ವಿಶಾಖಪಟ್ಟಣಂನಲ್ಲಿ ರಾಜಧಾನಿ ನಿರ್ಮಾಣ; ಅಪಾಯದಲ್ಲಿ ಬೌದ್ದ ಪಾರಂಪರಿಕ ತಾಣ
ರಾಷ್ಟ್ರೀಯ

ವಿಶಾಖಪಟ್ಟಣಂನಲ್ಲಿ ರಾಜಧಾನಿ ನಿರ್ಮಾಣ; ಅಪಾಯದಲ್ಲಿ ಬೌದ್ದ ಪಾರಂಪರಿಕ ತಾಣ

ಆಂಧ್ರ ಪ್ರದೇಶ ಸರ್ಕಾರ ಯೋಜಿಸಿರುವ ರಾಜಧಾನಿ ಸ್ಥಳಾಂತರ ಯೋಜನೆಯಿಂದ ತೊಟ್ಲಕೊಂಡಾ ಬೌದ್ದ ಕ್ಷೇತ್ರದಂತಹ ಪಾರಂಪರಿಕ ತಾಣಗಳಿಗೆ ಕೊಡಲಿ ಏಟು ನೀಡಿದಂತಾಗುತ್ತದೆ. ಈ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.

ಪ್ರತಿಧ್ವನಿ ವರದಿ

ಬಹಳ ವಿರೋಧದ ನಂತರವೂ, ಆಂಧ್ರ ಪ್ರದೇಶದ ಸಿ ಎಂ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ, ರಾಜ್ಯದ ಕಾರ್ಯನಿರ್ವಾಹಕ ರಾಜಧಾನಿಯನ್ನು ವಿಶಾಖಪಟ್ಟಣಂಗೆ ಸ್ಥಳಾಂತರಿಸುವ ಯೋಜನೆಯಿಂದ ಹಿಂದೆ ಸರಿಯುತ್ತಿಲ್ಲ. ತಮ್ಮ ಮೂರು ರಾಜಧಾನಿ ಸೃಷ್ಟಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ವಿಶಾಖಪಟ್ಟಣಂನಲ್ಲೂ ರಾಜಧಾನಿಯನ್ನು ನಿರ್ಮಿಸುವ ವಿಚಾರ ಸಾಮಾಜಿಕ ಹೋರಾಟಗಾರರನ್ನು ಚಿಂತೆಗೀಡು ಮಾಡಿದೆ. ಏಕೆಂದರೆ, ರಾಜಧಾನಿ ಏನಾದರೂ ವಿಶಾಖಪಟ್ಟಣಂಗೆ ಸ್ಥಳಾಂತರವಾದಲ್ಲಿ, ಅಲ್ಲಿ ಉಂಟಾಗುವ ನಗರೀಕರಣದಿಂದ ಪಾರಂಪರಿಕ ಸ್ಥಾನಗಳು ನಾಶವಾಗುವ ಸಾಧ್ಯತೆಯಿದೆ.

ಹೀನಾಯಾನ ಬೌದ್ದ ಕ್ಷೇತ್ರದ ಸಮೀಪದ 30 ಎಕರೆಗಳ ಜಾಗದಲ್ಲಿ ಸರ್ಕಾರಿ ಅತಿಥಿ ಗೃಹ ನಿರ್ಮಾಣ ಮಾಡುವ ಯೋಜನೆ ನಿಜಕ್ಕೂ ಬೌದ್ದರಿಗೆ ಹಾಗೂ ಹೋರಾಟಗಾರರಿಗೆ ತಲೆನೋವಾಗಿ ಪರಿಣಮಿಸಿದೆ. 2000 ವರ್ಷಗಳಷ್ಟು ಹಳೆಯದಾಗಿರುವ ತೊಟ್ಲಕೊಂಡಾ ಬೌದ್ದ ಕ್ಷೇತ್ರವು ಅತಿಥಿ ಗೃಹ ನಿರ್ಮಾಣದಿಂದಾಗಿ ನಾಶವಾಗುವ ಪರಿಸ್ಥಿತಿ ಎದುರಾಗಲಿದೆ ಎಂಬುದು ಪ್ರತಿಭಟನಕಾರರ ವಾದ.

ರಾಜಧಾನಿಯನ್ನು ಸ್ಥಳಾಂತರಿಸಲು ಸಾಕಷ್ಟು ಉತ್ಸುಕರಾಗಿದ್ದ YSR ಕಾಂಗ್ರೆಸ್‌ ಪಕ್ಷದ ನಾಯಕರು, ವಿಜಯ ದಶಮಿಯಂದು (ಅಕ್ಟೋಬರ್‌ 25) ಶಂಕು ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವ ಆಲೋಚನೆಯಲ್ಲಿದ್ದರು. ಆದರೆ, ಕನಿಷ್ಟ ಸೆಪ್ಟೆಂಬರ್‌ 21ರ ವರೆಗಾದರೂ, ಯಥಾ ಸ್ಥಿತಿಯನ್ನು ಮುಂದುವರೆಸುವಂತೆ ಆಂಧ್ರ ಹೈಕೋರ್ಟ್‌ ಆದೇಶ ನೀಡಿದ್ದರಿಂದ, ಈ ಯೋಜನೆ ಮುಂದೂಡಲ್ಪಡುವ ಸಾಧ್ಯತೆಯಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಈಗ ಇಲ್ಲಿ ವಿವಾದದ ಕೇಂದ್ರ ಬಿಂದುವಾಗಿರುವುದು ತೊಟ್ಲಕೊಂಡಾ ಬೌದ್ದ ಕ್ಷೇತ್ರದ ಸಮೀಪ ಸರ್ಕಾರ ನಿರ್ಮಿಸಲು ಯೋಜಿಸಿರುವ ಅತಿಥಿ ಗೃಹ. ಸುಮಾರು 48 ಹೆಕ್ಟೇರ್‌ಗಳಷ್ಟು ವಿಸ್ತೀರ್ಣದಲ್ಲಿರುವ ತೊಟ್ಲಕೊಂಡಾ ಬೌದ್ದ ಕ್ಷೇತ್ರವು ವಿಶಾಖಪಟ್ಟಣಂನಿಂದ ಕೇವಲ 15 ಕಿಲೋಮೀಟರ್‌ಗಳಷ್ಟು ದೂರವಿದೆ. ಏಷಿಯಾ ಖಂಡ ಮೂಲೆ ಮೂಲೆಗಳಿಂದ ಬೌದ್ದ ಸನ್ಯಾಸಿಗಳು ತೊಟ್ಲಕೊಂಡಾ ಬೌದ್ದ ಕ್ಷೇತ್ರಕ್ಕೆ ಬಂದು ವುದ್ಯಾಭ್ಯಾಸ ಹಾಗೂ ಧರ್ಮಾಭ್ಯಾಸವನ್ನು ಮಾಡುತ್ತಿದ್ದರು.

ಇಂತಹ ಐತಿಹಾಸಿಕ ಹಿನ್ನೆಲೆ ಇರುವಂತಹ ಪ್ರದೇಶವು ಈಗ ಅಪಾಯದಲ್ಲಿದೆ. ಒಂದು ವೇಳೆ, ಸರ್ಕಾರದ ಯೋಜನೆಯಿಂದ ನಗರೀಕರಣ ಲಂಗು ಲಗಾಮಿಲ್ಲದೆ ಬೆಳೆದರೆ, ತೊಟ್ಲಕೊಂಡಾ ಬೌದ್ದ ಕ್ಷೇತ್ರದಂತಹ ಪಾರಂಪರಿಕ ತಾಣಗಳಿಗೆ ಕೊಡಲಿ ಏಟು ನೀಡಿದಂತಾಗುತ್ತದೆ. ಅಲ್ಲಿನ ಮಹಾ ಸ್ಥೂಪ ಹಾಗೂ ಅಪರೂಪದ ವಾಸ್ತು ಶಿಲ್ಪ ಮಾದರಿಗಳು ನಾಶವಾಗುವ ಸಂಭವವಿದೆ.

ಪ್ರತಿಭಟನಾಕಾರರು ಹೇಳುವ ಪ್ರಕಾರ ಕಳೆದ ಮೂರು ದಶಕಗಳಿಂದ ತೊಟ್ಲಕೊಂಡಾ ಬೌದ್ದ ಕ್ಷೇತ್ರವು ನಾಶವಾಗುವ ಸಂಭವಗಳು ನಡೆಯುತ್ತಲೇ ಇವೆ. ಸರ್ಕಾರದ ಯೋಜನೆಗಳು ಅಥವಾ ಖಾಸಗೀ ಸಂಸ್ಥೆಗಳಿಗೆ ಸರ್ಕಾರ ಪರಭಾರೆ ಮಾಡಿದ ಜಾಗಗಳಿಂದ ತೊಟ್ಲಕೊಂಡಾ ಬೌದ್ದ ಕ್ಷೇತ್ರದ ಸುತ್ತ ನಗರೀಕರಣ ಈಗಾಗಲೇ ಹೆಚ್ಚಾಗುತ್ತಿದೆ. ಇನ್ನು ಒಂದು ವೇಳೆ ಇಲ್ಲಿ ಹೊಸ ರಾಜಧಾನಿಯಾದರೆ, ರಿಯಲ್‌ ಎಸ್ಟೇಟ್‌ ದಂಧೆ, ಜಾಗದ ಅತಿಕ್ರಣ ಮುಂತಾದವುಗಳಿಂದ ಅತ್ಯಂತ ಸುಂದರ ಹಾಗೂ ಪುರಾತನವಾದ ಪಾರಂಪರಿಕ ಸ್ಥಾನವನ್ನು ಕಳೆದುಕೊಳ್ಳುವ ಹಂತಕ್ಕೆ ಆಂಧ್ರ ಪ್ರದೇಶ ತಲುಪಲಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com