ಬಿಹಾರ ಚುನಾವಣೆ: ನಿತೀಶ್‌ ಕುಮಾರ್‌ಗೆ ಮುಳುವಾಗಲಿದೆಯೇ ಆಡಳಿತ ವಿರೋಧಿ ಅಲೆ?
ರಾಷ್ಟ್ರೀಯ

ಬಿಹಾರ ಚುನಾವಣೆ: ನಿತೀಶ್‌ ಕುಮಾರ್‌ಗೆ ಮುಳುವಾಗಲಿದೆಯೇ ಆಡಳಿತ ವಿರೋಧಿ ಅಲೆ?

ಕಾಂಗ್ರೆಸ್‌, ಆರ್‌ಜೆಡಿ ಹಾಗೂ ಸಿಪಿಐ ಚುನಾವಣೆಯನ್ನು ಮುಂದೂಡಲು ಈಗಾಗಲೇ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿವೆ. ಎನ್‌ಡಿಎ ಭಾಗವಾಗಿರುವ ಎಲ್‌ಜೆಪಿ ಕೂಡಾ ಚುನಾವಣೆಯನ್ನು ಮುಂದೂಡುವಂತೆ ಒತ್ತಾಯವನ್ನು ಹೇರುತ್ತಿದೆ.

ಲಾಯ್ಡ್‌ ಡಾಯಸ್

ಲಾಯ್ಡ್‌ ಡಾಯಸ್

ಕೋವಿಡ್-19 ಸಾಂಕ್ರಾಮಿಕ ರೋಗದ ಸಂಕಷ್ಟದ ನಡುವೆ ಎಲ್ಲರ ಕಣ್ಣು ನೆಟ್ಟಿರುವುದು ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ. ಒಂದು ವೇಳೆ ಕೋವಿಡ್‌ನಂತಹ ಪರಿಸ್ಥಿತಿ ಎದುರಾಗದಿದ್ದಲ್ಲಿ, ಈವರೆಗೆ ಸಾಕಷ್ಟು ಚುನಾವಣಾ ರ್ಯಾಲಿಗಳು ನಮಗೆ ಕಾಣ ಸಿಗುತ್ತಿದ್ದವು. ಅಬ್ಬರದ ಪ್ರಚಾರ, ಆವೇಶಭರಿತ ಭಾಷಣಗಳು ಹಾಗೂ ರಾಜಕೀಯ ಘಟಾನುಘಟಿಗಳ ಸಮರಕ್ಕೆ ವೇದಿಕೆಯಾಗಬೇಕಿದ್ದ ಬಿಹಾರ ರಾಜ್ಯ, ಸದ್ಯಕ್ಕಂತೂ, ತಣ್ಣಗಾಗಿರುವ ಜ್ವಾಲಾಮುಖಿಯಂತಾಗಿದೆ. ಆದರೆ, ಒಳಗೊಳಗೇ ಬುಸುಗುಡುವ ರಾಜಕೀಯ ಲಾವ ರಸ ಸಕ್ರಿಯವಾಗಿಯೇ ಇದೆ.

ಈಗಿರುವ ಬಿಹಾರ ಸರ್ಕಾರದ ಅವಧಿಯು ನವೆಂಬರ್‌ 29ರಂದು ಮುಗಿಯಲಿದೆ. ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರದ ಅವಧಿ ಮುಗಿಯುವುದರ ಒಳಗೆ ಮತ್ತೆ ಚುನಾವಣೆ ನಡೆಯಬೇಕಿದೆ. ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸುವ ಮಧ್ಯೆ, ಈ ಬಾರಿಯ ಚುನಾವಣೆಯನ್ನು ಮುಂದೂಡಬೇಕೆಂಬ ಕೂಗು ಕೂಡಾ ಕೇಳಿ ಬರುತ್ತಿದೆ. ಏಕೆಂದರೆ, ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್‌ ಅಂಕಿ ಅಂಶದ ಪ್ರಕಾರ ಬಿಹಾರ ಎಂಟನೇ ಸ್ಥಾನದಲ್ಲಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾಂಗ್ರೆಸ್‌, ಆರ್‌ಜೆಡಿ ಹಾಗೂ ಸಿಪಿಐ ಚುನಾವಣೆಯನ್ನು ಮುಂದೂಡಲು ಈಗಾಗಲೇ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿವೆ. ಎನ್‌ಡಿಎ ಭಾಗವಾಗಿರುವ ಎಲ್‌ಜೆಪಿ ಕೂಡಾ ಚುನಾವಣೆಯನ್ನು ಮುಂದೂಡುವಂತೆ ಒತ್ತಾಯವನ್ನು ಹೇರುತ್ತಿದೆ. ಆದರೆ, ಬಿಹಾರ ರಾಜಕೀಯದಲ್ಲಿ ಜೆಡಿಯು ನಂತರದ ಸ್ಥಾನ ಹೊಂದಿರುವ ಬಿಜೆಪಿ ಈ ಕುರಿತಾಗಿ ತನ್ನ ನಿಲುವನ್ನು ಇನ್ನೂ ಮರೆಯಲ್ಲಿಟ್ಟಿದೆ. ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದೆ. ಆದರೆ, ಜೆಡಿಯು ಮಾತ್ರ, ನಿಗದಿಯಂತೆ ಚುನಾವಣೆ ನಡೆಯಲೇ ಬೇಕೆಂಬ ಹಠವನ್ನು ಹಿಡಿದು ಕುಳಿತಿದೆ.

ಚುನಾವಣಾ ಆಯೋಗವು ಕೂಡಾ ಯಾವುದೇ ಚುನಾವಣೆಗಳನ್ನು ಮುಂದೂಡುವುದಿಲ್ಲ ಎಂದು ಹೇಳಿ, ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದೆ. ಬಿಹಾರ ಸೇರಿದಂತೆ ಇತರ ಕಡೆಗಳಲ್ಲಿ ನಡೆಯಲಿರುವ ಚುನಾವಣೆಗಳು ಯಥಾ ಪ್ರಕಾರ ನಡೆಯಲಿವೆ ಎಂದು ಚುನಾವಣಾ ಆಯೋಗ ಶುಕ್ರವಾರ ಹೇಳಿದೆ.

ಸದ್ಯದ ಬಿಹಾರ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ, ಕೋವಿಡ್‌-19 ಹಾಗೂ ನೆರೆ ಪರಿಸ್ಥಿತಿಯ ಅಸಮರ್ಪಕ ನಿರ್ವಹಣೆಯ ಕಾರಣದಿಂದ ಸರ್ಕಾರದ ಆಡಳಿತ ವಿರೋಧಿ ಅಲೆ ಇರುವುದಂತೂ ಸತ್ಯ. ಆದರೂ, ಈ ಪರಿಸ್ಥಿತಿಯಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು, ಚುನಾವಣೆ ಬೇಕೆಂದು ಹಠ ಹಿಡಿಯುವುದರ ಹಿಂದೆಯೂ ರಾಜಕೀಯ ಲೆಕ್ಕಾಚಾರ ಅಡಗಿದೆ.

ಬಿಹಾರದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯಿಂದಾಗಿ ಬಿಹಾರದ ಸುಮಾರು ಅರ್ಧದಷ್ಟು ರಾಜ್ಯಗಳು ಮುಳುಗಡೆಯಾಗಿವೆ. ಈ ಪ್ರವಾಹ ಪರಿಸ್ಥಿತಯನ್ನು ಸರ್ಕಾರ ಅಸಮರ್ಪಕವಾಗಿ ನಿರ್ವಹಿಸಿದೆ ಎಂದು ಬಿಹಾರದ ಪ್ರಾದೇಶಿಕ ಪತ್ರಿಕೆಗಳು ಸರ್ಕಾರದ ವಿರುದ್ದ ವರದಿಗಳನ್ನು ಪ್ರಕಟಿಸುತ್ತಲೇ ಇವೆ. ಇದರೊಂದಿಗೆ ಕರೋನಾ ಸೋಂಕಿನ ತೀವ್ರತೆಯೂ ಬಿಹಾರದ ಬೇರುಗಳನ್ನು ಅಲ್ಲಾಡಿಸುವ ಮಟ್ಟಕ್ಕೆ ಬೆಳೆದಿದೆ. ನೆರೆಯಿಂದಾಗಿ ಸುಮಾರು 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

ಈ ಪರಿಸ್ಥಿತಿಯನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ತಮ್ಮ ರಾಜಕೀಯ ಪ್ರಚಾರಕ್ಕಾಗಿ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. “ನಿತೀಶ್‌ ಕುಮಾರ್‌ ಅವರಿಗೆ ಬಿಹಾರದ ಜನರ ಮೇಲೆ ಎಳ್ಳಷ್ಟೂ ಕನಿಕರವಿಲ್ಲʼ ಎಂದು ಹೇಳಿಕೆ ನೀಡಿದ್ದಾರೆ. ನೆರೆ ಉಂಟಾಗಿರುವ ಪ್ರದೇಶಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಧಾವಿಸುತ್ತಿದ್ದಾರೆ. ಆದರೆ, ಜನರ ಹೆಣಗಳ ಮೇಲೆ ಬಿಹಾರ ಚುನಾವಣೆ ನಡೆಯುವುದು ಸರಿಯಲ್ಲ ಎಂದು ಹೇಳಿ, ಚುನಾವಣೆ ಮುಂದೂಡಲು ಆಗ್ರಹಿಸಿದ್ದಾರೆ.

ತೇಜಸ್ವಿ ಯಾದವ್‌ ಅವರ ಆಗ್ರಹಕ್ಕೆ ತಿರುಗೇಟು ನೀಡಿರುವ ಬುಹಾರ ಉಪ ಮುಖ್ಯಮಂತ್ರಿ ಬಿಜೆಪಿಯ ಸುಶೀಲ್‌ ಮೋದಿ, ಪರೀಕ್ಷೆ ಎದುರಿಸಲು ಭಯಪಡುವ ಓದಿನಲ್ಲಿ ಹಿಂದೆ ಇರುವಂತಹ ವಿದ್ಯಾರ್ಥಿಗಳು ನೀಡುವ ಸಬೂಬಿನಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ಈಗ ಚುನಾವಣೆ ನಡೆದರೂ, ಬಿಹಾರದಲ್ಲಿ ಸರ್ಕಾರದ ಆಡಳಿತ ವಿರೋಧಿ ಅಲೆ ಇದ್ದರೂ ಜೆಡಿಯು ಮಿತ್ರ ಪಕ್ಷವಾಗಿರುವ ಬಿಜೆಪಿ ಅಥವಾ ಯಾವುದೇ ವಿರೋಧ ಪಕ್ಷಗಳಲ್ಲಿ ಹೇಳಿಕೊಳ್ಳುವಂತಹ ಅಥವಾ ನಿತೀಶ್‌ ಕುಮಾರ್‌ ಅವರಷ್ಟು ವರ್ಚಸ್ವಿ ನಾಯಕರು ಇಲ್ಲದಿರುವುದು ಎಲ್ಲರ ಪಾಲಿಗೂ ನುಂಗಲಾರದ ತುತ್ತಾಗಿದೆ. ಒಂದು ವೇಳೆ ಆಡಳಿತ ವಿರೋಧಿ ಅಲೆಯ ಪ್ರಯೋಜನ ಪಡೆದು ವಿರೋಧ ಪಕ್ಷಗಳು ಒಗ್ಗಾಟ್ಟಾಗಿ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಿದರೂ, ನಂತರ ನಡೆಯುವ ಅಧಿಕಾರದ ಹಪಾಹಪಿಯ ಹಗ್ಗಜಗ್ಗಾಟದಿಂದಾಗಿ, ಮತ್ತೆ ಅಧಿಕಾರ ಕಲೆದುಕೊಳ್ಳುವ ಭೀತಿ ವಿರೋಧ ಪಕ್ಷಗಳಿಗೆ ಇದೆ.

ನತೀಶ್‌ ಕುಮಾರ್‌ ಅವರಂತೆ ಇನ್ನೊಬ್ಬ ನಾಯಕ ಬಿಹಾರದಲ್ಲಿ ಇಲ್ಲದಿರುವುದು ನಿತೀಶ್‌ ಕುಮಾರ್‌ ಅವರಿಗೆ ಇರುವಂತಹ ಪ್ರಮುಖ ಅನುಕೂಲತೆ. ಸದ್ಯಕ್ಕೆ ರಾಷ್ಟ್ರದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಮ್ಮಿರುವ ಬಿಜೆಪಿ ಕೂಡಾ ನಿತೀಶ್‌ ಕುಮಾರ್‌ ಅವರನ್ನು ಎದುರು ಹಾಕಿಕೊಳ್ಳಲು ಸಿದ್ದವಿಲ್ಲ. ಈ ಹಂತದಲ್ಲಿ ಚುನಾವಣೆ ನಡೆದರೂ, ನಿತೀಶ್‌ ಕುಮಾರ್‌ ಅವರಿಗೆ ತಮ್ಮ ವರ್ಚಸ್ಸಿನ ಉಪಯೋಗ ಪಡೆದುಕೊಂಡು ತಮ್ಮ ಖುರ್ಚಿಯನ್ನು ಉಳಿಸುವ ಎಲ್ಲಾ ಸಾಧ್ಯತೆಗಳು ತೆರೆದೇ ಇವೆ. ಆದರೆ, ಈಗಿರುವ ಆಡಳಿತ ವಿರೋಧಿ ಅಲೆಯನ್ನು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಉಪಯೋಗಿಸಿಕೊಳ್ಳುತ್ತಾವೆಯೇ? ಇಲ್ಲವೋ? ಎಂಬುದರ ಮೇಲೆ ಬಿಹಾರದ ಚುನಾವಣಾ ಭವಿಷ್ಯ ನಿಂತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com