ ಸಂಘರ್ಷ ಸೃಷ್ಟಿಯಾಗುತ್ತದೆ. ಚೀನಾದ ನೆರೆಯಲ್ಲಿರುವ ಬಹುತೇಕ ರಾಷ್ಟ್ರಗಳು ಅದರ ಗಡಿ ಕಬಳಿಕೆಯ ವಿರುದ್ದ ದನಿ ಎತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೀಗ ಚೀನಾ ಗಡಿಯಲ್ಲಿರುವ ಪುಟ್ಟ ರಾಷ್ಟ್ರವೊಂದು ಕೂಡ ಕಳೆದ ವಾರ ಚೀನಾದ ಕಬಳಿಕೆಯ ವಿರುದ್ದ ಅಮೇರಿಕ ನೆರವು ನೀಡುವಂತೆ ಕೋರಿದೆ. ಪಿಲಿಪೈನ್ಸ್‌ ರಾಷ್ಟ್ರದ ಪಕ್ಕದಲ್ಲಿರುವ ಪಲಾವು ಎಂಬ ಪುಟ್ಟ ದೇಶವೂ ಚೀನಾಗೆ ಸೆಡ್ಡು ಹೊಡೆದಿದ್ದು ಅಮೇರಿಕಕ್ಕೆ ಮಿಲಿಟರಿ ನೆರವಿಗಾಗಿ ಮೊರೆ ಇಟ್ಟಿದೆ. ಈ ಪುಟ್ಟ ದೇಶದ ಜನಸಂಖ್ಯೆ ಇರುವುದು ಕೇವಲ 17 ಸಾವಿರ ಮಾತ್ರ. ಒಟ್ಟು 459 ಚದರ ಕಿಲೋಮೀಟರ್‌ ವಿಸ್ತೀರ್ಣ ಹೊಂದಿರುವ ಈ ದೇಶದ ಜತೆಗೇ ತೈವಾನ್‌, ಜಪಾನ್‌ ಕೂಡ ಚೀನಾದ ವಿಸ್ತರಣಾವಾದಕ್ಕೆ ಸೆಡ್ಡು ಹೊಡೆದು ನಿಂತಿವೆ.

ಒಂದು ವೇಳೆ ಭಾರತದ ವಿಸ್ತೀರ್ಣವೂ ಈ ರೀತಿಯ ಚಿಕ್ಕ ದೇಶಗಳಷ್ಟೇ ಇದ್ದಿದ್ದರೆ ಇಷ್ಟೊತ್ತಿಗೆ ಚೀನಾವು ಟಿಬೆಟನ್ನು ನುಂಗಿ ಹಾಕಿದಂತೆ ಇದನ್ನೂ ನುಂಗುತಿತ್ತು. 2400 ಕಿಲೊಮೀಟರ್‌ ಉದ್ದದ ಗಡಿಯನ್ನು ರಕ್ಷಿಸಲು ಇಂದು ನಮ್ಮ ಸೈನಿಕರು ಮೈಯೆಲ್ಲ ಕಣ್ಣಾಗಿ ಕಾವಲು ಕಾಯುತಿದ್ದಾರೆ. ಇಂದು ವಾಸ್ತವಿಕ ನಿಯಂತ್ರಣ ರೇಖೆಯ ಲಢಾಕ್‌ ಪ್ರದೇಶದಲ್ಲಿ ಗಡಿ ಭದ್ರತೆಯಲ್ಲಿ ನಮ್ಮ ಸೇನೆಯ ಜತೆ ಹೆಗಲುಕೊಟ್ಟು ನಿಂತಿರುವುದು ಸ್ಪೆಷಲ್‌ ಪ್ರಾಂಟಿಯರ್‌ ಫೋರ್ಸ್(Special Frontier Force)‌ ಘಟಕ. ನಮ್ಮ ಸೇನೆಯ ಈ ಘಟಕದ ಬಗ್ಗೆ ಹೆಚ್ಚು ಯಾರಿಗೂ ಗೊತ್ತಿಲ್ಲ. ಈ ಬೆಟಾಲಿಯನ್‌ ನ ಕ್ಷಮತೆ, ಸಾಹಸ, ಶೌರ್ಯ ಕಳೆದ ವಾರವಷ್ಟೆ ಮಾಧ್ಯಮಗಳು ವರದಿ ಮಾಡಿದವು.

ಈ ದಳದ ಬಗ್ಗೆ ಮೊಟ್ಟ ಮೊದಲು ಮಾಧ್ಯಮಗಳು ವರದಿ ಮಾಡಲು ಮುಖ್ಯ ಕಾರಣ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಟಿಬೇಟಿಯನ್ ಮೂಲದ ಯೋಧರೊಬ್ಬರು ನೆಲ ಬಾಂಬ್ ಸ್ಪೋಟದಲ್ಲಿ ಮೃತ ಪಟ್ಟಿದ್ದೇ ಆಗಿತ್ತು. ಹುತಾತ್ಮರಾದ 51 ವರ್ಷ ವಯಸ್ಸಿನ ಯೋಧ ತೆನ್ಜಿನ್ ನೈಮ ಅವರ ಶರೀರವನ್ನು ತ್ರಿವರ್ಣ ಹಾಗೂ ಟಿಬೇಟಿಯನ್ ರಾಷ್ಟ್ರದ್ವಜದಲ್ಲಿ ಸುತ್ತಿ ತರುತ್ತಿರುವ ಫೋಟೋಗಳು ಪ್ರಕಟಗೊಳ್ಳುತಿದ್ದಂತೆ ಮಾದ್ಯಮಗಳು ಆಸಕ್ತಿ ವಹಿಸಲು ಕಾರಣವಾಯಿತು. 1962 ರಲ್ಲಿ ಚೀನಾ -ಭಾರತ ಯುದ್ದದ ನಂತರ ಸಾವಿರಗಟ್ಟಲೆ ಸಂಖ್ಯೆಯಲ್ಲಿ ದೇಶದಲ್ಲಿ ಆಶ್ರಯ ಪಡೆದಿದ್ದ ಟಿಬೇಟಿಯನ್ ನಿರಾಶ್ರಿತರ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ ನ್ನು (SFF) ಭಾರತೀಯ ಸೇನೆಯಲ್ಲಿ ಸ್ಥಾಪಿಸಲಾಯಿತು.

ಹುತಾತ್ಮ ಯೋಧ ತೆನ್ಜಿನ್ ಇದೇ ದಳಕ್ಕೆ ಸೇರಿದವರಾಗಿದ್ದರು. 1971ರ ಭಾರತ-ಪಾಕಿಸ್ತಾನ ಯುದ್ಧದಿಂದ 1999ರ ಕಾರ್ಗಿಲ್ ಯುದ್ಧದವರೆಗೆ ಅನೇಕ ಮಿಲಿಟರಿ ಕಾರ್ಯಾಚರಣೆಗಳಲ್ಲಿ SFF ಪ್ರಮುಖ ಪಾತ್ರ ವಹಿಸಿದೆ, ಆದರೆ SFF ಗೌಪ್ಯವಾಗೇ ಮರಣದ ನಂತರ ಟಿಬೆಟಿಯನ್ ಪಾರ್ಲಿಮೆಂಟಿನ ಸದಸ್ಯರೊಬ್ಬರು ಭಾರತೀಯ ಸೇನೆಯಲ್ಲಿ ಟಿಬೆಟಿಯನ್ ಯೋಧರ ಪಾತ್ರವನ್ನು ಭಾರತವು ಈಗ ಒಪ್ಪಿಕೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದರು. ಕಳೆದ ಐದು ತಿಂಗಳ ಕಾಲ ಚೀನಾದೊಂದಿಗೆ ಗಡಿ ಉದ್ವಿಗ್ನತೆ ಹೆಚ್ಚುತಿದ್ದಂತೆ ಗಡಿಗೆ ನುಗ್ಗಿದ ಹೆಚ್ಚುವರಿ ಪಡೆಗಳಲ್ಲಿ ಎಸ್ಎಫ್ಎಫ್ ಸೈನಿಕರು ಸೇರಿದ್ದಾರೆ ಎಂದು ತಿಳಿದುಬಂದಿದೆ. 1959 ರಲ್ಲಿ ಚೀನಾದ ಆಕ್ರಮಣದ ವಿರುದ್ಧ ವಿಫಲ ದಂಗೆಯ ಹಿನ್ನೆಲೆಯಲ್ಲಿ ತಪ್ಪಿಸಿಕೊಂಡ ನಂತರ ಟಿಬೆಟಿಯನ್ ಸರ್ಕಾರದ ಮತ್ತು ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು ನಂತರ ಭಾರತದಲ್ಲಿ ನೆಲೆಗೊಂಡರು. ಮಿಲಿಟರಿ ತಜ್ಞರ ಪ್ರಕಾರ ಈ ದಳವು ಮಹಿಳೆ ಮತ್ತು ಪುರುಷ ಯೋಧರನ್ನು ಒಳಗೊಂಡಿದ್ದು ಇತರ ಸೈನಿಕರಿಗೆ ನೀಡುವ ಕಮಾಂಡೋ ತರಬೇತಿಯನ್ನೇ ಪಡೆಯುತಿದ್ದಾರೆ.

ಈ ದಳವನ್ನು ಮೊದಲು ಎಸ್ಟಾಬಿಲಿಷ್ಮೆಂಟ್ 22 ಎಂದು ಕರೆಯಲಾಗುತಿದ್ದು ಇದು ಅಂದಿನ ಮಿಲಿಟರಿ ಗುಪ್ತಚರ ದಳದ ಮುಖ್ಯಸ್ಥ ಬಿ ಎನ್ ಮಲಿಕ್ ಮತ್ತು ಅಮೇರಿಕದ ಸಿಐಏ(CAA) ಯ ಕಲ್ಪನೆಯ ಕೂಸು ಎನ್ನಲಾಗಿದೆ. ಚೀನಾ ಅತಿಕ್ರಮಣದಿಂದ ಆಕ್ರೋಶಿತರಾಗಿದ್ದ ಟಿಬೆಟನ್ ಯುವಕರು ಸ್ವಯಂ ಪ್ರೇರಿತವಾಗಿ ಈ ದಳವನ್ನು ಸೇರಲು ಮುಂದೆ ಬಂದರು. ಆಗಲೇ ಸುಮಾರು 6,000 ಯೋಧರು ಇದನ್ನು ಸೇರಿದರು. ಮೊದಲಿಗೆ ಚೀನಾದ ಅತಿಕ್ರಮಣದ ವಿರುದ್ದ ಹೋರಾಡುವ ಗುರಿ ಹೊಂದಿದ್ದ ಈ ದಳ ನಂತರ ಆ ಗುರಿಯನ್ನು ಕೈ ಬಿಟ್ಟಿತು.

ಕೇಂದ್ರ ಸಂಪುಟ ಸಚಿವಾಲಯದ ನೇರ ಅಧೀನದಲ್ಲಿ ಬರುವ ಈ ದಳಕ್ಕೆ ಮೇಜರ್ ಜನರಲ್ ದರ್ಜೆಯ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಅವರು SFF ನ ಇನ್ಸ್ಪೆಕ್ಟರ್ ಜನರಲ್ ಕೂಡ ಆಗಿರುತ್ತಾರೆ. ಉತ್ತರ ಖಾಂಡ್ ನ ಚಕ್ರತಾ ದಲ್ಲಿ ಈ ದಳದ ನೆಲೆ ಇದೆ. ಅತೀ ಎತ್ತರದ ಪ್ರತೀಕೂಲ ಹವಾಮಾನದಲ್ಲಿ ಕರ್ತವ್ಯ ನಿರ್ವಹಿಸಲು ಈ ದಳಕ್ಕೆ ವಿಶೇಷ ತರಬೇತಿಯನ್ನೂ ನೀಡಲಾಗಿರುತ್ತದೆ, ಉಸಿರಾಟ ಕಷ್ಟಕರವಾಗಿರುವ ಮೈನಸ್ ಡಿಗ್ರಿ ತಾಪಮಾನದಲ್ಲಿ ಕೆಲಸ ಮಾಡಲು ಸ್ಥಳೀಯರೇ ಹೆಚ್ಚು ಸೂಕ್ತವಾಗಿದ್ದು ಉತ್ತರದ ಗಡಿಯನ್ನು ಕಾಯುವಲ್ಲಿ ಅಷ್ಟೇ ಅಲ್ಲ ಚೀನಾ ಜತೆ ಗಡಿ ಉದ್ವಿಗ್ನ ಸಮಯದಲ್ಲಿ ಈ ದಳವು ಅತ್ಯಂತ ಕ್ಷಮತೆಯಿಂದ ಕಾರ್ಯ ನಿರ್ವಹಿಸಿದೆ. ಲಢಾಕ್ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲು, ಗಡಿ ಕಾಯಲು ಹೆಚ್ಚಾಗಿ ಈ ದಳವನ್ನೇ ಬಳಸಿಕೊಳ್ಳಲಾಗುತ್ತದೆ. ಗಡಿ ಕಾವಲು ಪಡೆಗಳು ರಕ್ಷಣಾ ಇಲಾಖೆಯ ಅಧೀನಕ್ಕೆ ಬರುವುದಿಲ್ಲ, ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುತ್ತದೆ. ಆದರೆ ಈ ಪಡೆಗಳಲ್ಲಿ ಟಿಬೆಟನ್ ನಿರಾಶ್ರಿತರೇ ಹೆಚ್ಚಾಗಿರುವುದರಿಂದ ಸಂಪುಟ ಸಚಿವಾಲಯದ ಅಧೀನಕ್ಕೆ ತರಲಾಗಿದೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದರು.

SFF ದಳದ ಯೋಧರು 1971 ರ ಭಾರತ -ಪಾಕಿಸ್ಥಾನ ಯುದ್ದದಲ್ಲಿ , 1999 ರ ಕಾರ್ಗಿಲ್ ಯುದ್ದಲ್ಲೂ ಕೂಡ ಅಪ್ರತಿಮ ಶೌರ್ಯ ಮೆರೆದಿದ್ದಾರೆ. 1971ರ ಬಾಂಗ್ಲಾ ವಿಮೋಚನೆಯಲ್ಲಿ ಈ ದಳದ ಯೋಧರು ಈಗಲ್ ಎಂಬ ಗುಪ್ತ ನಾಮದ ಕಾರ್ಯಾಚರಣೆಯಲ್ಲಿ ಬಾಂಗ್ಲಾದೊಳಗೆ ನುಸುಳಿ ಸೇನೆಯ ಮೂಲ ಸೌಕರ್ಯ ಕಲ್ಪಿಸುವಲ್ಲಿ, ಸಂಪರ್ಕ, ಸಾಮಾಗ್ರಿಯ ಸಾಗಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಪಾಕಿಸ್ಥಾನದ ಸೈನಿಕರು ಸೋತಾಗ ಮಯನ್ಮಾರ್ ನೊಳಗೆ ನುಸುಳುವುದನ್ನೂ ಈ ದಳ ತಡೆದಿದೆ. ಮಿಜೋ ಮತ್ತು ನಾಗಾ ಬಂಡುಕೋರರನ್ನು ಮಟ್ಟ ಹಾಕುವಲ್ಲಿ ಈ ದಳದ ಪಾತ್ರ ಗಣನೀಯವಾಗಿತ್ತು.ಈ ದಳದ ಅನೇಕ ಯೋಧರಿಗೆ ಭಾರತ ಸರ್ಕಾರ ನೀಡುವ ಶೌರ್ಯ ಪ್ರಶಸ್ತಿಗಳೂ ದೊರೆತಿವೆ. ತಾಯ್ನೆಲವನ್ನು ಕಳೆದುಕೊಂಡು ಸಾವಿರಾರು ಕಿಲೋಮೀಟರ್ ದೂರ ಕ್ರಮಿಸಿ ಬಂದು ಬದುಕು ಕಟ್ಟಿಕೊಂಡಿರುವ ಟಿಬೆಟನ್ ನಿರಾಶ್ರಿತರ ಈ ಸೇವೆ ನಿಜಕ್ಕೂ ಶ್ಲಾಘನೀಯ

Click here to follow us on Facebook , Twitter, YouTube, Telegram

Pratidhvani
www.pratidhvani.com