UPSC ಜಿಹಾದ್: ಪ್ರಾಯೋಜಕತ್ವ ನೀಡಿದ ಅಮುಲ್ ಸಂಸ್ಥೆ ವಿರುದ್ಧ ಬಾಯ್ಕಾಟ್ ಅಭಿಯಾನ
ರಾಷ್ಟ್ರೀಯ

UPSC ಜಿಹಾದ್: ಪ್ರಾಯೋಜಕತ್ವ ನೀಡಿದ ಅಮುಲ್ ಸಂಸ್ಥೆ ವಿರುದ್ಧ ಬಾಯ್ಕಾಟ್ ಅಭಿಯಾನ

ಹೈಕೋರ್ಟ್ ಟಿವಿ ಚಾನೆಲ್‌ನ ವಿವಾದಾತ್ಮಕ ಕಾರ್ಯಕ್ರಮವನ್ನು ಪ್ರಸಾರದಿಂದ ನಿಲ್ಲಿಸಿದ ನಂತರವೂ ಸುದರ್ಶನ್ ಟಿವಿಗೆ ಪ್ರಾಯೋಜಕತ್ವ ನೀಡುವ ಅಮುಲ್ ನಿರ್ಧಾರಕ್ಕಾಗಿ ಕೋಪಗೊಂಡ ಸಾಮಾಜಿಕ ಜಾಲತಾಣ ಬಳಕೆದಾರರು ಟ್ವಿಟರ್‌ನಲ್ಲಿ #BoycottAmul ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡಿದ್ದಾರೆ.

ಪ್ರತಿಧ್ವನಿ ವರದಿ

ಸುದರ್ಶನ್‌ ನ್ಯೂಸ್‌ ಚಾನೆಲ್ಲಿನ ʼಯುಪಿಎಸ್‌ಸಿ ಜಿಹಾದ್‌ʼ ಕಾರ್ಯಕ್ರಮದ ನಕರಾತ್ಮಕ ಪರಿಣಾಮ ಇದೀಗ ಭಾರತದ ಖಾಸಗಿ ಡೈರಿ ಸಂಸ್ಥೆಗೂ ತಟ್ಟಿದೆ. ಸುದರ್ಶನ್‌ ಚಾನೆಲ್‌ಗೆ ಸಂಸ್ಥೆ ನೀಡುತ್ತಿರುವ ಪ್ರಾಯೋಜತ್ವ ಸಾಮಾಜಿಕ ಜಾಲತಾಣ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದೆ. ಸುದರ್ಶನ್‌ ಟಿವಿಯಲ್ಲಿ ಬರುವ ಕಾರ್ಯಕ್ರಮಕ್ಕೆ ಸಂಸ್ಥೆ ಪ್ರಾಯೋಜಕತ್ವ ನೀಡಿರುವುದೇ ಇಷ್ಟೆಲ್ಲಾ ಟೀಕೆಗಳಿಗೆ ಕಾರಣವಾಗಿದೆ.

ಭಾರತದ ಜನಪ್ರಿಯ ಡೈರಿ ಬ್ರಾಂಡ್ ಅಮುಲ್, ಹಿಂದುತ್ವ ಪರವಿರುವ ಸುದರ್ಶನ್ ಟಿವಿಗೆ ನೀಡಿದ ಬೆಂಬಲಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದೆ, ಸುದರ್ಶನ್‌ ಟಿವಿಯಲ್ಲಿ ಪ್ರಸಾರವಾಗಬೇಕಿದ್ದ ಮುಸ್ಲಿಮರ ವಿರುದ್ಧ ದ್ವೇಷವನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ದೆಹಲಿ ಹೈಕೋರ್ಟ್ ಕಳೆದ ವಾರ ನಿಷೇಧಿಸಿತ್ತು. ದೆಹಲಿ ಹೈಕೋರ್ಟ್ ಟಿವಿ ಚಾನೆಲ್‌ನ ವಿವಾದಾತ್ಮಕ ಕಾರ್ಯಕ್ರಮವನ್ನು ಪ್ರಸಾರದಿಂದ ನಿಲ್ಲಿಸಿದ ನಂತರವೂ ಸುದರ್ಶನ್ ಟಿವಿಗೆ ಪ್ರಾಯೋಜಕತ್ವ ನೀಡುವ ಅಮುಲ್ ನಿರ್ಧಾರಕ್ಕಾಗಿ ಕೋಪಗೊಂಡ ಸಾಮಾಜಿಕ ಜಾಲತಾಣ ಬಳಕೆದಾರರು ಟ್ವಿಟರ್‌ನಲ್ಲಿ #BoycottAmul ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡಿದ್ದಾರೆ.

ಅಮುಲ್‌ ಹಿಂದಿನಿಂದಲೂ ಮೋದಿ ಸರ್ಕಾರ ಹಾಗೂ ಹಿಂದುತ್ವ ಅಜೆಂಡಾದೊಂದಿಗೆ ಪರೋಕ್ಷವಾಗಿ ತನ್ನನ್ನು ಗುರುತಿಸಿಕೊಂಡು ಬಂದಿದೆ. ಮೋದಿ ಗೆಲುವಿನಲ್ಲಿ, ರಾಮಮಂದಿರ ಭೂಮಿಪೂಜೆ ಸಂಧರ್ಭದಲ್ಲಿ ಹರ್ಷ ವ್ಯಕ್ತಪಡಿಸಿ ಜಾಹಿರಾತು ನೀಡಿತ್ತು. ಇಂಡಿಯಾ- ಚೀನಾ ಅಥವಾ ಸರ್ಜಿಕಲ್‌ ಸ್ಟ್ರೈಕ್‌ ಮುಂತಾದ ಭಾವನಾತ್ಮಕ ವಿಚಾರಗಳನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡಿತ್ತು. ಅಲ್ಲದೆ ಒಂದು ಪೋಸ್ಟರ್‌ನಲ್ಲಿ ಪರೋಕ್ಷವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ವ್ಯಂಗ್ಯವಾಗಿ ಬಿಂಬಿಸಿತ್ತು. ಸಂಸ್ಕೃತಕ್ಕೆ ಬೆಂಬಲ, ಕಾಶ್ಮೀರ 370 ರದ್ದತಿ ಇರಲಿ ಇದನ್ನೆಲ್ಲಾ ಅಮುಲ್‌ ತನ್ನ ಕಂಪೆನಿ ಪ್ರಚಾರಕ್ಕೆ ಬಳಸಿಕೊಂಡಿತ್ತು.

ಒಟ್ಟಿನಲ್ಲಿ ಅಮುಲ್‌ ಎಂಬ ದಿಗ್ಗಜ ಸಂಸ್ಥೆ ಸದ್ಯ ಭಾರತದಲ್ಲಿ ಧ್ವೇಷ ಮಾರಾಟವಾಗುತ್ತದೆಯೆಂಬುದನ್ನು ಅರ್ಥಮಾಡಿಕೊಂಡಿತ್ತು. ಹಾಗೂ ಆ ದಾರಿಯಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಹಾಗಾಗಿಯೇ ಸಂಪೂರ್ಣ ಇಸ್ಲಾಮೋಫೋಬಿಯಾ ಹರಡುವ ಸುದ್ದಿ ಸಂಸ್ಥೆಯೊಂದರ ಕಾರ್ಯಕ್ರಮವನ್ನು ನ್ಯಾಯಾಲಯ ತಡೆಹಿಡಿದಿದ್ದರೂ, ಅಮುಲ್‌ ಆ ಸುದ್ದಿ ಸಂಸ್ಥೆಯ ಕಾರ್ಯಕ್ರಮಗಳಿಗೆ ತನ್ನ ಪ್ರಾಯೋಜಕತ್ವ ನೀಡಿರುವುದು.

ಕಳೆದ ಐದಾರು ದಿನಗಳಿಂದ ಅಮುಲ್‌ ಕಂಪೆನಿಯ ಬೇಜವಾಬ್ದಾರಿ ನಡೆಯ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗುತ್ತಿದೆ. ಇಸ್ಲಾಮೋಫೋಬಿಯಾವನ್ನು ಹರಡುವುದರಲ್ಲಿ ಕುಖ್ಯಾತಿ ಪಡೆದ ಟಿವಿ ಚಾನೆಲ್ ಅನ್ನು ಬೆಂಬಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಯುನೈಟೆಡ್‌ ಕಿಂಗ್‌ಡಂ ಮೂಲದ 'ಸ್ಟಾಪ್ ಫಂಡಿಂಗ್ ಹೇಟ್' ಗ್ರೂಪ್ ಅಮುಲ್ ಸಂಸ್ಥೆಯನ್ನು ಒತ್ತಾಯಿಸಿದೆ.

ಭಾರತ ಚೀನಾ ಗಡಿ ಬಿಕ್ಕಟ್ಟು ಸಂಧರ್ಭದಲ್ಲಿ ಗುಜರಾತ್‌ ಮೂಲದ ಅಮುಲ್‌ ಸಂಸ್ಥೆಯ‌ ಖಾತೆಯಿಂದ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸುವ ಪೋಸ್ಟ್‌ ಹಂಚಲಾಗಿದೆಯೆಂದು ಟ್ವಿಟರ್‌ ಕೆಲಕಾಲಕ್ಕೆ ಅಮುಲ್ ಸಂಸ್ಥೆಯ ಅಧಿಕೃತ ಟ್ವಿಟರ್‌ ಖಾತೆಯನ್ನು ತಡೆಹಿಡಿದಿತ್ತು.

ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ಏಕ ಸದಸ್ಯ ನ್ಯಾಯಪೀಠ ಕಳೆದ ಶುಕ್ರವಾರ ಸುದರ್ಶನ್ ಟಿವಿಯ ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮದ ಪ್ರಸಾರವನ್ನು ತಡೆಹಿಡಿಯಲು ಆದೇಶಿಸಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ನೋಟಿಸ್ ನೀಡಿತ್ತು ಈ ಕಾರ್ಯಕ್ರಮದ ಕುರಿತಂತೆ ಭಾರತೀಯ ಐಪಿಎಸ್‌ ಸಂಘ ಖಂಡನೆ ಕೂಡ ವ್ಯಕ್ತಪಡಿಸಿತ್ತು. ಅಂತಹ ವಿನಾಶಕಾರಿ ಕಾರ್ಯಕ್ರಮಗಳಿಗೆ ಸಾಮಾಜಿಕ ರಂಗದಲ್ಲಿ ವ್ಯವಹಾರ ನಡೆಸುವ ಸಂಸ್ಥೆಯೊಂದು ಪ್ರಾಯೋಜಕತ್ವ ನೀಡಬಾರದೆಂದು ಅಭಿಯಾನ ಚಾಲ್ತಿಯಲ್ಲಿದೆ

Click here to follow us on Facebook , Twitter, YouTube, Telegram

Pratidhvani
www.pratidhvani.com