ಬರೋಬ್ಬರಿ 51 ವರ್ಷದ ನಂತರ ಉಪಚುನಾವಣೆಗೆ ಸಜ್ಜಾಗಲಿರುವ ಕನ್ಯಾಕುಮಾರಿ
ರಾಷ್ಟ್ರೀಯ

ಬರೋಬ್ಬರಿ 51 ವರ್ಷದ ನಂತರ ಉಪಚುನಾವಣೆಗೆ ಸಜ್ಜಾಗಲಿರುವ ಕನ್ಯಾಕುಮಾರಿ

ಈ ಹಿಂದೆ ಇಲ್ಲಿ ಉಪಚುನಾವಣೆ ನಡೆದಾಗ ಸಂಪೂರ್ಣ ದೇಶವೇ ಕನ್ಯಾಕುಮಾರಿಯನ್ನು ನೋಡುತ್ತಿತ್ತು. 1969ರಲ್ಲಿ ನಡೆದ ಉಪಚುನಾವಣೆಯು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ ಕಾಮರಾಜ್‌ ಅವರ ರಾಜಕೀಯದ ಎರಡನೇ ಇನ್ನಿಂಗ್ಸ್‌ ಆರಂಭಿಸಲು ಸಹಕಾರಿಯಾಗಿತ್ತು

ಪ್ರತಿಧ್ವನಿ ವರದಿ

ತಮಿಳುನಾಡಿನ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರ ಸುಮಾರು 51 ವರ್ಷಗಳ ಬಳಿಕ ಉಪಚುನಾವಣೆಯನ್ನು ಎದುರಿಸಲಿದೆ. ತಮಿಳುನಾಡು ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾಗೂ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಸಂಸದ ಹೆಚ್‌ ವಸಂತ್‌ಕುಮಾರ್‌ ಅವರು ಕೋವಿಡ್‌ನಿಂದ ಮೃತಪಟ್ಟಿದ್ದರಿಂದ ಅಲ್ಲಿ ಮುಂದಿನ ಆರು ತಿಂಗಳುಗಳ ಒಳಗಾಗಿ ಉಪಚುನಾವಣೆ ನಡೆಯಲಿದೆ. ಚುನಾವಣಾ ದಿನಾಂಕವನ್ನು ಈವರೆಗೆ ನಿಗದಿಪಡಿಸಲಾಗಿಲ್ಲ.

1956ರ ನಂತರ ಕಾಂಗ್ರೆಸ್‌ನ ಭದ್ರಕೋಟೆ ಅನ್ನಿಸಿಕೊಂಡಿರುವ ಕನ್ಯಾಕುಮಾರಿಯಲ್ಲಿ ಈವರೆಗೆ ಸಂಸದರಾಗಿ ಆರಿಸಿ ಬಂದವರು ಕಾಂಗ್ರೆಸ್‌ ಅಥವಾ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು. ಹಿಂದೆ ನಾಗರಕೊಯಿಲ್‌ ಎಂದು ಕರೆಯಲ್ಪಡುತ್ತಿದ್ದ ಕನ್ಯಾಕುಮಾರಿ ಕ್ಷೇತ್ರವನ್ನು ಬಿಜೆಪಿಯ ಪೊನ್‌ ರಾಧಾಕೃಷ್ಣನ್‌ ಕೇವಲ ಎರಡು ಬಾರಿ (1994 ಮತ್ತು 2014) ಗೆದ್ದಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಹಿಂದೆ ಇಲ್ಲಿ ಉಪಚುನಾವಣೆ ನಡೆದಾಗ ಸಂಪೂರ್ಣ ದೇಶವೇ ಕನ್ಯಾಕುಮಾರಿಯನ್ನು ನೋಡುತ್ತಿತ್ತು. 1969ರಲ್ಲಿ ನಡೆದ ಉಪಚುನಾವಣೆಯು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ ಕಾಮರಾಜ್‌ ಅವರ ರಾಜಕೀಯದ ಎರಡನೇ ಇನ್ನಿಂಗ್ಸ್‌ ಆರಂಭಿಸಲು ಸಹಕಾರಿಯಾಗಿತ್ತು. 1967ರಲ್ಲಿ ವಿರುದುನಗರ್‌ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದ ಕಾಮರಾಜ್‌ ಅವರು ಆಘಾತಕಾರಿ ಸೋಲುಂಡಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಡಿಎಂಕೆ ಕಾರ್ಯಕರ್ತರು ಗಲಭೆಯನ್ನೇ ಎಬ್ಬಿಸಿದ್ದರು.

ಗಲಭೆ ಎಷ್ಟು ತೀವ್ರವಾಗಿತ್ತೆಂದರೆ, ಆಗಿನ ಮುಖ್ಯ ಚುನಾವಣಾಧಿಕಾರಿ ಹಾಗೂ ಐಜಿಪಿ ಅವರು ತಮ್ಮ ವಾಸಸ್ಥಾನವನ್ನು ತಾತ್ಕಾಲಿಕವಾಗಿ ನಾಗರಕೊಯಿಲ್‌ಗೆ ಸ್ಥಳಾಂತರಿಸಬೇಕಾಯಿತು. ನಂತರ ನಡೆದ ಉಪ ಚುನಾವಣೆಯಲ್ಲಿ ಕಾಮರಾಜ್‌ ಅವರು ಶೇ. 78.6 ಮತಗಳನ್ನು ಪಡೆದಿದ್ದರು ಎಂದು ದಾಖಲಾಗಿದೆ.

ಈಗ ಮತ್ತೆ, ವಸಂತ್‌ಕುಮಾರ್‌ ಅವರ ನಿಧನದ ನಂತರ ಇನ್ನೊಂದು ಉಪಚುನಾವಣೆಯನ್ನು ಕನ್ಯಾಕುಮಾರಿ ಎದುರಿಸಲು ಸಜ್ಜಾಗುತ್ತಿದೆ. ಬರೋಬ್ಬರಿ 51 ವರ್ಷಗಳ ನಂತರ ನಡೆಯುತ್ತಿರುವ ಉಪಚುನಾವಣೆ ಯಾರ ಪಾಲಿಗೆ ಶುಭ ಸುದ್ದಿ ತರುತ್ತದೆ ಎಂದು ಕಾದು ನೋಡಬೇಕಾಗಿದೆ.

ಕೃಪೆ: ದ ವೈರ್‌

Click here to follow us on Facebook , Twitter, YouTube, Telegram

Pratidhvani
www.pratidhvani.com