ಗಣೇಶ ಮೆರವಣಿಗೆಗಿಲ್ಲದ ಕಾನೂನು ಕ್ರಮ ಮೊಹರಂ ಮೆರವಣಿಗೆಗೆ: ಮ.ಪ್ರ ಸರ್ಕಾರದ ತಾರತಮ್ಯ ನೀತಿ
ರಾಷ್ಟ್ರೀಯ

ಗಣೇಶ ಮೆರವಣಿಗೆಗಿಲ್ಲದ ಕಾನೂನು ಕ್ರಮ ಮೊಹರಂ ಮೆರವಣಿಗೆಗೆ: ಮ.ಪ್ರ ಸರ್ಕಾರದ ತಾರತಮ್ಯ ನೀತಿ

ಇಂದೋರ್‌ ನಗರಪಾಲಿಕೆಯ ಮಾಜಿ ಕಾರ್ಪೊರೇಟರ್‌ ಉಸ್ಮಾನ್‌ ಪಟೇಲ್‌ ಅವರು ಮೊಹರಂ ಹಬ್ಬದ ಪ್ರಯುಕ್ತ ಮೆರವಣಿಗೆ ನಿರ್ಭಂಧಿಸಿದ್ದರೂ ಮೆರವಣಿಗೆ ಮಾಡಿದರೆಂದು ಅವರ ವಿರುದ್ದ ಸರ್ಕಾರವು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದೆ. ಆದರೆ ಭಾರತೀಯ ಜನತಾ ಪಕ್ಷದ ಇಂದೋರ್‌ ಶಾಸಕ ರಮೇಶ್‌ ಮೆಂಡೋಲ ಅವರು ಗಣೇಶ ಚತುರ್ಥಿಯ 10 ದಿನದ ಉತ್ಸವವನ್ನು ಆಚರಿಸಿದರೂ ಅವರ ವಿರುದ್ದ ಪೋಲೀಸರದ್ದು ಮೌನ ನಿಲುವು.

ಕೋವರ್ ಕೊಲ್ಲಿ ಇಂದ್ರೇಶ್

ನಮ್ಮನ್ನು ಆಳುವ ಸರ್ಕಾರಗಳು ಕಾನೂನು ಪಾಲನೆ ಮಾಡುವ ಸಂದರ್ಭದಲ್ಲಿ ತಾರತಮ್ಯ ಎಸಗುವುದು ನಿತ್ಯವೂ ನಡೆಯುತ್ತಿದೆ. ಆಳುವ ಪಕ್ಷದ ರಾಜಕಾರಣಿಗಳು , ಪ್ರಭಾವಿಗಳು ಕಾನೂನು ದುರ್ಬಳಕೆ ಮಾಡಿಕೊಳ್ಳುವುದು ನಡೆದೇ ಇದೆ. ಇದಕ್ಕೇ ಲೇಟೆಸ್ಟ್‌ ಉದಾಹರಣೆ ಎಂದರೆ ಮದ್ಯ ಪ್ರದೇಶ ರಾಜ್ಯ ಸರ್ಕಾರವು ಮೊಹರಂ ಹಬ್ಬದ ಮೆರವಣಿಗೆ ಮಾಡಿರುವುದಕ್ಕೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

ಇಂದೋರ್‌ ನಗರಪಾಲಿಕೆಯ ಮಾಜಿ ಕಾರ್ಪೊರೇಟರ್‌ ಉಸ್ಮಾನ್‌ ಪಟೇಲ್‌ ಅವರು ಮೊಹರಂ ಹಬ್ಬದ ಪ್ರಯುಕ್ತ ಮೆರವಣಿಗೆ ನಿರ್ಭಂಧಿಸಿದ್ದರೂ ಮೆರವಣಿಗೆ ಮಾಡಿದರೆಂದು ಅವರ ವಿರುದ್ದ ಸರ್ಕಾರವು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದೆ. ಆದರೆ ಭಾರತೀಯ ಜನತಾ ಪಕ್ಷದ ಇಂದೋರ್‌ ಶಾಸಕ ರಮೇಶ್‌ ಮೆಂಡೋಲ ಅವರು ಗಣೇಶ ಚತುರ್ಥಿಯ 10 ದಿನದ ಉತ್ಸವವನ್ನು ಆಚರಿಸಿದರೂ ಅವರ ವಿರುದ್ದ ಪೋಲೀಸರದ್ದು ಮೌನ ನಿಲುವು. ಮೆಂಡೋಲ ಅವರು ಕೋವಿಡ್‌ 19 ಸಾಂಕ್ರಮಿಕ ನಿಯಂತ್ರಣಕ್ಕೆ ಸರ್ಕಾರ ಹಾಕಿರುವ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿರುವುದು ಅಷ್ಟೇ ಅಲ್ಲ ಪ್ರತಿದಿನವೂ ಜನರನ್ನು ಸೇರಿಸಿ ಧಾರ್ಮಿಕ ಕಾರ್ಯಕ್ರಮಗಳನ್ನೂ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷವು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದರೂ ಕ್ರಮ ಮಾತ್ರ ಶೂನ್ಯ. ಕಳೆದ ಆಗಸ್ಟ್‌ 30 ರಂದು ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸಿದ 28 ಜನರ ವಿರುದ್ದ ಪ್ರಕರಣ ದಾಕಲಿಸಿದ್ದು ಇದರಲ್ಲಿ ಐವರ ವಿರುದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಲಾಗಿದೆ. ಎಲ್ಲ 28 ಜನರನ್ನೂ ಇಂದೋರ್‌ ಕೇಂದ್ರ ಬಂದೀಖಾನೆಗೆ ಕಳಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದರಲ್ಲಿ ಎನ್‌ಎಸ್‌ಏ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುವ ಐವರು ಮಾಜಿ ಕಾರ್ಪೊರೇಟರ್‌ ಉಸ್ಮಾನ್‌ ಪಟೇಲ್‌, ಅನ್ಸರ್‌ ಪಟೇಲ್‌, ಮೊಹಮದ್‌ ಅಲಿ ಪಟೇಲ್‌ , ಷಹಜಾದ್‌ ಪಟೇಲ್‌ ಮತ್ತು ಇಸ್ಮಯಿಲ್‌ ಪಟೇಲ್‌ ಆಗಿದ್ದು ಇವರೆಲ್ಲರೂ ಮಾಜಿ ಕಾರ್ಪೊರೇಟರ್‌ ಸಂಭಂದಿಕರೇ ಅಗಿದ್ದಾರೆ. ಅಷ್ಟೇ ಅಲ್ಲ ಈ ಐವರೂ ಕೂಡ ಬಿಜೆಪಿಯಲ್ಲಿದ್ದು ನಂತರ ಸಿಏಏ ಮತ್ತು ಎನ್‌ಅರ್‌ಸಿ ವಿರೋಧಿಸಿ ಕಳೆದ ಫೆಬ್ರುವರಿಯಲ್ಲಿ ಕಾಂಗ್ರೆಸ್‌ ಗೆ ಸೇರ್ಪಡೆಗೊಂಡಿದ್ದರು ಎಂಬುದು ಗಮನಾರ್ಹವಾಗಿದೆ. ತಮ್ಮ ತಂದೆಯು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವುದಕ್ಕೆ ಪ್ರತೀಕಾರವಾಗಿ ಬಿಜೆಪಿಯು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ ಎಂದು ಉಸ್ಮನ್‌ ಪಟೇಲ್‌ ಪುತ್ರ ಜೊಯೆಬ್‌ ಪಟೇಲ್‌ ಆರೋಪಿಸುತ್ತಾರೆ. ನಮ್ಮ ಸಂಭದಿಕರಾದ ಇಸ್ಮಾಯಿಲ್‌ ಮತ್ತು ಅಲಿ ಪಟೇಲ್‌ ಅವರು ಮೆರವಣಿಗೆಯ ದಿನ ಮನೆಯಲ್ಲೇ ಇದ್ದರೂ ಅವರ ವಿರುದ್ದ ಎನ್‌ಎಸ್‌ಏ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದೂ ಅವರು ಹೇಳಿದರು.

ಮೊಹರಂ ಮೆರವಣಿಗೆ ನಂತರ ಇಂದೋರ್‌ ಮೇಯರ್‌ ಮಾಲಿನಿ ಗೌಡ್‌ ಅವರು ಮುಖ್ಯ ಮಂತ್ರಿ ಶಿವರಾಜ್‌ ಸಿಂಗ್‌ ಛೌಹಾನ್‌ ಅವರಿಗೆ ಪತ್ರ ಬರೆದು ಮಾಜಿ ಕಾರ್ಪೊರೇಟರ್‌ ಮತ್ತು ಇತರರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಕೂಡಲೇ ಪೋಲೀಸರು ಎನ್‌ಎಸ್‌ಏ ಅಡಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.ಪೋಲೀಸರ ಪ್ರಕಾರ ಮೊಹರಂ ಮೆರವಣಿಗೆಯ ಮೇಲೆ ಹಾಕಿದ್ದ ನಿರ್ಭಂಧವನ್ನು ತೆಗೆದು ಹಾಕಲಾಗಿದೆ ಎಂದು ವಾಟ್ಸ್‌ ಅಪ್‌ ನಲ್ಲಿ ಸುಳ್ಳು ಸಂದೇಶ ಹರಿಬಿಡಲಾಗಿತ್ತು. ನಂತರ ಮುಸ್ಲಿಮರ ದೊಡ್ಡ ಗುಂಪು ಮೆರವಣಿಗೆಯಲ್ಲಿ ಬಾಗವಹಿಸಿತ್ತು ಎಂದು ಇಂದೋರ್‌ ಡಿಐಜಿ ಹರಿನಾರಾಯಣ ಮಿಶ್ರ ಹೇಳುತ್ತಾರೆ.

ಎಸ್‌ಪಿ ವಿಜಯ್‌ ಖತ್ರಿ ಪ್ರಕಾರ ಸ್ಥಳಿಯ ಆಡಳಿತವು ಮೊಹರಂ ಹಬ್ಬದ ಕುರಿತು ನಡೆಸಿದ್ದ ಸಭೆಯಲ್ಲಿ ಬಾಗವಹಿಸಿದ್ದ ಮಾಜಿ ಕಾರ್ಪೊರೇಟರ್‌ ಉಸ್ಮನ್‌ ಪಟೇಲ್‌ ಮತ್ತು ಮುಸ್ಲಿಂ ಮುಖಂಡರು ಮೊಹರಂ ಅಚರಣೆಗಾಗಿ ಯಾವುದೇ ಮೆರವಣಿಗೆ ನಡೆಸುವುದಿಲ್ಲ ಎಂದು ಒಪ್ಪಿದ್ದರು. ಆದರೆ ಕೊನೆ ದಿನ ಅನುಮತಿ ಇಲ್ಲದೆ ಮೆರವಣಿಗೆ ಮಾಡಿ ಕೋಮು ಸಾಮರಸ್ಯ ಕದಡುವ ಯತ್ನ ಮಾಡಿದ್ದಾರೆ. ಹಾಗಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ. ಅಲ್ಲದೆ ಬಿಜೆಪಿ ಶಾಸಕ ರಮೇಶ್‌ ಮೆಂಡೋಲ ಅವರು ಗಣೇಶ ಹಬ್ಬ ಆಚರಿಸಿದ ಕುರಿತು ಮಾತನಾಡಿದ ಅವರು ಶಾಸಕರು ತಪ್ಪು ಮಾಡಿಲ್ಲ , ಅವರು ಪೆಂಡಾಲ್‌ ನಿರ್ಮಿಸಿಲ್ಲ , ಸಾರ್ವಜನಿಕ ಸ್ಥಳದಲ್ಲಿ ಗಣೇಶ್‌ ಮೂರ್ತಿ ಇಟ್ಟಿಲ್ಲ, ಸಾಮೂಹಿಕ ಹಬ್ಬ ಅಚರಿಸಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಲಾಗಿದೆ ಆದರೆ ಮನೆಯಲ್ಲಿ ಪ್ರತಿಷ್ಪಪನೆಗೆ ನಿರ್ಬಂದ ಇಲ್ಲ ಎನ್ನುತ್ತಾರೆ. ಅದರೆ ಸ್ಥಳಿಯರ ಪ್ರಕಾರ ನಂದನ್‌ ನಗರದ ಸರ್ಕಾರಿ ಶಾಲೆಯ ಸ್ಥಳದಲ್ಲಿ ಪೆಂಡಾಲ್‌ ನಿರ್ಮಿಸಲಾಗಿತ್ತು. ಆದರೆ ಮೆಂಡೋಲ ಅವರೇ ಸೆಪ್ಟೆಂಬರ್‌ 2 ರಂದು 5 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಶಾಲಾ ಆವರಣದಲ್ಲಿ ತಾವು ಇರುವ ಫೋಟೊವನ್ನು ಶೇರ್‌ ಮಾಡಿದ್ದರು.

ಪೋಲೀಸರ ಕ್ರಮವನ್ನು ಮದ್ಯ ಪ್ರದೇಶ ಕಾಂಗ್ರೆಸ್‌ ವಕ್ತಾರ ಅಮೀನ್‌ ಉಲ್‌ ಖಾನ್‌ ಸೂರಿ ಖಂಡಿಸಿದ್ದಾರೆ. ಈ ಘಟನೆಯಿಂದ ಪೋಲೀಸರು ನಿಷ್ಪಕ್ಷಪಾತ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಒಂದು ಪಕ್ಷದ ಪರ ವಹಿಸುತಿದ್ದಾರೆ ಎಂಬುದು ನಿಚ್ಚಲವಾಗಿದೆ ಎಂದೂ ಅವರು ಅರೋಪಿಸಿದ್ದಾರೆ. ಮೇಯರ್‌ ಅವರ ಏಕಪಕ್ಷೀಯ ಕ್ರಮವನ್ನೂ ಅವರು ಟೀಕಿಸಿದ್ದಾರೆ, ಸಾರ್ವಜನಿಕ ಸ್ಥಳದಲ್ಲಿ ಪೆಂಡಾಲ್‌ ನಿರ್ಮಿಸಿ 10 ದಿನ ಆಚರಣೆ ಮಾಡಿದಾಗ ಏನೂ ಮಾಡದ ಮೇಯರ್‌ ಮೊಹರಂ ಮೆರವಣಿಗೆ ಮಾಡಿದ ಕೂಡಲೇ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ತಾವು ಒಂದು ವರ್ಗದ ಪರ ಎಂದು ಸಾಬೀತು ಪಡಿಸಿದ್ದಾರೆ. ಆಳುವವರಿಗೊಂದು ಮತ್ತು ವಿರೋಧ ಪಕ್ಷದವರಿಗೊಂದು ಕಾನೂನು ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಆದರೆ ಡಿಐಜಿ ಮಿಶ್ರ ಅವರು ಪೋಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದು ಪೋಲೀಸರು ಯಾವುದೇ ಪಕ್ಷ , ಕುಲ ಧರ್ಮ ನೋಡಿ ಕ್ರಮ ಕೈಗೊಂಡಿಲ್ಲ , ಅಪರಾಧದ ಪ್ರಮಾಣವನ್ನಷ್ಟೆ ಪರಿಗಣಿಸಲಾಗುತ್ತದೆ ಎಂದ ಅವರು ಮೊಹರಂ ಮೆರವಣಿಗೆ ಬಹುಸಂಖ್ಯಾತರಿಗೆ ತೊಂದರೆ ಅಗಿದ್ದು ಅವರೂ ಕೂಡ 3-4 ಲಕ್ಷ ಜನ ಸೇರಿಸಿ ದೊಡ್ಡ ಗಣೇಶ ಮೆರವಣಿಗೆ ಮಾಡುವ ಬೆದರಿಕೆ ಒಡ್ಡಿದ್ದರು ಎಂದರು. ಈ ರೀತಿಯ ತಾರತಮ್ಯ ಇದೇ ಮೊದಲೇನಲ್ಲ. ಇಂದೋರ್‌ನಲ್ಲಿ ಕಳೆದ ಏಪ್ರಿಲ್ ಮೊದಲ ವಾರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ, ನಗರ ಪೊಲೀಸರು ಎಂಟು ಜನರ ವಿರುದ್ಧ ಎನ್‌ಎಸ್‌ಏ ಅಡಿ ಪ್ರಕರಣ ದಾಖಲಿಸಿದ್ದರು. . ಮೊದಲ ಘಟನೆಯಲ್ಲಿ, ಏಪ್ರಿಲ್ 1 ರಂದು ಕೋವಿಡ್ -19 ಸ್ಕ್ರೀನಿಂಗ್ ತಂಡದ ಭೇಟಿಯ ವೇಳೆ ಇಬ್ಬರು ಮಹಿಳಾ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಟಾಟಪಟ್ಟಿ ಬಖಲ್ ಪ್ರದೇಶದ ನಾಲ್ಕು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ನಗರದ ಚಂದನ್ ನಗರದಲ್ಲಿ ಏಪ್ರಿಲ್ 7 ರಂದು ನಗರದಲ್ಲಿ ಲಾಕ್ ಡೌನ್ ಜಾರಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ ನಾಲ್ಕು ಜನರ ವಿರುದ್ಧ ನಗರ ಪೊಲೀಸರು ಎನ್ಎಸ್ಎ‌ ಅಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳೆಲ್ಲರೂ ಅಲ್ಪಸಂಖ್ಯಾತ ಸಮುದಾಯದವರು. ಎನ್ಎಸ್ಎ ಅಲ್ಲದೆ, ಇವರೆಲ್ಲರನ್ನೂ ಐಪಿಸಿ ಸೆಕ್ಷನ್ 147 ಮತ್ತು 188 (ಸರ್ಕಾರಿ ಅಧಿಕಾರಿ ಘೋಷಿಸಿದ ಆದೇಶವನ್ನು ಧಿಕ್ಕರಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೇ 8 ರಂದು,ಇನ್ನೊಂದು ಘಟನೆಯಲ್ಲಿ ಚಂದನ್ ನಗರ ಕಾಲೋನಿಯ ನಿವಾಸಿಗಳು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ ಅವರ ಮೇಲೆ ಹಲ್ಲೆ ನಡೆಸಿದರು ಎಂಬ ಆರೋಪದಡಿಯಲ್ಲಿ ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ತಡೆ ಅರೋಪದಲ್ಲಿ ಪೊಲೀಸರು ಐಪಿಸಿಯ ಸೆಕ್ಷನ್ 353 ರ ಅಡಿಯಲ್ಲಿ ಮೂರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅದೇ ದಿನ ಸೆಹೋರ್ ಜಿಲ್ಲೆಯ ಬದ್ನಗರ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಜನಸಮೂಹವು ಪೊಲೀಸರ ಮೇಲೆ ದಾಳಿ ನಡೆಸಿ ಅವರ ಸಮವಸ್ತ್ರವನ್ನು ಹರಿದು ಹಾಕಿದ್ದಲ್ಲದೆ, ಇವರಿಬ್ಬರು ಪೋಲೀಸ್‌ ಪೇದೆಗಳನ್ನು ಗಂಟೆಗಳ ಕಾಲ ಸೆರೆಯಲ್ಲಿ ಹಿಡಿದಿಟ್ಟುಕೊಂಡಿದ್ದರು. ಆದರೆ ಇಲ್ಲಿ ಎನ್‌ಎಸ್‌ಏ ಅಡಿ ಪ್ರಕರಣ ದಾಖಲಿಸಿಲ್ಲ. ತಲೈಯಾ ಪೊಲೀಸ್ ಠಾಣೆ ವ್ಯಾಪ್ತಿಯ ಇಸ್ಲಾಂ ನಗರ ಪ್ರದೇಶದಲ್ಲಿ ಪೋಲೀಸರ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ಆರೋಪಿಗಳ ವಿರುದ್ದ ಎನ್‌ಎಸ್‌ಏ ಅಡಿ ಪ್ರಕರಣ ದಾಖಲಿಸಲಾಗಿದೆ.

ಏಪ್ರಿಲ್ 20 ರಂದು, ರಾಜ್‌ ಗರ್‌ ಜಿಲ್ಲೆಯಲ್ಲಿ, ನಿಷೇಧದ ಹೊರತಾಗಿಯೂ ಅಂಗಡಿಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಜನರಿಗೆ ಸೂಚಿಸಿದಾಗ ರಾಂಪುರಿಯಾ ಗ್ರಾಮಸ್ಥರು ಪೊಲೀಸ್ ಸಿಬ್ಬಂದಿಯನ್ನು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರಾಜ್‌ಗರ್‌ ಪೊಲೀಸರು ಕೆಲವು ಗ್ರಾಮಸ್ಥರನ್ನು ಬಂಧಿಸಿದರೂ ಯಾವುದೇ ಎನ್‌ಎಸ್‌ಎ ಆರೋಪ ಹೊರಿಸಲಾಗಿಲ್ಲ. ಜೂನ್ 13 ರ ರಾತ್ರಿ ಸೆಹೋರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಮುಸ್ಲಿಂ ವೈದ್ಯರ ಮೇಲೆ ಬಿಜೆಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಪೊಲೀಸರು ಘಟನೆಯ ಎಫ್‌ಐಆರ್ ಕೂಡ ದಾಖಲಿಸಲಿಲ್ಲ. ನಂತರ ವೈದ್ಯರು ಈ ವಿಷಯವನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಗಮನಕ್ಕೆ ತಂದು ಪ್ರಾಣಕ್ಕೆ ಹೆದರಿ ವರ್ಗಾವಣೆಯನ್ನು ಕೋರಿದ್ದಾರೆ. , ವಕೀಲ ದೀಪಕ್‌ ಬುಂಡೆಲೆ ಎಂಬುವವರು ಗಡ್ಡ ಬಿಟ್ಟಿದ್ದರಿಂದಾಗಿ ಅವರನ್ನು ಮುಸ್ಲಿಂ ಎಂದು ಭಾವಿಸಿ ಬೇಟುಲ್‌ ಪೋಲೀಸರು ಹಲ್ಲೆ ನಡೆಸಿದ್ದರು. ಬುಂಡೆಲೆ ಅವರ ಪ್ರಕರಣವು ರಾಷ್ಟ್ರೀಯ ಸುದ್ದಿಯಾಯಿತು. ಆದರೆ ಪೋಲೀಸ್‌ ವ್ಯವಸ್ಥೆ ಇನ್ನೂ ಸುಧಾರಿಸಿಲ್ಲ ಎಂಬುದಕ್ಕೆ ನಿತ್ಯವೂ ಪುರಾವೆಗಳು ಸಿಗುತ್ತಿವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com